ಬುಧವಾರ, ಮೇ 18, 2022
25 °C

ಕೂಡುಂಕುಳಂ ಯೋಜನೆಗೆ ವಿರೋಧ: ಜಯಲಲಿತಾಗೆ ಪ್ರಧಾನಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  `ಪ್ರತಿಭಟನೆ ಹಿನ್ನೆಲೆಯಲ್ಲಿ ಕೂಡುಂಕುಳಂನಲ್ಲಿ ಅಣುಸ್ಥಾವರದಿಂದ ವಿದ್ಯುತ್ ಉತ್ಪಾದನೆ ಆಗದಿದ್ದರೆ ರಾಜ್ಯದ ಅಭಿವೃದ್ಧಿ ಯೋಜನೆಗಳು ಕುಂಠಿತಗೊಳ್ಳುತ್ತವೆ~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಜಯಲಲಿತಾ ಅವರಿಗೆ ಪತ್ರ ಬರೆದಿರುವ ಸಿಂಗ್, ಯೋಜನೆ ಕೈಬಿಡುವಂತೆ ಆಗ್ರಹಿಸಿ ಕಳೆದ ವಾರ ತಮ್ಮನ್ನು ಭೇಟಿಯಾದ ಸರ್ವ ಪಕ್ಷ ನಿಯೋಗದೊಂದಿಗೆ ಸಮಾಲೋಚನೆ ನಡೆಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.

ಕೂಡುಂಕುಳಂ ಅಣುಸ್ಥಾವರದ ಘಟಕ 1 ಹಾಗೂ 2ರಿಂದ ಉತ್ಪಾದನೆಯಾಗುವ 2000 ಮೆಗಾ ವಾಟ್ ವಿದ್ಯುತ್‌ನಲ್ಲಿ ತಮಿಳುನಾಡಿಗೆ 925 ಮೆಗಾ ವಾಟ್ ವಿದ್ಯುತ್ ನೀಡಲಾಗುತ್ತದೆ. ಒಂದು ವೇಳೆ ವಿದ್ಯುತ್ ಉತ್ಪಾದನೆಯು ಏಕಾಏಕಿ ನಿಂತಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಕೈಗಾರಿಕಾ ಯೋಜನೆಗಳಿಗೆ ತೊಡಕುಂಟಾಗುತ್ತದೆ ಎಂದಿದ್ದಾರೆ.

ಭಾರತ- ರಷ್ಯ ಯೋಜನೆಯಾದ ಕೂಡುಂಕುಳಂ ಅಣು ವಿದ್ಯುತ್ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಈ ಪತ್ರ ಬರೆದಿದ್ದಾರೆ.

ತಿರುನಲ್ವೇಲಿ ವರದಿ: ಕೂಡುಂಕುಳಂ ಯೋಜನೆ ವಿರೋಧಿಸಿ ನೂರಾರು ಚಳವಳಿಗಾರರು ಉದ್ದೇಶಿತ ಘಟಕ ಸ್ಥಾಪನೆ ಸ್ಥಳಕ್ಕೆ ಸಮೀಪದ ಪ್ರದೇಶದಿಂದ ಇಡಿಂತಕರೈ ಎಂಬ ಗ್ರಾಮದವರೆಗೆ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.