ಗುರುವಾರ , ಜೂನ್ 17, 2021
27 °C

ಕೂಪ ಮಂಡೂಕದ ಬ್ರಹ್ಮಾಂಡ!

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

‘ಕೂಪ ಮಂಡೂಕವಾಗಬೇಡ...’, ‘ಸದಾ ಕಪ್ಪೆ ಹಂಗೇ ವಟಗುಟ್ಟುತ್ತ ಇರ್ತಿಯಲ್ಲ.,.’ ಎಂಬ ಟೀಕೆಗಳನ್ನು ನಮ್ಮ ಜೀವನದಲ್ಲಿ ಒಂದಿಲ್ಲೊಂದು ಬಾರಿ ಕೇಳಿರುತ್ತೇವೆ, ಇಲ್ಲವೇ ಬೇರೆಯವರಿಗಾದರೂ ಹೇಳಿರು­ತ್ತೇವೆ. ಆದರೆ ಹೀಗೆಲ್ಲ ತೆಗಳಿಕೆಗೆ ಬಳಕೆಯಾಗುವ ಕಪ್ಪೆಗಳ ಜೀವನ, ಅವುಗಳ ಉಪಯೋಗ ಏನು?, ಅವುಗಳು ರಾತ್ರಿಯಲ್ಲಿ ವಟರಗುಟ್ಟುವುದೇಕೆ?ಇಂತಹದೊಂದು ಕುತೂಹಲ ಹುಟ್ಟಿದ್ದೇ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಕೆ.ವಿ. ಗುರುರಾಜ್ ಈ ಮಂಡೂಕಗಳ ಮಹಾತ್ಮೆಯ ಕುರಿತು ದೊಡ್ಡದೊಂದು ಸಂಶೋಧನೆಯನ್ನೇ ಮಾಡಿದ್ದಾರೆ. ಮಂಡೂಕಗಳ ಬ್ರಹ್ಮಾಂಡದಷ್ಟು ರೋಚಕ ವಿಷಯಗಳನ್ನು ಇವರು ಕಲೆ ಹಾಕಿದ್ದಾರೆ. ಮನುಷ್ಯನ ಅತಿಯಾಸೆಯಿಂದ ಇಂದು ನಲುಗುತ್ತಿರುವ ಪರಿಸರದಲ್ಲಿ ಕಪ್ಪೆಗಳ ಹಲವಾರು ಪ್ರಭೇದಗಳು ನಾಶವಾಗಿವೆ. ಆದರೆ ಹೋರಾಟ ಮನೋಭಾವದ ಈ ಜೀವಿ­ಗಳ ಹೊಸ ಪ್ರಭೇದ ಕಂಡುಬಂದಿರುವುದು ವಿಶೇಷ!ಜೀವವೈವಿಧ್ಯದ ಕೊಂಡಿ

ಪ್ರಾಥಮಿಕ ಶಾಲಾ ಹಂತದಲ್ಲಿ ಜೀವವಿಜ್ಞಾನ ಓದುವ ಮಕ್ಕಳಿಗೆ ಜೀವವೈವಿಧ್ಯದ ಆಹಾರ ಸರಪಳಿಯ ಒಂದು ಪಾಠ ಇರುತ್ತದೆ. ಅಲ್ಲಿ ಭೂಮಿಯಲ್ಲಿರುವ ಸಣ್ಣಪುಟ್ಟ ಹುಳುಗಳು ಬೆಳೆಗಳನ್ನು ತಿನ್ನುತ್ತವೆ. ಆ ಕೀಟಗಳನ್ನು ಕಪ್ಪೆಗಳು, ಅವುಗಳನ್ನು ಹಾವು, ಹದ್ದು ಅಥವಾ ನವಿಲುಗಳು ಹಾವುಗಳನ್ನು ಭಕ್ಷಿಸುತ್ತವೆ. ಕೀಟಗಳಿಂದ ರಕ್ಷಣೆಯಾದ ಬೆಳೆಯು ಮನುಷ್ಯರ ಆಹಾರವಾಗುತ್ತದೆ. ಇಂತಹದೊಂದು ಅಗೋಚರ ಸಹಕಾರ ತತ್ವವು ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಇಂತಹ ಪ್ರಮುಖ ಸರಪಣಿಯ ಕೊಂಡಿಯಾಗಿರುವ ಕಪ್ಪೆಗಳು ಒಂದು ನಿಮಿಷಕ್ಕೆ 106 ಕೀಟಗಳನ್ನು ಭಕ್ಷಿಸಿ, ರೈತರಿಗೆ ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಕಾಣಸಿಗುವ ಕಪ್ಪೆಗಳು 7–8 ವರ್ಷಗಳವರೆಗೆ ಬದುಕಬಲ್ಲವು.ಆದರೆ ಈಗ ಈ ಪ್ರಮುಖ ಕೊಂಡಿಯು ಕಳಚಿಹೋಗುವ ಭೀತಿ ಎದುರಾಗಿದೆ. ಸಾಮಾನ್ಯವಾಗಿ ಹೊಲಗದ್ದೆಗಳು, ತೋಟಗಳು, ಕೆರೆ, ಬಾವಿ, ಕಟ್ಟೆಗಳು ಅಥವಾ ನೀರಿನ ಸಂಗ್ರಹ ಇರುವೆಡೆ ಕಪ್ಪೆಗಳ ಆವಾಸ ಇರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಗಂಡು ಕಪ್ಪೆಗಳು ವಟರಗುಟ್ಟುತ್ತವೆ. ಇದು ಹೆಣ್ಣು ಕಪ್ಪೆಗಳನ್ನು ಮಿಲನಕ್ಕಾಗಿ ಆಹ್ವಾನಿಸುವ ವಿಧಾನ. ಆದರೆ ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ಈ ವಟರ್‌ ವಟರ್‌ ಶಬ್ದ ಹೆಚ್ಚಾಗಿ ಕೇಳಿ ಬರುತ್ತಿಲ್ಲ. ಇದಕ್ಕೆ ಕಾರಣ ಭೂಮಿಯ ಒಡಲಲ್ಲಿ ರಾಸಾಯನಿಕ ತುಂಬಿ ಆಹಾರ, ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವುದು. ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳು ಕಪ್ಪೆಗಳನ್ನು ವಿನಾಶದಂಚಿಗೆ ತಳ್ಳುತ್ತಿವೆ. ಅಲ್ಲದೇ ನಗರೀಕರಣದ ಪ್ರಕ್ರಿಯೆಯಲ್ಲಿ ಜಲಮೂಲಗಳು ಕಣ್ಮರೆಯಾಗುತ್ತಿವೆ. ವಿಶ್ವದಲ್ಲಿ 7,000 ಪ್ರಭೇದಗಳು ಇದ್ದವು. ಅವುಗಳಲ್ಲಿ ಶೇ 33ರಷ್ಟು ಪ್ರಭೇದಗಳು ನಾಶ ಹೊಂದಿವೆ ಎಂದು ಹೇಳಲಾಗುತ್ತಿದೆ.ಡೈನೋಸಾರ್‌ಗಳ ನಂತರ ಅತ್ಯಂತ ವೇಗವಾಗಿ ವಿನಾಶದಂಚಿಗೆ ಸಾಗುತ್ತಿರುವ ಜೀವಿಗಳಲ್ಲಿ ಕಪ್ಪೆಗಳು ಮುಂಚೂಣಿಯಲ್ಲಿವೆ ಎಂಬುದನ್ನು ವಿಶ್ವ ಮೃಗಾಲಯಗಳ ಒಕ್ಕೂಟ (ವಾಝಾ) ಪತ್ತೆ ಹಚ್ಚಿದ್ದು, ಕಪ್ಪೆಗಳ ಸಂರಕ್ಷಣೆಗಾಗಿ 2008ನೇ ವರ್ಷವನ್ನು ಕಪ್ಪೆಗಳ ಸಂರಕ್ಷಣಾ ವರ್ಷ ಎಂದೇ ಘೋಷಿಸಿತ್ತು. ಎರಡು ವರ್ಷಗಳ ಹಿಂದೆ ಭಾರತದಲ್ಲಿಯೂ ‘ಕಪ್ಪೆಗಳನ್ನು ಹುಡುಕೋಣ ಬನ್ನಿ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಕಳೆದೇ ಹೋಗಿದೆ ಎಂದುಕೊಂಡಿದ್ದ ಮಿಕ್ರಿಕ್ ಸ್ಯಾಲಸ್ ಎಲಿಂ­ಜೆನ್ಸ್ ಎಂಬ ಜಾತಿಯ ಕಪ್ಪೆಯನ್ನು ವಿಜ್ಞಾನಿಗಳಾದ ಗುರುರಾಜ್, ಪ್ರೊ. ಬಿಜು, ಪ್ರೊ. ದಿನೇಶ್ ಅವರು ಸಕಲೇಶಪುರ ಸಮೀಪದ ಗುಂಡ್ಯ ಅರಣ್ಯ ಪ್ರದೇಶ­ದಲ್ಲಿ ಮರು­ಶೋಧ ಮಾಡಿದ್ದರು.ಪ್ರಯೋಗ ಪಶು!

ಜೀವವಿಜ್ಞಾನದ ಸಂಶೋಧಕರು, ವಿಜ್ಞಾನಿಗಳು, ವಿದ್ಯಾರ್ಥಿಗಳಿಗೆ ದೇಹರಚನಾಶಾಸ್ತ್ರ ಅಧ್ಯಯನಕ್ಕೆ ಹಲವಾರು ದಶಕಗಳಿಂದ ಪ್ರಯೋಗಪಶುವಾಗಿ ಬಳಕೆಯಾಗುತ್ತಿವೆ ಕಪ್ಪೆಗಳು. ನೆಲದ ಮೇಲೆ ಕುಪ್ಪಳಿಸುತ್ತ ಸಾಗುವ ಕಪ್ಪೆಗಳು, ನೆಲದೊಳಗಿನ ಬಿಲ, ಕಲ್ಲುಬಂಡೆಗಳ ಸಂದಿಗಳಲ್ಲಿ ವಾಸಿಸುವು­ದ­ರಿಂದ, ಭೂಮಿಯೊಳಗಿನ ಸ್ಥಿತ್ಯಂತರಗಳನ್ನು ಗ್ರಹಿಸಬಲ್ಲವು. ‘1972ರಲ್ಲಿ ಚೀನಾದಲ್ಲಿ ಭಾರಿ ಪ್ರಮಾ­ಣದ ಭೂಕಂಪ ಸಂಭವಿಸಿತು. ಆದರೆ, ಕಪ್ಪೆಗಳು ತಮ್ಮ ವಾಸಸ್ಥಾನದಿಂದ ಹೊರಬಂದು ಭಯದಿಂದ ಅರಚುತ್ತ ಕುಪ್ಪಳಿಸುವುದನ್ನು ಕಂಡು ಭೂಕಂಪದ ಮುನ್ಸೂಚನೆಯನ್ನು ಅರಿಯಲಾಗಿತ್ತು. ಇದರಿಂದಾಗಿ ಭೂಕಂ­ಪದ ಮುನ್ನಾ­ದಿನವೇ ಲಕ್ಷಾಂತರ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು’ ಎಂದು ಬಿಹಾರ ಬೋಧಗಯಾದ ಭಾರತೀಯ ಪ್ರಾಣಿ­ಶಾಸ್ತ್ರ ಸೊಸೈಟಿ ಅಧ್ಯಕ್ಷ ಪ್ರೊ.ಬಿ.ಎನ್‌.ಪಾಂಡೆ ನೆನಪಿಸಿಕೊಳ್ಳುತ್ತಾರೆ.ಹೊಸ ಪ್ರಭೇದಗಳು

ಹೊಸ ಪ್ರಭೇದಗಳ ಕಪ್ಪೆಗಳನ್ನು ಕೆ.ವಿ. ಗುರುರಾಜ್ ಮತ್ತು ತಂಡವು ಪತ್ತೆ ಹಚ್ಚಿದೆ. ಅದರಲ್ಲಿ ಕುದುರೆಮುಖದ ಪಶ್ಚಿಮ ಘಟ್ಟದಲ್ಲಿ ಕರ್ನಾಟಕ ರಾತ್ರಿ ಕಪ್ಪೆ (ಕರ್ನಾಟಕ ನೈಟ್ ಫ್ರಾಗ್), ತಮಿಳುನಾಡಿನ ಕಾಕಾಚಿಯಲ್ಲಿ ರಾವೋರ್ ಚೆಸ್ಟಸ್ ಕಾಕಾಚಿ (ಕಾಕಾಚಿ ಪೊದೆ ಕಪ್ಪೆ) ರಾವರ್ ಚೆಸ್ಟಸ್ ಓಕ್ಲಾಂಡ್ರೆ (ವಾಟೆ ಬಿದಿರು ಕಪ್ಪೆ) ಪ್ರಭೇದಗಳನ್ನು ಪತ್ತೆ ಹಚ್ಚಿದ್ದಾರೆ.‘ನಮ್ಮ ಸಂಶೋಧನೆಯ ಸಂದರ್ಭದಲ್ಲಿ ಯಾವುದಾದರೂ ಕಪ್ಪೆ ಸಿಕ್ಕಾಗ ಅದನ್ನು ಸದ್ಯ ಇರುವ ಕಪ್ಪೆಗಳ ಜಾತಿಯೊಂದಿಗೆ ಹೋಲಿಕೆ ಮಾಡುತ್ತೇವೆ. ಹೊಸ ಕಪ್ಪೆ ಹೌದೋ ಅಲ್ಲವೋ ಎಂದು ಕೂಲಂಕಷವಾಗಿ ಅಧ್ಯಯನ ಮಾಡುತ್ತೇವೆ. ವಟರಗುಟ್ಟುವಿಕೆ, ಕುಪ್ಪಳಿಸುವಿಕೆ ಮತ್ತಿತರ ಗುಣಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತೇವೆ. 3 ಅಥವಾ 4ಕ್ಕಿಂತ ಹೆಚ್ಚು ವ್ಯತ್ಯಾಸಗಳು ಕಂಡು ಬಂದರೆ ಹೊಸದು ಎಂದು ನಿರ್ಧಾರ ಮಾಡುತ್ತೇವೆ. ಅದರ ಕುರಿತು ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಬಂಧ ಪ್ರಕಟಿಸಲಾಗುತ್ತದೆ. ಅದನ್ನು ಬೇರೆ ದೇಶಗಳ ತಜ್ಞರು, ನಿಷ್ಣಾತರು ನಮ್ಮ ಸಂಶೋಧನೆಯನ್ನು ಒರೆಗೆ ಹಚ್ಚುತ್ತಾರೆ. ನಂತರ ಹೊಸ ಪ್ರಭೇದ ಹೌದೋ, ಅಲ್ಲವೋ ಎಂಬುದನ್ನು ಘೋಷಿಸುತ್ತಾರೆ. ಇನ್ನೂ ಎರಡು–ಮೂರು ಪ್ರಭೇದಗಳು ಇವೆ. ಅವುಗಳ ಕುರಿತು ಪರೀಕ್ಷೆ ನಡೆಯುತ್ತಿದೆ’ ಎಂದು ಗುರುರಾಜ್ ಹೇಳುತ್ತಾರೆ.ಹೊಸ ಪ್ರಭೇದಗಳು ಪತ್ತೆಯಾಗಿರುವುದು ಸಮಾಧಾನದ ವಿಷಯ. ಆದರೆ ನಿಸರ್ಗದ ಮೇಲೆ ದೌರ್ಜನ್ಯ ನಡೆಯುತ್ತಲೇ ಹೋದರೆ ಆ ಪ್ರಭೇದಗಳು ಎಷ್ಟು ದಿನ ಬದುಕಬಲ್ಲವು ಎಂಬುದೇ  ನಮ್ಮ ಮುಂದಿರುವ ಪ್ರಶ್ನೆ.ಸಕಲ ಜೀವಿಗಳ ರಕ್ಷಣೆ ಅಗತ್ಯ

ಹುಲಿಗಳ ಸಂರಕ್ಷಣೆಗಾಗಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಯೋಜನೆ ರೂಪಿಸಲಾಗುತ್ತದೆ. ಆದರೆ ಎಲ್ಲ ಜೀವಿಗಳಿಗೂ ಆಸರೆ ನೀಡಿರುವ ಭೂಮಿಯಲ್ಲಿರುವ ಉಪಕಾರಿ ಕ್ರಿಮಿ, ಕೀಟಗಳ ರಕ್ಷಣೆಯನ್ನು ಮರೆಯುತ್ತೇವೆ. ಎಲ್ಲ ಕ್ರಿಮಿಕೀಟಗಳೂ ಭೂಮಿಯನ್ನು ಹಾಳು ಮಾಡುವುದಿಲ್ಲ. ಫಲವತ್ತತೆ ಹೆಚ್ಚಿಸುತ್ತವೆ. ಅಲ್ಲದೇ ಆಹಾರ ಸರಪಣಿಯ ಜೀವವೈವಿಧ್ಯತೆಯನ್ನು ಉಳಿಸುತ್ತವೆ. ಆದ್ದರಿಂದ ಹುಲಿ, ಆನೆ, ಸಿಂಹಗಳಿಗೆ ಇರುವಷ್ಟೇ ಮಹತ್ವ ಈ ಸಣ್ಣ ಕ್ರಿಮಿಗಳಿಗೂ ಇದೆ ಎಂಬುದನ್ನು ಅರಿಯಬೇಕು.

ಕೈಲಾಸಮೂರ್ತಿ,ಸಹಜ ಕೃಷಿ ತಜ್ಞ, ಕೊಳ್ಳೆಗಾಲಕಪ್ಪೆಗಳಿಗೆ ಕನ್ನಡದ ಹೆಸರಿಲ್ಲ


ಕಪ್ಪೆಗಳಲ್ಲಿರುವ ಹಲವಾರು ಪ್ರಭೇದಗಳಿಗೆ ಕನ್ನಡದಲ್ಲಿ ನಾಮಕರಣವೇ ಆಗಿಲ್ಲ. ಇಂಗ್ಲಿಷ್‌ ಪದಬಳಕೆಯೇ ರೂಢಿಯಲ್ಲಿದೆ. ಕಪ್ಪೆ ಎಂಬ ಶಬ್ದ ಮಾತ್ರ ಕನ್ನಡದ್ದಾಗಿದೆ. ಮೈಸೂರಿನಲ್ಲಿರುವ ಕಪ್ಪೆಗಳ ಬಗ್ಗೆ ಅಧ್ಯಯನದ ಅಗತ್ಯವಿದೆ. ಕುಕ್ಕರಹಳ್ಳಿ, ಕಾರಂಜಿ ಕೆರೆಗಳ ಪರಿಸರದ ಕಪ್ಪೆಗಳ ಪ್ರಭೇದಗಳ ಗುರುತಿಸುವಿಕೆ ಆಗಬೇಕಿದೆ ಎಂದು ವಿಜ್ಞಾನಿ ಗುರುರಾಜ್ ಹೇಳುತ್ತಾರೆ. ಕಪ್ಪೆ ಪ್ರಭೇದಗಳಿಗೆ ಕನ್ನಡದ ಹೆಸರಿಡುವ ಕಾರ್ಯವನ್ನು ಗುರುರಾಜ್ ಮತ್ತು ಅವರ ಬಳಗ ಮಾಡುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.