ಶನಿವಾರ, ಫೆಬ್ರವರಿ 27, 2021
19 °C

ಕೃತಿಯ ಜಲ ಬಲ!

ಸಂದರ್ಶನ: ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಕೃತಿಯ ಜಲ ಬಲ!

ನಟಿ ಕೃತಿ ಕುಲ್ಹರಿ ರಂಗಭೂಮಿ ಹಿನ್ನೆಲೆಯುಳ್ಳವರು. ಬಾಲಿವುಡ್‌ ಅಂಗಳಕ್ಕೆ ಜಿಗಿದಿದ್ದರೂ ರಂಗಭೂಮಿಯೊಂದಿಗಿನ ಒಡನಾಟವನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ಬಾಲಿವುಡ್‌ನಲ್ಲಿದ್ದರೂ ಅವರ ಅದೃಷ್ಟದ ಗ್ರಾಫ್‌ ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ. ಈ ಸಂಗತಿಯನ್ನು ಯಾವುದೇ ಮುಜುಗರವಿಲ್ಲದೇ ಹೇಳಿಕೊಳ್ಳುವ ಕೃತಿ, ಈಗ ತಮ್ಮ ಹೊಸ ಚಿತ್ರ ‘ಜಲ್‌’ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ‘ಜಲ್‌’ ಚಿತ್ರ ಪ್ರಚಾರಕ್ಕೆಂದು ಈಚೆಗೆ ನಗರಕ್ಕೆ ಬಂದಿದ್ದ ಅವರು ‘ಮೆಟ್ರೊ’ದೊಂದಿಗೆ ಮಾತನಾಡಿದರು.*ವೈಯಕ್ತಿಕವಾಗಿ ನಿಮಗೆ ತುಂಬ ಇಷ್ಟವಾಗುವ ಕ್ಷೇತ್ರ ರಂಗಭೂಮಿಯೋ, ಚಿತ್ರರಂಗವೋ?

ನನಗೆ ಎರಡು ಕ್ಷೇತ್ರಗಳೂ ಇಷ್ಟ. ಈಗಲೂ ಈ ಕ್ಷೇತ್ರಗಳಲ್ಲಿ ಸಕ್ರಿಯಳಾಗಿದ್ದೇನೆ. ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ ರಂಗಭೂಮಿ ಕಲಾವಿದೆಯಾಗಿದ್ದೆ. ಕೆಲದಿನಗಳ ಹಿಂದಷ್ಟೇ ನಾನು ‘ರಾಶೋಮನ್‌’ ನಾಟಕದಲ್ಲಿ ಕಾಣಿಸಿಕೊಂಡಿದ್ದೆ. ಇದು ಜಪಾನಿ ನಿರ್ದೇಶಕ ಅಕಿರಾ ಕುರಾಸವಾ ಅವರ ‘ರಾಶೋಮನ್‌’ ಚಲನಚಿತ್ರವನ್ನು ಆಧರಿಸಿದ ನಾಟಕ. ಆ ಚಿತ್ರವನ್ನೇ ನಾಟಕವನ್ನಾಗಿ ಪರಿವರ್ತಿಸಿ ಪ್ರದರ್ಶನ ನೀಡಿದ್ದೆವು. ಹಿಂದಿಯಲ್ಲಿ ಆಡಿದ ಈ ನಾಟಕ ನಟರಿಗೆ ಸವಾಲೊಡ್ಡಿತ್ತು. ಹಿಂದಿ ನಾಟಕವಾಗಿದ್ದರೂ ಅನೇಕ ಕಡೆ ಇಂಗ್ಲಿಷ್‌ ಸಂಭಾಷಣೆಯನ್ನು ಅಳವಡಿಸಿಕೊಳ್ಳಲಾಗಿತ್ತು. ನಾಟಕಕ್ಕೆ ಜಾಸ್‌ ಸಂಗೀತವನನ್ನೂ ಬಳಸಿಕೊಂಡಿದ್ದೆವು. ವರ್ಷದಲ್ಲಿ ನಾಲ್ಕೈದು ತಿಂಗಳು ನಾನು ರಂಗಭೂಮಿಯಲ್ಲಿ ಸಕ್ರಿಯವಾಗಿರುತ್ತೇನೆ. ರಂಗಭೂಮಿಯಲ್ಲಿ ಕಲಿತಿದ್ದನ್ನು ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೇನೆ.  ನಟನೆಯಲ್ಲಿ ಮಾಗಬೇಕು ಅಂದರೆ ಸಿನಿಮಾ ನಟರು ನಾಟಕಗಳಲ್ಲಿ ಅಭಿನಯಿಸಬೇಕು. ಪ್ರತಿದಿನವೂ ಇಲ್ಲಿ ಹೊಸತನ್ನು ಕಲಿಯಬಹುದು. *‘ಕಿಚ್ಡಿ: ದಿ ಮೂವಿ’ ಸಿನಿಮಾದಿಂದ ಈಚೆಗಿನ ‘ಜಲ್‌’ವರೆಗಿನ ನಿಮ್ಮ ಬಾಲಿವುಡ್‌ ಪಯಣ ಹೇಗಿತ್ತು?

ಬಾಲಿವುಡ್‌ನಲ್ಲಿ ನನ್ನದು ನಿಧಾನ ಪ್ರಯಾಣ. 2010ರಲ್ಲಿ ‘ಕಿಚ್ಡಿ’ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದೆ. ಅದಾದ ಮೇಲೆ ‘ಶೈತಾನ್‌’ ಚಿತ್ರಕ್ಕೆ ಬಣ್ಣ ಹಚ್ಚಿದೆ. ಈ ಚಿತ್ರದಲ್ಲಿ ನಾನು ನಿರ್ವಹಿಸಿದ್ದ ತಾನ್ಯ ಶರ್ಮಾ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಸಿನಿಮಾ ಸಹ ಸ್ವಲ್ಪ ಹೆಸರು ಮಾಡಿತು. ಆದಾದ ಮೇಲೆ ಒಂದೆರೆಡು ಚಿತ್ರಗಳಿಗೆ ಬಣ್ಣ ಹಚ್ಚಿದೆ. ಆ ಸಿನಿಮಾಗಳು ಬಾಲಿವುಡ್‌ನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಆಮೇಲೆ ‘ಜಲ್‌’ ಚಿತ್ರವನ್ನು ಒಪ್ಪಿಕೊಂಡೆ. ಇದು ವೈಯಕ್ತಿಕವಾಗಿ ನನಗೆ ಹೆಚ್ಚು ಖುಷಿಕೊಟ್ಟಿತು. ನಿಧಾನವಾಗಿ ಸಿನಿಮಾಗಳು ಸಿಕ್ಕರೂ ಅವುಗಳಿಂದ ಸಿಕ್ಕಿದ ಅನುಭವ ನನ್ನ ನಟನಾ ವೃತ್ತಿಯನ್ನು ಹಿಗ್ಗಿಸಿಕೊಳ್ಳಲು ನೆರವಾಗಿದೆ.*ನಿಮ್ಮ ಹೊಸ ಚಿತ್ರ ‘ಜಲ್‌’ ಬಗ್ಗೆ ಹೇಳಿ.

ಈ ಚಿತ್ರದ ಟ್ರೇಲರ್‌ ನೋಡಿದ್ದೀರಾ?. (ಹೌದು, ಎಂದು ಹೇಳಿದ ನಂತರ ಮಾತು ಮುಂದುವರಿಸಿದರು). ‘ಜಲ್‌’ ಚಿತ್ರಕತೆ ನೀರಿನ ಸುತ್ತ ಸುತ್ತುತ್ತದೆ. ಇದು ನಡೆಯುವುದು ಗುಜರಾತ್‌ನ ಕಛ್‌ ಪ್ರದೇಶದಲ್ಲಿ. ಜಲಮೂಲ ಹುಡುಕುವ ಹುಡುಗನ ಸುತ್ತ ಕತೆ ಹೆಣೆಯಲಾಗಿದೆ. ಅಕ್ಕಪಕ್ಕದಲ್ಲಿ ಎರಡು ಹಳ್ಳಿಗಳಿರುತ್ತವೆ. ನೀರಿನ ವಿಷಯಕ್ಕೆ ಅವುಗಳ ನಡುವೆ ದ್ವೇಷ ಇರುತ್ತದೆ. ನಾನು ಒಂದು ಹಳ್ಳಿಗೆ ಸೇರಿದ ಹುಡುಗಿಯಾದರೆ, ಬಕ್ಕಾ ಮತ್ತೊಂದು ಹಳ್ಳಿಗೆ ಸೇರಿದವ. ನಮ್ಮಿಬ್ಬರ ನಡುವೆ ಪ್ರೇಮ ಅಂಕುರಿಸುತ್ತದೆ. ಈ ಚಿತ್ರದಲ್ಲಿ ನಾನು ‘ಕೇಸರ್‌’ ಎಂಬ ಪಾತ್ರ ನಿರ್ವಹಿಸಿದ್ದೇನೆ. ನಾನು ವಾಸಿಸುವ ಹಳ್ಳಿಯಲ್ಲಿ ನೀರು ಸಮೃದ್ಧವಾಗಿರುತ್ತದೆ. ಆದರೆ, ಆ ಹಳ್ಳಿಯ ಪರಿಸ್ಥಿತಿ ಇಲ್ಲಿಗಿಂತ ಭಿನ್ನವಾದುದು.ಇಡೀ ಚಿತ್ರವನ್ನು ಕಛ್‌ನಲ್ಲಿಯೇ ಚಿತ್ರೀಕರಿಸಲಾಗಿದೆ. ಮಾನವೀಯ ಸಂಬಂಧಗಳನ್ನು ಹೇಳುತ್ತಾ ಸಾಗುವ ಈ ಚಿತ್ರದಲ್ಲಿ ಪ್ರೀತಿ ಇದೆ, ಹಾಡುಗಳಿವೆ. ಕಾಮಿಡಿ, ಭಾವನೆಗಳ ಜೀಕುವಿಕೆ ಹೀಗೆ ಎಲ್ಲವೂ ಇದೆ. ಒಂದು ಕಮರ್ಷಿಯಲ್‌ ಚಿತ್ರದಲ್ಲಿ ಇರಬೇಕಾದ ಎಲ್ಲ ಮಸಾಲೆಗಳು ಇವೆಯಾದರೂ ಈ ಚಿತ್ರ ಮಾತ್ರ ಸಂಪೂರ್ಣವಾಗಿ ಹಳ್ಳಿಯಲ್ಲೇ ಗಿರಕಿ ಹೊಡೆಯುತ್ತದೆ. ಒಟ್ಟಾರೆಯಾಗಿ, ಚಿತ್ರ ಸುಂದರವಾಗಿ ಮೂಡಿಬಂದಿದೆ. ಸಂದೇಶವೂ ಇದೆ.*ಚಿತ್ರಕ್ಕೆ ತಯಾರಿ ಮಾಡಿಕೊಂಡ ಬಗೆ ಹೇಳಿ? ಚಿತ್ರೀಕರಣದ ಅನುಭವ ಹೇಗಿತ್ತು?

ನಾನು ನಗರದಲ್ಲಿ ಹುಟ್ಟಿ ಬೆಳೆದ ಹುಡುಗಿ. ‘ಜಲ್‌’ ಸಂಪೂರ್ಣವಾಗಿ ಚಿತ್ರೀಕರಣಗೊಂಡಿರುವುದು ಹಳ್ಳಿಯಲ್ಲಿ. ನಾನು ಇರುವುದಕ್ಕೂ ನಿಭಾಯಿಸಬೇಕಾದ ಪಾತ್ರಕ್ಕೂ 180 ಡಿಗ್ರಿ ವ್ಯತ್ಯಾಸವಿತ್ತು. ನನ್ನ ವ್ಯಕ್ತಿತ್ವಕ್ಕೆ, ನಟನೆಗೆ ಸವಾಲೊಡ್ಡುವ ಪಾತ್ರ ಇದಾಗಿದ್ದರಿಂದ ಚಿತ್ರವನ್ನು ಒಪ್ಪಿಕೊಂಡೆ. ಒಬ್ಬ ನಟಿಯಾಗಿ ಎಲ್ಲ ಬಗೆಯ ಪಾತ್ರಗಳಿಗೂ ಒಡ್ಡಿಕೊಳ್ಳಬೇಕು ಎಂಬ ಪ್ರಯೋಗಶೀಲ ಮನೋಭಾವ ನನಗಿದೆ. ಈಕೆ ಈ ಪಾತ್ರವನ್ನು ನಿಭಾಯಿಸಬಲ್ಲಳೇ ಎಂದು ಬೇರೆಯವರು ಚಕಿತಗೊಳ್ಳುವಂಥ ಪಾತ್ರಗಳನ್ನು ಮಾಡುವುದರಲ್ಲಿ ನನಗೆ ಖುಷಿ ಇದೆ. ನನ್ನಲ್ಲಿ ನಂಬಿಕೆ ಇಟ್ಟು ಚಿತ್ರದ ನಿರ್ದೇಶಕರು ಈ ಪಾತ್ರವನ್ನು ಕೊಟ್ಟಿದ್ದಾರೆ. ಆ ನಂಬಿಕೆ ಉಳಿಸಿಕೊಳ್ಳಬೇಕಾದ ಹೊಣೆ ನನ್ನ ಮೇಲಿತ್ತು. ಅದನ್ನು ನಿರೂಪಿಸಬೇಕಾದರೆ ನಾನು ಶೇ 100ರಷ್ಟು ಕಠಿಣ ಶ್ರಮ ಹಾಕಲೇಬೇಕಿತ್ತು. ಹಾಗಾಗಿ ಚಿತ್ರೀಕರಣ ನಡೆಯುವ ರಾಜಸ್ತಾನ ಮತ್ತು ಕಛ್‌ ಜನರ ಜತೆ ಸ್ವಲ್ಪ ದಿನ ಉಳಿದು ಅಲ್ಲಿನ ಜನರಿಂದ ಅವರ ನಡವಳಿಕೆ, ಧರಿಸುವ ವಸ್ತ್ರ, ಭಾಷೆ, ಸಂಸ್ಕೃತಿ ಬಗ್ಗೆ ತಿಳಿದುಕೊಂಡೆ. ಚಿತ್ರಕ್ಕಾಗಿ ಕೆಲವು ಕಾರ್ಯಾಗಾರಗಳಲ್ಲೂ ಪಾಲ್ಗೊಂಡೆ. ಅವರ ಒಡನಾಟ ನಾನು ನಿರ್ವಹಿಸಬೇಕಾದ ಪಾತ್ರಕ್ಕೆ ನೂರು ಆನೆ ಬಲ ತುಂಬಿತು. ಕಛ್‌ ಮಹಿಳೆಯ ಒತೆಗಿನ ಒಡನಾಟ ತುಂಬ ಇಷ್ಟವಾಯಿತು. ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಚಿತ್ರೀಕರಣ ಮಾಡಿದೆವು. 50 ಡಿಗ್ರಿವರೆಗೂ ತಾಪಮಾನ ಇರುತ್ತಿತ್ತು. ಚಿತ್ರೀಕರಣ ಮಾಡಬೇಕಾದ ಸ್ಥಳದಿಂದ ಹೋಟೆಲ್‌ ತುಂಬಾ ದೂರ ಇತ್ತು. ಕೆಲವೊಮ್ಮೆ ಚಿತ್ರೀಕರಣದ  ಸ್ಥಳದಲ್ಲೇ ಟೆಂಟ್‌ ನಿರ್ಮಿಸಿ ಉಳಿದುಕೊಳ್ಳುತ್ತಿದ್ದೆವು.*‘ಜಲ್‌’ ಸಿನಿಮಾ ನಿರ್ದೇಶಕ ಗಿರೀಶ್‌ ಮಲ್ಲಿಕ್‌ ಬಗ್ಗೆ ಹೇಳಿ?

ಗಿರೀಶ್‌ ಮಲ್ಲಿಕ್‌ ಬೆಂಕಿ ಚೆಂಡಿದ್ದಂತೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಪ್ಯಾಶನ್‌ ಉಳ್ಳವರು. ಕ್ರಿಯಾಶೀಲ ವ್ಯಕ್ತಿ. ಅವರನ್ನು ಹಡಗಿನ ಕ್ಯಾಪ್ಟನ್‌ಗೆ ಹೋಲಿಸಬಹುದು. ‘ಜಲ್‌’ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರೆ ಅದರ ಯಶಸ್ಸೆಲ್ಲಾ ಅವರಿಗೆ ಸಲ್ಲಬೇಕು. ಅವರ ವರ್ಕೋಹಾಲಿಕ್‌ ಗುಣ ನನಗೆ ತುಂಬ ಅಚ್ಚುಮೆಚ್ಚು.*‘ಜಲ್‌’ ಚಿತ್ರದ ಬಗ್ಗೆ ನಿಮಗೆ ಇರುವ ನಿರೀಕ್ಷೆಗಳೇನು?

ತುಂಬ ನಿರೀಕ್ಷೆಗಳಿವೆ. ‘ಜಲ್‌’ ಸಿನಿಮಾ ಈಗಾಗಲೇ ಎರಡು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಈ ಚಿತ್ರಕ್ಕಾಗಿ ನಾನು ಸಾಕಷ್ಟು ಶ್ರಮಪಟ್ಟಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿರುವುದರಿಂದ ಇದು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತದೆ ಎಂಬ ನಂಬಿಕೆ ಇದೆ. ಈ ಚಿತ್ರ ನನ್ನ ನಟನಾವೃತ್ತಿಗೂ ಒಂದೊಳ್ಳೆ ಬ್ರೇಕ್‌ ನೀಡಲಿದೆ.* ನಿಮ್ಮನ್ನು ಸದಾ ಕಾಡುವ ಪಾತ್ರ ಯಾವುದು? ಇಷ್ಟದ ರಂಗ ನಿರ್ದೇಶಕರು ಯಾರು?

ಸಿನಿಮಾದಲ್ಲಾದರೆ ‘ಜಲ್‌’ ಸಿನಿಮಾದಲ್ಲಿನ ಕೇಸರ್‌ ಪಾತ್ರ ತುಂಬ ಅಚ್ಚುಮೆಚ್ಚು. ಈ ಚಿತ್ರವನ್ನು ನೋಡಿ ಹೊರಬಂದ ಪ್ರೇಕ್ಷಕರು ನನ್ನ ಪಾತ್ರದ ಕುರಿತು ಮಾತನಾಡುತ್ತಾರೆ ಎಂಬ ವಿಶ್ವಾಸವಿದೆ. ನಾಟಕದಲ್ಲಾದರೆ, ‘ರಾಶೋಮನ್‌’ನಲ್ಲಿ ನಿರ್ವಹಿಸಿದ ಕಿನೊನಿ ಹಾಗೂ ವಿಜಯ್‌ ತೆಂಡೂಲ್ಕರ್‌ ನಿರ್ದೇಶನದ ಮರಾಠಿ ನಾಟಕ ‘ಸಖಾರಾಂ ಬೈಂಡರ್‌’ನಲ್ಲಿನ ಚಂಪಾ ಪಾತ್ರ ತುಂಬ ಇಷ್ಟವಾಗುತ್ತದೆ. ನಾನು ‘... ಬೈಂಡರ್‌’ನ  ಹಿಂದಿ ವರ್ಷನ್‌ನಲ್ಲಿ ನಟಿಸಿದ್ದೇನೆ. ಕಿನೊನಿ ಪಾತ್ರವಂತೂ ತುಂಬಾ ಸವಾಲೊಡ್ಡಿತ್ತು. ನಾನು ಅಭಿನಯಿಸಿದ ನಾಟಕ ಮತ್ತು ಸಿನಿಮಾದಲ್ಲಿ ಕೆಕೆ ಪಾತ್ರಗಳು (ಕೇಸರ್‌, ಕಿನೊನಿ) ಇಷ್ಟವಾಗುತ್ತವೆ. ರಂಗ ನಿರ್ದೇಶಕರಾದ  ಬಿಜಾನ್‌ ಮಂಡಲ್‌ ಮತ್ತು ಓಂ ಕಠಾರಿಯಾ ಇಷ್ಟವಾಗುತ್ತಾರೆ.*ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳು ಯಾವುವು?

‘ಬಂಧೇಯಾ’ ಪಂಜಾಬಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದು ಮ್ಯೂಸಿಕಲ್‌ ಲವ್‌ ಸ್ಟೋರಿ. ಇದರಲ್ಲಿ ನನ್ನದು ವಿಭಿನ್ನವಾದ ಪಾತ್ರ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.