ಬುಧವಾರ, ಮೇ 19, 2021
24 °C
ನೀರಾವರಿ ನೋಟ : ಹೊಸ ಸರ್ಕಾರದ ಮುಂದಿರುವ ಸವಾಲುಗಳು

ಕೃಷ್ಣೆಯ ಹನಿ ಹನಿ ನೀರು ಬಳಕೆ

ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಚುನಾವಣೆಯ ಪೂರ್ವದಲ್ಲೇ `ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ' ಎಂದು ಘೋಷಿಸಿ ಐದು ವರ್ಷಗಳ ಕಾಲಮಿತಿಯಲ್ಲಿ ಪ್ರತಿವರ್ಷ ರೂ. 10,000 ಕೋಟಿ ವಿನಿಯೋಗಿಸಿ ನೀರಾವರಿ ಯೊಜನೆಗಳನ್ನು ಪೂರ್ತಿಗೊಳಿಸುವುದಾಗಿ ಹೇಳಿದ್ದ ಮಾತನ್ನು ಕಾಂಗ್ರೆಸ್ ಸರ್ಕಾರ ಉಳಿಸಿ ಕೊಳ್ಳಬೇಕಿದೆ.ಕರ್ನಾಟಕದಲ್ಲಿ ಕೃಷ್ಣಾ ಮತ್ತು ಕಾವೇರಿ ಕೊಳ್ಳಗಳು ಪ್ರಮುಖವಾಗಿವೆ. ರಾಜ್ಯದ ಒಟ್ಟು ಶೇ 58.66ರಷ್ಟು ಪ್ರದೇಶ ಕೃಷ್ಣಾ ಕೊಳ್ಳದಲ್ಲಿ ಬರುತ್ತದೆ. ಕಾವೇರಿ ಕೊಳ್ಳದ ಪ್ರದೇಶ ಶೇ 18.97ರಷ್ಟು ಮಾತ್ರ. ಉಳಿದ ಶೇ 22.5ರಲ್ಲಿ ಪಶ್ಚಿಮ ವಾಹಿನಿ ನದಿಗಳು, ಪೆನ್ನಾರ, ಪಾಲಾರ ಮತ್ತು ಗೋದಾವರಿ ಕೊಳ್ಳಗಳು ಬರುತ್ತವೆ.ಕೃಷ್ಣಾ ಕೊಳ್ಳದ ಒಟ್ಟು 2.57 ಲಕ್ಷ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕರ್ನಾಟಕವು 1,12,600 ಚ.ಕಿ.ಮೀ. ಪ್ರದೇಶ ಹೊಂದಿದೆ. 1976ರಲ್ಲಿ ಬಚಾವತ್ ನೇತೃತ್ವದ ನ್ಯಾಯಮಂಡಳಿ ಕೃಷ್ಣಾ ಕೊಳ್ಳದ ನೀರನ್ನು ಹಂಚಿಕೆ ಮಾಡಿದ್ದು, ಅದನ್ನು `ಎ' ಸ್ಕೀಂ ಎಂದು ಕರೆಯಲಾಗುತ್ತಿದೆ.ಇದರಲ್ಲಿ ರಾಜ್ಯಕ್ಕೆ ಒಟ್ಟು 734 ಟಿಎಂಸಿ ಅಡಿ ನೀರು ದೊರೆತಿದೆ. ಬೀದರ್, ಗುಲ್ಬರ್ಗ, ರಾಯಚೂರು, ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸುಮಾರು 6,22,023 ಹೆಕ್ಟೆರ್ (15,42,617 ಎಕರೆ) ಭೂಮಿಗೆ ನೀರು ಹರಿಸುವ ಯೋಜನೆಗಳು ಬಹುತೇಕ ಮುಕ್ತಾಯದ ಹಂತದಲ್ಲಿವೆ.ಕೇಂದ್ರ ಸರ್ಕಾರ 2004ರ ಏಪ್ರಿಲ್ 2ರಂದು ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ್ ನೇತೃತ್ವದ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ ನೇಮಿಸಿತ್ತು, ಆ ನ್ಯಾಯ ಮಂಡಳಿ 2010ರ ಡಿಸೆಂಬರ್ 30ರಂದು ತೀರ್ಪು ನೀಡಿ ಕರ್ನಾಟಕ ಕ್ಕೆ 177 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ.ಕರ್ನಾಟಕಕ್ಕೆ ದೊರೆತ ಒಟ್ಟು 177 ಟಿಎಂಸಿ ಅಡಿ ನೀರಿನಲ್ಲಿ ಏಳು ಟಿಎಂಸಿ ಅಡಿ ನೀರನ್ನು ನದಿಪಾತ್ರದ ಸಂರಕ್ಷಣೆಗಾಗಿ ಬಳಸಿದರೆ, ಉಳಿದದ್ದು 170 ಟಿಎಂಸಿ ಅಡಿ. ಅದರಲ್ಲಿ 130 ಟಿಎಂಸಿ ಅಡಿ ನೀರನ್ನು ಆಲಮಟ್ಟಿ ಜಲಾಶಯದ ಮಟ್ಟವನ್ನು 524.256 ಮೀಟರ್‌ಗೆ ಹೆಚ್ಚಿಸಿ ಅಲ್ಲಿ ಈ ನೀರನ್ನು ಸಂಗ್ರಹಿಸಿಕೊಳ್ಳಲು ಅನುಮತಿ ನೀಡಿದೆ. ಮುಳವಾಡ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ, ಗುತ್ತಿ ಬಸವಣ್ಣ, ಮಲ್ಲಾಬಾದ, ಹೆರಕಲ್, ರಾಮಪುರ, ನಾರಾಯಣಪುರ ಬಲದಂಡೆ ವಿಸ್ತರಣೆ, ಕೊಪ್ಪಳ ಮತ್ತು ಭೀಮಾ ನದಿಯಲ್ಲಿಯ ಯೋಜನೆಗಳಲ್ಲಿ ಒಟ್ಟು 130 ಟಿಎಂಸಿ ಅಡಿ ನೀರಿನಿಂದ 5,30,475 ಹೆಕ್ಟೇರ್ (13,10,785 ಎಕರೆ) ಜಮೀನಿಗೆ ನೀರಾವರಿ ಕಲ್ಪಿಸಲು ಉದ್ದೇಶಿಸಲಾಗಿದೆ.ಉಳಿದ 40 ಟಿಎಂಸಿ ಅಡಿ ನೀರನ್ನು ತುಂಗಭದ್ರಾ ಕೊಳ್ಳದಲ್ಲಿ ಉಪಯೋಗಿಸಲು ಅನುಮತಿ ನೀಡಿದೆ. ವಿಶೇಷವಾಗಿ ತುಂಗಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಮತ್ತು ಸಿಂಗಟಾಲೂರು ಯೋಜನೆಗಳಲ್ಲಿ ಬಳಸಲು ತಿಳಿಸಿದೆ. ಇದರಿಂದ ಬರದಿಂದ ಬಳಲುತ್ತಿದ್ದ ಮಧ್ಯ ಕರ್ನಾಟಕದ ಹಾವೇರಿ, ಗದಗ, ತುಮಕೂರು, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳಿಗೆ ಉಪಯೋಗವಾಗಲಿದೆ.ಬ್ರಿಜೇಶ್‌ಕುಮಾರ್ ನೇತೃತ್ವದ ನ್ಯಾಯಮಂಡಳಿ ತೀರ್ಪು ಬಂದ ನಂತರದ ಈ ಎರಡೂವರೆ ವರ್ಷಗಳ ಅವಧಿಯಲ್ಲಿ ಹಿಂದಿನ ಸರ್ಕಾರದ ಮಹತ್ವದ ಸಾಧನೆ ಎಂದರೆ, ಈ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರು ನೀಡಿ ಏಳು ವರ್ಷಗಳ ಕಾಲಮಿತಿಯಲ್ಲಿ ಸುಮಾರು ರೂ. 17,500 ಕೋಟಿ ವೆಚ್ಚದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಿರುವುದು. ಅದರಲ್ಲಿ ಮುಳವಾಡ ಮತ್ತು ಚಿಮ್ಮಲಗಿ ಯೋಜನೆಗಳಲ್ಲಿ ಕಾಮಗಾರಿಯೂ ಪ್ರಾರಂಭವಾಗಿದೆ. ಈಗ ಉಳಿದದ್ದು ಯೋಜನೆಗಳಿಗೆ ಶೀಘ್ರ ಗತಿಯಲ್ಲಿ ಚಾಲನೆ ಕೊಡುವುದು ಮತ್ತು ಅವುಗಳನ್ನು ಪೂರ್ಣಗೊಳಿಸುವುದು.ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸುವ 130 ಟಿಎಂಸಿ ಅಡಿ ನೀರಿನಿಂದ ವಿಜಾಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಸಹಾಯವಾಗುತ್ತದೆ. ಅದರಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದ ವಿಜಾಪುರ ಜಿಲ್ಲೆಗೆ ವಿಶೇಷ ಪ್ರಯೋಜನ. ವಿಜಾಪುರ ಜಿಲ್ಲೆಯ ಒಟ್ಟು ಕೃಷಿ ಯೋಗ್ಯ ಭೂಮಿಯ ಶೇ 15.86 ರಷ್ಟು ಮಾತ್ರ ಈಗ ನೀರಾವರಿಯಾಗಿದೆ. `ಬಿ' ಸ್ಕೀಂ ಅಡಿಯಲ್ಲಿ ವಿಜಾಪುರ ಜಿಲ್ಲೆಯ ಒಟ್ಟು 5,32,744 ಎಕರೆ ನೀರಾವರಿಯಾಗುತ್ತದೆ. ಈ ಯೋಜನೆ ಪೂರ್ಣಗೊಂಡರೆ ವಿಜಾಪುರ ಜಿಲ್ಲೆಯ ಒಟ್ಟು ಕೃಷಿ ಯೋಗ್ಯ ಭೂಮಿಯ ಶೇ 57.70ರಷ್ಟು ಭೂಮಿ ನೀರಾವರಿಗೆ ಒಳಪಟ್ಟಂತಾಗುತ್ತದೆ.ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್‌ವರೆಗೆ ನೀರು ನಿಲ್ಲಿಸುವುದರಿಂದ ಈಗಿರುವ 173 ಟಿಎಂಸಿ ಅಡಿ ನೀರಿನ ಜೊತೆಗೆ 130 ಟಿಎಂಸಿ ಅಡಿ ಹೆಚ್ಚುವರಿ ನೀರು ಸೇರಿ ಒಟ್ಟು 303 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಜಲಾಶಯದ ಎತ್ತರ ಹೆಚ್ಚಿಸುವುದರಿಂದ ಹಿನ್ನೀರಿನಲ್ಲಿ ವಿಜಾಪುರ ಜಿಲ್ಲೆಯ ಎರಡು ಮತ್ತು ಬಾಗಲಕೋಟೆ ಜಿಲ್ಲೆಯ 20 ಸೇರಿದಂತೆ 22 ಹಳ್ಳಿಗಳು ಮುಳುಗಡೆಯಾಗುತ್ತವೆ.`ಬಿ' ಸ್ಕೀಂ ನೀರನ್ನು ಬಳಸಿಕೊಳ್ಳಲು ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್‌ವರೆಗೆ ನೀರು ಸಂಗ್ರಹಿಸುವ ಕೆಲಸ ತಕ್ಷಣ ಪ್ರಾರಂಭವಾಗಬೇಕಾದರೆ ಅದಕ್ಕೆ 22 ಹಳ್ಳಿಗಳನ್ನು ಸ್ಥಳಾಂತರಿಸಬೇಕು ಮತ್ತು ಹಿನ್ನೀರಿನಲ್ಲಿ ಮುಳುಗುವ ಜಮೀನಿಗೆ ಪರಿಹಾರ ದೊರೆಯಬೇಕು.ಆದರೆ, 22 ಹಳ್ಳಿಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಕೆಲಸ ಇನ್ನೂ ಪ್ರಾರಂಭವಾಗಿಲ್ಲ.  ಪ್ರಾಥಮಿಕ ಅಧಿಸೂಚನೆಯನ್ನೂ ಹೊರಡಿಸಿಲ್ಲ. ಯೋಜನಾ ಬಾಧಿತ ಜನರ ಸ್ಥಿತಿಗತಿ, ಯೋಜನೆಯಿಂದ ಲಾಭ ಪಡೆಯುವ ಜನರಿಗಿಂತ ಚೆನ್ನಾಗಿರಬೇಕು ಎಂಬುದು ಅಂತರರಾಷ್ಟ್ರೀಯ ನಿಯಮ. ಅದು ಇಲ್ಲಿ ಬರಿ ಘೋಷಣೆಯಾಗಬಾರದು. ಈ ಹಿಂದಿನ ಯೋಜನಾ ಬಾಧಿತ ಜನರ ಪರಿಸ್ಥಿತಿ ಯಾರಿಗೂ ಬೇಡವೆನ್ನುವ ಹಾಗಿದೆ. ಮನೆ ಮತ್ತು ಜಮೀನು ಕಳೆದುಕೊಂಡ ಜನರಿಗೆ ವಾಸಕ್ಕೆ ನಿವೇಶನ ಮತ್ತು ಪರಿಹಾರ ರೂಪದಲ್ಲಿ ದುಡ್ಡು ಕೊಟ್ಟು ಕೈ ತೊಳೆದುಕೊಂಡರೆ ಸಾಲದು. ಅವರ ಮುಂದಿನ ಜೀವನಕ್ಕೆ ದಾರಿ ತೋರಿಸುವ ಕೆಲಸವಾಗಬೇಕು.ಈ ಹಿಂದಿನಂತೆ ಪರಿಹಾರ ಹಣ ಕೊಡುವುದು ಇಂದು ಅಷ್ಟು ಸುಲಭವಾಗಿಲ್ಲ. ಕೂಡಗಿಯ ಉಷ್ಣ ವಿದ್ಯುತ್ ಸ್ಥಾವರ, ಬಾಗಲಕೋಟೆ-ಕುಡಚಿ ರೈಲ್ವೆ ಕಾಮಗಾರಿಗೆ ವಶಪಡಿಸಿಕೊಂಡ ಜಮೀನಿಗೆ ಕೊಟ್ಟ ದರ ಅವರ ಮುಂದಿದೆ. ಇಲ್ಲಿ 80 ಸಾವಿರಕ್ಕೂ ಅಧಿಕ ಎಕರೆ ಭೂಮಿಗೆ ಪರಿಹಾರ ಕೊಡಬೇಕಾಗಿದೆ. ಆಡಳಿತಾತ್ಮಕ ಮಂಜೂರಾತಿ ಕೊಡುವಾಗ, ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ 6,000 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಈಗ ರೂ. 15,000 ಕೋಟಿಯಿಂದ ರೂ. 20,000 ಕೋಟಿ ಅಗತ್ಯವಿದೆ ಎಂಬ ಮಾತು ಕೇಳಿಬರುತ್ತಿದೆ.ಅದರ ಜೊತೆ ಜೊತೆಗೆ ಮುಳವಾಡ 3 ಮತ್ತು 4ನೇ ಹಂತದ ಜಾಕ್‌ವೆಲ್, ಚಿಮ್ಮಲಗಿ ಯೋಜನೆಯ ಜಾಕ್‌ವೆಲ್ ಮತ್ತು ಎರಡೂ ಯೋಜನೆಗಳ ಮುಖ್ಯ ಹಾಗೂ ವಿತರಣಾ ಕಾಲುವೆಗಳ ಕೆಲಸ ಆಗಬೇಕು. ಗುತ್ತಿ ಬಸವಣ್ಣ ಯೋಜನೆಯ ಉಳಿದ ಕಾಲುವೆ (ನಾಲೆ) ಆಗಬೇಕು. (ಇವುಗಳಲ್ಲಿ ಕೆಲವು ಕಾಮಗಾರಿ ಆರಂಭವಾಗಿದೆ).ಪುನರ್ವಸತಿ-ಪುನರ್ ನಿರ್ಮಾಣದ ಕೆಲಸ ಮತ್ತು ಯೋಜನೆಗಳನ್ನು ಒಟ್ಟೊಟ್ಟಾಗಿ ಆರಂಭಿಸಬೇಕು. ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹವಾಗುವ ಹೊತ್ತಿಗೆ ಈ ಕೆಲಸಗಳು ಪೂರ್ತಿಯಾದರೆ ಭೂಮಿಗೆ ನೀರು ಹರಿಸಲು ಅನುಕೂಲ. ಇದಕ್ಕೆ ಅಗತ್ಯವಿರುವ ಎಂಜಿನಿಯರುಗಳ ನೇಮಕವಾಗಬೇಕು. ಹೊಸ ಕಚೇರಿಗಳನ್ನು ಆರಂಭಿಸಬೇಕು.ಅರ್ಧ ಶತಮಾನ ಕಂಡ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಯೋಜನೆಗಳ ನಾಲೆಗಳ ದುರಸ್ತಿ ಆಗಬೇಕಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು.ಸ್ವಾತಂತ್ರ್ಯಾನಂತರ ನೀರಾವರಿಗೆಂದು ಅನೇಕ ಯೋಜನೆಗಳು ಸಿದ್ಧವಾದವು, ನೀರು ಹರಿಯಿತು. ಆದರೆ, ಅದರಿಂದ ಉಂಟಾದ ಸವಳು ಜವಳಿನ ಸಮಸ್ಯೆ ಪರ್ವತಾಕಾರವಾಗಿ ಬೆಳೆದಿದೆ. ಲಕ್ಷಾವಧಿ ಎಕರೆ ಜಮೀನು ಬರಡಾಗಿದೆ. ಅದನ್ನು ಮತ್ತೆ ಫಲವತ್ತಾಗಿ ಮಾಡಬೇಕು. ಕೃಷ್ಣಾ ಕೊಳ್ಳದಲ್ಲಿಯ ತುಂಗಭದ್ರಾ ಜಲಾಶಯ ಹೂಳಿನ ಸಮಸ್ಯೆಯಿಂದ ಬಳಲುತ್ತಿದೆ. ಸಂಗ್ರಹಿತ ನೀರಿನಲ್ಲಿ ದೊರೆಯಬೇಕಾದಷ್ಟು ನೀರು ದೊರೆಯದೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅದೇ ಸಮಸ್ಯೆ ಆಲಮಟ್ಟಿ ಜಲಾಶಯದಲ್ಲಿಯೂ ಕಾಣಿಸಿಕೊಂಡಿದೆ. ಅದಕ್ಕೊಂದು ಪರಿಹಾರ ಕಂಡುಕೊಳ್ಳುವುದು ಇಂದಿನ ಅಗತ್ಯ.ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳ ಮತ್ತು ವಿಜಾಪುರ ಜಿಲ್ಲೆಯ ಡೋಣಿ ನದಿ ಪ್ರತಿ ವರ್ಷ ಮಳೆಗಾಲದಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಿವೆ. ಕಳೆದ ಸರ್ಕಾರ ಅದಕ್ಕೆಂದೇ ಪರಮಶಿವಯ್ಯ ಸಮಿತಿ ರಚಿಸಿ ವರದಿ ಪಡೆದಿದೆ. ಇಂದಿನ ಜಲಸಂಪನ್ಮೂಲ ಸಚಿವರು ಈ ಹಿಂದೆಯೇ ಡೋಣಿ ಸಮಸ್ಯೆಗೆ ಪ್ರತ್ಯೇಕ ವಿಚಾರ ಸಂಕಿರಣ ಏರ್ಪಡಿಸಿ ತಜ್ಞರಿಂದ ಸಲಹೆ ಪಡೆದಿದ್ದಾರೆ.ಉತ್ತರ ಕರ್ನಾಟಕದವರೇ ಆದ ಎಂ.ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾದದ್ದು ಈ ಭಾಗದ ಜನರಿಗೆ ವರದಾನ. ಚುನಾವಣೆ ಪೂರ್ವದಲ್ಲೇ `ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ' ಎಂದು ಘೋಷಿಸಿ ಐದು ವರ್ಷಗಳ ಕಾಲಮಿತಿಯಲ್ಲಿ ಪ್ರತಿವರ್ಷ ರೂ. 10,000 ಕೋಟಿ ವಿನಿಯೋಗಿಸಿ ನೀರಾವರಿ ಯೊಜನೆಗಳನ್ನು ಪೂರ್ತಿಗೊಳಿಸುವುದಾಗಿ ಕಾಂಗ್ರೆಸ್ ಮುಖಂಡರು ಆಗಲೇ ಹೇಳಿದ್ದಾರೆ. ಘೋಷಣೆ ಈಗ ಕಾರ್ಯರೂಪಕ್ಕೆ ಇಳಿಯಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.