ಗುರುವಾರ , ನವೆಂಬರ್ 26, 2020
20 °C

ಕೃಷ್ಣ ಕೊಲ್ಹಾರ ಕುಲಕರ್ಣಿ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಕೃಷ್ಣ ಕೊಲ್ಹಾರ ಕುಲಕರ್ಣಿ

ರಾಜ್ಯ ಸರ್ಕಾರ ‘ಕನಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ‘ತಾರ್‌ ಮಾಸ್ತರ್‌’ ಆಗಿ ವೃತ್ತಿ ಜೀವನ ಆರಂಭಿಸಿ ಹತ್ತು ಹಲವು ವಿಷಯಗಳಲ್ಲಿ ‘ಮಾಸ್ಟರ್‌’ ಆಗುವವರೆಗೆ ಸಾಗಿ ಬಂದ ಕಥೆ ಇಲ್ಲಿದೆ.ಕನ್ನಡದ ವಿದ್ವಾಂಸರಲ್ಲಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಬಹುಮುಖ್ಯವಾದ ಹೆಸರು. ಅವರ ಸಂಶೋಧನೆಯ ವಿಷಯಗಳು ಬಹುಮುಖಿಯಾದವು. ಸಂಶೋಧನೆ, ಇತಿಹಾಸ, ಕೃಷಿ ಮತ್ತು ನೀರಾವರಿ... ಹೀಗೆ ಅನೇಕ ವಿಷಯಗಳ ಕುರಿತಂತೆ ಅವರು ಬರೆದಿದ್ದಾರೆ, ವ್ಯಾಪಕವಾದ ಅಧ್ಯಯನ ನಡೆಸಿದ್ದಾರೆ. ಕನ್ನಡದಲ್ಲಿ ಕತೆ, ಹರಟೆ, ನಾಟಕ, ದಾಸ ಸಾಹಿತ್ಯ, ಗಮಕ, ಜನಪದ ಪ್ರಕಾರಗಳಲ್ಲೂ ಅವರು ಕೃತಿಗಳನ್ನು ಬರೆದಿರುವುದುಂಟು.  ಅವರ ಸಾಹಿತ್ಯ ಕೃಷಿಯನ್ನು ‘ಮಿಶ್ರ ಬೆಳೆ ಪದ್ಧತಿ’ಗೆ ಹೋಲಿಸಬಹುದು. ಅಲ್ಲಿ ಹಲವು ಬಗೆಯ ಬೆಳೆಗಳಿವೆ, ಫಲಭರಿತ ಮರಗಳಿವೆ. ಆಸಕ್ತ ಓದುಗರಿಗೆ ಅವರ ಕೃತಿ ಸಮೂಹ ದಟ್ಟ ಕಾಡನ್ನು ನೆನಪಿಸುತ್ತದೆ. ಜೊತೆಗೆ ಅದನ್ನು ಪ್ರವೇಶಿಸಿದ ಅನುಭವ­ವನ್ನೂ ಕೊಡುತ್ತದೆ. ಕನ್ನಡದ ಈ ಮುಖ್ಯ ಸಂಶೋಧಕನಿಗೆ ಇತ್ತೀಚೆಗೆ ರಾಜ್ಯ ಸರ್ಕಾರ ‘ಕನಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.ಕುಲಕರ್ಣಿ ಅವರು ಬಹುಭಾಷಾ ವಿದ್ವಾಂಸ. ಹಲವು ಕ್ಷೇತ್ರಗಳಲ್ಲಿ ತಲಸ್ಪರ್ಶಿಯಾದ ಅಧ್ಯಯನ ನಡೆಸಿದ್ದಾರೆ.  ಕನ್ನಡ, ಮರಾಠಿ, ಹಿಂದಿ, ದಖನಿ, ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಅವರಿಗೆ ಅಗಾಧ ಪರಿಣತಿಯಿದೆ. ಈ ಭಾಷೆಗಳ ಸಾಕಷ್ಟು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಜಾಪುರದ ಆದಿಲ್‌­ಶಾಹಿ ಕಾಲದ ಸಾಹಿತ್ಯದ ಸಂಶೋಧನೆ ಮತ್ತು ಅನುವಾದ ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ. ಅನುವಾದ ಸಾಹಿತ್ಯದ ಜೀವಮಾನದ ಸಾಧನೆಗಾಗಿ ಕುವೆಂಪು ಭಾಷಾ ಭಾರತಿಯ ಪ್ರಶಸ್ತಿಯೂ ಅವರಿಗೆ ಬಂದಿರುವುದನ್ನು ಇಲ್ಲಿ ನೆನೆಯಬಹುದು.ದಾಸ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಮಹತ್ವದ್ದು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ17ನೇ ಶತಮಾನ ಅಜ್ಞಾತ ಕಾಲವೆಂದು ಗುರುತಿಸಲಾಗಿತ್ತು. ‘ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಜ್ಞಾತ ಕಾಲವೆಂಬುದಿಲ್ಲ’ ಎಂಬುದನ್ನು ತಮ್ಮ ಸಂಶೋಧನಾ ಪ್ರಬಂಧದ ಮೂಲಕ ಸಿದ್ಧ ಮಾಡಿ ತೋರಿಸಿದ್ದಾರೆ. ಆ ಕಾಲದ ದಾಸರ ಎರಡು ಸಾವಿರದಷ್ಟು ಕೀರ್ತನೆ ಮತ್ತು ಕಾವ್ಯಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ರಾಜ್ಯ ಸರ್ಕಾರದ ದಾಸ ಸಾಹಿತ್ಯ ಪ್ರಕಟಣೆ ಯೋಜನೆಯ ಸಂಪಾದಕ ಮಂಡಳಿ ಸದಸ್ಯರಾಗಿ, 50 ಸಂಪುಟಗಳ ಸಂಪಾದನೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದಾರೆ. ಸ್ವತಃ ನಾಲ್ಕು ಸಂಪುಟಗಳನ್ನು ಸಂಪಾದಿಸಿದ್ದಾರೆ. ಇವರ 57 ಕೃತಿಗಳಲ್ಲಿ 14 ಕೃತಿಗಳು ದಾಸ ಸಾಹಿತ್ಯಕ್ಕೆ ಸಂಬಂಧಿಸಿದವು. ಮಧ್ವ ಪರಂಪರೆಯನ್ನು ತಿಳಿಸುವ ಇವರ ಸಾಕ್ಷ್ಯಚಿತ್ರ ಬಹುಜನರ ಆದರಕ್ಕೆ ಪಾತ್ರವಾಯಿತು ಎಂಬುದನ್ನು ಇಲ್ಲಿ ನೆನೆಯಬಹುದು.ಕೃಷ್ಣ ಅವರ ಹುಟ್ಟೂರು ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕೊಲ್ಹಾರ. ಜನನ 1940, ಅಕ್ಟೋಬರ್‌ 16.  ತಂದೆ ಹಣಮಂತರಾವ್‌. ತಾಯಿ ಗಂಗಾಬಾಯಿ. ತಮ್ಮೆಲ್ಲ ಸಾಧನೆಗೆ ಪ್ರೇರಣೆಯಾದ ಹುಟ್ಟೂರು ‘ಕೊಲ್ಹಾರ’ದ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ.ಕೃಷ್ಣರಿಗೆ 16 ವರ್ಷ ತುಂಬುವಷ್ಟರಲ್ಲಿ ತಂದೆ ತೀರಿಕೊಂಡರು. ಮನೆಯ ಜವಾಬ್ದಾರಿ ಹೆಗಲಿಗೇರಿತು. ಮೆಟ್ರಿಕ್ಯುಲೇಷನ್‌ ಶಿಕ್ಷಣದ ನಂತರ ದೂರ ಸಂಪರ್ಕ ಇಲಾಖೆಯಲ್ಲಿ ತಂತಿ ವಿಭಾಗದಲ್ಲಿ ಅಧಿಕಾರಿಯಾಗಿ (ತಾರ್‌ ಮಾಸ್ತರ್‌) ಆಗಿ ಮುಂಬಯಿಯಲ್ಲಿ ವೃತ್ತಿ ಆರಂಭಿಸಿದರು. ಮುಂಬೈ ಕನ್ನಡಿಗರ ‘ಕನ್ನಡ ಕೂಟ’ದಲ್ಲಿ ಇವರ ಸಾಹಿತ್ಯದ ಆಸಕ್ತಿ ಮೊಳಕೆಯೊಡೆಯಿತು.ತಮ್ಮ ಸಂಶೋಧನೆಯ ಕೆಲಸಕ್ಕೆ ಪ್ರೇರಣೆಯಾದ ಸಂಗತಿಯನ್ನು ಅವರು ಹೇಳಿಕೊಂಡಿರುವುದು ಹೀಗೆ: ‘ಒಂದು ದಿನ ಉಪನ್ಯಾಸ ನೀಡುವ ಸರದಿ ಬಂತು. ಕಾಖಂಡಕಿ ಮಹಿಪತಿದಾಸರ ಮೂಲ ವೃಂದಾವನ ನಮ್ಮೂರಿನಲ್ಲಿ ಇತ್ತು. ಅದೇ ವಿಷಯದ ಬಗೆಗೆ ಮಾತನಾಡಲು ನಿರ್ಧರಿಸಿದೆ. ಗುರುದೇವ ರಾಮಭಾವು ರಾನಡೆ ಅವರ ‘ಕನ್ನಡ ಸಂತರ ಪಾರಮಾರ್ಥ ಮಾರ್ಗ’ ಗ್ರಂಥ ಅಧ್ಯಯನ ಮಾಡಿದೆ. ‘ಮಹಿಪತಿ ದಾಸರು ಜಗತ್ತಿನ ಅತ್ಯಂತ ಶ್ರೇಷ್ಠ ಅನುಭಾವಿ ಕವಿ’ ಎಂಬ ಉಲ್ಲೇಖ ಅದರಲ್ಲಿತ್ತು. ದಾಸ ಸಾಹಿತ್ಯದ ಸಂಶೋಧನೆಗೆ ಅದು ಪ್ರೇರಣೆ ನೀಡಿತು. ‘ಮಹಿಪತಿದಾಸರು ಆದಿಲ್‌ಶಾಹಿ ಅರಸರ ಆಡಳಿತದಲ್ಲಿ ಅಧಿಕಾರಿ­ಯಾಗಿದ್ದರು’ ಎಂಬ ವಿಷಯ ಆದಿಲ್‌ಶಾಹಿ ಸಾಹಿತ್ಯ–ಇತಿಹಾಸದ ಸಂಶೋಧನೆಯಲ್ಲಿ ತೊಡಗಿಸಿತು’. ಕೃಷ್ಣ ಅವರು ಮುಂಬೈನಿಂದ ವರ್ಗಾವಣೆ ಹೊಂದಿ ಕರ್ನಾಟಕಕ್ಕೆ ಬಂದು, ಸೇವೆ ಸಲ್ಲಿಸುತ್ತಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ­­ದಿಂದ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ‘ಕಾಖಂಡಕಿಯ ಮಹಿಪತಿ ದಾಸರು’ ವಿಷಯದಲ್ಲಿ ಸಂಶೋಧನೆ ನಡೆಸಿ  ಪಿಎಚ್‌.ಡಿ. ಪದವಿ ಪಡೆದರು.ಹುಟ್ಟೂರಿನ ಸೆಳೆತ ಹೆಚ್ಚಿತು. ಸೇವಾ ಅವಧಿ ಎಂಟು ವರ್ಷ ಇರುವಾಗಲೇ ಸ್ವಯಂನಿವೃತ್ತಿ ಪಡೆದು ಕೊಲ್ಹಾರಕ್ಕೆ ವಾಪಸಾದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಕೊಲ್ಹಾರ ಮುಳುಗಡೆಯಾಗುತ್ತಿತ್ತು. ಹೊಲ–ಮನೆ–ಊರು ಕೃಷ್ಣಾರ್ಪಣವಾದ ನಂತರ ಈ ಜನ ಬದುಕು ಕಟ್ಟಿಕೊಳ್ಳುವುದು ಹೇಗೆ? ಎಂಬ ಚಿಂತೆ, ಚಿಂತನೆಗೆ ನೂಕಿತು. ಆಗ ಕೃಷಿ ಮತ್ತು ನೀರಾವರಿ ಯೋಜನೆಗಳ ಆಳವಾದ ಅಧ್ಯಯನ ನಡೆಸಿ, ಪುಸ್ತಕ–ಲೇಖನಗಳನ್ನು ಬರೆದು ಜನಜಾಗೃತಿ ಮೂಡಿಸಿದರು. ‘ಕೃಷಿ–ನೀರಾವರಿ ತಜ್ಞ’ ಎಂದು ಕರೆಯಿಸಿಕೊಂಡರು. ಸಂಶೋಧಕನೊಬ್ಬ ಕೃಷಿ–ನೀರಾವರಿ ತಜ್ಞನೆಂದು ಕರೆಸಿಕೊಂಡದ್ದು ಹೀಗೆ.‘ವಿಜಾಪುರದ ಆದಿಲ್‌ಶಾಹಿ ಅರಸರ ಸಾಹಿತ್ಯ ಪರ್ಶಿಯನ್‌, ದಖನಿ, ಉರ್ದು, ಮರಾಠಿ ಭಾಷೆಯಲ್ಲಿ ಇರುವುದರಿಂದ ಅದರ ಅಧ್ಯಯನಕ್ಕೆ ಕೆಲ ಭಾಷೆ ಕಲಿತೆ. ಆ ಹೊತ್ತಿಗಾಗಲೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ. ಎಂ.ಎಂ. ಕಲಬುರ್ಗಿ ಕುಲಪತಿಯಾಗಿದ್ದರು. ‘ಆದಿಲ್‌ಶಾಹಿ ಆಸ್ಥಾನದ ಸಾಹಿತ್ಯ’ ಬಗೆಗೆ ನನ್ನಿಂದ ಉಪನ್ಯಾಸ ಏರ್ಪಡಿಸಿದ್ದರು. ಕೃತಿ ಅನುವಾದ ಮಾಡಿಸಿ ಸಂಶೋಧನೆಗೆ ಪ್ರೇರಣೆ ನೀಡಿದರು’ ಎಂದು ಸ್ಮರಿಸುತ್ತಾರೆ ಕೃಷ್ಣ.ವಿಜಾಪುರ ಆದಿಲ್‌ಶಾಹಿಗಳ ಬಗೆಗೆ ಅವರು ರಚಿಸಿರುವ ‘ಕಿತಾಬ್‌–ಎ–ನೌರಸ’, ‘ವಿಸ್ಮಯ ಇದು ವಿಜಾಪುರ’, ‘ಆದಿಲ್‌ಶಾಹಿ ಆಸ್ಥಾನ ಸಾಹಿತ್ಯ’, ‘ಬುಸಾತಿನೆ–ಸಲಾತಿನ’, ‘ಬಿಜಾಪುರ ಆದಿಲ್‌ಶಾಹಿ’ ಕೃತಿಗಳು ಓದುಗರ ಮೆಚ್ಚುಗೆಯನ್ನು ಪಡೆದುಕೊಂಡಿವೆ.

ಪ್ರಸ್ತುತ ರಾಜ್ಯ ಸರ್ಕಾರ ವಿಜಾಪುರದ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಕೈಗೆತ್ತಿಕೊಂಡಿರುವ  ‘ಆದಿಲ್‌ಶಾಹಿ ಸಾಹಿತ್ಯ ಅನುವಾದ ಯೋಜನೆ’ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಸದಾ ಚಟುವಟಿಕೆಯಿಂದ ಇರುವ 73ರ ಪ್ರಾಯದ  ಈ ‘ಯುವಕ’.ಡಾ. ಎಂ.ಎಂ. ಕಲಬುರ್ಗಿ ನೇತೃತ್ವದ ಸಮಿತಿ ಸಹಯೋಗದಲ್ಲಿ ಹೈದರಾಬಾದ್‌, ದೆಹಲಿ ಮತ್ತಿತರೆಡೆ ಸಂಚರಿಸಿ ಆದಿಲ್‌ಶಾಹಿ ಕಾಲದ ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದಾರೆ. 10,000 ಪುಟಗಳ 17 ಸಂಪುಟ ರಚಿಸುವ ಕಾರ್ಯ ಸಾಗಿದ್ದು, ಏಳು ತಿಂಗಳ ಅವಧಿಯಲ್ಲಿ ಆರು ಸಂಪುಟಗಳು (3,500 ಪುಟ) ಪ್ರಕಟಣೆಗೆ ಸಿದ್ಧಗೊಂಡಿವೆ.ಉರ್ದು ಅಕಾಡೆಮಿ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್‌ ಅಧ್ಯಕ್ಷ, ವಿಜಾಪುರ ವಿದ್ಯಾವರ್ಧಕ ಸಂಘದ ಪದವಿ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಪ್ರಾಚಾರ್ಯ... ಹೀಗೆ ಅವರ ಸೇವಾ ಕ್ಷೇತ್ರದ ವಿಸ್ತಾರ ಬಹುದೊಡ್ಡದು.‘ವಚನ ಸಾಹಿತ್ಯದ ಮುಂದುವರಿದ ಭಾಗವೇ ದಾಸ ಸಾಹಿತ್ಯ. ಸಾಮಾನ್ಯ ಜನರ ಮನ ತಲುಪುವ ಗುಣ ಅದಕ್ಕಿದೆ. ಗಾಯನ–ಸಂಗೀತದ ಲಯ ಕೊಟ್ಟಿದ್ದರಿಂದ ಅದು ಜನಪ್ರಿಯ ವಾಯಿತು; ಎಲ್ಲ ವರ್ಗಗಳನ್ನೂ ತಲುಪಿತು’ ಎಂಬುದು ಅವರ ವ್ಯಾಖ್ಯಾನ.

‘51 ವರ್ಷಗಳ ಸಾಹಿತ್ಯ ಕೃಷಿಯ ಮೇಲೆ ಹಿನ್ನೋಟ ಬೀರಿದಾಗ ನನ್ನ ಸಾಧನೆ ನನಗೇ ಅಚ್ಚರಿಯನ್ನುಂಟು ಮಾಡುತ್ತಿದೆ’ ಎಂದು ಮುಗುಳು ನಗುತ್ತಾರೆ ಈ ಸಂಶೋಧಕ.‘ತಾರ್‌ ಮಾಸ್ತರ್‌’­ರಾಗಿದ್ದ ಕುಲಕರ್ಣಿ ಹಲವು ವಿಷಯಗಳ ‘ಮಾಸ್ಟರ್‌’ ಆಗುವವರೆಗೆ ಸಾಗಿ ಬಂದ ಕಥೆ ಇದು. ಅವರ ಸಾಹಿತ್ಯ ಕೊಲ್ಹಾರದ ಕೆನೆ ಮೊಸರಿನಷ್ಟೇ ಸವಿ. ಅವರು ತಾರ್‌ (ಟೆಲಿಗ್ರಾಂ)­ಗಳಂತೆ ತ್ವರಿತವಾಗಿ ಒಂದು ನಿರ್ದಿಷ್ಟ ಸ್ಥಳಕ್ಕೆ ಹೋಗಿ ತಲುಪಿದವ­ರಲ್ಲ. ಎದುರಾದ  ದಾರಿಗಳಲ್ಲೆಲ್ಲ ಸಂಚರಿಸಿ ಎಲ್ಲೆಡೆ ಹೆಜ್ಜೆ ಗುರುತು ಮೂಡಿಸಿದವರು. ಅಲ್ಲಿ ಸಿಕ್ಕಿದ್ದನ್ನು ಕನ್ನಡಿಗರಿಗೆ ತಂದುಕೊಟ್ಟವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.