ಸೋಮವಾರ, ಮೇ 16, 2022
28 °C

ಕೆಂಗೇರಿ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಾಗರಬಾವಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭವು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ- ನೂಕಾಟ, ಪರಸ್ಪರ ಧಿಕ್ಕಾರದ ಘೋಷಣೆಗಳಿಗೆ ವೇದಿಕೆಯಾದ ಘಟನೆ ಶನಿವಾರ ನಡೆದಿದೆ.

ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಅವರನ್ನು ಸಮಾರಂಭಕ್ಕೆ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಸಮಾರಂಭದಲ್ಲಿ ಕೆಲ ಕಾಲ ಗದ್ದಲದ ವಾತಾವರಣ ಉಂಟಾಯಿತು.

ಪ್ರಿಯಕೃಷ್ಣರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವಮಾನ ಮಾಡಲಾಗಿದೆ ಎಂದು ದೂರಿದ ನೂರಾರು ಕಾರ್ಯಕರ್ತರು ವೇದಿಕೆ ಬಳಿಗೆ ನುಗ್ಗಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಲಾರಂಭಿಸಿದರು.

ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಅವಾಚ್ಯ ಶಬ್ಧಗಳು ವಿನಿಮಯ ಮಾಡಿಕೊಂಡರು. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು.

ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಕಾರ್ಯಕರ್ತರನ್ನು ಚದುರಿಸಿದರು.  ಸಾರಿಗೆ ಸಚಿವ ಆರ್.ಅಶೋಕ, ಸಂಸದ ಅನಂತಕುಮಾರ್ ಅವರು ಪ್ರಿಯಕೃಷ್ಣ ಮತ್ತು ಅವರ ಬೆಂಬಲಿಗರನ್ನು ಸಮಾಧಾನ ಪಡಿಸಿದ ಮೇಲೆ ಸಮಾರಂಭ ನಡೆಯಿತು. ಆದರೆ ಪ್ರಿಯಕೃಷ್ಣ ಮತ್ತು ಸಚಿವ ವಿ.ಸೋಮಣ್ಣ ಅವರು ತಮ್ಮ ಭಾಷಣದಲ್ಲಿ ಅಸಮಾಧಾನವನ್ನು  ಹೊರಗೆಡವಿದರು.

ಸೋಮಣ್ಣ ಮಾತನಾಡಿ  ‘ರಾಜಕೀಯ ಜೀವನ ಮುಳ್ಳಿನ ಹಾಸಿಗೆ ಇದ್ದಂತೆ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ದೇವೇಗೌಡರವರೆಗೂ ರಾಜಕಾರಣದಲ್ಲಿ ಸೋಲನ್ನು ಕಂಡಿದ್ದಾರೆ ಇಲ್ಲಿ ಯಾರೂ ಶತ್ರುಗಳಲ್ಲ ಮಿತ್ರರಲ್ಲ’ ಎಂದರು.

ಪ್ರಿಯಕೃಷ್ಣ ಮಾತನಾಡಿ, ‘ಸರ್ಕಾರದ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮದಂತೆ ಮುಖ್ಯ ಎಂಜಿನಿಯರ್ ವರ್ತಿಸಿದ್ದಾರೆ’ ಎಂದು ಟೀಕಿಸಿದರು. ಅಶೋಕ ಮಾತನಾಡಿ ‘ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಈಗ ಅಭಿವೃದ್ಧಿ ಕೆಲಸದತ್ತ ಗಮನ ಹರಿಸೋಣ’ ಎಂದರು.

ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, ಮೇಯರ್ ಎಸ್.ಕೆ.ನಟರಾಜ್, ಉಪಮೇಯರ್ ದಯಾನಂದ್, ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಎಸ್.ಸತ್ಯನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಂಗಬೈರಯ್ಯ, ರವೀಂದ್ರ, ಮಂಜುನಾಥರೆಡ್ಡಿ, ಸದಸ್ಯರಾದ ಉಮೇಶ್‌ಶೆಟ್ಟಿ, ಶಾಂತಕುಮಾರಿ ಇತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.