ಗುರುವಾರ , ಮೇ 19, 2022
25 °C

ಕೆಟ್ಟದ್ದಕ್ಕೆಲ್ಲ ಆಯುರ್ವೇದ ಕಾರಣವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆರೋಗ್ಯಕ್ಕೆ ಅಪಾಯ ತರಬಲ್ಲ ಆಯುರ್ವೇದ’ - ನಾಗೇಶ ಹೆಗಡೆಯವರ (ಫೆ 10) ಅಂಕಣಕ್ಕೆ ಪ್ರತಿಕ್ರಿಯೆ: ಆಯುರ್ವೇದ ಔಷಧಿಗಳು ಜಾಹೀರಾತುಗಳ ಮೂಲಕ ಬಿಕರಿಯಾಗುತ್ತಿದ್ದು ಅವುಗಳ ಉಪಯುಕ್ತತೆಯ ಬಗ್ಗೆ ವೈದ್ಯರ ಸೂಕ್ತ ಸಲಹೆಗಳು ಸಿಗುತ್ತಿಲ್ಲವೆಂಬ ಅವರ ಅಹವಾಲು ಯುಕ್ತವಾದದ್ದೇ. ಔಷಧಿಗಳ ವ್ಯಾಪಾರೀಕರಣ ಶುದ್ಧ ತಪ್ಪು. ಸಾರ್ವಜನಿಕರು ವೈದ್ಯರ ಸಲಹೆಯ ಮೇರೆಗೆ ಔಷಧಗಳನ್ನು ಬಳಸಬೇಕೇ ಹೊರತು ಸ್ವಯಂ ವೈದ್ಯರಾಗುವುದು ಹಾನಿಕಾರಕ. ಲೇಖಕರು ಅಭಿಪ್ರಾಯಪಟ್ಟಂತೆ ಅರಿಸ್ಟೋಲೋಕಿಯಾ ಎಂಬ ಔಷಧಿಯ ಸೇವನೆಯಿಂದ ಮೂತ್ರಪಿಂಡಗಳು ವಿಫಲವಾಗಿರುವುದಕ್ಕೆ ದಾಖಲಾಗಿರುವ ಪುರಾವೆಗಳಿವೆಯೇ? ಮೂತ್ರಪಿಂಡಗಳ ವೈಫಲ್ಯಕ್ಕೆ ಹಲವಾರು ಕಾರಣಗಳಿದ್ದು ಈ ಔಷಧಿಯ ಬಳಕೆಯಿಂದಲೇ ಆಗಿದೆ ಎಂಬುದರ ಖಾತ್ರಿಯೇನು?ಲೇಖಕರು ವಿವರಿಸಿದಂತೆ ಸೀಸ, ಪಾದರಸ, ಅರ್ಸೆನಿಕ್‌ಗಳ ವಿಷಪರಿಣಾಮಗಳು ಹೊಂದಿವೆ ಎಂಬುದು ಹೊಸ ವಿಷಯವೇನಲ್ಲ. ಅವುಗಳ ನೇರ ಬಳಕೆ ಮಾಡಿದಲ್ಲಿ ದೇಹದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಆಯುರ್ವೇದ ಗ್ರಂಥಗಳು ವಿವರಿಸಿವೆ.

 

ಆದ್ದರಿಂದ ಈ ಔಷಧಿಗಳನ್ನು ಕ್ರಮಬದ್ಧವಾಗಿ ಸಂಸ್ಕರಿಸಿ ಶುದ್ಧೀಕರಿಸಿದ ನಂತರ ಭಸ್ಮಗಳ ಬಳಕೆಯಲ್ಲಿ ಕೂಡಾ ಬಹಳ ಮುತುವರ್ಜಿಯನ್ನು ಕಾಯ್ದುಕೊಳ್ಳಲಾಗಿದ್ದು, ಉತ್ತಮ ಭಸ್ಮದ ನಿರ್ಣಯಕ್ಕಾಗಿ ವಾದಿತರತ್ವ ನಿಶ್ಚಂದ್ರತ್ವ ಇತ್ಯಾದಿ ಪರೀಕ್ಷೆಗಳಿದ್ದು ಔಷಧಿ ತಯಾರಕರು ಇವುಗಳನ್ನು ಪ್ರಮಾಣಿಸಿದ ನಂತರ ಔಷಧಿಕಲ್ಪಗಳನ್ನು ನಿರ್ಮಿಸುವಂಥದ್ದು. ಔಷಧಿಯ ನಿರ್ಮಾಣದಲ್ಲಿ ‘ಜಿ.ಎಂ.ಪಿ.’ ಎಂಬ ಮಾನದಂಡ ಕಡ್ಡಾಯವಾಗಿದ್ದು ತಯಾರಿಸಲ್ಪಟ್ಟ ಔಷಧಿ ಶರೀರದ ಸುರಕ್ಷತೆಯ ದೃಷ್ಟಿಯಲ್ಲಿ ಉತ್ಕೃಷ್ಟಗುಣಮಟ್ಟದ್ದಾಗಿರುತ್ತದೆ.ಈ ಮಾನದಂಡಗಳನ್ನು ಪಾಲಿಸದೆ ವಿಷಪೂರಿತ, ಕಳಪೆ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದಲ್ಲಿ ಸಂಬಂಧಪಟ್ಟ ಔಷಧ ತಯಾರಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾದ್ದು ಆರೋಗ್ಯ ಇಲಾಖೆ. ಅನೈತಿಕ, ಅಪ್ರಾಮಾಣಿಕ ಕೃತ್ಯಗಳಿಗೆ ಆಯುರ್ವೇದವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಲೇಖಕರು ಬೊಟ್ಟುಮಾಡಿರುವ ಎಕ್ಸ್ ವೈ ಝಡ್ ಪಂಡಿತರು ವೈದ್ಯಕೀಯ ಜ್ಞಾನ ಹೊಂದಿರಬೇಕೆಂದೇನೂ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಇರುವಂತೆ ನಕಲಿಗಳ ಹಾವಳಿ ಆಯುರ್ವೇದ ವೈದ್ಯಕೀಯವನ್ನೂ ಭಾದಿಸುತ್ತಿದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಈ ಹಿಂದೆ ಬಹುರಾಷ್ಟ್ರೀಯ ಕಂಪೆನಿಗಳ ಹಿತಾಸಕ್ತಿಯನ್ನು ಪೋಷಿಸುವ ಅನುಸಂಧಾನಗಳು ತೆಂಗಿನೆಣ್ಣೆಯ ಮೇಲೆ ಗೂಬೆ ಕೂರಿಸಿರಲಿಲ್ಲವೇ?ಇಂದು ಯಾವ ವೈದ್ಯಪದ್ಧತಿಯೂ ಪರಿಪೂರ್ಣ ಸರ್ವಶಕ್ತವಲ್ಲ. ಈ ಎಲ್ಲಾ ಪದ್ಧತಿಗಳಲ್ಲಿರುವ ಯುಕ್ತ ಭಾಗಗಳನ್ನು ಬಳಸಿ ಸಮಾಜದ ಆರೋಗ್ಯವನ್ನು ಕಾಪಾಡಬೇಕೇ ಹೊರತು ಪೂರ್ವಗ್ರಹ ಪೀಡಿತರಾಗಿ ಆರೋಪಿಸುವುದು ಯುಕ್ತವಾದದ್ದಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.