ಕೇಂದ್ರ ಸರ್ಕಾರಕ್ಕೆ ಯುವ ಕಾಂಗ್ರೆಸ್ ಒತ್ತಾಯ .ಕುಳಾಯಿಯಲ್ಲಿ ಆಧುನಿಕ ಮೀನುಗಾರಿಕಾ ಬಂದರು
ಮಂಗಳೂರು: ಕುಳಾಯಿಯಲ್ಲಿ ಆಧುನಿಕ ಮೀನುಗಾರಿಕೆ ಬಂದರು, ಹಳೆ ಬಂದರು ವಿಸ್ತರಣೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಅಧೀನದ ಎನ್ಐಎಫ್ಟಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ) ಕಾಲೇಜು ಸ್ಥಾಪಿಸಬೇಕು ಎಂದು ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಒತ್ತಾಯಿಸಿದರು. ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಜಿಲ್ಲಾ ಯುವ ಕಾಂಗ್ರೆಸ್ನ 15 ಮಂದಿಯ ನಿಯೋಗ ಇತ್ತೀಚೆಗೆ ದೆಹಲಿಗೆ ತೆರಳಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಸರ್ವತೋಮುಖ ಅಭಿವೃದ್ಧಿಗೆ ಮನವಿ ಸಲ್ಲಿಸಿದೆ ಎಂದರು.
ರೂ. 100 ಕೋಟಿ ವೆಚ್ಚದ ಹಳೆ ಬಂದರು ವಿಸ್ತರಣೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಸಚಿವ ಕೃಷ್ಣ ಪಾಲೆಮಾರ್ ಪ್ರಸ್ತಾವನೆ ಸಲ್ಲಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಕೇಂದ್ರದ ಎಲ್ಲಾ ಯೋಜನೆಗಳಿಗೆ ರಾಜ್ಯ ಸರ್ಕಾರ ತುರ್ತಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸಚಿವ ವಯಲಾರ್ ರವಿ ಇದೇ 13ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಕೇಂದ್ರ ಸಚಿವ ತುಷಾರ್ ಚೌಧರಿ ಮುಂಗಡಪತ್ರದ ಅಧಿವೇಶನ ಮುಗಿದ ಬಳಿಕ ಕರಾವಳಿಗೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಶಿರಾಡಿ ಘಾಟಿಯನ್ನು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು-ಬೆಂಗಳೂರು ರೈಲು ಕಾರವಾರಕ್ಕೆ ವಿಸ್ತರಣೆಯಾಗಿರುವುದನ್ನು ಸ್ವಾಗತಿಸಿರುವುದು ಖಂಡನೀಯ. ಇಲ್ಲಿನ ಸಂಸದರಿಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ರೈಲ್ವೆ ಬಗ್ಗೆ ಸಮಗ್ರ ಕಲ್ಪನೆ ಇಲ್ಲ. ಮಂಗಳೂರು-ಬೆಂಗಳೂರು ರೈಲು ಕಾರವಾರಕ್ಕೆ ವಿಸ್ತರಣೆ ಬೇಡ. ಅಲ್ಲಿಗೆ ಪ್ರತ್ಯೇಕ ರೈಲು ಓಡಿಸಲಿ ಎಂದು ಅವರು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡರಾದ ಟಿ.ಕೆ. ಸುಧೀರ್, ಮೋಹನ್ ಮೆಂಡನ್, ಡೆನಿಸ್ ಡಿಸಿಲ್ವ, ಶರೀಫ್ ದೇರಳಕಟ್ಟೆ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.