ಶುಕ್ರವಾರ, ಫೆಬ್ರವರಿ 26, 2021
22 °C
ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ 7ನೇ ಸಮ್ಮೇಳನ: ಭಾರತದ ಮಾಧ್ಯಮ ಪ್ರತಿನಿಧಿಗಳಿಗೆ ನಿಷೇಧ

ಕೇವಲ ಹಸ್ತಲಾಘವ: ನಡೆಯದ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇವಲ ಹಸ್ತಲಾಘವ: ನಡೆಯದ ಮಾತುಕತೆ

ಇಸ್ಲಾಮಾಬಾದ್‌(ಪಿಟಿಐ): ಸಾರ್ಕ್  ರಾಷ್ಟ್ರಗಳ ಗೃಹ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿದ್ದ  ಗೃಹ ಸಚಿವ ರಾಜನಾಥ್‌ ಸಿಂಗ್ ಅವರು ಪಾಕಿಸ್ತಾನದ ಗೃಹ ಸಚಿವ ಚೌಧರಿ ನಿಸಾರ್‌ ಅಲಿ ಖಾನ್‌ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿಲ್ಲ ಎಂದು ಗೃಹ ಕಾರ್ಯದರ್ಶಿ ರಾಜೀವ್‌ ಮಹರ್ಷಿ ಗುರುವಾರ ತಿಳಿಸಿದ್ದಾರೆ.ಕೇವಲ ಹಸ್ತಲಾಘವ:   ಸಮ್ಮೇಳನದಲ್ಲಿ ರಾಜನಾಥ್ ಸಿಂಗ್ ಮತ್ತು ನಿಸಾರ್ ಅಲಿ ಖಾನ್‌ ಮೊದಲ ಬಾರಿಗೆ ಭೇಟಿಯಾದರು. ಈ ವೇಳೆ ಕೇವಲ ಹಸ್ತಲಾಘವ ಮಾಡಿಕೊಂಡರೇ ಹೊರತು ಯಾವುದೇ ಮಾತುಗಳನ್ನಾಡಲಿಲ್ಲ. ಸಮ್ಮೇಳನ ನಡೆದ ಐಷಾರಾಮಿ ಸೆರೆನಾ ಹೋಟೆಲ್‌ನ ಪ್ರವೇಶದ್ವಾರದಲ್ಲಿ ಖಾನ್‌ ನಿಂತು ಎಲ್ಲರನ್ನೂ ಕೈ ಕುಲುಕಿ ಸ್ವಾಗತಿಸುತ್ತಿದ್ದರು. ಸಮ್ಮೇಳನ ಸಭಾಂಗ ಣಕ್ಕೆ ತೆರಳಲು ಬಂದ ಗೃಹ ಸಚಿವ ರಾಜನಾಥ್‌ ಸಿಂಗ್ ಅವರಿಗೂ ಖಾನ್‌ ಮಾಮೂಲಿಯಂತೆ ಹಸ್ತಲಾಘವ ನೀಡಿದರು.ಮಾಧ್ಯಮಗಳಿಗೆ ನಿಷೇಧ:  ಸಮ್ಮೇಳನದ ವರದಿಗೆ ದೆಹಲಿಯಿಂದ ಬಂದಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಸಭೆಗೆ ಪ್ರವೇಶ ನಿಷೇಧಿಸಲಾಗಿತ್ತು.  ಛಾಯಾಗ್ರಾಹಕರಿಗೆ ಚಿತ್ರತೆಗೆಯಲು ಅವಕಾಶ ನೀಡಲಿಲ್ಲ. ಪತ್ರಕರ್ತರನ್ನು ಪಾಕ್ ಅಧಿಕಾರಿಗಳು ದೂರದಲ್ಲೇ ತಡೆದು ನಿಲ್ಲಿಸಿದರು. ಇದು ಭಾರತ ಮತ್ತು ಪಾಕ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.ಹಿಜ್ಬುಲ್‌ ಮುಜಾಹಿದೀನ್ ಉಗ್ರ ಬುರ್ಹಾನ್‌ ವಾನಿ ಹತ್ಯೆ ನಂತರ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಉಭಯ ದೇಶಗಳ ನಡುವಣ ಸಂಬಂಧದ ಮೇಲೆ ಪರಿಣಾಮ ಬೀರಿದೆ ಎಂಬುದು ಈ ಸಮ್ಮೇಳನದಲ್ಲಿ ಎದ್ದು ಕಾಣುತ್ತಿದೆ ಎಂದು ಭಾರತದ ಅಧಿಕಾರಿಗಳು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಖಾನ್‌, ‘ಪಾಕಿಸ್ತಾನ ಸಾರ್ಕ್‌ ತತ್ವಗಳಿಗೆ ಬದ್ಧವಾಗಿದೆ. ಅದನ್ನೊಂದು ಯಶಸ್ವಿ ಪ್ರಾದೇಶಿಕ ಸಂಘಟನೆ ಆಗಿ ನೋಡುತ್ತಿದೆ’ ಎಂದು ಹೇಳಿದರು.ಊಟ ತಪ್ಪಿಸಿಕೊಂಡ ರಾಜನಾಥ್‌:  ಸಾರ್ಕ್‌ ಸಮ್ಮೇಳನದ ಪ್ರತಿನಿಧಿಗಳು, ಸಚಿವರಿಗೆ ಖಾನ್‌ ಅವರು ಮಧ್ಯಾಹ್ನ ಆಯೋಜಿಸಿದ್ದ ಊಟದಲ್ಲಿ ರಾಜನಾಥ್‌ ಸಿಂಗ್‌ ಭಾಗವಹಿಸಲಿಲ್ಲ. ಪಾಕ್‌ ಸಚಿವರೇ ಊಟ ಮಾಡದೆ ಸಮ್ಮೇಳನ ಮುಗಿದ ನಂತರ ತೆರಳಿದರು. ಇದನ್ನು ಗಮನಿಸಿದ ರಾಜನಾಥ್‌ ಸಹ ಊಟ ಮಾಡದೇ ಅಲ್ಲಿಂದ ಹೋದರು.  ಭಾರತೀಯ ನಿಯೋಗದೊಂದಿಗೆ ಸಿಂಗ್ ಅವರು ಹೋಟೆಲ್‌ನಲ್ಲಿ ಊಟ ಸವಿದರು.ಹಾದಿತಪ್ಪಿಸುವ ವರದಿ (ನವದೆಹಲಿ ವರದಿ):  ‘ಪಾಕಿಸ್ತಾನದಲ್ಲಿ ನಡೆದ ಸಾರ್ಕ್‌ ಸಚಿವರ ಸಭೆಯಲ್ಲಿ ರಾಜನಾಥ್‌ ಸಿಂಗ್‌ ಮಾಡಿದ ಭಾಷಣದ ಪ್ರಸಾರವನ್ನು ತಡೆಯಲಾಗಿತ್ತು’ ಎಂಬ ವರದಿಯನ್ನು ಭಾರತ ತಳ್ಳಿಹಾಕಿದೆ.‘ಸಾರ್ಕ್‌ ಸಭೆಗಳಲ್ಲಿ ಅತಿಥೇಯ ರಾಷ್ಟ್ರದ ಸಚಿವರ ಭಾಷಣವನ್ನು ಮಾತ್ರ ಪ್ರಸಾರ ಮಾಡಲು ಅವಕಾಶ ನೀಡಲಾಗುತ್ತದೆ. ನಂತರ ನಡೆಯುವ ಸಭೆಗೆ ಮಾಧ್ಯಮದವರನ್ನು ಬಿಡುವುದಿಲ್ಲ. ಇದು ಸಂಪ್ರದಾಯ. ರಾಜನಾಥ್‌ ಸಿಂಗ್‌ ಭಾಷಣ ಪ್ರಸಾರಕ್ಕೆ ಮಾತ್ರ ನಿಷೇಧ ಹೇರಲಾಗಿದೆ ಎಂಬುದು ಹಾದಿ ತಪ್ಪಿಸುವಂಥ ಹೇಳಿಕೆ’ ಎಂದು ಭಾರತ ಹೇಳಿದೆ.ಪ್ರಧಾನಿ ಭೇಟಿ: ಸಾರ್ಕ್‌ ಸಭೆ ಮುಗಿಸಿ ಸಂಜೆ ಭಾರತಕ್ಕೆ ಮರಳಿದ ರಾಜನಾಥ್‌ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಪ್ರಧಾನಿ ಮೋದಿ ಅವರ ಕಚೇರಿಗೆ ಹೋಗಿ, ಸಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದನೆ ನಿಗ್ರಹಕ್ಕೆ  ಬದ್ಧ: ಷರೀಫ್‌

ಇಸ್ಲಾಮಾಬಾದ್‌ (ಪಿಟಿಐ): ಭಯೋತ್ಪಾದನೆ ನಿಗ್ರಹ, ಭ್ರಷ್ಟಾಚಾರ ಮತ್ತು ಸಂಘಟಿತ ಅಪರಾಧ ತಡೆಗೆ ಸಾರ್ಕ್‌ ರಾಷ್ಟ್ರಗಳ ಜತೆ ಕೈ ಜೋಡಿಸಿ ಕೆಲಸ ಮಾಡಲು ಪಾಕಿಸ್ತಾನ ಬದ್ಧವಾಗಿದೆ’ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್‌ ಹೇಳಿದರು.ಸಾರ್ಕ್  ರಾಷ್ಟ್ರಗಳ ಗೃಹ ಸಚಿವರ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಕ್ಷುಬ್ಧತೆಯಿಂದ ಕೂಡಿರುವ ಬುಡಕಟ್ಟು ಪ್ರದೇಶಗಳಲ್ಲಿ ಭಯೋ ತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಬಗ್ಗೆ ವಿವರಿಸಿದ ಷರೀಫ್‌, ತಮ್ಮ ನೆಲದಿಂದ ಸೃಷ್ಟಿಯಾಗುತ್ತಿರುವ ಭಯೋತ್ಪಾದನಾ ದಾಳಿಯ ನಿಗ್ರಹಕ್ಕೆ ಸರ್ಕಾರದ ನಿರ್ಧಾರಗಳನ್ನು ಹೇಗೆ ರಾಷ್ಟ್ರೀಯ ಕ್ರಿಯಾ ಯೋಜನೆಯ ಕಾರ್ಯಗತಗೊಳಿಸ ಲಾಗುತ್ತಿದೆ ಎಂಬುದನ್ನು ವಿವರಿಸಿದರು.‘ಸಾರ್ಕ್ ರಾಷ್ಟ್ರಗಳಲ್ಲಿ ಅಪಾರವಾದ ಮಾನವ ಮತ್ತು ನೈಸರ್ಗಿಕ ಸಂಪನ್ಮೂಲವಿದೆ.  ಈ ದೇಶಗಳ ಜನರ ಒಳಿತಿಗಾಗಿ ಮತ್ತು ಶಾಂತಿ ನೆಲೆಸುವಂತೆ ಮಾಡಲು ಈ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.‘ಅಭಿವೃದ್ಧಿ ಮತ್ತು ಶಾಂತಿಯುತ ನೆರೆಹೊರೆಗೆ ತಮ್ಮ ಸರ್ಕಾರ ದೂರದರ್ಶಿ ಯೋಜನೆಯನ್ನು ರೂಪಿಸಿಕೊಂಡಿದೆ’ ಎಂದು ಒತ್ತಿ ಹೇಳಿದರು.

‘ಭಯೋತ್ಪಾದನೆ, ಮಾದಕ ಪದಾರ್ಥ ಸಾಗಣೆ, ಸೈಬರ್ ಅಪರಾಧ ಮತ್ತು ಅಂತರರಾಷ್ಟ್ರೀಯ ಮಟ್ಟದ ಅಪರಾಧ ನಿಗ್ರಹಕ್ಕೆ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ’ ಎಂದು ಸಾರ್ಕ್‌ ಪ್ರಧಾನ ಕಾರ್ಯದರ್ಶಿ ಅರ್ಜುನ್‌ ಬಹದ್ದೂರ್‌ ಥಾಪ ಹೇಳಿದರು.

ಸಮ್ಮೇಳನದಲ್ಲಿ  ಕಾಶ್ಮೀರ  ವಾಕ್ಸಮರ

ಇಸ್ಲಾಮಾಬಾದ್‌ (ಪಿಟಿಐ): ಸಾರ್ಕ್‌ ಗೃಹಸಚಿವರ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಸಚಿವರು ಕಾಶ್ಮೀರ ವಿಚಾರಗಳಲ್ಲಿ ತಮ್ಮ ತಮ್ಮ ನಿಲುವುಗಳನ್ನು ಸಮರ್ಥಿಸಿಕೊಂಡರು.ಭಯೋತ್ಪಾದಕರನ್ನು ವೈಭವೀಕರಿಸುವುದು ತಪ್ಪು ಎಂದು ರಾಜನಾಥ್‌ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟರೆ, ಕಾಶ್ಮೀರದಲ್ಲಿ ಭಾರತ ನಡೆಸಿದ್ದು ಭಯೋತ್ಪಾದನೆ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ಚೌಧರಿ ನಿಸಾರ್‌ ಅಲಿ ಖಾನ್‌ ಆರೋಪಿಸಿದರು.‘ನಾಗರಿಕರ ಮೇಲೆ ಭಾರತದ ಭದ್ರತಾ ಪಡೆಗಳು ತಮ್ಮ ಶಕ್ತಿ ಪ್ರಯೋಗಿಸುತ್ತಿರುವುದು ಭಯೋ ತ್ಪಾದನೆಗೆ ಸಮ’ ಎಂದು ಅವರು ದೂರಿ ದರು.

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು   ಪಾಕಿಸ್ತಾನದ ಹೆಸರು ಉಲ್ಲೇಖಿಸದೆ ರಾಜನಾಥ್‌ ಸಿಂಗ್‌ ಮಾಡಿದ ಆರೋಪಕ್ಕೆ ಪ್ರತ್ಯುತ್ತರ ಕೊಡುವ ಸಲುವಾಗಿ ಖಾನ್‌ ತಮ್ಮ ಮುದ್ರಿತ ಭಾಷಣವನ್ನು ಬಿಟ್ಟು ಮಾತನಾಡಿದರು.ರಾಜನಾಥ ಸಿಂಗ್ ಹೇಳಿದ್ದು...

l ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು  ವೈಭವೀಕರಿಸು ಸುವುದನ್ನು ನಿಲ್ಲಿಸಬೇಕು.

l ಭಯೋತ್ಪಾದಕರಲ್ಲಿ ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದಕರೆಂಬ ಭೇದವಿಲ್ಲ.

l ಉಗ್ರರು ಮತ್ತು ಉಗ್ರ ಸಂಘಟನೆ ನಿಗ್ರಹಕ್ಕೆ ಸಾರ್ಕ್ ರಾಷ್ಟ್ರಗಳು ಕಠಿಣ ಕ್ರಮಗಳನ್ನು  ತೆಗೆದುಕೊಳ್ಳಬೇಕು.

l ಭಯೋತ್ಪಾದನೆ ಇಂದಿನ ದೊಡ್ಡ ಸವಾಲು ಮತ್ತು ಬೆದರಿಕೆಯಾಗಿ ಉಳಿದಿದೆ. ಖಾನ್‌  ಹೇಳಿದ್ದು...

l ಸ್ವಾತಂತ್ರ ಹೋರಾಟಕ್ಕೂ ಭಯೋತ್ಪಾದನೆಗೂ ವ್ಯತ್ಯಾಸವಿದೆ.

l ಕಾಶ್ಮೀರದ ಮುಗ್ಧ ಜನರ ವಿರುದ್ಧ ಹಿಂಸಾಚಾರ ನಡೆಸಲಾಗುತ್ತಿದೆ. ಇದು ಭಯೋತ್ಪಾದನೆಗೆ ಸಮ

l ನೆರೆಯ ದೇಶಗಳ ಜತೆ ಆಪ್ತವಾಗಿ ಕೆಲಸ ಮಾಡಲು ನಾವು ಬಯಸುತ್ತೇವೆ ಮತ್ತು ಎಲ್ಲ ವಿವಾದಗಳನ್ನೂ ಪರಿಹರಿಸಿಕೊಳ್ಳಲು ಇಚ್ಛಿಸುತ್ತೇವೆ.

l ಭಯೋತ್ಪಾದನೆ ವಿರುದ್ಧ ಹೋರಾಡುವ ಯತ್ನದಲ್ಲಿ ನಮ್ಮ ದೇಶ ಸಾಕಷ್ಟು ನಷ್ಟ ಅನುಭವಿಸಿದೆ. ಅಮಾಯಕ ಜನರು ಸಾಯುವ ಸಣ್ಣ ಘಟನೆಗಳನ್ನೂ ದೇಶ ಖಂಡಿಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.