ಸೋಮವಾರ, ಮೇ 17, 2021
29 °C

ಕೈಗಾರಿಕೆಗಳ ಸಹಕಾರ ಅಗತ್ಯ:ಜಾರ್ಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದ ಅಭಿವೃದ್ಧಿಗೆ ಯತ್ನಗಳು ನಡೆದಾಗ ಅದರ ಪ್ರತಿಕೂಲ ಪರಿಣಾಮ ಕೆಲವು ಕ್ಷೇತ್ರಗಳ ಮೇಲೆ ಉಂಟಾಗುತ್ತದೆ. ಅಂತಹ ಸನ್ನಿವೇಶವನ್ನು ನಿಭಾಯಿಸಲು ಕೈಗಾರಿಕೆಗಳು ಸರ್ಕಾರದೊಂದಿಗೆ ಸಹಕರಿಸಬೇಕಾಗುತ್ತದೆ' ಎಂದು ರಾಜ್ಯ ಗೃಹ ಸಚಿವ ಕೆ.ಜೆ.    ಜಾರ್ಜ್ ಹೇಳಿದರು.ಬೆಂಗಳೂರು ಮ್ಯಾನೇಜ್‌ಮೆಂಟ್ ಸಂಸ್ಥೆಯು (ಬಿ.ಎಂ.ಎ.) ತನ್ನ 60ನೇ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. `ಸಂಚಾರ ದಟ್ಟಣೆ ಬಗೆಗೆ ಎಲ್ಲರೂ ದೂರುತ್ತಾರೆ. ಅಭಿವೃದ್ಧಿ ದಾರಿಯಲ್ಲಿ ಇದೆಲ್ಲ ಅನಿವಾರ್ಯ. ಆದರೆ, ಜನರಿಗೆ ತೊಂದರೆ ಆಗದಂತೆ ಇಂತಹ ಸಮಸ್ಯೆಗಳನ್ನು ನಿಭಾಯಿಸಬೇಕಿದೆ. ಇದರಲ್ಲಿ ಕೈಗಾರಿಕೆಗಳ ಪಾತ್ರವೂ ಮುಖ್ಯ' ಎಂದ ಅವರು `ಭ್ರಷ್ಟಾಚಾರಮುಕ್ತ ಆಡಳಿತವೇ ನಮ್ಮ ಸರ್ಕಾರದ ಆದ್ಯತೆಯಾಗಿದೆ' ಎಂದು ತಿಳಿಸಿದರು.ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್, `ಭ್ರಷ್ಟಾಚಾರವೇ ದೇಶದ ದೊಡ್ಡ ಪಿಡುಗಾಗಿದ್ದು, ಕೈಗಾರಿಕೆಗಳೆಲ್ಲ ಗುಳೆ ಹೊರಟಿವೆ. ಶಿಕ್ಷಣ ಸೌಲಭ್ಯದ ಕೊರತೆ ಮತ್ತೊಂದು ದೊಡ್ಡ ತೊಡಕಾಗಿದೆ' ಎಂದು ವಿಷಾದ ವ್ಯಕ್ತಪಡಿಸಿದರು. `ಅನುತ್ಪಾದಕ ರಂಗದಲ್ಲಿ ನಾವು ಹೆಚ್ಚು, ಹೆಚ್ಚು ಉದ್ಯೋಗ ಸೃಷ್ಟಿಸುತ್ತಿದ್ದೇವೆ. ಒಂದೆಡೆ ಕಳ್ಳರು ಹೆಚ್ಚಾಗುತ್ತಿದ್ದಾರೆ. ಇನ್ನೊಂದೆಡೆ ಸೆಕ್ಯೂರಿಟಿ ಗಾರ್ಡ್‌ಗಳ ಹುದ್ದೆ ಸೃಷ್ಟಿಸುತ್ತಿದ್ದೇವೆ. ಸಬ್ಸಿಡಿ ಒದಗಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದೇವೆ. ಪಂಚಾಯಿತಿಯಿಂದ ಸಂಸತ್ತಿನವರೆಗೆ ದೇಶದಲ್ಲಿ ಇರುವ 30 ಲಕ್ಷ ಜನಪ್ರತಿನಿಧಿಗಳಲ್ಲಿ ಬಹುಪಾಲು ಭ್ರಷ್ಟರೇ ತುಂಬಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಖಿಲ ಭಾರತ ಮ್ಯಾನೇಜ್‌ಮೆಂಟ್ ಸಂಸ್ಥೆಯ ಅಧ್ಯಕ್ಷ ಬಿ.ಶಿವಕುಮಾರ್, `ನಗರದ ಕೆರೆ ಮೂಲಗಳು 81ರಿಂದ 17ಕ್ಕೆ ಕುಸಿದಿವೆ. ಗುಬ್ಬಿಗಳ ಸಂಖ್ಯೆ ಪ್ರತಿ ಚದರ ಕಿ.ಮೀ.ಗೆ 25,000ರಿಂದ 50ಕ್ಕೆ ಕುಸಿದಿದೆ. ವಾಹನಗಳ ಸಂಖ್ಯೆ 6 ಲಕ್ಷದಿಂದ 44 ಲಕ್ಷಕ್ಕೆ ಹೆಚ್ಚಿದೆ. 20 ವರ್ಷಗಳಲ್ಲಿ ಉಂಟಾದ ಅಭಿವೃದ್ಧಿ ಪರಿಣಾಮ ಇದು' ಎಂದು ಹೇಳಿದರು.

ಬಿ.ಎಂ.ಎ. ಅಧ್ಯಕ್ಷ ಡಾ. ಮಂಜೇಗೌಡ ಹಾಜರಿದ್ದರು.ಪ್ರಶಸ್ತಿ ವಿಜೇತರು

ದಶಕದ ಉದ್ಯಮಿ- ಬಯೋಕಾನ್ ಅಧ್ಯಕ್ಷೆ ಡಾ. ಕಿರಣ್ ಮಜುಮ್‌ದಾರ್ ಶಾ, ದಶಕದ ವಾಣಿಜ್ಯ ನಾಯಕ- ಟೈಟಾನ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್, ಅತ್ಯುತ್ತಮ ಐಟಿ ಸೇವಾ ಕಂಪೆನಿ- ವಿಪ್ರೊ, ಅತ್ಯುತ್ತಮ ಬ್ಯಾಂಕ್- ಕೆನರಾ ಬ್ಯಾಂಕ್, ವರ್ಷದ ಅತ್ಯುತ್ತಮ ಉತ್ಪಾದಕ ಕಂಪೆನಿ- ಟಯೊಟಾ ಕಿರ್ಲೋಸ್ಕರ್ ಮೋಟಾರ್ ಲಿಮಿಟೆಡ್, ಅತ್ಯುತ್ತಮ ಆರೋಗ್ಯ ಸೇವಾ ಸಂಸ್ಥೆ- ನಾರಾಯಣ ಹೆಲ್ತ್ ಸಿಟಿ, ವರ್ಷದ ಅತ್ಯುತ್ತಮ ಕಾರ್ಯ ನಿರ್ವಹಣಾಧಿಕಾರಿ- ಬ್ರಿಟಾನಿಯಾ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕಿ ವಿನೀತಾ ಬಾಲಿ, ವರ್ಷದ ಅತ್ಯುತ್ತಮ ಬ್ಯುಜಿನೆಸ್ ಸ್ಕೂಲ್- ಐಎಫ್‌ಐಎಂ ಬ್ಯುಜಿನೆಸ್ ಸ್ಕೂಲ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.