ಶುಕ್ರವಾರ, ಏಪ್ರಿಲ್ 16, 2021
31 °C

ಕೈಚೆಲ್ಲಿ ಕುಳಿತ ಬನವಾಸಿ ಹೋಬಳಿ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ತಾಲ್ಲೂಕಿನ ಪೂರ್ವ ಭಾಗದಲ್ಲಿ ಮಳೆಯಿಲ್ಲದೆ ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ಕೆರೆ-ಹಳ್ಳಗಳು ಬತ್ತಿ ನಿಂತಿವೆ. ತಾಲ್ಲೂಕನ್ನು ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಬರೆದ ಪತ್ರದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ ಗೌಡ ಒತ್ತಾಯಿಸಿದ್ದಾರೆ.ಹಿಂದಿನ ವರ್ಷ ಇದೇ ಅವಧಿಗೆ ತಾಲ್ಲೂಕಿನಲ್ಲಿ 1754ಮಿಮೀ ಮಳೆಯಾಗಿದ್ದು, ಈ ಬಾರಿ ಕೇವಲ 650ಮಿಮೀ ಮಳೆ ಸುರಿದಿದೆ. ದನಕರುಗಳಿಗೆ ಕರೆಯಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಬಿತ್ತನೆ ಮಾಡಿದ ಗದ್ದೆಯಲ್ಲಿ ಬತ್ತ ನೀರಿಲ್ಲದೆ ಒಣಗುತ್ತಿದೆ. ಅಗೆಮಡಿ ಸಿದ್ಧಪಡಿಸಲು ಸಹ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ.ಇಂತಹ ಸ್ಥಿತಿಯಲ್ಲಿ ಪಿಎಲ್‌ಡಿ ಬ್ಯಾಂಕ್‌ನವರು ಇದೇ 30ರಂದು ರೈತರು ಜಮೀನು ಹರಾಜು ನಡೆಸಲು ದಿನಾಂಕ ನಿಗದಿ ಮಾಡಿದ್ದಾರೆ. ಹಿಂದಿನ ವರ್ಷ ಅತಿಯಾದ ಮಳೆಯಿಂದ ಬತ್ತ ಬಿತ್ತನೆ ಸಾಧ್ಯವಾಗದೆ ರೈತರಿಗೆ ಬೆಳೆಯೇ ದೊರೆತಿಲ್ಲ. ಖುಷ್ಕಿ ಪ್ರದೇಶದ ರೈತರಿಗೆ ಬೆಳೆ ವಿಮೆ ನೀಡಬೇಕು ಎಂದು ವಿನಂತಿಸಿದರೂ ಪ್ರಯೋಜನವಾಗಿಲ್ಲ. ನಿರಂತರ ಮೂರ್ನಾಲ್ಕು ವರ್ಷಗಳಿಂದ ಬನವಾಸಿ ಹೋಬಳಿ ರೈತರು ಅತಿವೃಷ್ಠಿ-ಅನಾವೃಷ್ಠಿಯಿಂದ ತೊಂದರೆಗೆ ಒಳಗಾಗಿದ್ದು, ಜಿಲ್ಲಾಧಿಕಾರಿ ಸಹ ಸ್ಥಳ ಪರಿಶೀಲನೆ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಜಮೀನು ಹರಾಜು ಪ್ರಕ್ರಿಯೆ ನಿಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆನಂದ ಗೌಡ ಪತ್ರದಲ್ಲಿ ವಿನಂತಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.