ಶನಿವಾರ, ಮೇ 21, 2022
26 °C

ಕೈವಿರುದ್ಧ ಅಣ್ಣಾ ತಂಡದ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಸ್ಸಾರ್ (ಹರಿಯಾಣ): ಅಣ್ಣಾ ಹಜಾರೆ ಅವರ ಧ್ವನಿಮುದ್ರಿಕೆಯ ಸಿ.ಡಿ ಹಿಡಿದು ಅಣ್ಣಾ ತಂಡದ ಕೆಲವು ಸದಸ್ಯರು ಕಾಂಗ್ರೆಸ್ ವಿರೋಧಿ ಅಭಿಯಾನವನ್ನು ಶನಿವಾರ ಆರಂಭಿಸಿದ್ದಾರೆ.



ಹಿಸ್ಸಾರ್ ಲೋಕಸಭಾ ಕ್ಷೇತ್ರಕ್ಕೆ ಶೀಘ್ರವೇ ಉಪಚುನಾವಣೆ ನಡೆಯಲಿದ್ದು, ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವಂತೆ ಅಣ್ಣಾ ನೀಡಿರುವ ಕರೆಯನ್ನು ಅವರ ತಂಡದವರು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.



ಅಣ್ಣಾ ತಂಡದ ಸದಸ್ಯರಾದ ಅರವಿಂದ ಕೇಜ್ರಿವಾಲ್, ಮನಿಶ್ ಸಿಸೋಡಿಯಾ ಅವರ ನೇತೃತ್ವದಲ್ಲಿ ಸಣ್ಣ ಸಣ್ಣ ಸಭೆಗಳನ್ನು ನಡೆಸಿ ಪ್ರಬಲ ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ, ಕಾಂಗ್ರೆಸ್ ವಿರುದ್ಧ ಆಂದೋಲನಕ್ಕೆ ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಲೋಕಸಭಾ ಸದಸ್ಯ ಭಜನ್‌ಲಾಲ್ ನಿಧನದಿಂದಾಗಿ ತೆರವಾಗಿರುವ ಹಿಸ್ಸಾರ್ ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 13ರಂದು ಉಪ ಚುನಾವಣೆ ನಡೆಯಲಿದೆ.



ಕ್ಷೇತ್ರದ ನರ್‌ನೌಡಾ ಪ್ರದೇಶದಿಂದ ಕೇಜ್ರಿವಾಲ್ ಕಾಂಗ್ರೆಸ್ ವಿರೋಧಿ ಪ್ರಚಾರದಲ್ಲಿ ತೊಡಗುವರು. ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ವಕೀಲ ಪ್ರಶಾಂತ್ ಭೂಷಣ್ ಅವರೂ ಇನ್ನೆರಡು ದಿನಗಳಲ್ಲಿ  ಪಾಲ್ಗೊಳ್ಳುವ ನಿರೀಕ್ಷೆ ಇದೆ.



ಆದರೆ ಹಜಾರೆ ಅವರು ಸ್ವಯಂ ಈ ಆಂದೋಲನದಲ್ಲಿ ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ಅವರ ಧ್ವನಿಮುದ್ರಿಕೆಯ ಸಂದೇಶದ ಸಿ.ಡಿ.ಗಳನ್ನು ಅವರ ಕಾರ್ಯಕರ್ತರು ಕೊಂಡೊಯ್ದಿದ್ದಾರೆ. ಜನಲೋಕಪಾಲ ಮಸೂದೆಯನ್ನು ಜಾರಿಗೆ ಕಾಂಗ್ರೆಸ್ ವಿರೋಧಿಸುತ್ತಿದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸದಂತೆ ಅಣ್ಣಾ ತಮ್ಮ ಸಂದೇಶದಲ್ಲಿ ಜನರಿಗೆ ಕರೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.