ಶನಿವಾರ, ಜನವರಿ 18, 2020
22 °C

ಕೊಂಬೆ ಬಿದ್ದು ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿಚಕ್ರ ವಾಹನ ಸವಾರನ ಮೇಲೆ ರಸ್ತೆ ಬದಿಯ ಮರದ ಕೊಂಬೆ ಮುರಿದು ಬ್ದ್ದಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದ ದಾರುಣ ಘಟನೆ ವಿಠಲ್ ಮಲ್ಯ ರಸ್ತೆಯ ಸಿದ್ದಲಿಂಗಯ್ಯ ವೃತ್ತದ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.ಗುಲ್ಬರ್ಗ ಜಿಲ್ಲೆಯ ಈಶಪ್ಪ (23) ಮೃತಪಟ್ಟವರು. ಕೂಲಿ ಕಾರ್ಮಿಕರಾಗಿದ್ದ ಅವರು ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಕಟ್ಟಡ ನಿರ್ಮಾಣ ಕೆಲಸದ ಮೇಲ್ವಿಚಾರಕರಾಗಿದ್ದ ಅಂಬರೀಷ್ ಎಂಬುವರ ಜತೆ ಅವರು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಸಂಪಂಗಿರಾಮನಗರಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಅವರು ಸಿದ್ದಲಿಂಗಯ್ಯ ವೃತ್ತದಲ್ಲಿ ಬಲ ತಿರುವು ಪಡೆದು ಮಲ್ಯ ರಸ್ತೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿಯ ಮರದ ದೊಡ್ಡ ಕೊಂಬೆಯೊಂದು ಮುರಿದು ಈಶಪ್ಪ ಅವರ ತಲೆ ಮೇಲೆ ಬಿದ್ದಿತು. ತೀವ್ರ ರಕ್ತ ಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟರು. ಅಂಬರೀಷ್ ಅವರಿಗೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಚಾರಕ್ಕೆ ಅಡ್ಡಿ: ಘಟನೆಯಿಂದಾಗಿ ವಿಠಲ್ ಮಲ್ಯ ರಸ್ತೆ, ಕಸ್ತೂರಬಾ ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಕೆಲ ಕಾಲ ಅಡ್ಡಿಯಾಯಿತು. ಮರದ ಕೊಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳ ಓಡಾಟಕ್ಕೆ ಸ್ಥಳಾವಕಾಶವಿಲ್ಲದೆ ವಾಹನ ಸವಾರರು ತೊಂದರೆ ಅನುಭವಿಸಿದರು.  ವಿಷಯ ತಿಳಿದು ಸ್ಥಳಕ್ಕೆ ಬಂದ ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ ಮರದ ಕೊಂಬೆಯನ್ನು ಕಡಿದು ಸಾಗಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಪ್ರತಿಕ್ರಿಯಿಸಿ (+)