ಶನಿವಾರ, ಜುಲೈ 24, 2021
22 °C

ಕೊಕೇನ್ ಮಾರಾಟ: ವಿದೇಶಿಗರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಕೇನ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿದೇಶಿ ಪ್ರಜೆಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು 15 ಲಕ್ಷ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ.ಜೋರ್ಡಾನ್ ಮೂಲದ ಅಬ್ದುಲ್ಲಾ ಹಾಥೆಮ್ ಕಾಮೆಲ್ ಅಲ್ ಅಲಿ (23) ಮತ್ತು ಅಹಮ್ಮದ್ ಮೊಹಮ್ಮದ್ ಹಸನ್ ಅಲ್ಕೆಮ್ (27) ಬಂಧಿತರು.ಇಂದಿರಾನಗರದ ನೂರು ಅಡಿ ರಸ್ತೆಯ ಹೋಟೆಲ್‌ವೊಂದರ ಸಮೀಪ ದುಷ್ಕರ್ಮಿಗಳು ಮಾದಕ ವಸ್ತು ಮಾರುತ್ತಿದ್ದಾರೆ ಎಂಬ ಮಾಹಿತಿ ಬಂತು.ಕೂಡಲೇ ಕಾರ್ಯಾಚರಣೆ ನಡೆಸಿ ಅವರಿಬ್ಬರನ್ನು ಬಂಧಿಸಿ 230 ಗ್ರಾಂ ಕೊಕೇನ್, ಬೈಕ್, ನಾಲ್ಕು ಸಾವಿರ ನಗದು, ನಾಲ್ಕು ಮೊಬೈಲ್ ಫೋನ್ ಹಾಗೂ ಪಾಸ್‌ಪೋರ್ಟ್ ಜಪ್ತಿ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳು ನೈಜೀರಿಯಾ ಮೂಲದ ಪಪ್ಪಾಜೊ ಎಂಬಾತನಿಂದ ಕೊಕೇನ್ ಖರೀದಿಸಿ ತಂದು ಇಂದಿರಾನಗರ, ಹಲಸೂರು, ಬಾಣಸವಾಡಿ, ಹೆಣ್ಣೂರು ಸುತ್ತಮುತ್ತಲಿನ ಬಾರ್ ಮತ್ತು ಪಬ್‌ಗಳ ಸಮೀಪ ಮಾರಾಟ ಮಾಡುತ್ತಿದ್ದರು. ಪಪ್ಪಾಜೊನನ್ನು ಎರಡು ವರ್ಷಗಳಲ್ಲಿ ಹಲವು ಬಾರಿ ಬಂಧಿಸಿ ಜೈಲಿಗೆ ಹಾಕಲಾಗಿತ್ತು.ಜೈಲಿನಿಂದ ಬಿಡುಗಡೆಯಾಗಿ ತಲೆಮರೆಸಿಕೊಂಡಿರುವ ಪಪ್ಪಾಜೊ ನಗರದಲ್ಲಿ ಮಾದಕ ವಸ್ತು ಮಾರಾಟ ದಂಧೆ ನಡೆಸುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ವಿದ್ಯಾಭ್ಯಾಸಕ್ಕಾಗಿ 2000ದಲ್ಲಿ ಬೆಂಗಳೂರಿಗೆ ಬಂದಿದ್ದ ಅಹಮ್ಮದ್ ಬನಶಂಕರಿಯ ಖಾಸಗಿ ಕಾಲೇಜಿನಲ್ಲಿ ಬಿ.ಇ ಓದುತ್ತಿದ್ದ.ಆದರೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ ಆತ ಜೋರ್ಡಾನ್‌ಗೆ ವಾಪಸ್ ಹೋಗಿ ವಿಮಾನಯಾನ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಪುನಃ 2008ರಲ್ಲಿ ನಗರಕ್ಕೆ ಬಂದ ಆತ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದ. 2007ರಲ್ಲಿ ನಗರಕ್ಕೆ ಬಂದಿದ್ದ ಮತ್ತೊಬ್ಬ ಆರೋಪಿ ಅಬ್ದುಲ್ಲಾ ಖಾಸಗಿ ಕಾಲೇಜಿನಲ್ಲಿ ಬಿ.ಸಿ.ಎ ಓದಿದ್ದ. ಅವರಿಬ್ಬರ ವೀಸಾ ಅವಧಿ ಮುಗಿದಿದ್ದರೂ ದೇಶದಲ್ಲಿ ಅಕ್ರಮಗಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.