ಭಾನುವಾರ, ಜನವರಿ 19, 2020
23 °C

ಕೊಕ್ಕರೆಗಳ ನೋಡಾ...

–ಸ್ವಾಮಿ ಕೆ.ವಿ. Updated:

ಅಕ್ಷರ ಗಾತ್ರ : | |

ಕೊಕ್ಕರೆಗಳ ನೋಡಾ...

ಮರಗಳ ಮೇಲೆ ಬಿಡುಬೀಸಾಗಿ ಕುಳಿತ ಕೊಕ್ಕರೆ ಮತ್ತು ಮೈನಾ ಹಕ್ಕಿಗಳ ಕಲರವ, ಅದರ ಪುಟ್ಟ ಕಂದಮ್ಮಗಳ ಹಾರಾಟ–ಚೀರಾಟ, ರೆಕ್ಕೆ ಬಿಚ್ಚಿ ಮೈಕಾಯಿಸಿಕೊಳ್ಳುವ ಹೆಜ್ಜಾರ್ಲೆಗಳ  ಮೈಮಾಟ, ಮರಿಗಳನ್ನು ರೆಕ್ಕೆಯೊಳಗೆ ಬಚ್ಚಿಟ್ಟುಕೊಂಡು ತಾಯ್ತನ ಸುಖಿಸುತ್ತಿರುವ ತಾಯಿ ಹಕ್ಕಿಗಳು, ಪ್ರೀತಿಯಿಂದ ಮುತ್ತಿಕ್ಕಿಕೊಳ್ಳುತ್ತಿರುವ ಜೋಡಿಹಕ್ಕಿಗಳ ಮಧುರ ಕ್ಷಣಗಳು, ಕತ್ತು ಹೊರಹಾಕಿ ಪಿಳಿ ಪಿಳಿ ಕಣ್ಣು ಬಿಡುವ ಮರಿ ಕೊಕ್ಕರೆಗಳ ಮನಮೋಹಕ ನೋಟ ಪಕ್ಷಿಪ್ರಿಯ ಮನಸ್ಸುಗಳಿಗೆ ಮುದ ನೀಡುತ್ತವೆ. ಇಂಥ ಹಲವು ಸುಮಧುರ ಕ್ಷಣಗಳನ್ನು ಕಟ್ಟಿಕೊಡುವ ಮೂಲಕ ಪ್ರವಾಸಿಗರ ಮನಸೆಳೆಯುತ್ತಿದೆ ಕೊಕ್ಕರೆ ಬೆಳ್ಳೂರು.

ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ತೆರಳುವ ಪ್ರವಾಸಿಗರಿಗೆ ಕೊಕ್ಕರೆ ಬೆಳ್ಳೂರು ಹೇಳಿ ಮಾಡಿಸಿದ ತಾಣ.

ಜನವಸತಿ ಇಲ್ಲದ, ನೀರಿನಿಂದ ಸುತ್ತುವರಿದ ಪುಟ್ಟ ದ್ವೀಪಗಳಲ್ಲಿರುವ ಮರಗಳಲ್ಲಿ ಗೂಡು ಕಟ್ಟಿ ವಾಸಿಸುವ ಈ ಹಕ್ಕಿಗಳು ಬೆಳ್ಳೂರಿನಲ್ಲಿ ಮಾತ್ರ ಕಾಣಸಿಗುತ್ತವೆ. ಊರ ಮಧ್ಯೆ ಹುಣಸೆ, ಬುಗುರಿ, ಆಲ, ಅರಳಿ, ಬೇವು, ಜಾಲಿ, ಮರಗಳ ಮೇಲೆ ಜೀವಿಸುತ್ತವೆ. ಇದು ಈ ಊರಿನ ವಿಶೇಷವೂ ಹೌದು.  ಬಣ್ಣದ ಕೊಕ್ಕರೆಗಳು ಹೆಚ್ಚಾಗಿ ಇಲ್ಲಿಗೆ ಬರುವುದರಿಂದ ಊರಿಗೆ ಕೊಕ್ಕರೆಯ ಹೆಸರು ಸೇರಿಕೊಂಡಿದೆ. ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡಿ ಕುಟುಂಬ ಸಮೇತ ತಮ್ಮ ನೆಲೆಯತ್ತ ಸಾಗುತ್ತವೆ.  

ಬೆಳ್ಳೂರಿಗೆ ಪ್ರತಿವರ್ಷ ಚಳಿಗಾಲದಲ್ಲಿ (ಡಿಸೆಂಬರ್ ತಿಂಗಳಲ್ಲಿ) ವಿದೇಶಗಳಿಂದ ಮನಮೋಹಕವಾದ ಪೆಲಿಕನ್ (ಹೆಜ್ಜಾರ್ಲೆ) ಪೇಂಟೆಡ್‌ಸ್ಟಾರ್ಕ್ (ರಂಗು ಕೊಕ್ಕರೆ), ಬಿಳಿಕೊಕ್ಕರೆ, ನೈಟ್ ಎರನ್ (ರಾತ್ರಿ ಬಕ), ಕೊಳದ ಬಕ, ಬ್ಲಾಕ್ ಐಬಿಸ್ ಮತ್ತು ವೈಟ್ ಐಬಿಸ್ ಕೊಕ್ಕರೆಗಳು ಬರುತ್ತವೆ. ಇಲ್ಲಿ ಮರಗಳ ಮೇಲೆ ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ. ಮರಿಗಳ ಪಾಲನೆ–ಪೋಷಣೆ ಮುಗಿದ ಮೇಲೆ ಬೇಸಿಗೆ ವೇಳೆಗೆ ತಮ್ಮ ಊರಿಗೆ ಹೋಗುತ್ತವೆ.ಇತ್ತೀಚಿನ ವರ್ಷಗಳಲ್ಲಿ ಮೈನಾ ಹಕ್ಕಿಗಳು ಸಹ ಬರುತ್ತಿವೆ. ಹೆಣ್ಣುಮಕ್ಕಳು ಬಾಣಂತನಕ್ಕೆ ತವರುಮನೆಗೆ ಬರುವಂತೆ ಬೆಳ್ಳೂರಿಗೆ ಕೊಕ್ಕರೆಗಳು ಸಂತಾನಭಿವೃದ್ಧಿಗಾಗಿ ಬರುತ್ತವೆ. ಹಾಗಾಗಿ ಬೆಳ್ಳೂರಿನ ಗ್ರಾಮಸ್ಥರು ಮತ್ತು ಪಕ್ಷಿಗಳ ನಡುವೆ ಅವಿನಾಭಾವ ಸಂಬಂಧ ಇದೆ ಎಂಬುದು ಸ್ಥಳೀಯರ ನಿಲುವು.ಪರಿಸರ ಪ್ರೇಮಿಗಳು, ವಿದ್ಯಾರ್ಥಿಗಳು, ವಿದೇಶಿಯರು, ಮಕ್ಕಳು ಸೇರಿದಂತೆ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬೆಳ್ಳೂರಿಗೆ ಬರುತ್ತಾರೆ. ಪ್ರತಿದಿನ ಕೊಕ್ಕರೆಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. ಮಕ್ಕಳಿಗಂತೂ ಬೆಳ್ಳೂರು ಮನರಂಜನೆಯ ತಾಣವಾಗಿದೆ.ವಾರಾಂತ್ಯ, ಸರ್ಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಪ್ರಿಯರು ಇಲ್ಲಿಗೆ ಬರುತ್ತಾರೆ. ಯಾವ ದಿಕ್ಕಿಗೆ ಬೇಕಾದರೂ ತಿರುಗುವ ಉದ್ದನೆ ಕೊಕ್ಕು, ಕೊಕ್ಕಿಗೆ ಜೋತು ಬಿದ್ದಿರುವ ತೊಗಲು ಚೀಲ, ಅದರೊಳಗೆ ಭೂಪಟಗಳಲ್ಲಿ ರಸ್ತೆಗಳ ಚಿತ್ರ ಬಿಡಿಸಿದ ಹಾಗೆ ನೀಲಿ ನರಗಳ ಜಾಲ... ಇದು ಹೆಜ್ಜಾರ್ಲೆಗಳ ಮೋಹಕ ನೋಟ.ಮರಗಳ ಮೇಲೆ ಕುಳಿತ ಪಕ್ಷಿಗಳ ಹಾವ– ಭಾವ, ಆಹಾರ ಹುಡುಕುವ ಕುತೂಹಲ ನೋಟ, ಮೊಟ್ಟೆ ಇಡುವ ಮುನ್ನ ಕಟ್ಟಿದ ಗೂಡು, ಆಹಾರ ಅರಸಿ ತೆರಳುವ ಸಾಲು ಸಾಲು ಗುಂಪು, ಮರಿ ಕೊಕ್ಕರೆಗಳ ಕಲರವ, ಹಾರಾಟ ಚೀರಾಟ ಪ್ರತಿಯೊಂದು ದೃಶ್ಯವೂ ಪ್ರವಾಸಿಗರನ್ನು ಸೆಳೆಯುತ್ತದೆ. ಕಣ್ಮನ ಸೆಳೆಯುವ ಕೊಕ್ಕರೆಗಳ ಸ್ವಚ್ಛಂದ ಹಾರಾಟವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಬಹುದು. ಕೊಕ್ಕರೆಗಳ ಬಗ್ಗೆ ಗ್ರಾಮಾಸ್ಥರೇ ತಮಗೆ ಅಗತ್ಯ ಮಾಹಿತಿ ನೀಡುವರು. ಹಲವಾರು ವರ್ಷಗಳಿಂದಲೂ ಈ ಗ್ರಾಮಕ್ಕೆ ಹಕ್ಕಿಗಳು ಬರುತ್ತಿವೆ. ಆದರೆ  ಆಹಾರ ಮತ್ತು ನೀರಿನ ಸಮಸ್ಯೆಯಿಂದ ವರ್ಷದಿಂದ ವರ್ಷಕ್ಕೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಹೆಚ್ಚಿನ ಪಕ್ಷಿಗಳು ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಗ್ರಾಮಸ್ಥರು. ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಬೆಳ್ಳೂರು ಬೆಳವಣಿಗೆ ಕಂಡಿಲ್ಲ. ಪ್ರವಾಸಿಗರಿಗೆ ಕಿವಿಮಾತು

ಬೆಳ್ಳೂರು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣವಾದರೂ ಇಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆಯಿಲ್ಲ. ಕುಳಿತು ವಿಶ್ರಾಂತಿ ಪಡೆಯಲು ಒಂದು ಉದ್ಯಾನವೂ ಇಲ್ಲ. ಪಕ್ಷಿ ಮಾಹಿತಿ ಕೇಂದ್ರದ ಕಾಮಗಾರಿ ಕೂಡ ಅರ್ಧದಲ್ಲೇ ನಿಂತುಹೋಗಿದೆ. ಈ ಊರಿನಲ್ಲಿ ಒಳ್ಳೆಯ ಹೋಟೆಲ್ ಇಲ್ಲ. ಪ್ರವಾಸಿಗರು ಹೊರಗಡೆಯಿಂದ ಊಟ ತಿಂಡಿ ತರುವುದು ಉತ್ತಮ.ಹೋಗುವುದು ಹೀಗೆ...

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಸುಮಾರು 75 ಕಿ.ಮೀ ಚಲಿಸಿದರೆ ರುದ್ರಾಕ್ಷಿಪುರ ಎಂಬ ಗೇಟ್ ಸಿಗುತ್ತದೆ. ಅಲ್ಲಿ ಕೊಕ್ಕರೆ ಬೆಳ್ಳೂರಿಗೆ ದಾರಿ ಎಂಬ ದೊಡ್ಡ ನಾಮ ಫಲಕ ಕಾಣಿಸುತ್ತದೆ. ಅಲ್ಲಿಂದ ಎಡಕ್ಕೆ ತಿರುವು ಪಡೆದು ಹಲಗೂರು ರುದ್ರಾಕ್ಷಿಪುರ ರಸ್ತೆಯಲ್ಲಿ 12 ಕಿ.ಮೀ. ಚಲಿಸಿದರೆ ಕೊಕ್ಕರೆ ಬೆಳ್ಳೂರು ಸಿಗುತ್ತದೆ.ಇಲ್ಲಿಗೆ ತಲುಪಲು ಸ್ವಂತ ವಾಹನದಲ್ಲಿ ಬಂದರೆ, ರುದ್ರಾಕ್ಷಿಪುರ ಗ್ರಾಮದಲ್ಲಿನ ಹಲಗೂರು ಮುಖ್ಯ ರಸ್ತೆಯ ಮೂಲಕ ಸಾಗಬೇಕು. ಬಸ್‌ನಲ್ಲಿ ಹೋದರೆ ಬೆಂಗಳೂರಿನಿಂದ ಚನ್ನಪಟ್ಟಣ ಅಥವಾ ಮದ್ದೂರು ತಲುಪಿ, ಮದ್ದೂರಿನಿಂದ ಹಲಗೂರಿಗೆ ಹೋಗುವ ಬಸ್ನಲ್ಲಿ ಹೋಗಬೇಕು.

ಪ್ರತಿಕ್ರಿಯಿಸಿ (+)