ಶನಿವಾರ, ಮೇ 15, 2021
25 °C
ವಂತಿಗೆ- ಶ್ರಮದಿಂದ ರೈತರಿಂದಲೇ ಏರಿ ನಿರ್ಮಾಣ

ಕೊಚ್ಚಿ ಹೋದ ಚೆಕ್ ಡ್ಯಾಂ: ಬದುಕು ದುಸ್ತರ

ಪ್ರಜಾವಾಣಿ ವಾರ್ತೆ / ಬಿ.ಲಕ್ಷ್ಮೀಕಾಂತಸಾ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: 2009ರ ಸೆಪ್ಟೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ಹಗಲು ರಾತ್ರಿ ಸುರಿದ ದೈತ್ಯ ಮಳೆಗೆ ಉಂಟಾದ ಪ್ರವಾಹಕ್ಕೆ ತಾಲ್ಲೂಕಿನ ಕನ್ನಿಹಳ್ಳಿ ಗ್ರಾಮದ ಕೂಗಳತೆ ದೂರದಲ್ಲಿ ಹರಿಯುತ್ತಿರುವ ಭರಮನಹಳ್ಳಕ್ಕೆ ಕಟ್ಟಲಾಗಿರುವ ಅತಿ ದೊಡ್ಡ ಚೆಕ್‌ಡ್ಯಾಂನ ಬಲದಂಡೆಯ ಏರಿ ಪೂರ್ತಿಯಾಗಿ ಕೊಚ್ಚಿ ಹೋಯಿತು.ಆ ಸಂದರ್ಭದಲ್ಲಿ ಬರೀ ಏರಿಯೊಂದೇ ಕೊಚ್ಚಿ ಹೋಗದೇ ಚೆಕ್‌ಡ್ಯಾಂ ಸುತ್ತಮುತ್ತಲಿನ ಹಂಚನಾಳು, ಉಲವತ್ತಿ, ನೆಲ್ಕುದ್ರಿ, ಮಾಲವಿ, ಕನ್ನಿಹಳ್ಳಿ ಹಾಗೂ ಚಿಮ್ಮನಹಳ್ಳಿ ಗ್ರಾಮಗಳ ರೈತರ ಕೊಳವೆ ಬಾವಿಗಳ ಅಂತರ್ಜಲ ಮಟ್ಟ, ಕೃಷಿ ಉತ್ಪಾದನೆಯಲ್ಲಿನ ಹೆಚ್ಚಳ ಮತ್ತು ಸರ್ವಾಂಗೀಣ ಅಭಿವೃದ್ಧಿಯ ಕನಸುಗಳೂ ಕೊಚ್ಚಿ ಹೋದವು.ನಾಲ್ಕು ವರ್ಷದ ಹಿಂದೆ ಹಾನಿಗೊಳಗಾಗಿರುವ ಚೆಕ್ ಡ್ಯಾಂನ ದುರಸ್ತಿ ಕಾಮಗಾರಿ ಈವರೆಗೂ ಆರಂಭವಾಗದೇ ಇರುವುದರಿಂದ ಸುತ್ತಮುತ್ತಲಿನ 1000 ಕೊಳವೆ ಬಾವಿಗಳ ನೀರಿನ ಸೆಲೆಗಳು ಬತ್ತಿ ಹೋಗಿವೆ. ಕೃಷಿ ಚಟುವಟಿಕೆಗಳು ಅತಂತ್ರಗೊಂಡಿರುವ ಮಾತಿರಲಿ, ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.ವಿಪರ್ಯಾಸವೆಂದರೆ ಚೆಕ್‌ಡ್ಯಾಂ ಫಲಾನುಭವಿ ಗ್ರಾಮಗಳು ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳಾಗಿದ್ದರೂ, ಚೆಕ್‌ಡ್ಯಾಂ ದುರಸ್ತಿ ಕಾಮಗಾರಿಗೆ ಅನುದಾನ ಪಡೆಯಬೇಕೆಂದರೆ ಹಡಗಲಿ ವಿಧಾನ ಸಭಾ ಕ್ಷೇತ್ರದ ಶಾಸಕರತ್ತ ಕೈ ಒಡ್ಡಬೇಕು.ಹಗರಿಬೊಮ್ಮನಹಳ್ಳಿ ತಾಲ್ಲೂಕಿನವರಾಗಿದ್ದರೂ, ತಾಲ್ಲೂಕಿನ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಲಿಲ್ಲ ಎಂಬ ಆರೋಪಗಳು ದಿ.ಎಂ.ಪಿ. ಪ್ರಕಾಶರ ಮೇಲೆ ಇವೆ. ಆದರೆ, ಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಟ್ಟಗಿ (ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕನ್ನಿಹಳ್ಳಿ ಸಮೀಪ) ಗ್ರಾಮದ ಬಳಿ 1994ರಲ್ಲಿ ರೂ.27ಲಕ್ಷ ಅನುದಾನ ಒದಗಿಸಿ ಈ ಚೆಕ್‌ಡ್ಯಾಂ ನಿರ್ಮಿಸಿ ಆ ಮೂಲಕ ತಾಲ್ಲೂಕಿನ ಹತ್ತು ಹಲವು ಗ್ರಾಮಗಳ ಕುಡಿಯುವ ಹಾಗೂ ಕೃಷಿ ಚಟುವಟಿಕೆಗಳಿಗಿದ್ದ ನೀರಿನ ಬವಣೆ ನೀಗಿಸಿದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ.ಚೆಕ್‌ಡ್ಯಾಂ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕಳೆದ ನಾಲ್ಕು ವರ್ಷದಿಂದ ಹಗರಿಬೊಮ್ಮನಹಳ್ಳಿ ಮತ್ತು ಹಡಗಲಿ ಕ್ಷೇತ್ರದ ಶಾಸಕರಿಗೆ ನೀಡಿರುವ ಮನವಿಗಳು ಕಸದ ಬುಟ್ಟಿಯ ಪಾಲಾಗಿವೆ ಎಂದು ರೈತರಾದ ಅಬ್ದುಲ್ ಖಾದರ್, ಪಿ.ವೆಂಕಟೇಶ್, ಕುರುಬರ ಮಲ್ಲೇಶಪ್ಪ, ಜಿ.ಫಕೀರರೆಡ್ಡಿ, ವಸಂತಕುಮಾರ್ ಹಾಗೂ ಕೆ.ಬಿ. ಫಕೀರರೆಡ್ಡಿ ಮತ್ತಿತರರು ದೂರುತ್ತಾರೆ.ಈ ಬಾರಿ ಒಳ್ಳೆಯ ಮಳೆ ಸುರಿಯುವ ಆಶಾ ಭಾವನೆಯ ಹಿನ್ನಲೆಯಲ್ಲಿ ಚೆಕ್‌ಡ್ಯಾಂನ ಸುತ್ತಲಿನ ಗ್ರಾಮದ ಕೊಳವೆಬಾವಿ ಹೊಂದಿರುವ ರೈತರು ವಂತಿಗೆಯಾಗಿ ಸಂಗ್ರಹಿಸಿದ ರೂ. 50ಸಾವಿರ ಹಣದಲ್ಲಿ ತಾತ್ಕಾಲಿಕವಾಗಿ ಏರಿಯ ದುರಸ್ತಿ ನಡೆಸಿ ನೀರು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಶ್ವತ ಸುಭದ್ರ ಏರಿಯ ನಿರ್ಮಾಣಕ್ಕೆ ಹಡಗಲಿಯ ನೂತನ ಶಾಸಕ ಪಿ.ಟಿ. ಪರಮೇಶ್ವರನಾಯ್ಕರನ್ನು ರೈತರು ಆಗ್ರಹಿಸಿದ್ದಾರೆ.`ಎಂ.ಪಿ. ಪ್ರಕಾಶರು ನಿರ್ಮಿಸಿರುವ ಈ ಚೆಕ್ ಡ್ಯಾಂ ಏರಿ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಪೂರಕ ಅನುದಾನ ಒದಗಿಸಿ   ಕಾಮಗಾರಿಗೆ ಚಾಲನೆ ನೀಡಬೇಕು. ಹಾಗಾದಾಗ ಮಾತ್ರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಎಂ.ಪಿ. ಪ್ರಕಾಶರ ಉತ್ತರಾಧಿಕಾರಿ ನಾನು ಎಂದು ಎದೆ ತಟ್ಟಿ ಹೇಳಿಕೊಳ್ಳುವ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರ ಮಾತುಗಳಿಗೆ ಅರ್ಥ ಬರುತ್ತದೆ' ಎಂದು ಡಿ.ಕರಿಬಸಪ್ಪ, ಪ್ರಶಾಂತ್ ಮತ್ತು ಕೆ.ಬಿ. ಅಶೋಕ್ ಮತ್ತಿತರರು ಅಭಿಪ್ರಾಯಪಡುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.