ಬುಧವಾರ, ಜೂನ್ 3, 2020
27 °C

ಕೊಲೆ, ಕಳವು ಪ್ರಕರಣಗಳ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೀತಿಯ ಸೋಗಿನಲ್ಲಿ ಇಬ್ಬರು ಪ್ರೇಯಸಿಯರನ್ನು ಪ್ರವಾಸಕ್ಕೆ ಕರೆದೊಯ್ದು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಯಲಹಂಕದ ಕಾರ್ತಿಕ್ ಉರುಫ್ ಸಂತೋಷ್ (25) ಎಂಬಾತನನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.ಆತ ಕವಿತಾ ಮತ್ತು ಹೇಮಲತಾ ಎಂಬುವರನ್ನು ಕೊಲೆ ಮಾಡಿದ್ದ. ಬಿ.ಎಸ್ಸಿ ಓದುತ್ತಿದ್ದ ಆತ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಎಸ್ಕಾರ್ಟ್ ಕಾರ್ಖಾನೆ ಮತ್ತು ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದ.ದುಶ್ಚಟಗಳನ್ನು ಮೈಗೂಡಿಸಿಕೊಂಡಿದ್ದ ಕಾರ್ತಿಕ್, ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ಕವಿತಾಳನ್ನು ಪ್ರೀತಿಸಿದ್ದ. ಆಕೆ ತನ್ನ ಸ್ನೇಹಿತೆ ಪ್ರೇಮಲತಾಳನ್ನು ಕಾರ್ತಿಕ್‌ಗೆ ಪರಿಚಯ ಮಾಡಿಕೊಟ್ಟಿದ್ದಳು. ಕವಿತಾಗೆ ಗೊತ್ತಾಗದಂತೆ ಆತ ಪ್ರೇಮಲತಾಳನ್ನೂ ಪ್ರೀತಿಸುತ್ತಿದ್ದ. ವಿವಾಹಿತೆಯಾಗಿದ್ದ ಪ್ರೇಮಲತಾ ಕೂಡ ಆತನನ್ನು ಪ್ರೀತಿಸಲು ಆರಂಭಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.2010ರ ಡಿ.16ರಂದು ಆತ ಪ್ರವಾಸದ ನೆಪದಲ್ಲಿ ಕವಿತಾಳನ್ನು ಬೈಕ್‌ನಲ್ಲಿ ದೇವರಾಯನದುರ್ಗ ಬೆಟ್ಟಕ್ಕೆ ಕರೆದೊಯ್ದಿದ್ದ. ಕಾರ್ತಿಕ್, ಪ್ರೇಮಲತಾಳನ್ನು ಪ್ರೀತಿಸುತ್ತಿದ್ದ ವಿಷಯ ಕವಿತಾಗೆ ಗೊತ್ತಾಗಿದ್ದರಿಂದ ಆಕೆ ಆತನೊಂದಿಗೆ ದೇವರಾಯನದುರ್ಗ ಬೆಟ್ಟದಲ್ಲಿ ಜಗಳವಾಡಿದಳು. ಇದರಿಂದ ಕೋಪಗೊಂಡ ಆತ ಕವಿತಾಳ ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿ, ಅವಳ ಆಭರಣಗಳನ್ನು ದೋಚಿಕೊಂಡು ಯಲಹಂಕಕ್ಕೆ ವಾಪಸ್ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.ಅದೇ ರೀತಿ 2010ರ ಡಿ.25 ರಂದು ಹೇಮಲತಾಗೆ ಸಾಲ ಕೊಡಿಸುವುದಾಗಿ ನಂಬಿಸಿ ಬೈಕ್‌ನಲ್ಲಿ ಶಿವಗಂಗೆ ಬೆಟ್ಟಕ್ಕೆ ಕರೆದೊಯ್ದ ಕಾರ್ತಿಕ್ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ.ಅತ್ತಿಬೆಲೆ: ಮನೆಗಳಲ್ಲಿ ಕಳವು ಮಾಡಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವ ಅತ್ತಿಬೆಲೆ ಪೊಲೀಸರು 40 ಲಕ್ಷ ರೂಪಾಯಿ ಬೆಲೆ ಬಾಳುವ 1.70 ಕೆ.ಜಿ ಚಿನ್ನಾಭರಣ ಹಾಗೂ ಎರಡು ಕೆ.ಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಆಂಧ್ರಪ್ರದೇಶದ ರಮೇಶ, ಲಿಂಗಯ್ಯ, ನಾಗರಾಜು ಮತ್ತು ವೆಂಕಟೇಶ್ವರಲು ಬಂಧಿತರು. ಕೂಲಿ ಕಾರ್ಮಿಕರಂತೆ ಬಡಾವಣೆಗಳಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದ ಅವರು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಒಳ ನುಗ್ಗಿ ಕಳವು ಮಾಡುತ್ತಿದ್ದರು. ಅವರು ಬೆಂಗಳೂರು ನಗರ, ಕೋಲಾರ, ತಮಿಳುನಾಡಿನಲ್ಲಿ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕೇಂದ್ರ ವಲಯ ಐಜಿಪಿ ಕಮಲ್‌ಪಂತ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಚ.ಗುಡಿಮನಿ ಮತ್ತು ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.