ಭಾನುವಾರ, ಜೂನ್ 20, 2021
20 °C

ಕೊಳಕಲಿ ಕರಗುತಿಹ ಚೆಲುವು

ಹ.ಸ.ಬ್ಯಾಕೋಡ Updated:

ಅಕ್ಷರ ಗಾತ್ರ : | |

ಐತಿಹಾಸಿಕ ಬಾದಾಮಿ ಚಾಲುಕ್ಯರ ಲಾಂಛನ ‘ವರಾಹ’ವನ್ನು ಅರಸಿಕೊಂಡು ಇತ್ತೀಚೆಗೆ ಐಹೊಳೆಗೆ ಹೋಗಿದ್ದೆ. ಐಹೊಳೆಯ ಪ್ರಮುಖ ಆಕರ್ಷಣೆಯಾದ ದುರ್ಗಾದೇವಿ ದೇವಾಲಯದ ಮುಂದೆ ನಿಂತಾಗ ಆಗಿನ್ನೂ ಸಮಯ ಐದೂವರೆ ಗಂಟೆ. ಪ್ರವೇಶದ್ವಾರ ಮುಚ್ಚಿಯೇ ಇತ್ತು. ಅಲ್ಲಿಯೇ ಟೀ ಸವಿಯುತ್ತಿದ್ದಂತೆ ತುಸು ದೂರ ದೇವಾಲಯ ಕಾಣಿಸಿತು. ಹತ್ತಿರ ಹೋದರೆ ಒಂದಲ್ಲ, ಎರಡಲ್ಲ, ಏಳೆಂಟು ಐತಿಹಾಸಿಕ ದೇವಾಲಯಗಳ ಗುಚ್ಛವೇ ಅಲ್ಲಿತ್ತು!ಅಷ್ಟೊಂದು ಒಟ್ಟಿಗೆ ಇದ್ದ ಆ ಐತಿಹಾಸಿಕ ದೇವಾಲಯಗಳ ಸುತ್ತ ಕಲ್ಲಿನ ತಡೆಗೋಡೆ ಇತ್ತಾದರೂ ಒಳ ಹೋಗಲು ಯಾವುದೇ ಅಡೆತಡೆ ಇರಲಿಲ್ಲ. ಆದರೆ ಸ್ವಲ್ಪ ದೂರದಲ್ಲಿ ತುಕ್ಕು ಹಿಡಿದು ಮುರಿದು ಬಿದ್ದ ಹಳೆಯ ಕಬ್ಬಿಣದ ಗೇಟೊಂದು ಮಣ್ಣಲ್ಲಿ ಮಣ್ಣಾಗಿ ಬಿದ್ದಿತ್ತು. ಪ್ರವೇಶ ಚೀಟಿಯನ್ನು ಕೊಡುವವರು ಅಲ್ಲಿರಲಿಲ್ಲ. ಸೂರ್ಯ ಉದಯಿಸುತ್ತಿದ್ದಂತೆ ಕಿರಣಗಳು ದೇವಾಲಯಗಳ ಮೇಲೆ ಬೀಳತೊಡಗಿದವು.ಆಗ ಎಲ್ಲ ದೇವಾಲಯಗಳ ಅಂದ ಹೆಚ್ಚಿತು. ಒಂದೆಡೆ ಕಪ್ಪು ನೆರಳು, ಮತ್ತೊಂದೆಡೆ ಹೊಂಬಣ್ಣದಿಂದ ಲೇಪನಗೊಂಡಂತೆ ಕಾಣಿಸತೊಡಗಿದವು.ಕ್ಯಾಮೆರಾ ಹೊರ ತೆಗೆದೆ. ಕೊಂಚ ದೂರ ಹಿಂದಕ್ಕೆ ಹೋಗಿ ಎಲ್ಲಾ ದೇವಾಲಯಗಳನ್ನು ಒಂದೇ ಫ್ರೇಮ್‌ನಲ್ಲಿ ಸೆರೆಹಿಡಿಯಲು ಅಣಿಯಾದೆ.

ಅಷ್ಟರಲ್ಲಿ ನನ್ನ ಪಕ್ಕದಲ್ಲಿಯೇ ಒಬ್ಬ ವ್ಯಕ್ತಿ ದಾಪುಗಾಲಿಡುತ್ತ ದೇವಾಲಯಗಳತ್ತ ಹೋದ. ಹೂವು, ಹಣ್ಣಿನ ಬದಲು ಅವನ ಕೈಯಲ್ಲಿ ನೀರು ತುಂಬಿದ ಪ್ಲಾಸ್ಟಿಕ್‌ ಚೊಂಬು (ತಂಬಿಗೆ) ಇದ್ದದ್ದು ನೋಡಿ ತಬ್ಬಿಬ್ಬಾದೆ.ಇದು ಏನೆಂದು ಯೋಚನೆ ಮಾಡುವಷ್ಟರಲ್ಲಿಯೇ, ಇನ್ನೊಬ್ಬ, ಮತ್ತೊಬ್ಬ... ಹೀಗೆ ‘ಚೊಂಬಿನ ವ್ಯಕ್ತಿಗಳು’ ಹೆಚ್ಚತೊಡಗಿದರು. ಈ ತಂಬಿಗೆ ಭರಾಟೆಯಲ್ಲಿ ಸೂರ್ಯ ರಶ್ಮಿ ಮರೆಯಾಗಿ ನನಗೆ ಒಳ್ಳೆಯ ಫೋಟೊಗಳೂ ಸಿಗಲಿಲ್ಲ.ಏಳು ಗಂಟೆಯಾಗುತ್ತಿದ್ದಂತೆ ತಂಬಿಗೆ ಹಿಡಿದುಕೊಂಡು ಬರುವವರ ಸಂಖ್ಯೆ ಇಳಿಮುಖವಾಯಿತು. ಆ ಬಳಿಕ ನಿಧಾನವಾಗಿ ದೇವಾಲಯಗಳ ಬಳಿಗೆಕಾಲಿಡು­ತ್ತಿ­ದ್ದಂತೆ ಗಬ್ಬು ವಾಸನೆ ಮೂಗಿಗೆ ಬಡಿಯಿತು. ಆವರಣದೊಳಗೆ ಮಲದ ರಾಶಿ, ನಾಯಿ, ಹಂದಿ ಕಣ್ಣಿಗೆ ಬಿದ್ದವು. ಐತಿಹಾಸಿಕ ದೇವಾಲಯ ಸಂಕೀರ್ಣದ ದೃಶ್ಯ ಕಂಡು ಬೇಸರವಾಯಿತು.ಎಲ್ಲ ಕೊಳಕುಮಯ...

ಸೂಕ್ಷ್ಮ ಕಲೆಯ ತುಣುಕುಗಳನ್ನು ಮೈತುಂಬ ಮೆತ್ತಿಕೊಂಡಂತಿರುವ ಇಲ್ಲಿನ ಐತಿಹಾಸಿಕ ದೇವಾಲಯಗಳ ಸಂಕೀರ್ಣಕ್ಕೆ ‘ಏಣಿಯರ ಗುಡಿಗಳು’ ಎಂದು ಹೆಸರು. ಒಟ್ಟು ಎಂಟು ದೇವಾಲಯಗಳಿವೆ. ಇವು ಕಲ್ಯಾಣ ಚಾಲುಕ್ಯರ ಕಾಲದಲ್ಲಿ, ಅಂದರೆ 11 ಮತ್ತು 12ನೇ ಶತಮಾನದ ಅವಧಿಯಲ್ಲಿ ನಿರ್ಮಾಣಗೊಂಡಂತವು.ಪ್ರತಿಯೊಂದು ಗುಡಿಯ ಗೋಡೆ, ಕಂಬಗಳ ಮೇಲಿನ ಶಿಲ್ಪಗಳು  ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಅನೇಕ ಶಿಲ್ಪಗಳು ಅಲ್ಲಿನ ಆವರಣದೊಳಗೆ ಎಲ್ಲೆಂದರಲ್ಲಿ ಮಣ್ಣಲ್ಲಿ ಮಣ್ಣಾಗಿ ಬಿದ್ದುಕೊಂಡಿವೆ.ಸ್ವಚ್ಛಂದವಾಗಿ ಇರಬೇಕಾದ ಶಿಲ್ಪಗಳ ಸುತ್ತಮುತ್ತ ಮಲದ ರಾಶಿ ಇರುವುದಲ್ಲದೆ ಶಿಲ್ಪಗಳ ಮೇಲೆ ಹಂದಿಗಳ ಓಡಾಟ, ಕೆಸರಿನ ಎರಚಾಟವೂ ಇದೆ. ಅನಗತ್ಯವಾದ ಮುಳ್ಳುಕಂಟಿಗಳು ಶಿಲ್ಪಗಳನ್ನು ಮುತ್ತಿಕೊಂಡಿವೆ. ಅಷ್ಟೇ ಅಲ್ಲ, ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅನೇಕ ಬಿಡಿ ಶಿಲ್ಪಗಳು ಒಡೆದು ಹೋಳಾಗಿ ಸ್ಥಳೀಯರ ಮನೆಗಳ ನಿರ್ಮಾಣಕ್ಕೂ ಬಳಕೆಯಾಗಿವೆ.ಇಲ್ಲಿನ ಮೊದಲ ದೇವಾಲಯದ ಗರ್ಭಗುಡಿಯಲ್ಲಿ ಮೂರ್ತಿಯೇ ಇಲ್ಲ. ಇದರ ಗರ್ಭಗೃಹದ ದ್ವಾರಬಂಧ ಮಾತ್ರ ಭದ್ರವಾಗಿದ್ದು, ಅತ್ಯಂತ ಸುಂದರವಾಗಿದೆ. ಲಲಾಟದಲ್ಲಿ ಕಣ್ಮನ ಸೆಳೆಯುವಂತಹ ಗಜಲಕ್ಷ್ಮಿಯ ಶಿಲ್ಪವಿದೆ. ಇನ್ನು ಪೂರ್ವಾಭಿಮುಖವಾದ ಎರಡನೆಯ ದೇವಾಲಯದಲ್ಲಿಯೂ ಮೂರ್ತಿ ಇಲ್ಲ.ಆದರೆ ಮೂರನೆಯ ದೇವಾಲಯದಲ್ಲಿ ಮಾತ್ರ ಕಪ್ಪು ಕಲ್ಲಿನ ಶಿವಲಿಂಗವಿದೆ. ಆ ದೇವಾಲಯದ ಮುಖ್ಯ ದ್ವಾರದಲ್ಲಿ ಇಬ್ಬರು ದ್ವಾರಪಾಲಕರ ಶಿಲ್ಪಗಳಿವೆ. ಈ ದೇವಾಲಯವೂ ಸಂಪೂರ್ಣವಾಗಿ ಜೀರ್ಣಾವಸ್ಥೆಯಲ್ಲಿದೆ. ಇದರ ಪಕ್ಕದಲ್ಲಿ ಉತ್ತರಾಭಿಮುಖವಾಗಿರುವ ನಾಲ್ಕನೆಯ ದೇವಾಲಯದ ಗರ್ಭಗೃಹದಲ್ಲಿ ಮೂರ್ತಿ ಇಲ್ಲ. ಒಂದು ವಿಶೇಷವೆಂದರೆ ಈ ದೇವಾಲಯದ  ಗೋಡೆಗಳ ಕಲಾತ್ಮಕ ಕಲ್ಲುಗಳು ಉದುರಿ ಬೀಳುವ ಹಂತದಲ್ಲಿವೆ.ಐದನೆಯ ದೇವಾಲಯವು ಪಶ್ಚಿಮಾಭಿಮುಖವಾಗಿದೆ. ಈ ದೇವಾಲಯದ ಉತ್ತರದ ಗೋಡೆಯ ಮೇಲೆ ಸುಂದರ ವರಾಹ ಶಿಲ್ಪವಿದೆ. ಆರನೆಯ ದೇವಾಲಯದ ಗರ್ಭಗೃಹದಲ್ಲಿ ಅದ್ಭುತವಾದ ಶಿಲ್ಪಗಳಿವೆ. ಅವುಗಳಲ್ಲಿ ಪ್ರಮುಖವಾದುವೆಂದರೆ ದೇವಾಲಯದ ಲಲಾಟದಲ್ಲಿ ಸಪ್ತಮಾತೃಕೆಯರ ಫಲಕ. ಈ ಫಲಕದಲ್ಲಿ ಸೂಕ್ಷ್ಮವಾದ ಶಿಲ್ಪಕಲೆಯ ತುಣುಕುಗಳನ್ನು ಕಾಣಬಹುದು.ಇಂತಹ ಅದ್ಭುತ ಶಿಲ್ಪಕಲಾಕೃತಿಗಳನ್ನು ಒಳಗೊಂಡಿರುವ ಕಲ್ಯಾಣ ಚಾಲುಕ್ಯರ ದೇವಾಲಯಗಳ ಸಂಕೀರ್ಣ ‘ಏಣಿಯರ ಗುಡಿಗಳು’ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿವೆ.ಕೂಗಳತೆಯ ದೂರದಲ್ಲಿರುವ ದುರ್ಗಾದೇವಿ ದೇವಾಲಯಕ್ಕೆ ಮಾತ್ರ ಭದ್ರತಾ ವ್ಯವಸ್ಥೆ ಇದೆ. ಆದರೆ ಇಲ್ಲಿನ ದೇವಾಲಯಗಳಿಗೆ ಮಾತ್ರ ಯಾವುದೇ ಭದ್ರತೆ ಇಲ್ಲ.ಕಳೆದ ತಿಂಗಳಷ್ಟೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚಾಲುಕ್ಯ ಉತ್ಸವವನ್ನು ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾಡಳಿತ ಇತ್ತ ಕಡೆ ಗಮನ ಹರಿಸುವುದು ಅಗತ್ಯವಿದೆ. ಭದ್ರವಾದ ತಡೆಗೋಡೆ ನಿರ್ಮಾಣ ಆಗಬೇಕಿದೆ. ಜೀರ್ಣಾವಸ್ಥೆಯಲ್ಲಿರುವ ಎಲ್ಲ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ನಡೆಯಬೇಕಿದೆ.ಇತಿಹಾಸದ ವೈಭವವನ್ನು ಸಾರುವ ನಮ್ಮ ನಾಡಿನ ಶಾಸನಗಳು, ಹಲವು ದೇವಾಲಯಗಳು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿ ನಶಿಸಿಹೋಗುತ್ತಿವೆ. ಹೊಯ್ಸಳ, ಚಾಲುಕ್ಯ, ಚೋಳ ರಾಜಮನೆತನದವರ ಕಲಾಕೌಶಲಕ್ಕೆ ಸಾಕ್ಷಿಯಾಗಿರುವ ಕೆಲ ದೇಗುಲಗಳ ಪರಿಚಯ ಇಲ್ಲಿದೆ...

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.