ಗುರುವಾರ , ಜೂನ್ 24, 2021
27 °C

ಕೋರೆಗಾಂವ್‌ ಶೋಷಿತರ ವಿಜಯದ ರೂಪಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋರೆಗಾಂವ್‌ ಶೋಷಿತರ ವಿಜಯದ ರೂಪಕ

ಜನವರಿ 1 ಜಗತ್ತಿಗೆ ಹೊಸ ವರ್ಷದ ಸಂಭ್ರಮದ ದಿನ. ಈ ದಿನ ಶೋಷಿತರ ಪಾಲಿಗೆ ‘ಹೊಸ ಅಧ್ಯಾಯ’ವೊಂದನ್ನು ತೆರೆದ ದಿನವೂ ಹೌದು. ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಗುಂಪೊಂದು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಜಯ ಸಾಧಿಸಿದ ಈ ದಿನ, ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧ. ಈ ಘಟನೆ ಅಂಬೇಡ್ಕರ್‌ ಅವರ ಹೋರಾಟದ ಬದುಕಿನ ಪ್ರೇರಣೆಗಳಲ್ಲಿ ಒಂದೂ ಹೌದು.

ಪ್ರತಿ ವರ್ಷದ ಕ್ಯಾಲೆಂಡರ್‌ನಲ್ಲಿ ಡಿಸೆಂಬರ್‌ ತಿಂಗಳ ಪುಟವನ್ನು ಮಗುಚುವಾಗ ಜಗತ್ತು ‘ಹೊಸ ವರ್ಷ’ದ ನೆಪದಲ್ಲಿ ಸಂಭ್ರಮಿಸುತ್ತದೆ. ಹಳತರ ಪೊರೆಯನ್ನು ಕಳಚಿಕೊಂಡು ಹೊಸ ಬೆಳಕಿಗೆ ಮೈಯೊಡ್ಡುವುದು ಸಡಗರದ ಸಂದರ್ಭವೇ ನಿಜ. ಆದರೆ, ಈ ಸಂಕ್ರಮಣ ಕಾಲದ ಚರಿತ್ರೆಯಲ್ಲಿ ಹಲವು ಸಂಘರ್ಷಗಳೂ ತವಕತಲ್ಲಣಗಳೂ ಹುದುಗಿಕೊಂಡಿರುತ್ತವೆ. ಈ ತಲ್ಲಣಗಳ ನೆನಪು ಕೂಡ ಹಾದಿ ಬದಲಿಸುವ ಸಂದರ್ಭದಲ್ಲಿ ಜೊತೆಯಾಗುವುದು ಅರ್ಥಪೂರ್ಣ.

ಜನವರಿ 1ರ ಹೊಸ ವರ್ಷದ ದಿನ ಆತ್ಮಗೌರವ ಮತ್ತು ದಾಸ್ಯ ವಿಮೋಚನೆಗಾಗಿ ಈ ದೇಶದ ಶೋಷಿತ ವರ್ಗದ ಸೈನಿಕರ ಗುಂಪೊಂದು ಧ್ವನಿಯೆತ್ತಿದ ದಿನವೂ ಹೌದು. ಅಸ್ಪೃಶ್ಯತೆಯ ಆಚರಣೆಯನ್ನು ಮೆರೆಸುತ್ತಿದ್ದ ಪ್ರಭುತ್ವದ ವಿರುದ್ಧ ಸಿಡಿದೆದ್ದ ಗುಂಪೊಂದು, ತಮ್ಮವರ ವಿರುದ್ಧವೇ ಕಾದಾಡಿ ಗೆದ್ದು, ದೇಶದ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದನ್ನು ಬರೆದ ದಿನವಿದು. ಮಹಾರಾಷ್ಟ್ರದ ಭೀಮಾ ನದಿಯ ತೀರದಲ್ಲಿ 1818 ಜನವರಿ 1ರಂದು ನಡೆದ ಈ ಸಂಘರ್ಷ ಚರಿತ್ರೆಯಲ್ಲಿ ‘ಕೋರೆಗಾಂವ್ ಯುದ್ಧ’ ಎಂದೇ ಪ್ರಸಿದ್ಧವಾಗಿದೆ.

ಚರಿತ್ರೆಯಲ್ಲಿ ಹೂತು ಹೋಗಿದ್ದ ‘ಕೋರೆಗಾಂವ್‌ ಕದನ’ದ ಅಪೂರ್ವ ಪ್ರಸಂಗವನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದು ಜಗತ್ತಿಗೆ ತೋರಿಸಿದವರು ಬಿ.ಆರ್. ಅಂಬೇಡ್ಕರ್.­ ಹಾಗಾಗಿಯೇ ಜನವರಿ 1– ಅಸ್ಪೃಶ್ಯತೆಯ ವಿರುದ್ಧ ಈ ದೇಶದ ಶೋಷಿತ ಜನಾಂಗಗಳ ಅಸಹನೆಯ ಕಟ್ಟೆಯೊಡೆದ ದಿನವಾಗಿಯೂ, ಅವರು ತಮ್ಮ ಅಸ್ಮಿತೆಯ ಉಳಿವಿಗಾಗಿ ಹೋರಾಡಿ ಜಯಿಸಿದ ಉತ್ಸವದ ದಿನವೂ ಆಗಿದೆ.

ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಎರಡನೇ ಬಾಜೀರಾಯನ ಆಡಳಿತ ನಡೆಯುತ್ತಿದ್ದ ದಿನಗಳವು. ಅಸ್ಪೃಶ್ಯತೆ ಎನ್ನುವುದು ಮನುಷ್ಯ ಮನುಷ್ಯರ ನಡುವೆ ಕಂದಕ ಉಂಟುಮಾಡಿದ್ದ ಸಂದರ್ಭವದು. ಅಂಬೇಡ್ಕರ್ ದಾಖಲಿಸಿರುವಂತೆ, ‘‘ಮರಾಠರ ರಾಜ್ಯದಲ್ಲಿ, ಅದರಲ್ಲೂ ಪೇಶ್ವೆಗಳ ಆಡಳಿತಾವಧಿಯಲ್ಲಿ ಅಸ್ಪೃಶ್ಯರ ನೆರಳು ಹಿಂದೂವೊಬ್ಬನ ಮೇಲೆ ಬಿದ್ದು, ಆತ ಮೈಲಿಗೆಯಾಗುವುದನ್ನು ತಪ್ಪಿಸಲು, ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿತ್ತು. ಅಸ್ಪೃಶ್ಯರು ತಮ್ಮ ಗುರುತು ಪತ್ತೆಗಾಗಿ ತಮ್ಮ ಕುತ್ತಿಗೆ ಮತ್ತು ಮುಂಗೈಗೆ ಕಪ್ಪು ದಾರವೊಂದನ್ನು ಕಟ್ಟಿಕೊಳ್ಳು­ವುದು ಆ ದಿನಗಳಲ್ಲಿ ಕಡ್ಡಾಯವಾಗಿತ್ತು.

ಪೇಶ್ವೆಗಳ ರಾಜಧಾನಿಯಾದ ಪೂನಾದಲ್ಲಿ ಅಸ್ಪೃಶ್ಯನೊಬ್ಬ  ತಾನು ನಡೆದ ದಾರಿಯಲ್ಲಿ ಹಿಂದೂವೊಬ್ಬ ನಡೆದು ಮೈಲಿಗೆಯಾಗುವುದನ್ನು ತಪ್ಪಿಸುವುದಕ್ಕಾಗಿ, ತನ್ನ ಸೊಂಟಕ್ಕೆ ಹಗ್ಗವೊಂದನ್ನು ಬಿಗಿದು ಅದಕ್ಕೆ ಕಸದ ಪೊರಕೆಯೊಂದನ್ನು ಕಟ್ಟಿಕೊಂಡು, ತಾನು ನಡೆದ ದಾರಿಯನ್ನು  ಗುಡಿಸಿಕೊಂಡು ಬರಬೇಕಾಗಿತ್ತು. ಅದೇ ರೀತಿ ತಾನು ಉಗಿದ ಉಗುಳನ್ನು ಹಿಂದೂಗಳು ತುಳಿದು ಮೈಲಿಗೆಯಾಗಬಾರದೆಂಬ ಕಾರಣಕ್ಕಾಗಿ, ತನ್ನ ಕೊರಳಿಗೆ ಮಣ್ಣಿನ ಮಡಕೆಯೊಂದನ್ನು ನೇತು ಹಾಕಿಕೊಂಡು ಅದಲ್ಲೇ ಉಗಿದುಕೊಳ್ಳಬೇಕಾಗಿತ್ತು’’.

ಅಸ್ಪೃಶ್ಯತೆ ಮತ್ತು ಪೇಶ್ವೆಗಳ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಹೋರಾಡುವ ಅವಕಾಶ ‘ಕೋರೆಂಗಾವ್ ಯುದ್ಧ’ದ ರೂಪದಲ್ಲಿ ದಲಿತರಿಗೆ ಒದಗಿಬಂದಿತು. ಇದು ಅಸ್ಪೃಶ್ಯರು ತಮ್ಮ ಮೇಲ್ಜಾತಿ ಪ್ರಭುಗಳ ವಿರುದ್ಧ ನಡೆಸಿದ ನೇರ ಕಾದಾಟವಲ್ಲ. ಯಾವ ಜಾತಿ/ವರ್ಣ ವ್ಯವಸ್ಥೆಯಲ್ಲಿ ಶಸ್ತ್ರ ಹಿಡಿಯುವುದು ಇಂತಹ ಜಾತಿ ಅಥವಾ ವರ್ಣಕ್ಕೆ ಮಾತ್ರ ಮೀಸಲಾಗಿತ್ತೊ, ಅಂತಹ ವ್ಯವಸ್ಥೆಯಲ್ಲಿ ಬ್ರಿಟಿಷರ ಸೇನೆಯಲ್ಲಿದ್ದುಕೊಂಡು ಪೇಶ್ವೆಗಳ ವಿರುದ್ಧ ನಡೆದ ಈ ಹೋರಾಟ– ಸಾವಿರಾರು ವರ್ಷಗಳ ಮಡುಗಟ್ಟಿದ ಆಕ್ರೋಶದ ವ್ಯಕ್ತರೂಪವಾಗಿತ್ತು. ಅಸ್ಪೃಶ್ಯರ ಈ ಐತಿಹಾಸಿಕ ಯುದ್ಧವನ್ನು ಅಂಬೇಡ್ಕರ್ ಚಿತ್ರಿಸಿರುವುದು ಹೀಗೆ: ‘‘ಪೇಶ್ವೆಗಳ ಮೇಲೆ ದಾಳಿ  ನಡೆಸಲು ಬ್ರಿಟಿಷ್ ಕ್ಯಾಫ್ಟನ್ ಎಫ್.ಎಫ್. ಸ್ಟಾಂಟನ್ ನೇತೃತ್ವದಲ್ಲಿ ಬಾಂಬೆ ರೆಜಿಮೆಂಟ್‌ನ 500 ಮಹರ್ ಸೈನಿಕರು, ಪೂನಾದ 250 ಅಶ್ವದಳ ಹಾಗೂ ಮದ್ರಾಸ್‌ನ 24 ಗನ್‌ಮೆನ್‌ಗಳು ಡಿಸೆಂಬರ್ 31ರ ರಾತ್ರಿ ಸಿರೂರ್‌ನಿಂದ ಹೊರಡುತ್ತಾರೆ. ಸಿದ್ಧನಾಯಕ ಎಂಬಾತ ಮಹರ್ ಪಡೆಯ ನಾಯಕನಾಗಿರುತ್ತಾನೆ. ಸತತ 27 ಕಿಲೋಮೀಟರ್ ನಡೆದು ಮಾರನೇ ದಿನ ಅಂದರೆ, ಜನವರಿ 1ರಂದು ಭೀಮಾ ನದಿ ತೀರದ ಕೋರೆಗಾಂವ್ ಎಂಬ ಸ್ಥಳವನ್ನು ಈ ಮಹರ್ ಪಡೆ ತಲುಪುತ್ತದೆ. ಇದೇ ವೇಳೆ 20 ಸಾವಿರ ಅಶ್ವದಳ, 8 ಸಾವಿರ ಕಾಲ್ದಳವಿದ್ದ ಪೇಶ್ವೆಯ ಸೈನ್ಯ ಮೂರೂ ದಿಕ್ಕಿನಿಂದ ಮಹರ್ ಸೈನಿಕರಿಗೆ ಎದುರಾಗುತ್ತದೆ. ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಸತತ 12 ಗಂಟೆ ನಡೆದ ಘೋರ ಯುದ್ಧದಲ್ಲಿ, ಹಸಿದ ಹೆಬ್ಬುಲಿಗಳಂತಿದ್ದ ಮಹರ್ ಸೈನಿಕರು ಪೇಶ್ವೆಯ ಸೈನ್ಯವನ್ನು ಧೂಳೀಪಟ ಮಾಡುತ್ತಾರೆ. ಬೃಹತ್ ಅಶ್ವಬಲ, ರಾಕೆಟ್ ದಳ ಇದ್ದರೂ ಪೇಶ್ವೆ ಸೈನ್ಯ ಮಹರ್ ಸೈನಿಕರ ವೀರಾವೇಷದ ಮುಂದೆ ನಿಲ್ಲಲಾಗದೆ, ಸ್ಥಳದಿಂದ ಕಾಲ್ಕೀಳುತ್ತದೆ. ಅಂತಿಮವಾಗಿ ಜಯ ಮಹರ್ ಸೈನಿಕರಾಗುತ್ತದೆ’’.

ಶಿಸ್ತುಬದ್ಧ ಶೌರ್ಯ ಪ್ರದರ್ಶಿಸಿದ ಮಹರ್ ಸೈನಿಕರು, ಪೇಶ್ವೆಗಳ ವಿರುದ್ಧ ಐತಿಹಾಸಿಕ ಜಯ ದಾಖಲಿಸುತ್ತಾರೆ. ಈ ಯುದ್ಧದಲ್ಲಿ ಹೋರಾಡಿ ಮಡಿದ 22 ಮಹರ್ ಸೈನಿಕರ ಸವಿನೆನಪಿಗಾಗಿ ಬ್ರಿಟಿಷರು, 1821 ಮಾರ್ಚ್ 21ರಂದು ಕೋರೆಗಾಂವ್‌ನಲ್ಲಿ 65 ಅಡಿ ಎತ್ತರದ ಶಿಲಾ ಸ್ಮಾರಕವೊಂದನ್ನು ನಿರ್ಮಿಸಿದ್ದಾರೆ. ಅಂದಿನಿಂದ ಪ್ರತಿ ವರ್ಷ ಜನವರಿ 1ರ ದಿನವನ್ನು ‘ಕೋರೆಗಾಂವ್ ವಿಜಯೋತ್ಸವ’ ದಿನವಾಗಿ ಆಚರಿಸಲಾಗುತ್ತಿದೆ.

ಅಂಬೇಡ್ಕರ್‌ ತಾವು ಬದುಕಿರುವವರೆಗೂ ಪ್ರತಿ ವರ್ಷ ಜನವರಿ 1ರಂದು ಕೋರೆಗಾಂವ್ ಸ್ಮಾರಕಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದರು. ಶೋಷಿತರ ಬದುಕಿನ ಆಶಾಕಿರಣವಾಗಿದ್ದ ಕೋರೆಗಾಂವ್ ಘಟನೆಯು, ಅಂಬೇಡ್ಕರ್‌ ಅವರ ಹೋರಾಟದ ಬದುಕಿನ ಮೇಲೆ ಅಗಾಧ ಪ್ರಭಾವ ಬೀರಿತ್ತು. ‘ಇತಿಹಾಸ ಮರೆತವರು, ಇತಿಹಾಸ ಸೃಷ್ಟಿಸಲಾರರು’ ಎಂಬ ಸಂದೇಶದ ಮೂಲಕ, ಈ ದೇಶದ ಶೋಷಿತರನ್ನು ಎಚ್ಚರಿಸಲು ಕೂಡ ಈ ಘಟನೆ ಒಂದು ನೆಪವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು