ಸೋಮವಾರ, ಏಪ್ರಿಲ್ 19, 2021
30 °C

ಕೌಟುಂಬಿಕ ಕಲಹ: ಮೂರು ಮಂದಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹೆಣ್ಣೂರಿನ ಸಾರಾಯಿಪಾಳ್ಯದಲ್ಲಿ ಗುರುವಾರ ನಡೆದಿದೆ.ಬಾರ್‌ಬೆಂಡಿಂಗ್ ಕೆಲಸ ಮಾಡುತ್ತಿದ್ದ ಏಳುಮಲೈ (45) ನೇಣು ಬಿಗಿದುಕೊಂಡು ಮತ್ತು ಅವರ ಪತ್ನಿ ಮುನಿಯಮ್ಮ (35) ಮತ್ತು ಮಗಳು ರೇಖಾ (17) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪಕ್ಕದ ಮನೆಯವರು ರಾತ್ರಿ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೊದಲು ಏಳುಮಲೈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅವರ ಪತ್ನಿ ಮತ್ತು ಮಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕೌಟುಂಬಿಕ ಕಲಹ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಗೊತ್ತಾಗಿಲ್ಲ. ಕುಟುಂಬದ ಮೂರೂ ಮಂದಿ ಮೃತಪಟ್ಟಿರುವುದರಿಂದ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುವವರು ಯಾರೂ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಏಳುಮಲೈ ಅವರ ಮೊದಲು ಮಗಳು ಯುವಕನೊಬ್ಬನನ್ನು ಪ್ರೀತಿಸಿ ಆತನ ಜತೆ ವಿವಾಹವಾಗಿದ್ದಳು. ಈ ಘಟನೆಯ ನಂತರ ದಂಪತಿ ಮಧ್ಯೆ ವಿರಸ ಉಂಟಾಗಿತ್ತು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಎನ್ನಲಾಗಿದೆ.ಹಣ ದೋಚಿದ ದುಷ್ಕರ್ಮಿಗಳು

ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಹೋಗುತ್ತಿದ್ದ ಮೂರೂವರೆ ಲಕ್ಷ ರೂಪಾಯಿ ಹಣವನ್ನು ದುಷ್ಕರ್ಮಿಗಳು ದೋಚಿದ ಘಟನೆ ಜಯನಗರ ಮೂರನೇ ಬ್ಲಾಕ್‌ನ 36ನೇ ತಿರುವಿನಲ್ಲಿ ಗುರುವಾರ ನಡೆದಿದೆ.ಬಾಲಾಜಿ ಡೆವಲಪರ್ಸ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಾ ಎಂಬಾತ ಐಸಿಐಸಿಐ ಬ್ಯಾಂಕ್ ವೃತ್ತದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್‌ನ ಶಾಖೆಯಿಂದ ಹಣ ಡ್ರಾ ಮಾಡಿಕೊಂಡಿದ್ದ. ಹಣವನ್ನು ಐವತ್ತು ಪೈಸೆಯ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟ ಆತ ಅದನ್ನು ಸೈಕಲ್‌ಗೆ ನೇತು ಹಾಕಿಕೊಂಡು ಕಚೇರಿಗೆ ಮರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಜಾಲಹಳ್ಳಿ:  ಖಾಸಗಿ ಕಂಪೆನಿ ಉದ್ಯೋಗಿ ಜಾನ್ ಸ್ಟೀಫನ್ ಎಂಬುವರ ಮೇಲೆ ಹಲ್ಲೆ ನಡೆಸಿದ ದರೋಡೆಕೋರರು ಸುಮಾರು ಅರವತ್ತು ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಮತ್ತು ಮೊಬೈಲ್ ಫೋನ್ ದೋಚಿದ್ದಾರೆ. ಸ್ಟೀಫನ್ ಅವರು ಕೆಲಸ ಮುಗಿಸಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆಗೆ ಹೋಗುತ್ತಿದ್ದ ವೇಳೆ ಬಿಎಎಲ್ ಮಾರುಕಟ್ಟೆ ಸಮೀಪ ಅವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಸರ ಮತ್ತು ಮೊಬೈಲ್ ಫೋನ್ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸರ ದೋಚಿ ಪರಾರಿ

ನಡೆದುಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ದೋಚಿದ ಘಟನೆ ಕಾಡುಗೋಡಿಯ ಸಾದರಮಂಗಲದಲ್ಲಿ ಗುರುವಾರ ಸಂಜೆ ನಡೆದಿದೆ. ಸರ ಕಳೆದುಕೊಂಡ ರಾಮಕ್ಕ ಎಂಬುವರು ಈ ಬಗ್ಗೆ ದೂರು ನೀಡಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸರ ಕಿತ್ತುಕೊಂಡು ಪರಾರಿಯಾದರು. ಸರದ ಬೆಲೆ ಎಂಬತ್ತು ಸಾವಿರ ರೂಪಾಯಿ ಎಂದು ಅವರು ತಿಳಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.