ಶನಿವಾರ, ಏಪ್ರಿಲ್ 17, 2021
27 °C

ಕ್ರಿಕೆಟ್: ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಯುವರಾಜ್ ಸಿಂಗ್ ಮತ್ತು ಹರಭಜನ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಕ್ಯಾನ್ಸರ್‌ನಿಂದ ಬಳಲಿದ್ದ ಯುವರಾಜ್ ಸಂಪೂರ್ಣವಾಗಿ ಚೇತರಿಸಿಕೊಂಡು ಇತ್ತೀಚೆಗಷ್ಟೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. ಟೆಸ್ಟ್ ಪಂದ್ಯವನ್ನು ಆಡುವಷ್ಟು ದೈಹಿಕ ಸಾಮರ್ಥ್ಯವನ್ನು ಮರಳಿ ಪಡೆದಿರುವ ಕಾರಣ ಆಯ್ಕೆ ಸಮಿತಿ ಅವರನ್ನು ತಂಡಕ್ಕೆ ಪರಿಗಣಿಸಿದೆ. ಫಾರ್ಮ್ ಕಳೆದುಕೊಂಡಿರುವ ಆಫ್‌ಸ್ಪಿನ್ನರ್ ಹರಭಜನ್‌ಗೂ ಆಯ್ಕೆಗಾರರು ಅವಕಾಶ ನೀಡಿದ್ದಾರೆ.ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಸೋಮವಾರ ಪ್ರಕಟಿಸಿದ 15 ಸದಸ್ಯರ ತಂಡದಲ್ಲಿ ಯಾವುದೇ ದೊಡ್ಡ ಅಚ್ಚರಿ ಇಲ್ಲ. ಯುವರಾಜ್‌ಗೆ ಸ್ಥಾನ ನೀಡಲು ಸುರೇಶ್ ರೈನಾ ಅವರನ್ನು ಕೈಬಿಡಲಾಗಿದೆ. ಹರಭಜನ್ ಸಿಂಗ್ ಅವರು ಪಿಯೂಷ್ ಚಾವ್ಲಾ ಬದಲು ಅವಕಾಶ ಗಿಟ್ಟಿಸಿಕೊಂಡರು. ಗಾಯದಿಂದ ಬಳಲುತ್ತಿರುವ ಚಾವ್ಲಾ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ.ಪಂಜಾಬ್‌ನ ಈ ಇಬ್ಬರು ಆಟಗಾರರು ಒಂದು ವರ್ಷದ ಬಿಡುವಿನ ಬಳಿಕ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಮೇಲೆ ಆಯ್ಕೆಗಾರರು ವಿಶ್ವಾಸವಿರಿಸಿಕೊಂಡಿದ್ದಾರೆ. ಇವರಿಬ್ಬರೂ ಕಳೆದ ಕೆಲ ಸಮಯಗಳಿಂದ ಫಾರ್ಮ್ ಕಂಡುಕೊಳ್ಳಲು ಪರದಾಟ ನಡೆಸುತ್ತಿದ್ದಾರೆ. ಹೆಚ್ಚುವರಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಮಿಳುನಾಡಿನ ಮುರಳಿ ವಿಜಯ್‌ಗೆ ಸ್ಥಾನ ದೊರೆತಿದೆ.ನಾಯಕ ಮಹೇಂದ್ರ ಸಿಂಗ್ ದೋನಿ ಅಲ್ಲದೆ ಒಂಬತ್ತು ಬ್ಯಾಟ್ಸ್‌ಮನ್‌ಗಳು, ಮೂವರು ವೇಗಿಗಳು ಹಾಗೂ ಮೂವರು ಸ್ಪಿನ್ನರ್‌ಗಳು ತಂಡದಲ್ಲಿದ್ದಾರೆ. ರಣಜಿ ಪಂದ್ಯದ ವೇಳೆ ಗಾಯದ ಸಮಸ್ಯೆ ಎದುರಿಸಿದ್ದ ಜಹೀರ್ ಖಾನ್ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಟೆಸ್ಟ್ ಸರಣಿಯ ವೇಳೆಗೆ ಜಹೀರ್ ದೈಹಿಕ ಸಾಮರ್ಥ್ಯ ಮರಳಿ ಪಡೆಯುವರು ಎಂದು ಫಿಸಿಯೊ ಹೇಳಿರುವ ಕಾರಣ ಅವರಿಗೆ ಸ್ಥಾನ ನೀಡಲಾಗಿದೆ.ಸರಣಿಯ ಮೊದಲ ಪಂದ್ಯ ಅಹಮದಾಬಾದ್‌ನಲ್ಲಿ ನವೆಂಬರ್ 15 ರಿಂದ 19ರ ವರೆಗೆ ನಡೆಯಲಿದ್ದರೆ, ಎರಡನೇ ಪಂದ್ಯ ಮುಂಬೈನಲ್ಲಿ (ನ. 23 ರಿಂದ 27) ನಡೆಯಲಿದೆ.ತಂಡ ಇಂತಿದೆ:

ಮಹೇಂದ್ರ ಸಿಂಗ್ ದೋನಿ (ನಾಯಕ),

ವೀರೇಂದ್ರ ಸೆಹ್ವಾಗ್,

ಗೌತಮ್ ಗಂಭೀರ್,

ವಿರಾಟ್ ಕೊಹ್ಲಿ,

 ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್,

ಚೇತೇಶ್ವರ ಪೂಜಾರ,

ಆರ್. ಅಶ್ವಿನ್,

 ಉಮೇಶ್ ಯಾದವ್, ಪ್ರಗ್ಯಾನ್ ಓಜಾ,

 ಅಜಿಂಕ್ಯ ರಹಾನೆ,

ಹರಭಜನ್ ಸಿಂಗ್,

 ಇಶಾಂತ್ ಶರ್ಮ,

ಮುರಳಿ ವಿಜಯ್,

 ಜಹೀರ್ ಖಾನ್ 
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.