ಶುಕ್ರವಾರ, ಜೂಲೈ 10, 2020
21 °C

ಕ್ರಿಕೆಟ್: ಭಾರತವನ್ನು ಕಾಡಿದ ವಿಂಡೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಭಾರತವನ್ನು ಕಾಡಿದ ವಿಂಡೀಸ್

ಕಿಂಗ್‌ಸ್ಟನ್, ಜಮೈಕ: ಭಾರಿ ಮೊತ್ತ ಗಳಿಸುವ ಉತ್ಸಾಹದಲ್ಲಿದ್ದ ಭಾರತವು 251 ರನ್‌ಗೆ ಮುಗ್ಗರಿಸಿಬಿದ್ದ ರೀತಿ ಆಘಾತಕಾರಿ. ಇದಕ್ಕೆ ಕಾರಣ ಆಂಡ್ರೆ ರಸೆಲ್ (8.3-0-35-4) ಮೊನಚಿನ ಬೌಲಿಂಗ್.   ವಿರಾಟ್ ಕೊಹ್ಲಿ (94; 104 ಎ., 10 ಬೌಂಡರಿ) ಮತ್ತು ರೋಹಿತ್ ಶರ್ಮ (57; 72 ಎ., 2 ಬೌಂಡರಿ, 1 ಸಿಕ್ಸರ್) ಅವರ ಉತ್ತಮ ಆಟದ ನೆರವಿದ್ದರೂ, ಭಾರತವು ವಿಂಡೀಸ್‌ಗೆ ಸವಾಲಾಗುವಂಥ ಮೊತ್ತವನ್ನು ಪೇರಿಸಲು ಆಗಲಿಲ್ಲ. ಆದ್ದರಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡದವರು ಐದನೇ ಹಾಗೂ ಅಂತಿಮ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ಪಡೆಯನ್ನು ಕಾಡುವ ಮಟ್ಟಕ್ಕೆ ಬೆಳೆದು ನಿಂತರು.ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ ವಿಂಡೀಸ್ 25 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ, ಗೆಲುವಿನ ಕನಸು ಕಂಡಿತ್ತು.ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸುರೇಶ್ ರೈನಾ ನೇತೃತ್ವದ ತಂಡ 47.3 ಓವರ್‌ಗಳಲ್ಲಿಯೇ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಚಿಂತೆಯ ಸುಳಿಯಲ್ಲಿ ಸಿಲುಕಿತು. ಆರಂಭಿಕ ಕುಸಿತ ಕಂಡ ಭಾರತ ತಂಡಕ್ಕೆ ಕೊಹ್ಲಿ ನೆರವಾದರು, ಶರ್ಮ ಕೂಡ ತಮ್ಮ ಮೇಲಿನ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು. ಆದರೆ ಆನಂತರ ವಿಕೆಟ್‌ಗಳು ಸಾಲಾಸಾಲಾಗಿ ಪತನ!ಭಾರತ 79 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ಕೊಹ್ಲಿ ಮತ್ತು ರೋಹಿತ್ ಅವರು ನಾಲ್ಕನೇ ವಿಕೆಟ್‌ಗೆ 110 ರನ್ ಸೇರಿಸಿ, ಭಾರತವನ್ನು ಉತ್ತಮ ಮೊತ್ತದತ್ತ ನಡೆಸುವ ಆಸೆ ಮೂಡಿಸಿದರು. ಆದರೆ ಈ ಜೊತೆಯಾಟ ಮುರಿದು ಬಿದ್ದಾಗ ಭಾರತದ ಇನಿಂಗ್ಸ್ ಸ್ವರೂಪವೇ ಬದಲಾಯಿತು. ವಿಕೆಟ್ ಕಾಯ್ದುಕೊಳ್ಳುವುದು ಸುರೇಶ್ ರೈನಾ ಬಳಗಕ್ಕೆ ಕಷ್ಟವಾಯಿತು. ನಾಯಕ ರೈನಾ ಅವರಂತೂ ಸೊನ್ನೆ ಸುತ್ತಿದರು.ಟಾಸ್ ಗೆದ್ದ ವಿಂಡೀಸ್ ನಾಯಕ ಡೆರೆನ್ ಸಮಿ ಅವರು ಭಾರತ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಕಳುಹಿಸಿದರು. ಪ್ರವಾಸಿ ತಂಡದ ಆರಂಭವನ್ನು ನೋಡಿದಾಗ ಸಮಿ ನಿರ್ಧಾರ ಸರಿ ಎಂದು ಕಾಣಿಸಿದ್ದು ನಿಜ. ಏಕೆಂದರೆ ತಂಡದ ಮೊತ್ತ 21 ಆಗಿದ್ದಾಗ ಆರಂಭಿಕ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದ್ದರು.ಈ ಹಂತದಲ್ಲಿ ಜೊತೆಗೂಡಿದ ಕೊಹ್ಲಿ ಹಾಗೂ ಮನೋಜ್ ತಿವಾರಿ ಮೂರನೇ ವಿಕೆಟ್‌ಗೆ 57 ರನ್‌ಗಳನ್ನು ಸೇರಿಸಿದರು. ಇದರಿಂದ ವಿಂಡೀಸ್ ಬೌಲರ್‌ಗಳಿಗೆ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸುವುದು ಕಷ್ಟವೆನಿಸಿತು. ತಿವಾರಿ ಉತ್ತಮ ಆರಂಭ (22) ಪಡೆದರೂ ದೊಡ್ಡ ಮೊತ್ತ ಪೇರಿಸಲು ವಿಫಲರಾದರು. 22 ಎಸೆತಗಳನ್ನು ಎದುರಿಸಿದ ಅವರು ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಗಳಿಸಿದರು. ಯೂಸುಫ್ ಪಠಾಣ್ (30; 29 ಎ., 2 ಬೌಂಡರಿ, 1 ಸಿಕ್ಸರ್) ಅಬ್ಬರಿಸುವ ವಿಶ್ವಾಸದಿಂದ ಕ್ರೀಸ್‌ಗೆ ಬಂದರೂ, ವಿಂಡೀಸ್ ಬೌಲರ್‌ಗಳನ್ನು ಸಹಿಸಿಕೊಳ್ಳಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.