ಭಾನುವಾರ, ಏಪ್ರಿಲ್ 18, 2021
29 °C

ಕ್ರಿಕೆಟ್: ಸೇಡಿನ ಮನಸ್ಸು ಬಯಸುತ್ತಿದೆ ಜಯದ ಸಿಂಚನ

ಪ್ರಜಾವಾಣಿ ವಾರ್ತೆ/ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಗೆಲುವಿನ ಖುಷಿ ಬೇಗ ಮರೆಯಾಗಬಹುದು. ಆದರೆ ಸೋಲಿನ ಗಾಯ ಅಷ್ಟು ಬೇಗ ಮಾಯುವುದಿಲ್ಲ. ಆ ಹೀನಾಯ ಸೋಲಿನ ನೋವು ಆಟಗಾರರ ಎದೆಯಲ್ಲಿ ಇನ್ನೂ ಕುದಿಯುತ್ತಿದೆ. ಆ ಕಹಿ ನೆನಪುಗಳು ಅಲೆ ಅಲೆಯಾಗಿ ಬಂದು ಮನದ ದಡಕ್ಕೆ ಬಡಿಯುತ್ತಿವೆ.ವರ್ಷದ ಹಿಂದೆ ಇಂಗ್ಲೆಂಡ್ ಪ್ರವಾಸದ ವೇಳೆ ನಡೆದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ 0-4ರಲ್ಲಿ ಭಾರತ ತಂಡಕ್ಕೆ ಎದುರಾಗಿದ್ದ ಸೋಲೇ ಇದಕ್ಕೆ ಕಾರಣ. ಆ ಸೋಲಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಛಲ ಆತಿಥೇಯ ಆಟಗಾರರ ಮನದೊಳಗೆ ಈಗ ಮನೆ ಮಾಡಿದೆ. ಆ ನೋವು, ಆ ಹತಾಶೆಗಿರುವ ಏಕೈಕ ಮದ್ದು ಗೆಲುವು. ಆ ಸವಾಲಿಗೆ ಗುರುವಾರ ಮುಹೂರ್ತ.ಭಾರತ ಹಾಗೂ ಆಂಗ್ಲರ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಗುರುವಾರ ಶುರುವಾಗಲಿದೆ. ಮೊಟೇರಾ ಕ್ರೀಡಾಂಗಣದಲ್ಲಿ ಬುಧವಾರ ಅಭ್ಯಾಸ ನಡೆಸುತ್ತಿದ್ದ ದೋನಿ ಬಳಗದಲ್ಲಿ ಇದ್ದದ್ದು ಕೂಡ ಅಂತಹದ್ದೇ ಕೆಚ್ಚು. ಅದನ್ನು ಆಟಗಾರರು ಬಹಿರಂಗವಾಗಿ ಹೇಳಿಕೊಳ್ಳಲಾರರು. ಆದರೆ ಸೇಡಿನ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಕಷ್ಟವಲ್ಲ. `ನೀವು ಹೇಗೆ ಬೇಕಾದರೂ ಯೋಚಿಸಬಹುದು~ ಎಂದ ನಾಯಕ ದೋನಿ ಅವರ ಪ್ರತಿಕ್ರಿಯೆಯೇ ಅದಕ್ಕೆ ಸಾಕ್ಷಿ.ಮಳೆಹನಿಗಾಗಿ ಕಾದು ನಿಂತಿರುವ ಬರಡು ನೆಲದಂತೆ ಯಶಸ್ಸಿನ ಸಿಂಚನಕ್ಕಾಗಿ ಭಾರತದ ಆಟಗಾರರ ಮನಸ್ಸು ಈಗ ಹಾತೊರೆಯುತ್ತಿರುವುದು ನಿಜ. ಆದರೆ ಇಂಗ್ಲೆಂಡ್ ಕೂಡ ಆ ಸವಾಲನ್ನು ಎದುರಿಸಲು ಸಜ್ಜಾಗಿ ನಿಂತಿದೆ.

`ಸ್ಪಿನ್ನರ್ ಸ್ನೇಹಿ~ ಪಿಚ್ ಆಗಿರುವುದರಿಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಸಂಕಟ ತಪ್ಪಿದ್ದಲ್ಲ. ಅದು ಪಿಚ್ ಕ್ಯೂರೇಟರ್ ಧೀರಜ್ ಪ್ರಸನ್ನ ಅವರ ನಗುವಿನಲ್ಲೇ ಸ್ಪಷ್ಟವಾಗಿತ್ತು. ಏಕೆಂದರೆ ಸ್ಪಿನ್ ಎದುರು ಆಂಗ್ಲರ ದೌರ್ಬಲ್ಯ ಎಲ್ಲರಿಗೂ ಗೊತ್ತಿರುವಂಥದ್ದೆ.ಅದೃಷ್ಟದ ಅಂಗಳ: ಪ್ರಶಾಂತವಾಗಿ ಹರಿಯುತ್ತಿರುವ ಸಬರಮತಿಯ ದಡದಲ್ಲಿರುವ ಈ ಕ್ರೀಡಾಂಗಣ ಭಾರತದ ಕ್ರಿಕೆಟಿಗರ ಅದೃಷ್ಟದ ತಾಣ ಕೂಡ. ಕ್ರಿಕೆಟ್ ದಂತಕತೆ ಸುನಿಲ್ ಗಾವಸ್ಕರ್ ಟೆಸ್ಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದು ಇಲ್ಲಿಯೇ. `ಹರಿಯಾಣ ಹರಿಕೇನ್~ ಕಪಿಲ್ ದೇವ್ 432ನೇ ವಿಕೆಟ್ ಪಡೆದು ರಿಚರ್ಡ್ ಹ್ಯಾಡ್ಲಿ ದಾಖಲೆ ಮುರಿದಿದ್ದು ಕೂಡ ಈ ಅಂಗಳದಲ್ಲಿ. ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿದ 20ನೇ ವರ್ಷದ ಸಂಭ್ರಮ ಆಚರಿಸಿದ್ದು ಕೂಡ ಇಲ್ಲಿಯೇ.ಈ ಪಂದ್ಯದಲ್ಲಿ ಗೆಲುವು ಒಲಿಸಿಕೊಳ್ಳುವ ಮೂಲಕ ದೀಪಾವಳಿ ಹಾಗೂ ಹೊಸ ವರ್ಷದ ಖುಷಿಯಲ್ಲಿರುವ ಸ್ಥಳೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಪ್ರೀತಿಯ ಸೌಧ ಕಟ್ಟಲು ಆತಿಥೇಯರು ಸಜ್ಜಾಗುತ್ತ್ದ್ದಿದಾರೆ.ಸ್ಪಿನ್ನರ್‌ಗಳೇ ಬಲ: ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಭಾರತ ತಂಡದ ಬೆನ್ನೆಲುಬು. ಏಕೆಂದರೆ ವೇಗಿಗಳ ಆಟ ಇಲ್ಲಿ ನಡೆಯುವುದು ಕಷ್ಟ. ಬ್ಯಾಟ್ಸ್‌ಮನ್‌ಗಳು ಕೂಡ ಹೇಳಿಕೊಳ್ಳುವಂಥ ಫಾರ್ಮ್‌ನಲ್ಲಿಲ್ಲ. ಸಚಿನ್, ಸೆಹ್ವಾಗ್ ಹಾಗೂ ಗಂಭೀರ್ ಟೆಸ್ಟ್‌ನಲ್ಲಿ ಶತಕ ಗಳಿಸಿ ವರ್ಷವಾಗಿದೆ. ಜಹೀರ್ ಖಾನ್ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್ ಪಡೆದು ಎರಡು ವರ್ಷವಾಯಿತು.ಹಾಗಾಗಿ ಯುವ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಅವರತ್ತ ಎಲ್ಲರ ಚಿತ್ತ ಹರಿದಿದೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಮೇಲೆ ಯುವರಾಜ್ ಸಿಂಗ್‌ಗಿದು ಮೊದಲ ಟೆಸ್ಟ್.ಬಹುದಿನಗಳ ಆ ಕನಸು: ಭಾರತದ ನೆಲದಲ್ಲಿ ಇಂಗ್ಲೆಂಡ್ ತಂಡದವರು ಟೆಸ್ಟ್ ಸರಣಿ ಗೆದ್ದು 27 ವರ್ಷಗಳಾಗಿವೆ. ಅಂತಹ ಸಾಧನೆಯನ್ನು ಪುನರಾವರ್ತಿಸುವ ಕನಸನ್ನು ಹೊತ್ತು ಇಲ್ಲಿಗೆ ಆಗಮಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ತಂಡಗಳು ವಿರಳ. ಹಿಂದಿನ 13 ವರ್ಷಗಳಲ್ಲಿ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿದ್ದು ಆಸ್ಟ್ರೇಲಿಯಾ ಮಾತ್ರ. ಹಾಗಾಗಿ ನೂತನ ನಾಯಕ ಅಲಸ್ಟೇರ್ ಕುಕ್ ಮುಂದೆ ದೊಡ್ಡ ಸವಾಲಿದೆ.ಇಂಗ್ಲೆಂಡ್ ತಂಡದವರೂ ಈ ಪ್ರವಾಸಕ್ಕೆ ಮೂವರು ಸ್ಪಿನ್ನರ್‌ಗಳನ್ನು ಕರೆ ತಂದಿದ್ದಾರೆ. ಗಾಯಗೊಂಡಿರುವ ವೇಗಿ ಸ್ಟೀವನ್ ಫಿನ್ ಮೊದಲ ಪಂದ್ಯಕ್ಕೆ ಲಭ್ಯರಾಗುತ್ತಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ನಿಕ್ ಕಾಂಪ್ಟನ್ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ.ಆದರೆ ಸವಾಲಿನ ವೇದಿಕೆಯ ತೆರೆ ಸರಿದ ಮೇಲಷ್ಟೇ ಉಭಯ ತಂಡಗಳ ಶಕ್ತಿಯ ಅನಾವರಣವಾಗಲಿದೆ. ಸೇಡು ತೀರಿಸಿಕೊಳ್ಳುವ ಭಾರತದವರ ಆಸೆ ಈಡೇರುವುದೇ ಅಥವಾ 27 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಸರಣಿ ಗೆಲ್ಲುವ ಇಂಗ್ಲೆಂಡ್ ತಂಡದವರ ಕನಸು ನನಸಾಗುವುದೇ ಎಂಬುದು ಈಗ ಉಳಿದಿರುವ ಕುತೂಹಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.