ಸೋಮವಾರ, ಜನವರಿ 20, 2020
19 °C

ಕ್ರಿಸ್ಮಸ್: ಸಂಗೀತ ಸುಧೆ

ಹಳ್ಳಿ ಸುರೇಶ್‌ Updated:

ಅಕ್ಷರ ಗಾತ್ರ : | |

ವಿಶ್ವಭಾಷೆ ಸಂಗೀತಕ್ಕೆ ಭಕ್ತಿಯ ಜತೆಗೂ ನಂಟಿದೆ. ಕ್ರಿಸ್ಮಸ್, ಚರ್ಚ್ ಎಂದರೆ ಅದರದ್ದೇ ಆದ ಸಂಗೀತ ಮಾರ್ದನಿಸುತ್ತದೆ. ವಿನೀತ ಸ್ವರಸಂಯೋಜನೆ ಮಾದರಿಯೊಂದು ಕಿವಿಯಲ್ಲಿ ಎಂದೋ ಕೇಳಿದಂತೆ ಹಾದುಹೋಗುತ್ತದೆ. ಚರ್ಚ್‌ನ ಪ್ರಾರ್ಥನೆ ಕ್ಷಣಗಳನ್ನು ಅಲ್ಲಿನ ಸಂಗೀತ ತಂಡ ಭಕ್ತಿತೀವ್ರತೆಯಲ್ಲಿ ಇಡುತ್ತದೆ.ತಿಪಟೂರಿನ ಸಂಗೀತ ತಂಡದಲ್ಲಿ ರಂಗಭೂಮಿಯಲ್ಲೂ ಕೈಯಾಡಿಸಿದ ಕಲಾವಿದರಿದ್ದಾರೆ ಎನ್ನುವುದು ಹೆಚ್ಚುಗಾರಿಕೆ. ಸುಮಾರು 20 ಗಾಯಕರನ್ನು ಒಳಗೊಂಡ ಕಲಾ ತಂಡ ನಿತ್ಯ ಅಭ್ಯಾಸದಲ್ಲಿ ತೊಡಗಿರುತ್ತದೆ. ಕ್ರಿಸ್ಮನ್‌ನಂಥ ವಿಶೇಷ ಆಚರಣೆಗಳಿಗೆ ಹೊಸಹೊಸ ಹಾಡುಗಳನ್ನು ಹೊಸ ಸಂಯೋಜನೆಯೊಂದಿಗೆ ಸಿದ್ಧಪಡಿಸಿಕೊಳ್ಳುತ್ತಿರುತ್ತಾರೆ. ಹಬ್ಬ, ಆಚರಣೆಗಳಲ್ಲಿ ಈ ಸಂಗೀತ ತಂಡ ಮಾಧುರ್ಯಪೂರ್ಣ ವಾತಾವರಣ ಸೃಷ್ಟಿಸುತ್ತಾ ಬಂದಿದೆ.ಪರಸ್ಪರ ಪ್ರೀತಿ, ಪ್ರೇಮ, ಆತ್ಮಶೋಧ, ಪಶ್ಚಾತ್ತಾಪದ ದನಿಗಳನ್ನು ನೆರೆದ ಭಕ್ತರಲ್ಲಿ ಸಂಗೀತವೇ ಬಿತ್ತಿ ಮನಸ್ಸುಗಳನ್ನು ಅರಳಿಸುವಂತಿರುತ್ತದೆ. ಈ ತಂಡ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಾಥ್ ನೀಡಿ ಸೈ ಎನಿಸಿಕೊಂಡಿದೆ.ಕೆ.ಆರ್.ಬಡಾವಣೆಯಲ್ಲಿರುವ ಇಲ್ಲಿನ ಪವಿತ್ರ ಹೃದಯ ದೇವಾಲಯದಲ್ಲಿ ವಿನ್ಸೆಂಟ್ ಡಿಸಿಲ್ವಾ ನೇತೃತ್ವದ ತಂಡ ಸುಮಾರು ವರ್ಷಗಳಿಂದ ಚರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದೆ. ಇಲ್ಲಿನ ಕೀ ಬೋರ್ಡ್ ಕಲಾವಿದ ಸಂತೋಷ್ ಕೆಲ ನಾಟಕಗಳಲ್ಲಿ ಸಂಗೀತ ನೆರವು ನೀಡಿದ್ದಾರೆ. ವಿನ್ಸೆಂಟ್ ಡಿಸಿಲ್ವಾ, ಆಗ್ನೇಶ್, ಪ್ರಣಿತಾ, ಬೆನೆಡಿಕ್ಟ್ ಮತ್ತಿತರರು ಹಾಡು ಹೇಳಿ, ವಾದ್ಯ ಪರಿಕರ ನುಡಿಸಿ ಭಕ್ತಿಯ ಜತೆಗೆ ಮುದ ತುಂಬುತ್ತಾರೆ.ಪ್ರತಿ ವರ್ಷ ಹೊಸಹೊಸ ಹಾಡು ಬರುತ್ತಿರುತ್ತವೆ ಎನ್ನುವ ಡಿಸಿಲ್ವಾ, ‘ನಾವೇ ಸ್ವರ ಸಂಯೋಜನೆ ಮಾಡಿ ಅಭ್ಯಾಸದ ಮೂಲಕ ಸಿದ್ಧಿಸಿಕೊಳ್ಳುತ್ತೇವೆ’ ಎನ್ನುತ್ತಾರೆ. ಇವರ ಹಾಡುಗಳೆಲ್ಲ ಕನ್ನಡದಲ್ಲೇ ಇವೆ.ಕರ್ನಾಟಕ ಕನ್ನಡ ಕ್ರೈಸ್ತ ಧರ್ಮಗುರುಗಳ ಬಳಗ ಪ್ರಕಟಿಸಿರುವ `ಚೇತನ’ ಎಂಬ ಭಕ್ತಿಗೀತೆಗಳ ಸಂಕಲನ 8ನೇ ಆವೃತ್ತಿ ಕಂಡಿದೆ. ಅದರಲ್ಲಿ ಸುಮಾರು 1500ಕ್ಕೂ ಹೆಚ್ಚು ಭಕ್ತಿ ಗೀತೆಗಳಿವೆ. 50ಕ್ಕೂ ಹೆಚ್ಚು ಜನ ಬರೆದ ಗೀತೆಗಳನ್ನು ಇದರಲ್ಲಿ ಸಂಗ್ರಹಿಸಲಾಗಿದೆ. ಇವಲ್ಲದೆ ಮದುವೆ, ಕ್ರಿಸ್‌ಮಸ್‌ ಸಂದರ್ಭಕ್ಕೆಂದು ಪ್ರತ್ಯೇಕ ಹಾಡುಗಳ ಕಿರು ಹೊತ್ತಿಗೆಗಳನ್ನು ಮುದ್ರಿಸಿಕೊಂಡಿದ್ದಾರೆ. ನಿಗದಿತವಾಗಿ ಪ್ರಾರ್ಥನೆಗೆ ಬರುವ ಭಕ್ತರಿಗೆ ನೀಡಲು ಇಂಥದ್ದೇ ಮತ್ತೊಂದು ಸಣ್ಣ ಪುಸ್ತಕವನ್ನು ಇಲ್ಲಿನ ಚರ್ಚ್‌ನಿಂದ ಕನ್ನಡದಲ್ಲಿ ಪ್ರಕಟಿಸಲಾಗಿದೆ.ಹಳ್ಳಿ ಸೊಗಡು: ತಾಲ್ಲೂಕಿನ ಸಣ್ಣೇನಹಳ್ಳಿಯಲ್ಲಿ ಬ್ರಿಟಿಷರ ಕಾಲದಲ್ಲಿ ಚರ್ಚ್ ನಿರ್ಮಾಣವಾಗಿತ್ತು. ಅಲ್ಲಿ ಚರ್ಚ್ ನಿರ್ಮಾಣವಾಗಿ 100 ವರ್ಷ ಕಳೆದಿದೆ. ಹೊಸ್ ಚರ್ಚ್ ನಿರ್ಮಿಸಲಾಗಿದೆ. ಅಲ್ಲಿನ ಕ್ರೈಸ್ತರೆಲ್ಲ ಕೃಷಿಕರು. ಅವರ ಕ್ರಿಸ್‌ಮಸ್‌ ಆಚರಣೆಯಲ್ಲಿ ಗ್ರಾಮೀಣ ಮತ್ತು ಸುಗ್ಗಿಯ ಸೊಗಡು ಇರುತ್ತದೆ. ಮನೆ ಬಾಗಿಲುಗಳನ್ನು ತೆಂಗಿನ ಸುಳಿ ಗರಿಯಿಂದ ಮಾಡಿದ ಚಿತ್ತಾರಗಳಿಂದ ವಿಶೇಷವಾಗಿ ಅಲಂಕರಿಸುತ್ತಾರೆ. ಅವರ ಹಬ್ಬದ ಆಚರಣೆಯಲ್ಲಿ ದೇಸಿ ಘಮಲಿರುತ್ತದೆ.

ಪ್ರತಿಕ್ರಿಯಿಸಿ (+)