ಸೋಮವಾರ, ಮೇ 23, 2022
22 °C

ಕ್ರೀಡಾ ಸೌಲಭ್ಯ: 10 ಕೋಟಿ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲಾ ಕೇಂದ್ರವಾದ ನಗರದಲ್ಲಿ ಕ್ರೀಡಾ ಮೂಲಸೌಕರ್ಯ ಕಲ್ಪಿಸಲು 10 ಕೋಟಿ ವೆಚ್ಚದ ಯೋಜನಾ ಪ್ರಸ್ತಾವನೆ ಕೂಡಲೇ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ತುರ್ತು ಅಗತ್ಯ ಎಂದರು.

ಸಭೆಯ ಆರಂಭದಲ್ಲಿ ಮಾತನಾಡಿದ ಇಲಾಖೆಯ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ, ಕೆಲವು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವರ್ತೂರು ಪ್ರಕಾಶ್ ರೂ. 10 ಕೋಟಿ ವೆಚ್ಚದ ಮೂಲಸೌಕರ್ಯ ಕಲ್ಪಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಯೋಜನಾ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಹೀಗಾಗಿ ಸರ್ಕಾರ ಅದನ್ನು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಿ ಯೋಜನಾ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ ಎಂದು ವಿವರಿಸಿದರು.ಜಿಲ್ಲಾ ಕ್ರೀಡಾಂಗಣದ ಸುತ್ತ ಬಲವಾದ ಕಾಂಪೌಂಡ್ ನಿರ್ಮಿಸಬೇಕು, ಬ್ಯಾಸ್ಕೆಟ್‌ಬಾಲ್ ಅಂಕಣವನ್ನು ಮೇಲ್ದರ್ಜೆಗೆ ಏರಿಸಬೇಕು, ವ್ಯಾಯಾಮ ಶಾಲೆಗಾಗಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು, ಯುವಭವನ ನಿರ್ಮಾಣ, ಒಳಂಗಣ ಕ್ರೀಡಾಂಗಣದಲ್ಲಿ ಮರದ ನೆಲಹಾಸಿಗೆ ನಿರ್ಮಿಸಬೇಕು, ಜಿಲ್ಲಾ ಕ್ರೀಡಾಂಗಣದಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಬೇಕು, ಒಳಾಂಗಣ ಕ್ರೀಡಾಂಗಣದ ಬಳಿ ಸ್ಕೇಟಿಂಗ್ ರಿಂಗ್ ಅಳವಡಿಸಬೇಕು, ಸಮವಸ್ತ್ರ ಬದಲಿಸುವ ಕೊಠಡಿ ವ್ಯವಸ್ಥೆ, ಜಿಲ್ಲಾ ಕ್ರೀಡಾಂಗಣ ಮತ್ತು ಒಳಾಂಗಣ ಕ್ರೀಡಾಂಗಣದ ಬಳಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಕೋರಿದ್ದರು ಎಂದು ರುದ್ರಪ್ಪ ವಿವರಿಸಿದರು.ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸೌಕರ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಿದ್ಧಪಡಿಸಿ. ಅದರ ಪ್ರಕಾರ ಪ್ರಸ್ತಾವನೆ ರೂಪಿಸಿ. ಅದಕ್ಕೆಂದೇ ಉಪ ಸಮಿತಿಯನ್ನು ರಚಿಸಿ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಿ. ಮತ್ತೊಂದು ಸಭೆ ನಡೆಸಿ ನಿರ್ಧಾರ ಕೈಗೊಳ್ಳೋಣ ಎಂದು ತಿಳಿಸಿದರು.ಒಳಚರಂಡಿ ನಿರ್ಮಾಣ: ಜಿಲ್ಲಾ ಕ್ರೀಡಾಂಗಣದ ಸುತ್ತಲೂ 400 ಮೀಟರ್ ಹೊರ ವ್ಯಾಸದ ಚರಂಡಿಯಲ್ಲಿ ತುಂಬಿರುವ ಮಣ್ಣು ತೆಗೆದು ಗುಂಡಿಗಳಿಗೆ ತುಂಬಬೇಕಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಿಸಬೇಕು ಎಂಬ ರುದ್ರಪ್ಪ ತಿಳಿಸಿದರು. ಮಣ್ಣು ತುಂಬಲು ಕಾರಣವೇನು ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ, ಕಳೆದ ವರ್ಷ ಮುಖ್ಯಮಂತ್ರಿಗಳ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ನಿರ್ಮಿಸಲು ಅವಕಾಶ ನೀಡಿದ್ದರಿಂದ ಮಣ್ಣುತುಂಬಿದೆ ಎಂದು ಅಧಿಕಾರಿ ವಿವರಿಸಿದರು.ಅದಕ್ಕೆ ಅಸಮಾಧಾನ ವ್ಯಕ್ಯಪಡಿಸಿದ ಜಿಲ್ಲಾಧಿಕಾರಿ, ಅಂಥ ಕಾರ್ಯಕ್ರಮಗಳಿಗೆ ಕ್ರೀಡಾಂಗಣವನ್ನು ನೀಡಿದರೂ ಠೇವಣಿ ಪಡೆದು, ಅಗತ್ಯ ಕ್ರಮ ಕೈಗೊಳ್ಳಬೇಕು. ಕ್ರೀಡಾಂಗಣಕ್ಕೆ ಹಾನಿಯಾದರೆ ದಂಡ ಶುಲ್ಕವನ್ನು ಪಡೆದು ಸರಿಪಡಿಸಬೇಕು. ಸದ್ಯಕ್ಕೆ ಲಭ್ಯವಿರುವ ಅನುದಾನ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.ತೆರವು: ಜಿಲ್ಲಾ ಕ್ರೀಡಾಂಗಣದ ಮೂರು ಕೊಠಡಿಗಳನ್ನು ಖಾಸಗಿ ಕ್ಲಬ್‌ಗಳು ಆಕ್ರಮಿಸಿರುವುದನ್ನು ತೆರವುಗೊಳಿಸಬೇಕಾಗಿದೆ ಎಂಬ ಕೋರಿಕೆಗೂ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ನೋಟಿಸ್ ನೀಡಿ ಕ್ರಮ ಕೈಗೊಳ್ಳಿ. ಅಗತ್ಯ ಬಿದ್ದರೆ ಪೊಲೀಸರ ನೆರವು ಪಡೆಯಿರಿ ಎಂದು ಸೂಚಿಸಿದರು.ಕ್ರಿಕೆಟ್ ಆಟವಾಡುವವರಿಗೆ ನಿಗದಿತ ಸಮಯದಲ್ಲಿ ಅವಕಾಶ ನೀಡಬೇಕು ಎಂಬ ಕೋರಿಕೆಗೂ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ, ಕ್ರಿಕೆಟ್ ನಿಷೇಧಿಸಬೇಕು ಎಂದು ಕೋರಿದ್ದಿರಿ. ಈ ರೀತಿ ದ್ವಂದ್ವ ನಿಲವು ಹೊಂದುವುದು ಸರಿಯಲ್ಲ ಎಂದರು.ಶ್ರೀನಿವಾಸಪುರ ತಾಲ್ಲೂಕಿನ ನಂಬೂವರಹಳ್ಳಿಯಲ್ಲಿ ಗರಡಿ ಮನೆ, ಮುಳಬಾಗಲು ತಾಲ್ಲೂಕಿನ ಖಾದ್ರಿಪರದಲ್ಲಿ ಮತ್ತು ಕೋಲಾರ ತಾಲ್ಲೂಕಿನ ಮಾರ್ಜೇನಹಳ್ಳಿಯಲ್ಲಿ ಅಂಬೇಡ್ಕರ್ ಯುವಜನ ಅಭಿವೃದ್ಧಿ ಕೇಂದ್ರ ನಿರ್ಮಿಸಲು ಲೋಕೋಪಯೋಗಿ ಇಲಾಖೆ, ಭೂಸೇನಾ ನಿಗಮ ಮತ್ತು ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ವಹಿಸಿ ಎಂದು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಅಥ್ಲೆಟಿಕ್ ತರಬೇತುದಾರ ಪಿ.ಎಲ್.ಶಂಕರಪ್ಪ, ಹಿರಿಯ ಕ್ರೀಡಾಪಟುಗಳಾದ ಅಂಚೆ ಅಶ್ವಥ್, ವಿ.ಮಾರಪ್ಪ, ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ ಚಿಲಕಾಂತ ಮಠ, ನಗರಸಭೆ ಅಧ್ಯಕ್ಷೆ ನಾಜಿಯಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಂಪತ್ ಉಪಸ್ಥಿತರಿದ್ದರು .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.