ಬುಧವಾರ, ಜನವರಿ 29, 2020
27 °C

`ಕ್ವೆಕ್ ಕ್ವೆಕ್' ಕಲರವ...

ನಾಗೇಶ ಕಾರ್ಯ Updated:

ಅಕ್ಷರ ಗಾತ್ರ : | |

ತೆಂಗು, ಅಡಿಕೆಯಿಂದ ಕೂಡಿದ ಹತ್ತಾರು ಎಕರೆ ವಿಸ್ತಾರವಾದ ತೋಟ. ತೋಟದ ಮುಂಭಾಗವೇ ಮನೆ. ಇವರ ಮನೆ ಅಂಗಳದಲ್ಲಿ ಕಾಲಿಟ್ಟರೆ ಸ್ವಾಗತಿಸುವುದು `ಕ್ವೆಕ್ ಕ್ವೆಕ್' ಧ್ವನಿ. ಹೌದು. ಇದು ಬಿಳಿ ಬಾತುಕೋಳಿಗಳ ಬೀಡು. ಅಂದಹಾಗೆ ಇದು ಇರುವುದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದ ರವಿ ಎಂಬುವವರ ಮನೆಯಲ್ಲಿ.ಹವ್ಯಾಸದಿಂದ ಆದಾಯ

ಮೊದಲು ಹವ್ಯಾಸಕ್ಕೆಂದು ನಾಟಿಕೋಳಿಗಳನ್ನು ಸಾಕಲು ಪ್ರಾರಂಭಿಸಿದರು. ನಂತರ ವಿವಿಧ ಜಾತಿಯ ಬಾತುಕೋಳಿಗಳ ಮೊಟ್ಟೆಗಳನ್ನು ತಂದು ನಾಟಿಕೋಳಿಗಳ ಸಹಾಯದಿಂದ ಮರಿ ಮಾಡಿಸಿ, ಬಾತುಕೋಳಿಯ ಮರಿಗಳು ಮನೆಯ ಅಂಗಳದಲ್ಲೆಲ್ಲಾ ಓಡಾಡುವಂತೆ ಮಾಡಿದರು. ಸೀನಿ ಕೋಳಿಗಳನ್ನು ಸಾಕುವ ಮೂಲಕ ಹವ್ಯಾಸದ ಜೊತೆಯಲ್ಲಿ ಲಾಭವನ್ನು ಮಾಡುವ ಕಡೆ ಸಾಗಿದರು.ಬಾತುಕೋಳಿ ಹಾಗೂ ನಾಟಿಕೋಳಿಗಳು ಪ್ರತಿದಿನ ಒಂದೊಂದು ಮೊಟ್ಟೆಯನ್ನು ಇಡುತ್ತವೆ. ಪ್ರತಿಯೊಂದು ಮೊಟ್ಟೆಗಳಿಗೆ 10ರಿಂದ 15 ರೂಪಾಯಿಗಳಂತೆ ಮಾರಾಟ ಮಾಡುತ್ತಾರೆ. ಅಲ್ಲದೆ ಮಾಂಸಕ್ಕಾಗಿ ಕೋಳಿಗಳನ್ನು ಮಾರಾಟ ಮಾಡುತ್ತಾರೆ. ಜೊತೆಗೆ ಸಾಕಾಣಿಕೆಗಾಗಿ ಸಣ್ಣ ಕೋಳಿಮರಿಗಳನ್ನು ಮಾರುವ ಮೂಲಕ ಹಣಗಳಿಸುತ್ತಿದ್ದಾರೆ. ಇದರಿಂದಾಗಿ ಕೃಷಿಯ ಜೊತೆಯಲ್ಲಿ ಹವ್ಯಾಸವನ್ನೇ ಉಪಕಸುಬಾಗಿ ಮಾಡಿಕೊಂಡು ಹೆಚ್ಚಿನ ಲಾಭ ಮಾಡುವ ಕಡೆ ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಮನೆಯ ಅಂಗಳದಲ್ಲಿಯೇ ಬಿದಿರಿನಿಂದ ಪ್ರತ್ಯೇಕ ಗೂಡುಗಳನ್ನು ನಿರ್ಮಿಸಿದ್ದಾರೆ. ಮನೆಯ ಸುತ್ತಮುತ್ತಲು ಓಡಾಡಿ ಇವು ಸಂಜೆಯಾಗುತ್ತಲೇ ಗೂಡಿಗೆ ಮರಳುತ್ತವೆ. ಇವುಗಳಿಗೆ ಮೇವನ್ನು ಹಾಕುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ ತೋಟದ ಒಳಗೆಲ್ಲ ಸ್ವಚ್ಛಂದವಾಗಿ ವಿಹರಿಸಿಯೇ ಆಹಾರ ತಿನ್ನುತ್ತವೆ.ಕೆರೆಯೂ ಇದೆ

ಬಿಳಿಯ ಬಾತುಕೋಳಿಗಳಿಗೆ ಅನುಕೂಲವಾಗಲೆಂದು ಮನೆಯ ಪಕ್ಕದಲ್ಲಿಯೇ ಚಿಕ್ಕದೊಂದು ಕೆರೆಯನ್ನು ನಿರ್ಮಾಣ ಮಾಡಿದ್ದಾರೆ. ಇವುಗಳು ಪ್ರತಿದಿನ ಕೆರೆಯಲ್ಲಿ ಈಜಾಡುತ್ತವೆ. ಕೋಳಿಗಳ ಆರೈಕೆಗೆಂದು ಪ್ರತ್ಯೇಕ ಸಮಯ ಮೀಸಲಿಡದಿದ್ದರೂ ಇವುಗಳಿಂದ ಲಾಭ ಅಧಿಕವೇ ಇದೆ. ಇವರ ಬಳಿ ನಾಟಿಕೋಳಿಗಳು, ವಿವಿಧ ಜಾತಿಯ ಬಾತುಕೋಳಿಗಳು, ಸೀನಿ ಕೋಳಿಗಳು ಪ್ರಮುಖವಾಗಿ ಆದಾಯ ತರುವ ಮೂಲಗಳಾಗಿವೆ. ಇವುಗಳನ್ನು ಮತ್ತಷ್ಟು ಹೆಚ್ಚಿಸಿ ಉತ್ತಮ ಆದಾಯ ಮಾಡುವ ಉದ್ದೇಶ ಹೊಂದಿದ್ದಾರೆ.

 

ಪ್ರತಿಕ್ರಿಯಿಸಿ (+)