ಮಂಗಳವಾರ, ಜನವರಿ 28, 2020
21 °C
ವಾದ್ರಾ–ಡಿಎಲ್‌ಎಫ್‌ ಒಪ್ಪಂದ ರದ್ದು ವಿವಾದ

ಖೇಮ್ಕಾ ವಿರುದ್ಧ ಹರಿಯಾಣ ಸರ್ಕಾರ ಚಾರ್ಜ್‌ಶೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ(ಪಿಟಿಐ): ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಹಾಗೂ ಪ್ರಮುಖ ರಿಯಲ್‌ ಎಸ್ಟೇಟ್‌ ಡಿಎಲ್‌ಎಫ್‌ ಕಂಪೆನಿ ನಡುವಣ ಒಪ್ಪಂದವನ್ನು 2012ರಲ್ಲಿ ರದ್ದು ಪಡಿಸಿದಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ಅಶೋಕ್‌ ಖೇಮ್ಕಾ ವಿರುದ್ಧ ಹರಿಯಾಣ ಸರ್ಕಾರ ದೋಷಾರೋಪ  (ಚಾರ್ಜ್‌ಶೀಟ್) ಮಾಡಿದೆ.

ಖೇಮ್ಕಾ ಅನುಪಸ್ಥಿತಿಯಲ್ಲಿ ಬುಧವಾರ ಅವರ ನಿವಾಸಕ್ಕೆ ಚಾರ್ಜ್‌ಶೀಟ್‌ ಅನ್ನು ತಲುಪಿಸಲಾಗಿದೆ. ಈ ಸಂಬಂಧ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಗುರುವಾರ ಮೂಲಗಳು ಹೇಳಿವೆ.

‘ತಾನು ಬುಧವಾರ ದೆಹಲಿಗೆ ತೆರಳಿದ್ದು, ಆರೋಪಗಳಿಗೆ ಶೀಘ್ರವೇ ಪ್ರತಿಕ್ರಿಯಿಸುವುದಾಗಿ’ ಚಾರ್ಜ್‌ಶೀಟ್‌ ಸಂಬಂಧ ಖೇಮ್ಕಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ‘ಪಿಟಿಐ’ಗೆ  ಹೇಳಿದ್ದಾರೆ.

ಖೇಮ್ಕಾ ಅವರು ಪ್ರಸಕ್ತ ಹರಿಯಾಣ ಬೀಜ ಅಭಿವೃದ್ಧಿ ಕಾರ್ಪೋರೇಷನ್‌ (ಎಚ್‌ಎಸ್‌ಡಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಏಳು ಪುಟಗಳ ದೋಷಾರೋಪದಲ್ಲಿ ಆಡಳಿತಾತ್ಮಕ ದುರ್ನಡತೆ ಮತ್ತು ವಾದ್ರಾ  ಹಾಗೂ ಡಿಎಲ್‌ಎಫ್‌ ಗೌರವಕ್ಕೆ ಚ್ಯುತಿ ತಂದಿರುವ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಪ್ಪಂದ ರದ್ದುಗೊಳಿಸಿದ ಬಳಿಕ  ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ, ಸರ್ಕಾರದ ನೀತಿ ಟೀಕಿಸಿದ ಹಾಗೂ ವರ್ಗಾವಣೆ ಮಾಡಲಾದ ಹೊರತಾಗಿಯೂ ತಾನು ಮಾಡುತ್ತಿದ್ದ ಆರೋಪಗಳನ್ನು ತಕ್ಷಣಕ್ಕೆ ಕೈಬಿಡದಿರುವ ವಿಷಯಗಳೂ ಚಾರ್ಜ್‌ಶೀಟ್‌ನಲ್ಲಿವೆ ಎಂದೂ ಮೂಲಗಳು ಹೇಳಿವೆ.

ಹಿನ್ನೆಲೆ: 1991ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಖೇಮ್ಕಾ, 2012ರ ಅಕ್ಟೋಬರ್‌ 15 ರಂದು ವಾದ್ರಾ ಹಾಗೂ ಡಿಎಲ್‌ಎಫ್‌ ನಡುವಣ ಭೂ ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದವೊಂದನ್ನು ರದ್ದುಗೊಳಿಸಿದ್ದರು. 

ಖೇಮ್ಕಾ ಅವರ ಆ ನಡೆಯನ್ನು ಆಡಳಿತಾತ್ಮಕ ದುರ್ನಡತೆ ಎಂದು  ಆರೋಪಿಸಿದ್ದ ಹರಿಯಾಣ ಸರ್ಕಾರ, ಅವರನ್ನು ತಕ್ಷಣವೇ ಎಚ್‌ಎಸ್‌ಡಿಸಿಗೆ  ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿತ್ತು.

ಈ ಸಂಬಂಧ ಖೇಮ್ಕಾ ವಿರುದ್ಧ ದೋಷಾರೋಪ ಮಾಡಲು ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹರಿಯಾಣ ಸರ್ಕಾರ ನಿರ್ಧರಿಸಿತ್ತು.

ಪ್ರತಿಕ್ರಿಯಿಸಿ (+)