ಗುರುವಾರ , ಜೂನ್ 24, 2021
29 °C
ರಾಷ್ಟ್ರೀಯ ಜೂನಿಯರ್ ಮಹಿಳಾ ಹಾಕಿ: ಮಿಂಚಿದ ಜನಾಬಿ

ಗಂಗಾಪುರ ಒಡಿಶಾಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಚುರುಕಿನ ಕೈಚಳಕ ತೋರಿದ ಜನಾಬಿ ಪ್ರಧಾನ್ ಗಳಿಸಿದ ನಾಲ್ಕು ಗೋಲುಗಳ ಸಹಾಯದಿಂದ ಗಂಗಾಪುರ ಒಡಿಶಾ ತಂಡವು 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ‘ಬಿ’ ಡಿವಿಷನ್ ಹಾಕಿ ಟೂರ್ನಿಯಲ್ಲಿ ಭಾನುವಾರ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಗೆದ್ದಿತು.ಚಾಮುಂಡಿ ವಿಹಾರದ ಆಸ್ಟ್ರೋಟರ್ಫ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಲೀಗ್ ಪಂದ್ಯದಲ್ಲಿ ಗಂಗಾಪುರ ತಂಡವು 10–0 (7–0)ಯಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಸೋಲಿಸಿತು. ಉತ್ತಮ ಆಟ ಪ್ರದರ್ಶಿಸಿದ ಮುನ್ಪಡೆ ಆಟಗಾರ್ತಿ ಜನಾಬಿ ಪ್ರಧಾನ್ ನಾಲ್ಕು ಗೋಲುಗಳ (28ನಿ, 31ನಿ 47ನಿ, 58ನಿ) ಕಾಣಿಕೆ ನೀಡಿದರು.ಅವರಿಗೆ ಉತ್ತಮ ಸಾಥ್ ನೀಡಿದ ಮೊಸ್ಮಾತಾ ಲುಗುನ್ (8ನಿ, 26ನಿ, 32ನಿ) ಮೂರು ಮತ್ತು ರಿಂಕಿ ಕುಜ್ಜುರ್ (29ನಿ, 40ನಿ) ಎರಡು  ಮತ್ತು ಜಸ್ಮಿನ್ ಬಾರಾ (1ನಿ) ಒಂದು ಗೋಲು ಗಳಿಸಿದರು.ಅಸ್ಸಾಂಗೆ ಗೆಲುವು: ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ  ಅಸ್ಸಾಂ ತಂಡವು 4–0ಯಿಂದ ಆಂಧ್ರಪ್ರದೇಶ ವಿರುದ್ಧ ಜಯಿಸಿತು. ಪ್ರಥಮಾರ್ಧದಲ್ಲಿಯೇ ಅಸ್ಸಾಂ ತಂಡವು ನಾಲ್ಕು ಗೋಲು ಗಳಿಸಿತ್ತು. ಗೀತಾಂಜಲಿ ಕಿಸನ್ (22ನಿ) ತಂಡದ ಖಾತೆ  ತೆರೆದರು. ಫುಲವಾರಿ ಕಂದುಲಾನಾ (26ನಿ, 34ನಿ) ಮತ್ತು ಮ್ಯಾಕ್ಸಿಮೊ ಅಲೆಕ್ಸೊ (30ನಿ) ಗೋಲು ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಆದರೆ ಎರಡನೇ ಅವಧಿಯಲ್ಲಿ ಗೋಲು ಗಳಿಸಲು ಅಸ್ಸಾಂ ಆಟಗಾರ್ತಿಯರಿಗೆ ಸಾಧ್ಯವಾಗಲಿಲ್ಲ.ಕೇರಳಕ್ಕೆ ಜಯ: ಕೆ. ಪ್ರತೀಷಾ ಮತ್ತು ಅಶ್ವಿನಿ ಉನ್ನಿಕೃಷ್ಣನ್ ಹೊಡೆದ ತಲಾ ಎರಡು ಗೋಲುಗಳ ನೆರವಿನಿಂದ ಕೇರಳ ತಂಡವು 4–1(3–1)ರಿಂದ ಗುಜರಾತ್ ತಂಡದ ವಿರುದ್ಧ ಜಯ ಗಳಿಸಿತು.ಗುಜರಾತಿನ ಎಂ.ಆರ್. ಸಿಂಧು ಪಂದ್ಯದ ಮೊದಲ ನಿಮಿಷದಲ್ಲಿಯೇ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ನೀಡಿದರು. ಆದರೆ ತಿರುಗೇಟು ನೀಡಿದ ಕೇರಳದ ವನಿತೆಯರು ಪ್ರಥಮಾರ್ಧದಲ್ಲಿಯೇ ಮೂರು ಗೋಲು ಗಳಿಸಿದರು. ಕೆ. ಪ್ರತೀಕ್ಷಾ (10ನಿ, 21ನಿ) ಮತ್ತು ಅಶ್ವಿನಿ ಉನ್ನಿಕೃಷ್ಣನ್  (47ನಿ, 62ನಿ) ಗೋಲು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.