ಮಂಗಳವಾರ, ಏಪ್ರಿಲ್ 13, 2021
31 °C

ಗಂಧದೆಣ್ಣೆಗೆ ನೀರು ಕೊಟ್ಟ ಕೆರೆಯ ದುರ್ನಾತ!

ಪ್ರಜಾವಾಣಿ ವಾರ್ತೆ ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಮೈಸೂರು: ಸುಪ್ರಸಿದ್ಧ ಮೈಸೂರು `ಸುಗಂಧದೆಣ್ಣೆ~ ತಯಾರಿಕೆಗೆ ಜೀವಜಲವಾಗಿದ್ದ ಕುಕ್ಕರಹಳ್ಳಿ ಕೆರೆ ಇವತ್ತು ಕೊಳೆತು `ದುರ್ನಾತ~ ಬೀರುತ್ತಿದೆ!`ಅರಮನೆ ನಗರಿ~ಯ ಚೆಂದದ ತಾಣಗಳನ್ನು ನೋಡಿದ ನಂತರ ಮಡಿಕೇರಿಗೆ ಹುಣಸೂರು ರಸ್ತೆಯ ಮೂಲಕ ಸಾಗುವ ಪ್ರಯಾಣಿಕರು ಈ ದುರ್ನಾತವನ್ನು ಅನುಭವಿಸಿಯೇ ಮುಂದೆ ಸಾಗಬೇಕಾದ ದುಃಸ್ಥಿತಿಯಿದೆ. ನಗರದ ಕುಕ್ಕರಹಳ್ಳಿಕೆರೆ ಸಂರಕ್ಷಣಾ ಸಮಿತಿಯ ಹೋರಾಟದ ಫಲವಾಗಿ, 104 ಎಕರೆಯ ಕೆರೆಯ ಒಂದು ಭಾಗ (ಸರಸ್ವತಿಪುರಂ ಮತ್ತು ಮಾನಸ ಗಂಗೋತ್ರಿ ಪಕ್ಕದಲ್ಲಿ) ಅಭಿವೃದ್ಧಿ ಯಾಗಿದ್ದರೂ, ಇನ್ನೊಂದು ಭಾಗ ಇನ್ನೂ ಪ್ರಗತಿಯ ಮುಖ ಕಾಣುತ್ತಿಲ್ಲ.1881ರಲ್ಲಿ ಅಂದಿನ ಮಹಾರಾಜರು ಕುಕ್ಕರಹಳ್ಳಿ ಗ್ರಾಮದಲ್ಲಿ ಈ ಕೆರೆಯನ್ನು ಕಟ್ಟಿಸಿದರು. ಅವರ ದೂರದೃಷ್ಟಿಯ ಫಲವಾಗಿ ಸುತ್ತಲಿನ ಪ್ರದೇಶಗಳ ಜನ-ಜಾನುವಾರುಗಳಿಗೆ ಇದು ಜೀವದಾಯಿನಿಯಾಯಿತು.ಅಲ್ಲದೇ ಅಂತರರಾಷ್ಟ್ರೀಯಮಟ್ಟದ ಪ್ರಸಿದ್ಧಿ ಪಡೆದಿರುವ ಮೈಸೂರಿನ ಸುಗಂಧದೆಣ್ಣೆ ತಯಾರಿಕೆಗೂ ಈ ಕೆರೆಯ ನೀರು ಬಳಕೆಯಾಗುತ್ತಿತ್ತು.ಈ ಕೆರೆ ತುಂಬಬೇಕಾದರೆ ಇದಕ್ಕೆ ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆನೀರು ಹರಿದು ಬಂದು ಸೇರಬೇಕು. ಆದರೆ ದಶಕದ ಹಿಂದೆ ಈ ಪ್ರದೇಶದ ವಿ.ವಿ. ಮೊಹ್ಲ್ಲಲಾ, ವಿನಾಯಕನಗರ ಮತ್ತು ಮಾನಸಗಂಗೋತ್ರಿಯ ಕ್ಯಾಂಪಸ್‌ನ ನೀರು ಬರುವುದು ಕಡಿಮೆ ಯಾಯಿತು. ಈ ಬಡಾವಣೆಗಳು ಬೆಳೆದಂತೆ ಒಳಚರಂಡಿ ನೀರು ಬಂದು ಕೆರೆಯ ಒಡಲು ತುಂಬಿಕೊಂಡಿತು. ಇದರಿಂದಾಗಿ ಹಸಿರು ನೀಲಿ ಪಾಚಿ ಬೆಳೆಯಿತು. ಈ ನೀರು ಚರ್ಮಕ್ಕೆ ಸೋಕಿದರೆ ಸಾಕು ಸೊಂಕು ತಗಲುವುದು ಖಚಿತವೆನ್ನುವಂತಹ ಪರಿಸ್ಥಿತಿ ಇತ್ತು.2001-02ರ ಸಾಲಿನಲ್ಲಿ ಕುಕ್ಕರಹಳ್ಳಿ ಕೆರೆ ಸಂರಕ್ಷಣಾ ಸಮಿತಿಯು ಹೋರಾಟ ಮಾಡಿತು. ಇದರಿಂದ ಮುಚ್ಚಿ ಹೋಗಿದ್ದ ಒಳಚರಂಡಿ ಮಾರ್ಗಗಳು ತೆರೆದವು. ಸ್ವಲ್ಪಮಟ್ಟಿಗೆ ಕೊಳಚೆ ನೀರು ಬರುವುದು ನಿಂತಿತು. ಆದರೆ ಕೆರೆಗೆ ಒಳ್ಳೆಯ ನೀರು ತಂದು ಸೇರಿಸುವ ಸವಾಲೂ ಇತ್ತು. ಇಲ್ಲದಿದ್ದರೆ ಕೆರೆ ಒಣಗಿ ಹೋಗುವ ಆತಂಕವಿತ್ತು.~2004ರಲ್ಲಿ ವಾಣಿ ವಿಲಾಸ್‌ದಲ್ಲಿ ಟ್ಯಾಂಕ್ ತೊಳೆಯಲು ಪ್ರತಿದಿನ ಬಳಸುತ್ತಿದ್ದ 10 ಲಕ್ಷ ಲೀಟರ್ ನೀರು (ಬ್ಯಾಕ್‌ವಾಷ್ ವಾಟರ್) ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಸಾಕಷ್ಟು ಪ್ರಯತ್ನದ ನಂತರ ಕೆಲವು ಅಧಿಕಾರಿಗಳ ಅಸಹಕಾರದ ಹೊರತಾಗಿಯೂ ಆ ನೀರು ಪೈಪ್‌ಲೈನ್ ಮೂಲಕ ಹರಿದು ಬಂದು ಕೆರೆ ಸೇರುವಂತೆ ಮಾಡಲಾಗಿದೆ. ಈಗ ಕೆರೆ ಉಳಿದಿದೆ.ಆದರೆ ಒಳಚರಂಡಿ ನೀರು ಬಂದು ಸೇರುವುದನ್ನು ನಿಲ್ಲಿಸುವ ಕಾಮಗಾರಿ ಇನ್ನಷ್ಟೇ ಆರಂಭ ವಾಗಬೇಕು. ಪಾಲಿಕೆಯು ಇದಕ್ಕಾಗಿ ಎರಡು ಕೋಟಿ ರೂಪಾಯಿ ಕಾಮ ಗಾರಿಯ ಟೆಂಡರ್ ಕರೆದಿದೆ. ಇದೇ ತಿಂಗಳು 30ರಂದು ಅದನ್ನು ಬಿಡ್ ಮಾಡಲಿದ್ದಾರೆ. ನಂತರ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಈ ಕೆಲಸವಾದರೆ ಮಾತ್ರ ಈ ಕೆರೆ ಉಳಿಯಬಲ್ಲದು~ ಎಂದು ಕೆರೆ ಸಂರಕ್ಷಣಾ ಸಮಿತಿ ಸಂಚಾಲಕರಾದ ಜಯರಾಮಯ್ಯ ಹೇಳುತ್ತಾರೆ.ಇವತ್ತು ಕುಕ್ಕರಹಳ್ಳಿ ಕೆರೆಯ ನೀರು ಕುಡಿಯಲು ಯೋಗ್ಯವಲ್ಲದಿದ್ದರೂ, ಸುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟವನ್ನು ಕಾಪಾಡಲು ಕಾರಣ ವಾಗಿದೆ. ಆದರೆ ಈಗ ಹುಣಸೂರು ರಸ್ತೆಯ ಅಕ್ಕಪಕ್ಕದ ಪ್ರದೇಶಗಳಿಂದ  ಹರಿದು ಬರುವ ಕೊಳಚೆ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಮುಂಗಾರು ಮಳೆಯೂ ಕೈಕೊಟ್ಟಿದೆ. ಅಲ್ಲದೇ ಆಗಾಗ ಹನಿಯುವ ಮಳೆಯಿಂದಾಗಿ ಈ ಭಾಗದಲ್ಲಿ ದುರ್ನಾತ ಹೆಚ್ಚುತ್ತಿದೆ. ಸೊಳ್ಳೆ ಇತರ ಕ್ರೀಮಿಕೀಟಗಳು ಹೆಚ್ಚುತ್ತಿವೆ.ಕೆರೆ ಸಂರಕ್ಷಣಾ ಹೋರಾಟಗಾರರು ಅಂದುಕೊಂಡಂತೆ ಸರಿಯಾದ ಸಮಯಕ್ಕೆ ಕಾಮಗಾರಿ ನಡೆದರೆ ಮಾತ್ರ ರಾಷ್ಟ್ರಕವಿ ಕುವೆಂಪು ಮೆಚ್ಚಿದ ಕೆರೆಗೆ ಉಳಿವು ಸಾಧ್ಯ. ಇಲ್ಲದಿದ್ದರೆ..!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.