ಬುಧವಾರ, ಜನವರಿ 22, 2020
22 °C
ಬ್ಲಾಗಿಲನು ತೆರೆದು...

ಗಟ್ಟಿದನಿಯ ‘ಪಿಸುಮಾತು’

–ಸಾಕ್ಷಿ Updated:

ಅಕ್ಷರ ಗಾತ್ರ : | |

ಗಟ್ಟಿದನಿಯ ‘ಪಿಸುಮಾತು’

ಪಿಸುಮಾತು‘ ಶ್ರೀಪತಿ ಗೋಗಡಿಗೆ ಅವರ ಬ್ಲಾಗಿನ ಹೆಸರು. ಆದರೆ, ಬ್ಲಾಗ್‌ ಶೀರ್ಷಿಕೆಯ ಲಾಲಿತ್ಯಕ್ಕೆ ವಿರುದ್ಧವಾಗಿ ಶ್ರೀಪತಿ ಅವರು ಸಮಕಾಲೀನ ಸಂಗತಿಗಳನ್ನು ಗಟ್ಟಿ ದನಿಯಲ್ಲಿ ಚರ್ಚಿಸಿರುವುದು ಬ್ಲಾಗ್‌ನ (pisumathu4u.blogspot.in) ವಿಶೇಷ.ಮೊದಲಿಗೆ ಬ್ಲಾಗಿಗರ ಪರಿಚಯ ಮಾಡಿಕೊಳ್ಳೋಣ. ಹವ್ಯಾಸಿ ಲೇಖಕರಾದ ಶ್ರೀಪತಿ ಛಾಯಾಗ್ರಾಹಕ, ಕವಿ, ಚಿತ್ರಕಲಾವಿದರೂ ಹೌದು. ಈ ವಿಶೇಷಣಗಳನ್ನೆಲ್ಲ ನೋಡಿ– ‘ಅಲ್ಲಿಗೆ ಒಂದು ಕೆಲಸವನ್ನೂ ನೆಟ್ಟಗೆ ಮಾಡಿಕೊಂಡಿರಲ್ಲ ಅನ್ನೋದು ಅರ್ಥವಾಗಿರಬೇಕಲ್ಲ?’ ಎಂದು ತಮ್ಮನ್ನು ತಾವು ಗೇಲಿ ಮಾಡಿಕೊಳ್ಳಬಲ್ಲ ಹಾಸ್ಯಪ್ರಜ್ಞೆಯೂ ಅವರಿಗಿದೆ. ಕಾದಂಬರಿ, ಮಿನಿ ಕಾದಂಬರಿ, ಕಥೆ–ಕವಿತೆ ಸೇರಿದಂತೆ ಶ್ರೀಪತಿ ಅವರ ಸಾಹಿತ್ಯ ಕೃಷಿಯೂ ಸಮೃದ್ಧವಾಗಿದೆ.ಬ್ಲಾಗಿಗರ ಬಹು ಆಸಕ್ತಿಗಳಿಗೆ ಉದಾಹರಣೆಯಾಗಿ ‘6-5=2’ ಎನ್ನುವ ಕನ್ನಡ ಸಿನಿಮಾದ ವಿಮರ್ಶೆ ಹಾಗೂ ಹಾಗೂ ‘ಲೈಂಗಿಕ ವಸ್ತುಗಳ ನಿಷೇಧ ಏಕೆ?’ ಎನ್ನುವ ಬರಹಗಳನ್ನು ಗಮನಿಸಬಹುದು. ‘6-5=2’ ಚಿತ್ರವನ್ನು ‘ಕನ್ನಡದ ಮಟ್ಟಿಗೆ ಅತ್ಯುತ್ತಮ ಪ್ರಯತ್ನ. ವಿಶಿಷ್ಟ ಚಲನಚಿತ್ರಗಳನ್ನು ಆಯ್ದು ನೋಡ ಬಯಸುವವರಿಗೆ ಪ್ರಿಯವಾಗುವ ಚಿತ್ರ’ ಎಂದವರು ಗುರ್ತಿಸುತ್ತಾರೆ.‘೨೦೧೦ರಲ್ಲಿ ಗುಂಡ್ಯ ಅರಣ್ಯದಲ್ಲಿ ಟ್ರೆಕ್ಕಿಂಗ್ ಹೋದ ಮೂವರು ಮಳೆಯ ಕಾರಣಕ್ಕೆ ದಾರಿ ತಪ್ಪಿಸಿಕೊಂಡು ಹೊರ ಬರಲಾರದೇ ಆಹಾರವಿಲ್ಲದೇ ಕಾಡಿನೊಳಗೇ ಸಾವನ್ನಪ್ಪಿದ್ದರು. ಈ ಸತ್ಯ ಘಟನೆಯನ್ನು ಇಟ್ಟುಕೊಂಡು ಚಲನಚಿತ್ರಕ್ಕೆ ಬೇಕಾದಂತೆ ಮೂವರನ್ನು ಆರು ಜನರನ್ನಾಗಿಸಿ ಈ ಚಿತ್ರವನ್ನು ನಿರ್ದೇಶಿಸಿದವರ ಜಾಣ್ಮೆಯನ್ನು ಮೆಚ್ಚಲೇಬೇಕು. ಮೃತರಾದವರಲ್ಲಿ ಒಬ್ಬನಾದ ರಮೇಶ್ ಎಂಬಾತನ ಕ್ಯಾಮೆರಾ ದೊರೆತಿದ್ದು, ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂಬ ಒಕ್ಕಣೆಯೊಂದಿಗಿನ ಭಿತ್ತಿಪತ್ರಗಳ ಆಕರ್ಷಣೆ ಹಾಗೂ ರೋಮಾಂಚನಗೊಳಿಸುವ ಟ್ರೈಲರ್‌ಗಳ ವಿಶೇಷವೇ ನಮ್ಮನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಕಾಂಜಿಪೀಂಜಿ ಚಿತ್ರಗಳನ್ನು ನಿರ್ದೇಶಿಸುವ ಕೆಟ್ಟ ನಿರ್ದೆಶಕರೆಲ್ಲಾ ಹಾಡುಗಳನ್ನು ಅರ್ಧಕ್ಕೆ ನಿಲ್ಲಿಸಿ ಅದರಲ್ಲಿ ತಮ್ಮ ಹೆಸರು ದೊಡ್ಡದಾಗಿ ತೋರಿಸುವ ಈ ಕಾಲದಲ್ಲೂ 6-5=2 ಚಿತ್ರತಂಡದ ಪ್ರಮುಖರ ಹೆಸರನ್ನೂ ಪ್ರಚಾರ ಮಾಡದೇ ತಮ್ಮ ವೃತ್ತಿಪ್ರೀತಿಯನ್ನು ಮೆರೆದಿರುವುದು ಮತ್ತೊಂದು ವಿಶೇಷ’ ಎಂದು ಶ್ರೀಪತಿ ಅವರು ವಿಶ್ಲೇಷಿಸುತ್ತಾರೆ.ಲೈಂಗಿಕ ವಸ್ತುಗಳನ್ನು ನಿಷೇಧಿಸಬಾರದು ಎನ್ನುವುದಕ್ಕೆ ಬ್ಲಾಗಿಗರು ನೀಡಿರುವ ಕಾರಣವೂ ಕುತೂಹಲಕರವಾಗಿದೆ. ‘‘ಲೈಂಗಿಕ ಸಲಕರಣೆಗಳನ್ನು ಮುಕ್ತವಾಗಿಸಿದ ತಕ್ಷಣ ಅತ್ಯಾಚಾರಗಳಾಗಲಿ, ಅನೈತಿಕವಾಗಲಿ, ವೇಶ್ಯಾವಾಟಿಕೆಯಾಗಲಿ ಸಂಪೂರ್ಣ ನಿಂತು ಹೋಗುತ್ತದೆಂದು ನಾನು ಹೇಳುತ್ತಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಅದನ್ನು ಸ್ವಲ್ಪ ಮಟ್ಟಿಗಾದರೂ ತಡೆಯುವ ಒಂದು ದಾರಿಯನ್ನು ಯಾಕೆ ಮುಚ್ಚಬೇಕು? ಲೈಂಗಿಕ ಸಲಕರಣೆ ಸುಲಭವಾಗಿ ದೊರಕುವುದಾದರೆ ಒಬ್ಬ ಯುವಕ ಅದರ ಮೂಲಕ ತನ್ನ ಕಾಮವನ್ನು ತೃಪ್ತಿ ಪಡಿಸಿಕೊಂಡು ಮಾನಸಿಕವಾಗಿ ಆಹ್ಲಾದದಿಂದ ಇರಬಲ್ಲನಾದರೆ ಅದಕ್ಕೆ ಕಲ್ಲು ಹಾಕಿ ಯಾಕೆ ಅವನನ್ನು ಉದ್ವೇಗದಲ್ಲೇ ಇರುವಂತೆ ಮಾಡಬೇಕು. (ಅವನು ಅತ್ಯಾಚಾರಿಯಾಗದೇ ಇರಬಹುದು, ಅವನ ಮಾನಸಿಕ ತುಮುಲದ ಬಗ್ಗೆ ನಾನು ಹೇಳುತ್ತಿರುವುದು)...”ಕೆಲವು ಚರ್ಚಾಸ್ಪದ ವಿಷಯಗಳೂ ಶ್ರೀಪತಿ ಅವರ ಬ್ಲಾಗ್‌ನಲ್ಲಿವೆ. ಅಂತಹದೊಂದು ಬರಹ ‘ದಂಡುಪಾಳ್ಯ’ ಸಿನಿಮಾ ಕುರಿತದ್ದು. ‘‘ನಾನು ನೋಡಿದ ಅತ್ಯಂತ ಕ್ರೂರ ದೃಶ್ಯಗಳ ಚಿತ್ರ ಇಂಗ್ಲೀಷ್‌ನ ’ರಾಂಗ್ ಟರ್ನ್‌’. ಅದರ ನಂತರದ ಸ್ಥಾನ ‘ದಂಡುಪಾಳ್ಯ’ಕ್ಕೆ ಸಲ್ಲುತ್ತದೆ. ಆದರೆ ಮೊದಲಿನದು (ಬಹುಶಃ) ಕಾಲ್ಪನಿಕ ಕಥೆಯಾದರೆ ಎರಡನೆಯದು ಸತ್ಯಕಥೆ. ಹಾಗಾಗಿಯೇ ಇದು ಹೆಚ್ಚು ಮನವನ್ನು ಕಲಕುತ್ತದೆ, ಕುಲುಕುತ್ತದೆ. ‘ಇಂತಹ ಸಮಾಜ ಘಾತುಕರ ಚಿತ್ರಗಳು ಬೇಕಾ?’ ಎಂದು ಕೇಳುವವರಿಗೆ ಚಿತ್ರದ ಮೂಲಕವೇ ನಿರ್ದೇಶಕ ಶ್ರೀನಿವಾಸರಾಜು ಉತ್ತರ ಹೇಳಿದ್ದಾರೆ’’– ಹೀಗೆ ಶ್ರೀಪತಿ ಅವರ ವಾದ ಮುಂದುವರೆಯುತ್ತದೆ.ಈ ಸಿನಿಮಾ ತೆರೆಕಂಡ ನಂತರ ಘಟಿಸಿದ ಅಪರಾಧ ಪ್ರಕರಣಗಳ ವರದಿಗಳನ್ನು ಬ್ಲಾಗಿಗರು ಗಮನಿಸಿದಂತಿಲ್ಲ. ಹಿಂಸೆ – ಕ್ರೌರ್ಯದ ಕಥೆಗಳನ್ನು ಅಂಥ ದೃಶ್ಯಗಳ ಮೂಲಕವೇ ನಿರೂಪಿಸಬೇಕಾಗಿಯೂ ಇಲ್ಲ. ರೋಚಕತೆಯನ್ನೇ ಬಂಡವಾಳ ಆಗಿಸಿಕೊಂಡ ಇಂಥ ದೃಶ್ಯಗಳು ಯಾವ ವರ್ಗವನ್ನು ಗಮನದಲ್ಲಿಟ್ಟುಕೊಂಡಿರುತ್ತವೆ ಎನ್ನುವುದನ್ನು ಸಹೃದಯರು ಸುಲಭವಾಗಿ ಊಹಿಸಬಹುದಾಗಿದೆ.‘ಧರ್ಮಸ್ಥಳದ ಸುತ್ತ, ಅನುಮಾನಗಳ ಹುತ್ತ!’, ‘ಮಾಂಸ-ಮದ್ಯ ಮತ್ತು ವೈಷ್ಣವ ದೀಕ್ಷೆ!’, ‘ಜಾತ್ಯತೀತ ತತ್ವಕ್ಕೆ ಮಂಗಳ ಹಾಡಿದ ಜೆಡಿಎಸ್‌ಗೆ ಮಂಗಳಾರತಿ ಎತ್ತಿದ ಮತದಾರ’– ಇಂಥ ಲೇಖನಗಳು ಭಿನ್ನ ವಿಶ್ಲೇಷಣೆಗೆ ಅನುವು ಮಾಡಿಕೊಡುವಂತೆಯೇ ರಚನೆಯಾಗಿವೆ. ಆದರೆ, ಚರ್ಚೆಗಳಿಗೆ, ಪ್ರಶ್ನೆಗಳಿಗೆ ಅವಕಾಶ ಕಲ್ಪಿಸುವುದು ಕೂಡ ‘ಪಿಸುಮಾತು’ ಬ್ಲಾಗ್‌ ಬರಹಗಳ ವಿಶೇಷವಾಗಿದೆ.

ಪ್ರತಿಕ್ರಿಯಿಸಿ (+)