ಮಂಗಳವಾರ, ಜನವರಿ 28, 2020
29 °C

ಗಣಿತಶಾಸ್ತ್ರ: ಬೆಂಗಳೂರಿನಲ್ಲಿ ಸಂಶೋಧನಾ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆನ್ವಯಿಕ ಗಣಿತಶಾಸ್ತ್ರ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವ ಉದ್ದೇಶದಿಂದ ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಸಂಶೋಧನಾ ಸಂಸ್ಥೆಯೊಂದನ್ನು  ಸ್ಥಾಪಿಸಲಿದೆ.ಈ ಸಂಸ್ಥೆಯ ಸ್ಥಾಪನೆ ಸಂಬಂಧ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಫ್ರಾನ್ಸ್‌ನ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಸಂಸ್ಥೆ (ಸಿಎನ್‌ಆರ್‌ಎಸ್) ಒಪ್ಪಂದಕ್ಕೆ ಸಹಿ ಹಾಕಿವೆ.ಹೊಸ ಸಂಸ್ಥೆಯು ಬೆಂಗಳೂರಿನಲ್ಲಿ ಸ್ಥಾಪನೆಗೊಳ್ಳಲಿದ್ದು, ಈ ಯೋಜನೆಯ ನೇತೃತ್ವವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಹಿಸಿಕೊಂಡಿದೆ. ಯೋಜನೆಯ ಅನುಷ್ಠಾನಕ್ಕೆ ದೇಶದ ಇತರ ಐದು ಸಂಸ್ಥೆಗಳು ಐಐಎಸ್‌ಸಿನೊಂದಿಗೆ ಕೈ ಜೋಡಿಸಲಿವೆ. ಫ್ರಾನ್ಸ್‌ನಲ್ಲಿ ಟೌಲೌಸ್ ವಿಶ್ವವಿದ್ಯಾಲಯವು ಈ ಯೋಜನೆಯ ನೇತೃತ್ವ ವಹಿಸಿವೆ.ಗಣಿತಶಾಸ್ತ್ರ ಹೊರತಾಗಿ, ಇಮ್ಯುನಾಲಜಿ (ರೋಗರಕ್ಷಾ ಶಾಸ್ತ್ರ) ಮತ್ತು ಇನ್‌ಫಾರ್ಮೆಟಿಕ್ಸ್ ಕ್ಷೇತ್ರಗಳಲ್ಲಿನ ಸಹಭಾಗಿತ್ವಗಳನ್ನು ನವೀಕರಿಸುವ ಸಂಬಂಧವೂ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ.`ಬೆಂಗಳೂರಿನಲ್ಲಿ ಜಂಟಿಯಾಗಿ ಗಣಿತಶಾಸ್ತ್ರ ಸಂಶೋಧನೆ/ಅಧ್ಯಯನ ಘಟಕವೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ನಾವು ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಇದಲ್ಲದೇ ಎರಡೂ ರಾಷ್ಟ್ರಗಳ ನಡುವಿನ ವೈಜ್ಞಾನಿಕ ಸಹಭಾಗಿತ್ವಗಳನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಇಮ್ಯುನಾಲಜಿ ಮತ್ತು ಇನ್‌ಫಾರ್ಮೆಟಿಕ್ಸ್ ವಿಷಯಗಳಿಗೆ ಸಂಬಂಧಿಸಿದ ಎರಡು ಅಂತರರಾಷ್ಟ್ರೀಯ ಪ್ರಯೋಗಾಲಯಗಳನ್ನು ಸ್ಥಾಪಿಸಲಿದ್ದೇವೆ~ ಎಂದು ಸಿಎನ್‌ಆರ್‌ಎಸ್‌ನ ಮಹಾ ನಿರ್ದೇಶಕ ಜೋಯಲ್ ಬೆರ್ಟ್ರಾಂಡ್ ಹೇಳಿದ್ದಾರೆ.ಈ ಮೂರೂ ಯೋಜನೆಗಳಿಗೆ ಪ್ಯಾರಿಸ್ ಮೂಲದ  ಸಿಎನ್‌ಆರ್‌ಎಸ್ ಮತ್ತು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಮನಾಗಿ ಧನಸಹಾಯ ಮಾಡಲಿವೆ.`ಈ ಯೋಜನೆಗಾಗಿ ಎರಡೂ ಸಂಸ್ಥೆಗಳು ತಲಾ ಐದು ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿವೆ~ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರಾಮಸ್ವಾಮಿ ಹೇಳಿದ್ದಾರೆ.ಮುಂದಿನ ನಾಲ್ಕು ವರ್ಷಗಳ ಕಾಲ ಎರಡೂ ರಾಷ್ಟ್ರಗಳ ತಲಾ 30 ಗಣಿತಶಾಸ್ತ್ರಜ್ಞರು ಜಂಟಿಯಾಗಿ ಹಲವು ಸಂಶೋಧನೆ/ಅಧ್ಯಯನಗಳನ್ನು ನಡೆಸಲಿದ್ದಾರೆ.

ಪ್ರತಿಕ್ರಿಯಿಸಿ (+)