ಬುಧವಾರ, ಜುಲೈ 15, 2020
22 °C

ಗಣಿ ಅಕ್ರಮ: ಅಧಿಕಾರಿಗಳಲ್ಲಿ ತಲ್ಲಣ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣಿ ಅಕ್ರಮ: ಅಧಿಕಾರಿಗಳಲ್ಲಿ ತಲ್ಲಣ..!

ಬಳ್ಳಾರಿ: ಜಿಲ್ಲೆಯಲ್ಲಿ ನಡೆದಿವೆ ಎನ್ನಲಾದ ಗಣಿ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು, ಗಣಿಗಾರಿಕೆ, ಅದಿರು ಸಾಗಣೆಗೆ ಸಂಬಂಧಿಸಿದ ಇಲಾಖೆಗಳಲ್ಲಿ ಜಿಲ್ಲೆಯಾದ್ಯಂತ ಸೇವೆ ಸಲ್ಲಿಸಿರುವ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.

ಅಕ್ರಮವಾಗಿ ಅದಿರು ಸಾಗಿಸಲು ಪರವಾನಗಿ ನೀಡಿದ ಆರೋಪ ಎದುರಿಸುತ್ತಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಎನ್. ಬಸಪ್ಪ ರೆಡ್ಡಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿರುವ ಸರಕಾರ, ಇತ್ತೀಚೆಗಷ್ಟೇ ಅವರು ತಪ್ಪಿತಸ್ಥರು ಎಂಬುದು ಸಾಬೀತಾಗಿರುವ ಹಿನ್ನೆಲೆಯಲ್ಲಿ, ನಿವೃತ್ತಿವೇತನ ತಡೆ ಹಿಡಿದು ತನಿಖೆಯನ್ನು ಮುಂದುವರಿಸಿರುವುದು ಅಧಿಕಾರಿಗಳ ವಲಯದಲ್ಲಿ ತಲ್ಲಣ ಉಂಟು ಮಾಡಿದೆ.

ಕೆಲವು ತಿಂಗಳುಗಳ ಹಿಂದೆ ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ನಡೆಸಿರುವ ಲೋಕಾಯುಕ್ತ ನ್ಯಾಯಮೂರ್ತಿಯವರು, ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇತರ ಕೆಲವು ಇಲಾಖೆಗಳ ಸಿಬ್ಬಂದಿ ಗಣಿ ಅಕ್ರಮಗಳಿಗೆ ಬೆಂಬಲ ನೀಡಿದ್ದಾರೆ ಎಂಬ ವರದಿಯನ್ನೂ ಸಲ್ಲಿಸಿದ್ದು, ಅಕ್ರಮ ಅದಿರು ಸಾಗಣೆಯ ತೂಗುಕತ್ತಿ ಗಣಿ ಮಾಲೀಕರ ಸಮೇತ ಅಧಿಕಾರಿಗಳ ಸುತ್ತ ಸುತ್ತುವರಿದಿದೆ.

ಕೆಲವೇ ದಿನಗಳಲ್ಲಿ ಕೇಂದ್ರದ ಉನ್ನತಾಧಿಕಾರ ಸಮಿತಿಯು ಜಿಲ್ಲೆಯ ರಾಮಗಡ ಗಣಿ ಪ್ರದೇಶಕ್ಕೆ ಭೇಟಿ ನೀಡಲಿದ್ದು, 265 ಹೆಕ್ಟೆರ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ.

ಗಡಿ- ಗಣಿ ಒತ್ತುವರಿ ಹಾಗೂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರಕಾರದ ಆದೇಶದ ಮೇರೆಗೆ ತನಿಖೆ ನಡೆಸುತ್ತಿರುವ ಸಿಬಿಐ, ಅಕ್ರಮಕ್ಕೆ ಬೆಂಬಲ ನೀಡಿದ್ದಾರೆ ಎಂಬ ಕಾರಣದಿಂದ ಆಂಧ್ರದ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿ ವಿವರ ಕಲೆಹಾಕುತ್ತಿದ್ದು, ರಾಜ್ಯದಲ್ಲೂ ಅದೇ ಮಾದರಿಯಲ್ಲಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವ ಗಣಿ ಮಾಲೀಕ ಟಪಾಲ್ ಗಣೇಶ್ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ನಡೆದಿರುವ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಬೆಂಬಲ ನೀಡಿರುವ ಆಗಿನ ಜಿಲ್ಲಾ ಅರಣ್ಯಾಧಿಕಾರಿ ಎಸ್.ಮುತ್ತಯ್ಯ ಹಾಗೂ ಇತರ ಪ್ರಮುಖ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂಬುದು ಅವರ ಕೋರಿಕೆಯಾಗಿದೆ.

ಈ ಹಿಂದೆ ಲೋಕಾಯುಕ್ತರೇ ತನಿಖೆ ನಡೆಸಿ, ಅಧಿಕಾರಿ ವರ್ಗದ ಕುಮ್ಮಕ್ಕಿನಿಂದಲೇ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಅದಿರು ಸಾಗಣೆ ಮಾಡಲಾಗಿದೆ ಎಂಬ ವರದಿ ಸಲ್ಲಿಸಿದ್ದಾರೆ. ಆ ವರದಿಗಳನ್ನು ಆಧರಿಸಿ ಈ ಹಿಂದೆ ಇಲ್ಲಿದ್ದ ಅಧಿಕಾರಿಗಳನ್ನೂ, ಈಗಿರುವ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕಿದೆ. ಆದರೆ, ಅಂಥ ಭ್ರಷ್ಟ ಅಧಿಕಾರಿಗಳನ್ನು ಉನ್ನತ ಹುದ್ದೆಯಲ್ಲೇ ಮುಂದುವರಿಸಲಾಗಿದೆ. ಇದರಿಂದ ಅಕ್ರಮಗಳಿಗೆ ಅನುವು ಮಾಡಿಕೊಟ್ಟವರಿಗೆ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಗಣೇಶ್ ಆರೋಪಿಸಿದ್ದಾರೆ.

ಅರಣ್ಯ, ಗಣಿ ಮತ್ತು ಭೂವಿಜ್ಞಾನ, ಪ್ರಾದೇಶಿಕ ಸಾರಿಗೆ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅದಿರು ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಈ ಕುರಿತು ಸಮಗ್ರವಾದ ತನಿಖೆ ನಡೆಸಿ ವರದಿ ಸಲ್ಲಿಸಲಿರುವ ಸಿಇಸಿ ಅಂಥ ಅಧಿಕಾರಿಗಳ ಹಣೆಬರಹ ನಿರ್ಧರಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.