ಸೋಮವಾರ, ಮೇ 17, 2021
21 °C

ಗಣೇಶ ವಿಸರ್ಜನೆ: ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಈ ಬಾರಿ ಸೋಮವಾರ ಬೆಳಿಗ್ಗೆ 10 ಗಂಟೆಯವರೆಗೂ ಮುಂದುವರಿದು ದಾಖಲೆಯಾಗಿದೆ. ಪ್ರತಿ ವರ್ಷ ಬೆಳಿಗ್ಗೆ ಆರರಿಂದ ಏಳು ಗಂಟೆಯೊಳಗೆ ಗಣೇಶ ಮೂರ್ತಿಗಳ ವಿಸರ್ಜನೆ ಅಂತ್ಯಗೊಳ್ಳುತ್ತಿತ್ತು.ಆದರೆ ಈ ಬಾರಿ ಬೆಳಿಗ್ಗೆ 10 ಗಂಟೆಯವರೆಗೆ ವಿಸರ್ಜನೆ ಮುಂದುವರಿಯಿತು. `ಇದಕ್ಕೆ ಧ್ವನಿವರ್ಧಕದಲ್ಲಿಯ ಅಬ್ಬರದ ಹಾಡಿಗೆ ಮೆಲ್ಲಗೆ ಸಾಗುವ ಮೆರವಣಿಗೆಯೇ ಕಾರಣ. ಧ್ವನಿವರ್ಧಕದ ಹಾಡುಗಳಿಗೆ ಹುಚ್ಚೆದ್ದು ಕುಣಿಯವವರಿಗೆ ಲೆಕ್ಕವಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು.ಮುಖ್ಯವಾಗಿ ಹುಬ್ಬಳ್ಳಿಯ ಗಣೇಶೋತ್ಸವ ಇನ್ನಷ್ಟು ಸುಂದರವಾಗಿ, ವಿಶಿಷ್ಟವಾಗಿ ಆಚರಿಸಬೇಕೆಂದರೆ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡು, ಎಲ್ಲ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಗಳ ಪದಾಧಿಕಾರಿಗಳು ಸೇರಿ ಸಭೆ ನಡೆಸಬೇಕು.ಈ ಸಭೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿಯೇ ನಡೆಯಬೇಕು. ಇದರಿಂದ ಇನ್ನಷ್ಟು ವ್ಯವಸ್ಥಿತವಾಗಿ ಗಣೇಶೋತ್ಸವ ನಡೆಸಲು ಸಾಧ್ಯವಾಗುತ್ತದೆ~ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಸಲಹೆ ನೀಡಿದರು.`ಗಣೇಶ ಮೂರ್ತಿಗಳ ಮೆರವಣಿಗೆಗೆ ಮುನ್ನ ನಡೆಯುವ ಕಾರ್ಯಕ್ರಮಗಳು ಸಂಕ್ಷಿಪ್ತವಾಗಬೇಕು. ಪ್ರತಿ ವರ್ಷ ತಡವಾಗುತ್ತದೆ. ಇದಕ್ಕಾಗಿ ಮೊದಲೇ ಯೋಜಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕು~ ಎನ್ನುವ ಕಿವಿಮಾತು ಹೇಳಿದರು ಮರಾಠಾಗಲ್ಲಿಯ ಎನ್.ಎಸ್. ಮೆಹರವಾಡೆ.ಕಳಚಿದ ಪೆಂಡಾಲ್: ಗಣೇಶೋತ್ಸವ ಮುಗಿದ ಪರಿಣಾಮ ನಗರದಲ್ಲಿ ಹಾಕಲಾಗಿದ್ದ ಪೆಂಡಾಲುಗಳನ್ನು ಬಿಚ್ಚುವ ಕಾರ್ಯ ಸೋಮವಾರ ನಡೆಯಿತು. ಸ್ತಬ್ಧಚಿತ್ರಗಳನ್ನು ವಾಹನಗಳಲ್ಲಿ ತುಂಬಿಸಿ ಕಳಿಸಲಾಯಿತು. ಈಮೂಲಕ ಪೆಂಡಾಲುಗಳನ್ನು ಆವರಿಸಿದ್ದ ಜಾಗ ತೆರವುಗೊಂಡಂತಾಯಿತು.ಸಾರ್ವಜನಿಕರನ್ನು ಹೆಚ್ಚು ಆಕರ್ಷಿಸಿದ್ದ ಶಿಂಪಿಗಲ್ಲಿಯ ಅನಂತ ಪದ್ಮನಾಭ ದೇವಸ್ಥಾನ ಮಾದರಿಯನ್ನು ಕೂಡಾ ಕಳಚಲಾಯಿತು. `ಒಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅನಂತ ಪದ್ಮನಾಭ ದೇವಸ್ಥಾನವನ್ನು, ಅದರೊಳಗೆ ವಜ್ರವೈಢರ್ಯ, ಚಿನ್ನಾಭರಣಗಳ ಮಾದರಿಯನ್ನು ರೂಪಿಸಲಾಗಿತ್ತು.ಜೊತೆಗೆ ಹಿನ್ನೆಲೆ ಸಂಗೀತ ಇದ್ದುದರಿಂದ ಪರಿಣಾಮಕಾರಿಯಾಗಿತ್ತು. ಇದನ್ನು ರಾಯಾಪುರದ ಇಸ್ಕಾನ್‌ನಲ್ಲಿ ಪ್ರತಿಷ್ಠಾಪಿಸಬೇಕೆಂದು ಕೇಳಿದ್ದಾರೆ. ಸದ್ಯದಲ್ಲೇ ಅಲ್ಲಿಗೆ ಇದನ್ನು ವರ್ಗಾಯಿಸಲಾಗುತ್ತದೆ~ ಎಂದು ವಿವರಿಸಿದರು ಅನಂತ ಪದ್ಮನಾಭ ದೇವಸ್ಥಾನದ ಮಾದರಿ ರೂಪಿಸಿದ ಕಲಾವಿದ ವಿಜಯ ದಾಂಡಗೆ.ಅವಶೇಷಗಳ ಹುಡುಕಾಟ: ಇಂದಿರಾ ಗಾಜಿನ ಮನೆಯ ಹಿಂದಿರುವ ಪಾಲಿಕೆ ಬಾವಿಯಲ್ಲಿ ವಿಸರ್ಜನೆಯಾದ ಗಣೇಶ ಮೂರ್ತಿಗಳ ಅವಶೇಷಗಳನ್ನು ಹುಡುಕುವ ಕೆಲಸ ಸೋಮವಾರ ನಡೆಯಿತು. ಇಬ್ಬರು ಬಾಲಕರು ಈಜಾಡುತ್ತಿದ್ದರೆ, ಉಳಿದವರು ಗಣೇಶ ಮೂರ್ತಿಗೆ ಬಳಸಿದ ಕಟ್ಟಿಗೆಯ ಪಳಿ ಮೊದಲಾದ ಉಪಯುಕ್ತ ವಸ್ತುಗಳಿಗಾಗಿ ಹುಡುಕಾಟ ನಡೆಸಿದರು.`ಗಣೇಶ ವಿಸರ್ಜನೆಯಾದ ನಂತರ ಪೊಲೀಸರ ಕಾವಲು ಇರುವುದಿಲ್ಲ. ಇದರಿಂದ ಬಾಲಕರು ಈಜಾಡುತ್ತಾರೆ. ಅಕಸ್ಮಾತ್ ಏನಾದರೂ ಅನಾಹುತ ಸಂಭವಿಸಿದರೆ ಹೊಣೆಗಾರರು ಯಾರು? ಇದನ್ನು ಪಾಲಿಕೆಯವರು ಗಮನಿಸಿ ವಿಸರ್ಜನೆಯ ಅವಶೇಷಗಳನ್ನು ಬೇರೆಡೆ ಸ್ಥಳಾಂತರಗೊಳ್ಳುವವರೆಗೆ ಗಮನ ವಹಿಸಬೇಕು. ಮುಖ್ಯವಾಗಿ ಬಾಲಕರು ಈಜುವುದನ್ನು ತಡೆಯಬೇಕು~ ಎಂದು ಬಾವಿ ಬಳಿ ಕುತೂಹಲಕ್ಕೆ ನಿಂತಿದ್ದ ಬಾಲಕೃಷ್ಣ ಹೊಸಮನಿ ಹೇಳಿದರು.ರಾತ್ರಿ 10ರೊಳಗೆ ವಿಸರ್ಜನೆ: ಬಹುಮಾನ ವಿತರಣೆ


ಹುಬ್ಬಳ್ಳಿ: ಭಾನುವಾರ ರಾತ್ರಿ 10ರೊಳಗೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ 9 ಸಾರ್ವಜನಿಕ ಗಜಾನನ ಉತ್ಸವ ಸಮಿತಿಗಳಿಗೆ ಹೂ-ಬಳ್ಳಿಯ ಗೆಳೆಯರ ಬಳಗದ ವತಿಯಿಂದ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು.ತೊರವಿಕಹಕ್ಕಲ, ವೀರಾಪುರ ಓಣಿ, ಕಂಚಗಾರ ಗಲ್ಲಿ, ಅರಳಿಕಟ್ಟಿ ಓಣಿ, ಹೊಸ ಮ್ಯಾದರ ಓಣಿ, ಸೊರಬತ್ ಮಠ ಗಲ್ಲಿ, ಬಾಬಾಸಾನ ಗಲ್ಲಿ, ಸರಾಫ ಗಟ್ಟಿ ಹಾಗೂ ಮೂರುಸಾವಿರಮಠ ಚೌಕ ಗಜಾನನ ಉತ್ಸವ ಸಮಿತಿಗಳಿಗೆ ಬಹುಮಾನಗಳನ್ನು ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಎಸಿಪಿ ಎನ್.ಎಸ್. ಪಾಟೀಲ ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅಧ್ಯಕ್ಷತೆ ವಹಿಸಿದ್ದರು. ಹೂ-ಬಳ್ಳಿ ಗೆಳೆಯರ ಬಳಗದ ಅಧ್ಯಕ್ಷ ಭಾಸ್ಕರ ಎನ್. ಜಿತೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಯೋಜಕರಾದ ತಾಂಬಾರಾಮಜಿ ಪಟೇಲ್, ಆಂಜನಾ ಪಟೇಲ್, ಎಂ.ಎಸ್. ಪಾಟೀಲ, ಶರದ್ ಮಗಜಿ, ಗುರುನಾಥಸಾ ಬದ್ದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.