ಗಲ್ಲು ರದ್ದತಿಗೆ ತಕರಾರು

ನವದೆಹಲಿ: ಮರಣದಂಡನೆ ಎದುರಿಸುತ್ತಿರುವ ಕೈದಿಗಳ ಶಿಕ್ಷೆಯನ್ನು ಜೀವಾವಧಿಗೆ ಇಳಿಸುವ ಸುಪ್ರೀಂ ಕೋರ್ಟ್ನ ತೀರ್ಪಿಗೆ ಕೇಂದ್ರ ಸರ್ಕಾರ ತೀವ್ರ ತಕರಾರು ಎತ್ತಿದೆ.
ಇದು ‘ಕೋರ್ಟ್ನ ವ್ಯಾಪ್ತಿಯನ್ನು ಮೀರಿದ್ದು’ ಮತ್ತು ‘ರಾಷ್ಟ್ರಪತಿಗಳ ವಿವೇಚನಾ ಅಧಿಕಾರದಲ್ಲಿ ಮಾಡಿದ ಹಸ್ತಕ್ಷೇಪ’. ಆದ್ದರಿಂದ ಈ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಸರ್ಕಾರ ಶನಿವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸುವಂತಹ ಮಹತ್ವದ ವಿಷಯದಲ್ಲಿ ಸಂವಿಧಾನಾತ್ಮಕ ವ್ಯಾಖ್ಯಾನಕ್ಕೆ ಸಂಬಂಧಿಸಿದ ಹಲವು ಅಂಶಗಳಿವೆ. ಆದ್ದರಿಂದ ಮೂವರು ನ್ಯಾಯಮೂರ್ತಿಗಳ ಪೀಠ ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಅಪರಾಧಿಗಳ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಬಾರದಾಗಿತ್ತು. ಐವರು ಸದಸ್ಯರ ಸಂವಿಧಾನ ಪೀಠಕ್ಕೆ ಒಪ್ಪಿಸಬೇಕಾಗಿತ್ತು ಎಂದು ಸರ್ಕಾರ ಪ್ರತಿಪಾದಿಸಿದೆ.
ಮರಣದಂಡನೆಗೆ ಗುರಿಯಾದ ಅಪರಾಧಿ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳಲು ಅಕಾರಣವಾಗಿ ವಿಳಂಬ ಮಾಡಿದರೆ, ಆ ಅಪರಾಧಿಯ ಗಲ್ಲುಶಿಕ್ಷೆಯನ್ನು ಜೀವಾವಧಿಗೆ ಇಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರ ನೇತೃತ್ವದ ಮೂರು ನ್ಯಾಯಮೂರ್ತಿಗಳ ಪೀಠ ಜ. 21ರಂದು ತೀರ್ಪು ನೀಡಿತ್ತು.
ಇದರಿಂದಾಗಿ ಮರಣದಂಡನೆಗೆ ಗುರಿಯಾಗಿದ್ದ 15 ಅಪರಾಧಿಗಳಿಗೆ ಜೀವದಾನ ಸಿಕ್ಕಿತ್ತು. ಅವರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಲಾಗಿತ್ತು. ಈ 15 ಮಂದಿಯಲ್ಲಿ ಕಾಡುಗಳ್ಳ ವೀರಪ್ಪನ್ ಸಹಚರರಾದ ಕರ್ನಾಟಕದ ಬಿಲವೇಂದ್ರನ್, ಸೈಮನ್, ಜ್ಞಾನಪ್ರಕಾಶ, ಮಾದಯ್ಯ ಮತ್ತು ಅತ್ಯಾಚಾರ, ಕೊಲೆ ಅಪರಾಧಿಗಳಾದ ಜಡೇಸ್ವಾಮಿ, ಪ್ರವೀಣ್ ಕುಮಾರ್ ಸೇರಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹಂತಕರಿಗೂ ಇತ್ತೀಚೆಗೆ ಜೀವದಾನ ಸಿಕ್ಕಿದೆ.
ಸರಿಯಲ್ಲ: ಮರಣದಂಡನೆಗೆ ಗುರಿಯಾದ ಅಪರಾಧಿ ಸಲ್ಲಿಸಿದ ಕ್ಷಮಾದಾನ ಅರ್ಜಿ ಬಗ್ಗೆ ತೀರ್ಮಾನ ವಿಳಂಬವಾಗಿರುವುದನ್ನೇ ನ್ಯಾಯಪೀಠ ಪ್ರಮುಖವಾಗಿ ಪರಿಗಣಿಸಿ ಇಂಥ ತೀರ್ಪು ಬರೆದಿದೆ. ಆದರೆ, ಈ ಅಂಶವೊಂದನ್ನೇ ಪರಿಗಣಿಸದೆ ಇಡೀ ಪ್ರಕರಣವನ್ನು ಮತ್ತು ಅಪರಾಧದ ಗಂಭೀರತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅಗತ್ಯ ಎಂದು ಸರ್ಕಾರ ಹೇಳಿದೆ.
ಕ್ಷಮಾದಾನ ಅರ್ಜಿಯನ್ನು ಸರಿಯಾಗಿ ಪರಿಗಣಿಸುತ್ತಿಲ್ಲ ಎಂಬ ಅಭಿಪ್ರಾಯ ಸುಪ್ರೀಂಕೋರ್ಟ್ಗೆ ಇದ್ದರೆ, ಅಂತಹ ಅರ್ಜಿಯನ್ನು ರಾಷ್ಟ್ರಪತಿ ಅವರಿಗೆ ಮರುಪರಿಶೀಲನೆಗೆ ಕಳುಹಿಸಲಿ ಅಥವಾ ಕ್ಷಮಾದಾನ ಅರ್ಜಿ ಕುರಿತ ತೀರ್ಮಾನ ವಿಳಂಬವಾಗುತ್ತಿದೆ ಎಂದೆನಿಸಿದರೆ ಶೀಘ್ರ ವಿಲೇವಾರಿ ಮಾಡುವಂತೆ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಿ ಎಂದು ಸರ್ಕಾರ ತಿಳಿಸಿದೆ.
ಗಲ್ಲು ಶಿಕ್ಷೆಗೆ ಗುರಿಯಾದ ಯಾವುದೇ ಅಪರಾಧಿ ಇನ್ನಷ್ಟು ದಿನ ಬದುಕಬೇಕು ಎಂದು ಹಂಬಲಿಸುತ್ತಾನೆಯೇ ಹೊರತು ತಕ್ಷಣದಲ್ಲಿ ನೇಣುಗಂಬ ಏರಲು ಬಯಸುವುದಿಲ್ಲ. ಹೀಗಿರುವಾಗ ಕ್ಷಮಾದಾನ ಮನವಿ ಕುರಿತ ತೀರ್ಮಾನ ವಿಳಂಬವಾಗಿದ್ದರಿಂದಲೇ ಅವನು/ ಅವಳು ಯಾತನೆ ಅನುಭವಿಸುವಂತಾಯಿತು ಎಂಬ ಅಭಿಪ್ರಾಯಕ್ಕೆ ಬರುವುದು ಸೂಕ್ತವಲ್ಲ ಎಂದೂ ಅರ್ಜಿಯಲ್ಲಿ ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.