ಸೋಮವಾರ, ಮಾರ್ಚ್ 8, 2021
26 °C
ಶಿಥಿಲಗೊಂಡ ವಿದ್ಯುತ್‌ ಕಂಬಗಳು * ಕಟ್ಟಿಕೊಂಡ ಚರಂಡಿ * ಅಸಮರ್ಪಕ ತ್ಯಾಜ್ಯ ನಿರ್ವಹಣೆ

ಗಾಳಿ ಬೀಸಿದರೆ ಕವಿಯುವ ಕತ್ತಲು

ನಾಗರಾಜ್‌ ಎನ್‌. Updated:

ಅಕ್ಷರ ಗಾತ್ರ : | |

ಗಾಳಿ ಬೀಸಿದರೆ ಕವಿಯುವ ಕತ್ತಲು

ದಾವಣಗೆರೆ: ಅಲ್ಲಿ ಗಾಳಿ ಬೀಸಿದರೆ ಕತ್ತಲು ಆವರಿಸುತ್ತದೆ; ಪೋಷಕರು ಮಕ್ಕಳನ್ನು ಜೋಪಾನ ಮಾಡುತ್ತಾರೆ !

ನಗರದ 10ನೇ ವಾರ್ಡ್‌ನ ಬೂದಾಳು ರಸ್ತೆಯ ಸ್ಥಿತಿಯಿದು. ಈ ವಾರ್ಡ್‌ನ ಕೆಲ ಭಾಗಗಳಲ್ಲಿ ಅಳವಡಿಸಿರುವ ವಿದ್ಯುತ್‌ ಕಂಬಗಳು ಶಿಥಿಲಗೊಂಡಿವೆ. ತಂತಿಗಳು ದುರ್ಬಲವಾಗಿವೆ. ಕೊಂಚ ಗಾಳಿ ಬೀಸಿದರೂ ವಿದ್ಯುತ್‌ ಕಡಿತವಾಗುತ್ತದೆ. ಕೆಲವೊಮ್ಮೆ ಕಿಡಿಗಳೂ ಹಾರುತ್ತವೆ.ವಿದ್ಯುತ್‌ ಆಟಕ್ಕೆ ಹಲವು ಬಾರಿ ಟಿವಿ ಮತ್ತಿತರ ಸಾಧನಗಳು ಸುಟ್ಟಿವೆ. ಕಂಬಗಳಿಂದ ಮನೆ ಸಂಪರ್ಕಿಸುವ ವಿದ್ಯುತ್‌ ತಂತಿಗಳ ಪ್ಲಾಸ್ಟಿಕ್‌ ಹೊದಿಕೆ ಕಿತ್ತುಹೋಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿವೆ.

ಎಲ್ಲಿ ಯಾವಾಗ ಅನಾಹುತ ಸಂಭವಿಸುವುದೋ ಎಂಬ ಆತಂಕದಲ್ಲೇ ಪೋಷಕರು ಇರುವಂತಾಗಿದೆ. ಈ ವಿಷಯದಲ್ಲಿ ಮಕ್ಕಳನ್ನೂ ಜೋಪಾನ ಮಾಡುತ್ತಾರೆ. ‘ಕಂಬಗಳು ಹಾಳಾಗಿದ್ದರೂ ಅವನ್ನು  ಬದಲಾಯಿಸಿಲ್ಲ.ವಿದ್ಯುತ್‌ ತಂತಿಗಳು  ತುಂಡಾದರೆ, ಕಂಬಗಳು  ನೆಲಕ್ಕುರುಳಿದರೆ ಎಂಬ

ಭಯದಿಂದಲೇ ಜೀವನ ನಡೆಸುವಂತಾಗಿದೆ’ ಎಂದು ಆತಂಕ ತೋಡಿಕೊಳ್ಳುತ್ತಾರೆ ಬೂದಾಳ್ ರಸ್ತೆಯ ನಿವಾಸಿ ಕಲಾವತಿ.ರಸ್ತೆ ಮಧ್ಯೆ ವಿದ್ಯುತ್‌ ಕಂಬ: ’ವಿನಾಯಕ ನಗರದಲ್ಲಿ ಪದೇ ಪದೇ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಆದರೆ, ರಸ್ತೆ ಮಧ್ಯೆ ವಿದ್ಯುತ್‌ ಕಂಬಗಳಿದ್ದರೂ ಅವನ್ನು ತೆರವುಗೊಳಿಸುವ ಉಸಾಬರಿಗೆ ಅಧಿಕಾರಿಗಳು ಹೋಗಿಲ್ಲ.ಹಾಗೆಯೇ ಕಾಂಕ್ರೀಟ್ ಸುರಿದು ಕಾಮಗಾರಿ ನಡೆಸಲಾಗಿದೆ. ಇದರಿಂದ ಲಘು ವಾಹನಗಳೂ ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಜಾಗ ಇಲ್ಲದಾಗಿದೆ’ ಎಂದು ಸಮಸ್ಯೆ ಬಿಚ್ಚಿಡುತ್ತಾರೆ ಶ್ರೀನಿವಾಸ್‌.‘ವಿನಾಯಕ  ನಗರದಲ್ಲಿ ರಸ್ತೆ ಕೆಲಸ  ಬಹುತೇಕ  ಪೂರ್ಣಗೊಂಡಿದೆ. ಆದರೆ, ಬಾಕ್ಸ್‌  ಚರಂಡಿ ಕಾಮಗಾರಿ ನಡೆದಿಲ್ಲ. ಹೀಗಾಗಿ  ಕೆಲ ಮನೆಗಳಿಗೆ  ಮಳೆ ನೀರು ನುಗ್ಗುತ್ತದೆ. ದವಸ–ಧಾನ್ಯ, ಹೊದಿಕೆ–ಹಾಸಿಗೆಗಳೆಲ್ಲ ನೆನೆದು ಮುದ್ದೆಯಾಗುತ್ತವೆ. ಚಿಕ್ಕ ಮಕ್ಕಳಿರುವ ಸಂಸಾರ ನಮ್ಮದು. ಮಳೆ ಬಂದರೆ ಪರದಾಡುವಂತಾಗಿದೆ’ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು.ತ್ಯಾಜ್ಯ ನಿರ್ವಹಣೆ ಸಮಸ್ಯೆ: 10ನೇ ವಾರ್ಡ್‌ನಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಗಾಡಿ ವ್ಯವಸ್ಥೆ ಮಾಡಿದ್ದರೂ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲ. ಮನೆಗಳಿಂದ ಕಸ ಸಂಗ್ರಹಿಸುವ ಪೌರ ಕಾರ್ಮಿಕರು  ಅದನ್ನು ನೇರವಾಗಿ ವಾಹನಗಳಿಗೆ  ತುಂಬಿಸಿ ಸಾಗಿಸುವುದಿಲ್ಲ.  ಕಸವನ್ನು ಕೆಲ ಖಾಲಿ ನಿವೇಶನಗಳಲ್ಲಿ  ಸುರಿಯುತ್ತಾರೆ. ಅಲ್ಲಿ ಹಂದಿಗಳು ಮುತ್ತಿಕೊಂಡು ಅಸಹನೀಯ ವಾತಾವರಣ ಸೃಷ್ಟಿಸುತ್ತವೆ.‘ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದರೂ  ಚರಂಡಿಗಳ  ನಿರ್ವಹಣೆ  ಸರಿಯಾಗಿ  ನಡೆಯುತ್ತಿಲ್ಲ.  ಹೀಗಾಗಿ 10ನೇ  ವಾರ್ಡ್‌ನಲ್ಲಿ ಸ್ವಚ್ಛ  ವಾತಾವರಣ

ಇಲ್ಲದಾಗಿದೆ. ಚರಂಡಿಗಳನ್ನು ಆಗಾಗ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ಎಐಡಿಎಸ್‌ಒ ಜಂಟಿ ಕಾರ್ಯದರ್ಶಿ ಸೌಮ್ಯಾ.ಜಾಲಿನಗರದಲ್ಲಿ ಇರುವ ‘ಶಾಮನೂರು ಬಸಪ್ಪನವರ ಉದ್ಯಾನ’ದ ಅಭಿವೃದ್ಧಿ ಪ್ರಗತಿಯಲ್ಲಿದೆ. ವಾರ್ಡ್‌ನಲ್ಲಿ ಬಹುತೇಕ ಭಾಗಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಆದರೆ, ಚರಂಡಿಗಳ ನಿರ್ಮಾಣಕ್ಕೆ ಪಾಲಿಕೆ ಸದಸ್ಯರು ಗಮನ ನೀಡಬೇಕು. ಇಲ್ಲದಿದ್ದರೆ ವಾರ್ಡ್‌ನಲ್ಲಿ ಸ್ವಚ್ಛತೆಗೆ

ಕುತ್ತು ಬರಲಿದೆ ಎಂದು ಹೇಳುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.