ಭಾನುವಾರ, ಮೇ 9, 2021
19 °C

ಗುರುದೇವೋ ನಮೋ ನಮಃ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಸನಾತನ ಕಾಲದಿಂದಲೂ ನಡೆದುಬಂದಿರುವ `ಗುರು ಪರಂಪರೆ~ ಮಾದರಿ ಶಿಕ್ಷಣವನ್ನು ಶಿಕ್ಷಕರು ಉಳಿಸುವ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಬಚ್ಚೇಗೌಡ ತಿಳಿಸಿದರು.ಇಲ್ಲಿನ ವೆಂಕಟೇಶ್ವರ ವೈಭವ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮಾಂತರ ಜಿಲ್ಲೆ ಪಂಚಾಯವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.10ನೇ ತರಗತಿ ಫಲಿತಾಂಶದಲ್ಲಿ ಜಿಲ್ಲೆಗೆ ಉತ್ತಮ ಸ್ಥಾನ ದೊರೆಯಲು ಕಾರಣರಾದ ಉಪನಿರ್ದೇಶಕರನ್ನು ಅಭಿನಂದಿಸಿದ ಅವರು ಶಿಕ್ಷಕರ ಪರಿಶ್ರಮ ಮೆಚ್ಚುವಂತದ್ದು ಆದರೆ ಬರಿ ಪಠ್ಯ ಕ್ರಮದ ಬಗ್ಗೆ ಭೊದನೆ ಮಾಡದೆ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಸ ಬೇಕು ಎಂದರು. ಸ್ವಾತಂತ್ರ್ಯದ ನಂತರ ಸಾಕ್ಷರತಾ ಪ್ರಮಾಣ ಶೇ.79.5ರಷ್ಟು ಏರಿದೆ, ಇದಕ್ಕೆ ಮೂಲ ಕಾರಣ ಶಿಕ್ಷಕರ ಪರಿಶ್ರಮ.ಖಾಸಗಿ ಶಾಲೆಗಳ ಪೈಪೋಟಿಯಿಂದ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಗುಣಮಟ್ಟ ಫಲಿತಾಂಶ ನೀಡುವುದು ಶಿಕ್ಷಕರ ಕರ್ತವ್ಯ, ಅರ್ಪಣಾ ಮನೋಭಾವದಿಂದ ಶಿಕ್ಷಕರು ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಉಪನಿರ್ದೇಶಕ ಹೆಚ್.ವಿ.ವೆಂಕಟೇಶಯ್ಯ ಮಾತನಾಡಿ ವ್ಯಕ್ತಿಯ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣ ಬಹಳ ಮಹತ್ವವಾದದ್ದು. ರಾಷ್ಟ್ರನಾಯಕರ ಮತ್ತು ಉತ್ತಮ ಪ್ರಜೆಗಳ ಭವಿಷ್ಯ ಶಾಲಾ ಕೊಠಡಿಗಳಲ್ಲಿ ಅಡಗಿದೆ. ಸಮಾನತೆಯೊಂದಿಗೆ ಜಾತಿ, ಧರ್ಮ ಬೇದವಿಲ್ಲದೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ವಾರ್ಷಿಕ 15 ಸಾವಿರ ಕೋಟಿ ವೆಚ್ಚಮಾಡುತ್ತಿದೆ.

 

ಪ್ರಾಥಮಿಕ ಹಂತದ ಒಂದು ಮಗುವಿಗೆ ವರ್ಷಕ್ಕೆ 20ಸಾವಿರ ವ್ಯಯಿಸುತ್ತಿದೆ, ಕಲಿಕೆಯ ಹಿಂದಿನ ಸೂತ್ರಧಾರಿಗಳು ಶಿಕ್ಷಕರು. ಸಮಾಜದ ದಿಕ್ಕನ್ನು ಬದಲಾಯಿಸುವವರೂ ಅವರೆ. ಸಮಾಜದಲ್ಲಿ ಶಿಕ್ಷಕರ ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಲ್ಲಿ ಸರ್ವಪಲ್ಲಿ ಡಾ. ರಾಧಾ ಕೃಷ್ಣನ್ ಅವರ ಜನ್ಮಾದಿನಾಚರಣೆಗೆ ಅರ್ಥಬರಲಿದೆ ಎಂದರು.ಕರ್ನಾಟಕ ರಾಜ್ಯ ಜ್ಞಾನ ಆಯೋಗ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯ ನಿರ್ವಹಣಾ ನಿರ್ದೇಶಕ ಎಂ.ಕೆ.ಶ್ರೀಧರ್ ಮಾತನಾಡಿ, ಶಿಷ್ಯರಲ್ಲಿ ಹುದುಗಿದ ಚೈತನ್ಯ ಬಿಂದುಗಳನ್ನು ಗುರುತಿಸಿ ಜಾಗೃತಗೊಳಿಸುವ ಕೆಲಸ ಶಿಕ್ಷಕರದ್ದು. ವಿಧ್ಯೆಯು ಮಗುವಿಗೆ ತಾಯಿ ಕಟ್ಟಿಕೊಟ್ಟ ಬುತ್ತಿಯ ಗಂಟಲ್ಲ.ಗುರುತೋರಿದ ಹಾದಿಯಲ್ಲಿ ಪಯಣ ಆರಂಭಸಿದರೂ ಸ್ವಂತ ದಾರಿಯನ್ನು ಹುಡುಕಿ ಗುರುವನ್ನು ಮೀರಿಸಿದ ಶಿಷ್ಯರನ್ನು ಬೆಳೆಸಿದಾಗ ಗುರು ಎನ್ನುವುದಕ್ಕೆ ಅರ್ಥ. ಮಕ್ಕಳಿಗೆ ಕ್ರಿಯಾತ್ಮಕ ಜ್ಞಾನ, ಹೊಸತನದ ಅರಿವು ಮೂಡಿಸಬೇಕು. ವೃತ್ತಿ ಎನ್ನದೆ ಪ್ರವೃತ್ತಿಯನ್ನರಿತು ಸಾರ್ಥಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.ಶಾಸಕ ಕೆ.ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕಲ್ಪನ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ತಾ.ಪಂ.ಅಧ್ಯಕ್ಷ ಶಿವಪ್ಪ, ಜಿ.ಪಂ.ಸದಸ್ಯ ಬಿ.ರಾಜಣ್ಣ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಆರ್.ರವಿಕುಮಾರ್, ಬಿ.ಜೆ.ಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎ.ಸಿ.ಗುರುಸ್ವಾಮಿ, ಬೆಂ.ಹಾಲು ಒಕ್ಕೂಟ ನಿರ್ದೇಶಕರಾದ ಸೋಮಣ್ಣ, ಕೆ.ನಾಗೇಶ್, ತಹಸೀಲ್ದಾರ್ ಎಲ್.ಸಿ.ನಾಗರಾಜ್ ಮೊದಲಾದವರು ಹಾಜರಿದ್ದರು.ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ನಾಲ್ಕು ತಾಲ್ಲೂಕುಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 16 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಲಾಯಿತು, ಹಾಗೂ ನಿವೃತ್ತ ಶಿಕ್ಷಕರಿಗೆ ಹಾಗೂ ಕರ್ತವ್ಯದಲ್ಲಿ ಮರಣಹೊಂದಿದ ಶಿಕ್ಷಕರ ಕುಟುಂಬದ ಸದಸ್ಯರಿಗೆ ಸನ್ಮಾನಿಸಲಾಯಿತು.~ಶಿಕ್ಷಕರಿಗಿಂತ ಬುದ್ಧಿವಂತ ಮಕ್ಕಳು~

ದೊಡ್ಡಬಳ್ಳಾಪುರ: ಇಂದಿನ ಮಕ್ಕಳು ತಿಳುವಳಿಕೆಯಲ್ಲಿ ಶಿಕ್ಷಕರಿಗಿಂತ ಮುಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಪುಸ್ತಕ ಓದುವತ್ತ ಗಮನ ಹರಿಸಬೇಕೆಂದು ಶಾಸಕ ಜೆ. ನರಸಿಂಹಸ್ವಾಮಿ ಹೇಳಿದರು.

ನಗರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಲಾ ಮಂದಿರದಲ್ಲಿ ಸೋಮವಾರ ಡಾ.ಎಸ್.ರಾಧಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದ `ಶಿಕ್ಷಕರ ಹಬ್ಬ-2011~ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಿಕ್ಷಕರಿಗೆ ಉತ್ತಮ ಸಂಬಳ, ಸೌಲಭ್ಯಗಳ ಅಗತ್ಯ ಇದೆ. ಆಗ ಮಾತ್ರ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯ. ಶಿಕ್ಷಕರ ಬಗ್ಗೆ ಇಡೀ ಸಮಾಜ ಗೌರವಿಸಬೇಕಿದೆ. ಶಿಕ್ಷಕರು ತಪ್ಪು ಮಾಡಿದರೆ  ಇಡೀ ಸಾಮಾಜಿಕ ವ್ಯವಸ್ತೆಯೇ ತಪ್ಪು ದಾರಿಯಲ್ಲಿ ನಡೆಯುವ ಅಪಾಯವಿದೆ. ಶಿಕ್ಷಕರು ಕರ್ತವ್ಯ ಭ್ರಷ್ಟರಾಗದೇ ನಿಷ್ಠೆಯಿಂದ ದುಡಿಯಬೇಕಿದೆ. ಈಗ ನಿವೃತ್ತ ಶಿಕ್ಷಕರು ರಾಜಕೀಯಕ್ಕೆ ಬರುವ ಮೂಲಕ ವ್ಯವಸ್ಥೆಯನ್ನು ಶುದ್ಧೀಕರಿಸಬೇಕು ಎಂದರು.ಸಮಾರಂಭದಲ್ಲಿ ಶಿಕ್ಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ 2010-11ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಅಭಿನಂದಿಸಲಾಯಿತು.ಸಮಾರಂಭದಲ್ಲಿ ಬೆಂ.ಗ್ರಾ.ಜಿ.ಪಂ.ಅಧ್ಯಕ್ಷೆ ಭಾಗ್ಯಮ್ಮ, ತಾ.ಪಂ.ಅಧ್ಯಕ್ಷ ಎಚ್.ಎಸ್.ಅಶ್ವತ್ಥ್‌ನಾರಾಯಣಕುಮಾರ್, ಉಪಾಧ್ಯಕ್ಷೆ ಎಸ್.ಸುಮಾ,ಎಪಿಎಂಸಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಹನುಮಂತೇಗೌಡ, ಎನ್.ಅರವಿಂದ, ಉಮಾಬಾಯಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಸಿ.ನಾರಐಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಾಜೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶಿವರಾಜ್, ಆರ್.ಎಲ್.ಜಾಲಪ್ಪ ಕ್ಯಾಂಪಸ್ ಆಡಳಿತ ನಿರ್ದೇಶಕ ಜೆ.ರಾಜೇಂದ್ರ, ಭೂ ಮಂಜೂರಾತಿ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಎಂ.ಮುನಿರಾಮೇಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಸಿದ್ದಗಂಗಯ್ಯ, ಕಾರ್ಯದರ್ಶಿ ಮಲ್ಲಿಕಾರ್ಜುನರೆಡ್ಡಿ, ಕ್ಷೇತ್ರ ಸಮನ್ವಯ ಅಧಿಕಾರಿ ಟಿ.ಶ್ರೀನಿವಾಸ್‌ರೆಡ್ಡಿ ಮುಂತಾದವರು ಭಾಗವಹಿಸಿದ್ದರು.  ಇಬ್ಬರಿಗೆ ಪ್ರಶಸ್ತಿ

ಆನೇಕಲ್:ತಾಲ್ಲೂಕಿನ ಕರಕಲಘಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರೋಜಾ ಹಾಗೂ ದೊಮ್ಮಸಂದ್ರ ಧರ್ಮಸಾಗರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಮುನಿಸ್ವಾಮಿರೆಡ್ಡಿ ಅವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.ಚಿಕ್ಕಪೇಟೆ ಕ್ಷೇತ್ರದ ಶಾಸಕ ಹೇಮಚಂದ್ರಸಾಗರ್, ಬೆಂಗಳೂರು ದಕ್ಷಿಣ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜನ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಆರ್.ಬಸವರಾಜ, ಎಂ.ಮುನಿರೆಡ್ಡಿ, ಮಂಜುನಾಥ್ ಹೊನ್ನಾವರ ಮತ್ತಿತರರು ಹಾಜರಿದ್ದರು.ಅಭಿನಂದನೆ: ತಾಲ್ಲೂಕಿನಿಂದ ಜಿಲ್ಲಾ ಪ್ರಶಸ್ತಿಗೆ ಭಾಜನರಾಗಿರುವ ಮುಖ್ಯೋಪಾಧ್ಯಾಯ ಎಂ.ಮುನಿಸ್ವಾಮಿರೆಡ್ಡಿ ಹಾಗೂ ಶಿಕ್ಷಕಿ ಸರೋಜಾ ಅವರನ್ನು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ವಿ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ವಿ.ಶಂಕರನಾರಾಯಣ, ಮುಖ್ಯೋಪಾಧ್ಯಾಯರ ಸಂಘದ ಯಲ್ಲಾರೆಡ್ಡಿ, ಸಿ.ವಿ.ವೆಂಕಟೇಶರೆಡ್ಡಿ, ಸಹಶಿಕ್ಷಕರ ಸಂಘದ ವಿ.ಪ್ರಕಾಶ್, ಆರ್.ಎಂ.ಯಲ್ಲಪ್ಪ, ವಿ.ಕೆ.ಗವಿರಂಗಯ್ಯ ಮತ್ತಿತರರು ಅಭಿನಂದಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.