ಗುರುವಾರ , ಏಪ್ರಿಲ್ 22, 2021
25 °C

ಗೃಹಪ್ರವೇಶ ಉಡುಗೊರೆ ಪ್ರಸಂಗ!

ಅರ್ಚನಾ Updated:

ಅಕ್ಷರ ಗಾತ್ರ : | |

ಪರಿಚಿತರೊಬ್ಬರು ದಶಕಗಳ ಕನಸನ್ನು ನನಸಾಗಿಸಿಕೊಂಡಿದ್ದರು. ಆ ಖುಷಿಯಲ್ಲಿಯೇ ಪುಟ್ಟ ಸಮಾರಂಭವನ್ನೂ ಆಯೋಜಿಸಿದ್ದರು.

ಆ ನನಸಾದ ಕನಸು ಯಾವುದೆಂದರೆ `ಸ್ವಂತ ಮನೆ~ ನಿರ್ಮಾಣ. ಪುಟ್ಟ ಸಮಾರಂಭವೇ `ಗೃಹ ಪ್ರವೇಶ~.ಸಂತಸ ಹಂಚಿಕೊಳ್ಳಲು ಬಂಧು-ಮಿತ್ರರೆಲ್ಲರೂ ಸೇರಿ 400ಕ್ಕೂ ಅಧಿಕ ಮಂದಿ ನೆರೆದಿದ್ದರು. ರುಚಿ ರುಚಿಯಾದ ಭಕ್ಷ್ಯಗಳ ಭಾರಿ ಔತಣ. ಎಲ್ಲರೂ ಬಾಯಿ ಚಪ್ಪರಿಸುತ್ತಾ, ಶುಭ ಹಾರೈಸುತ್ತಾ ನಿರ್ಗಮಿಸಿದರು. ಕಡೆಗೆ ಉಳಿದವರೆಂದರೆ ರಕ್ತ ಸಂಬಂಧಿಗಳು, ಪರಮಾಪ್ತ ಮಿತ್ರರು.ಸಮಾರಂಭಕ್ಕೆ ಓಡಾಟ ನಡೆಸಿ ದಣಿದ ಎಲ್ಲರೂ ಒಂದೆಡೆ ಸೇರಿ ವಿರಮಿಸುತ್ತಾ, ತಾಂಬೂಲು ಮೆಲ್ಲುತ್ತಾ  ಮಾತುಕತೆ ನಡೆಸಿದ್ದರು. ಆಗೊಂದು ತಮಾಷೆ ಪ್ರಸಂಗ ನಡೆಯಿತು.ಮನೆಯ ಯಜಮಾನಿತಿ ಉಡುಗೊರೆಗಳ ರಾಶಿಯನ್ನು ಜೋಡಿಸುತ್ತಾ ಪಟ್ಟಿ ಮಾಡಿಡುತ್ತಿದ್ದರು. ಅವರ ಮಗಳು ಕುತೂಹಲಕ್ಕೆ ಕೆಲವು ಪೊಟ್ಟಣಗಳನ್ನು ಬಿಚ್ಚಿ ನೋಡಲಾರಂಭಿಸಿದಳು. ಮಾತುಕತೆಯಲ್ಲಿ ಮಗ್ನರಾಗಿದ್ದ ಕೆಲವರ ಗಮನ ಅತ್ತ ಹರಿಯಿತು.ಬಣ್ಣದ ಬಣ್ಣದ ಕಾಗದಗಳ ಸುಂದರ ಬಾಕ್ಸ್‌ನಿಂದ ಹೊರಬಿದ್ದ ಉಡುಗೊರೆಗಳಲ್ಲಿ ಹೆಚ್ಚಿನವು ಪುಟ್ಟ ಸ್ಟೀಲ್ ಪಾತ್ರೆಗಳಾಗಿದ್ದವು. ಕೆಲವು ಪಿಂಗಾಣಿ ಪರಿಕರಗಳು ಇದ್ದವು.ಇಂಥ ಸ್ಟೀಲ್ ಪಾತ್ರೆಗಳು ಮನೆಯಲ್ಲಿ ಮೊದಲೇ ರಾಶಿ ಇವೆ. ಈಗ ಉಡುಗೊರೆಯೂ ಅಂತಹವೇ ಬಂದಿವೆ. ಮನೆಯಲ್ಲಿರುವ ಪಿಂಗಾಣಿ ಟೀ ಸೆಟ್ಸ್, ಬೌಲ್ಸ್ ಅಡುಗೆ ಮನೆ ಷೋಕೇಸ್ ಅಲಂಕರಿಸಿವೆ. ಮತ್ತಷ್ಟು ಪಿಂಗಾಣಿ ಸೆಟ್ಸ್..! ಮನೆ ಯಜಮಾನಿಗೆ ಇವನ್ನೆಲ್ಲ ಏನಪ್ಪಾ ಮಾಡುವುದು ಎಂಬ ಚಿಂತೆ ಶುರುವಾಯಿತು.ಮತ್ತಷ್ಟು ಬಾಕ್ಸ್ ಬಿಚ್ಚುತ್ತಿದ್ದಂತೆ ಐದಾರು ಗೋಡೆ ಗಡಿಯಾರಗಳು, 4 ಐರನ್   ಬಾಕ್ಸ್, ಎರಡು ರೈಸ್ ಕುಕ್ಕರ್,  7-8 ಸರ್ವಿಂಗ್   ಸೆಟ್ಸ್, ಕೆಲವು ಷೋಕೇಸ್ ಐಟಮ್ಸ...ಉಡುಗೊರೆಗಳ ರಾಶಿ ಕಂಡು ಮನೆಯವರಷ್ಟೇ ಅಲ್ಲ, ಇತರರೂ ದಂಗಾದರು. ಎಲ್ಲರ ಮುಂದೆ ಥಟ್ಟನೆ ಎದುರಾದ ಪ್ರಶ್ನೆ.. ಇವೆಲ್ಲವೂ ಈ ಹೊಸ ಮನೆಯಲ್ಲಿ ಬಳಕೆಗೆ ಬರುತ್ತವೆಯೇ?

ಕೆಲವು ವರ್ಷಗಳ ಹಿಂದೆ ಇಂತಹುದೇ ಒಂದೆರಡು ಪ್ರಸಂಗಗಳ ಕುರಿತ ಲೇಖನ ಓದಿದ್ದು ನೆನಪಾಯಿತು.ಒಂದು ಗೃಹ ಪ್ರವೇಶ ಪ್ರಸಂಗದಲ್ಲಿ ಹೀಗೆಯೇ ಒಂದೇ ಬಗೆಯ ಉಡುಗೊರೆಗಳ ರಾಶಿ ಇದ್ದಿತು. ಅವನ್ನೆಲ್ಲ ಬಳಸುವುದು ಅಸಾಧ್ಯ ಎಂಬುದು ತಿಳಿದ ಮನೆಯೊಡತಿ ಕೆಲವು ಹೆಸರು ಕೆತ್ತಿಸಿರದ ಉಡುಗೊರೆಗಳನ್ನು ಬಂಧು-ಮಿತ್ರರ ಸಮಾರಂಭಗಳಲ್ಲಿ `ಉಡುಗೊರೆ~ ನೀಡಿ ಬಚಾವಾಗಿದ್ದರು.

ಇನ್ನೊಂದು ಪ್ರಸಂಗ ಮದುವೆ ನಿಶ್ಚಿತಾರ್ಥದ್ದು. ನವವಧುವಿಗೆ ಚಿಕ್ಕಪ್ಪ ಕೇಳುತ್ತಾರೆ, `ಮಗಳೇ ನಿನಗೇನು ಉಡುಗೊರೆ ಕೊಡಲಿ?~.ಪ್ರತಿಯಾಗಿ ಅಣ್ಣನ ಮಗಳದ್ದು, `ನಿನ್ನ ಬಜೆಟ್ ಎಷ್ಟು ಚಿಕ್ಕಪ್ಪ?~.

`10 ಸಾವಿರ ರೂಪಾಯಿ~.ತನ್ನ ಕೋಣೆಗೆ ಹೋದ ನವವಧು ಕೈಯಲ್ಲಿ ಪುಟ್ಟ ಪುಸ್ತಕ. ಅದನ್ನು ತೆರೆದು ಚಿಕ್ಕಪ್ಪನಿಗ ತೋರಿಸಿದ ಆಕೆ, `ಅಪ್ಪ 30್ಡ40 ಅಡಿ ನಿವೇಶನ ಕೊಡುತ್ತಿದ್ದಾರೆ ಚಿಕ್ಕಪ್ಪ. ಮುಂದಿನ ವರ್ಷ ಆ ನಿವೇಶನದಲ್ಲಿ ಮನೆ ಕಟ್ಟುವ ಆಲೋಚನೆ ಇದೆ. ಅತ್ತೆ-ಮಾವ ಉಡುಗೊರೆಯಾಗಿ ಮನೆಯ ಫೌಂಡೇಷನ್ ಖರ್ಚು ವಹಿಸಿಕೊಳ್ಳುವಂತೆ ಹೇಳಿದೆ. ಒಪ್ಪಿಕೊಂಡಿದ್ದಾರೆ. ನೀವು 10 ಸಾವಿರದಲ್ಲಿ ಒಂದು ರೂಮ್‌ಗೆ ಪುಟ್ಟ ವಾರ್ಡ್‌ರೋಬ್ ಪ್ರೆಸೆಂಟ್ ಮಾಡಬಹುದು~ ಎಂದಳು.ಅಂದರೆ, ಮೊದಲ ಪ್ರಸಂಗದಲ್ಲಿ ಬಂಧುಗಳು ಬಜೆಟ್ ಮಿತಿಯಲ್ಲಿ ತಮ್ಮ ಇಷ್ಟಕ್ಕೆ ತಕ್ಕಂತಹ ವಸ್ತುಗಳನ್ನು ನೀಡಿದರು. ಆದರೆ, ಆ ಉಡುಗೊರೆಗಳು ಪಡೆದವರಿಗೆ ಪ್ರಯೋಜನಕ್ಕಿಂತ ಹೊರೆಯೇ ಆಗಿ ಭಿನ್ನ ರೀತಿಯಲ್ಲಿ ವಿಲೇವಾರಿ ಆದವು.ಎರಡನೇ ಪ್ರಸಂಗದಲ್ಲಿ ಸಮೀಪದ ಬಂಧುಗಳು ಮುಂಚಿತವಾಗಿಯೇ ಕೇಳಿದ್ದರಿಂದ ಅವರು ನೀಡುವ ಉಡುಗೊರೆ ಸ್ವೀಕರಿಸಿದವರಿಗೆ ಸದುಪಯೋಗವಾಗುವಂತಹುದೂ, ಮೌಲ್ಯವುಳ್ಳದ್ದೂ ಆಗಿತ್ತು ಎನ್ನುವುದು ಸ್ಪಷ್ಟ.

 

ಅಂದರೆ, ಇಲ್ಲಿ ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕಾದ್ದು, ಯಾರು ಯಾರಿಗೇ ಉಡುಗೊರೆ ಕೊಡಲಿ, ಅದು ಪಡೆದುಕೊಂಡವರಿಗೆ ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬರುತ್ತದೆ ಎಂಬುದು ಬಹಳ ಮುಖ್ಯ.ಗಿಫ್ಟ್ ಷಾಪ್‌ಗೋ, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗೋ ಹೋಗಿ ಮನಸ್ಸಿಗೆ ತೋಚಿದ್ದು ಖರೀದಿಸಿದರೆ ಆ ಉಡುಗೊರೆಗೂ ಮೊದಲ ಪ್ರಸಂಗದಲ್ಲಿ ಒದಗಿದ ಗತಿಯೇ ಬರಬಹುದು.ದೊಡ್ಡ ಮೊತ್ತದ ಉಡುಗೊರೆಯಾಗಿದ್ದರೆ ಸ್ವೀಕರಿಸುವವರ ಅಭಿರುಚಿಯನ್ನೂ ಅರಿತು ಅಥವಾ ಅವರನ್ನೇ ವಿಚಾರಿಸಿ ನೀಡುವುದು ಉತ್ತಮ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.