ಸೋಮವಾರ, ಮೇ 16, 2022
28 °C
ಎಲ್‌ಇಟಿ-ಇಶ್ರತ್ ಜಹಾನ್ ಸಂಪರ್ಕ

ಗೃಹ ಸಚಿವಾಲಯದ ಸ್ಪಷ್ಟನೆ ಕೇಳಿದ ದಿಗ್ವಿಜಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಯಬಾ ಜೊತೆ ಇಶ್ರತ್ ಜಹಾನ್ ಸಂರ್ಪಕ ಹೊಂದಿದ್ದರೆ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಗೃಹ ಸಚಿವಾಲಯವನ್ನು ಕೇಳಿದ್ದಾರೆ.`ಇಶ್ರತ್ ಜಹಾನ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು ಎಂದು 26/11ರ ಮುಂಬೈ ಭಯೋತ್ಪಾದಕ ದಾಳಿ ಆರೋಪಿ ಡೇವಿಡ್ ಹೆಡ್ಲಿ ಹೇಳಿದ್ದಾನೆ. ಆದ್ದರಿಂದ ಈ ವಿಷಯವನ್ನು ಸ್ಪಷ್ಟಪಡಿಸಲು ಕೇಳಿರುವುದಾಗಿ' ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಭೇಟಿ ಬಳಿಕ ದಿಗ್ವಿಜಯ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಗುಪ್ತಚರ ಇಲಾಖೆ (ಐ.ಬಿ) ಮತ್ತು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ವಿಭಿನ್ನ ಹೇಳಿಕೆಗಳನ್ನು ನೀಡಿವೆ ಎಂದಿದ್ದಾರೆ.`ಎನ್‌ಐಎ ಒಂದು ತೆರನಾಗಿ ಹೇಳುತ್ತದೆ. ಐ.ಬಿ. ಮತ್ತೊಂದು ತೆರನಾಗಿ ಹೇಳುತ್ತದೆ. ಸಿಬಿಐ ಮಗದೊಂದು ಹೇಳುತ್ತದೆ.ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಸಂಸ್ಥೆಗಳ ನಡುವೆ ಸ್ಪಷ್ಟತೆ ಇರಬೇಕು. ಈ ಕುರಿತು ಮಾಧ್ಯಮ ಮೂಲಗಳು ತನಿಖೆ ನಡೆಸುತ್ತಿವೆ. ಅವುಗಳು ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ' ಎಂದು ಸಿಂಗ್ ಹೇಳಿದ್ದಾರೆ.`ದಾಳಿಯ ಹೊಣೆ ವಹಿಸಿಕೊಂಡಿದ್ದ ಇಶ್ರತ್ ಜಹಾನ್ ಮತ್ತು ಇತರರು ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿರುವ ಕಾರಣ 2005ರಲ್ಲಿ ನಡೆಸಲು ಉದ್ದೇಶಿಸಿದ್ದ ಭಯೋತ್ಪಾದಕ ದಾಳಿ ವಿಫಲವಾಗಿರುವುದಾಗಿ ಲಷ್ಕರ್-ಎ-ತೈಯಬಾ ಕಮಾಂಡರ್ ಜಕಿ-ಉರ್-ರೆಹಮಾನ್ ತನಗೆ ತಿಳಿಸಿದ್ದ ಎಂದು 2010ರಲ್ಲಿ ಅಮೆರಿಕದ ವಶದಲ್ಲಿದ್ದ ಡೇವಿಡ್ ಹೆಡ್ಲಿ ಎನ್‌ಐಎಗೆ ತಿಳಿಸಿದ್ದ. ಈ ವಿಷಯ ಐ.ಬಿ ನೀಡಿದ್ದ ವರದಿಯಲ್ಲಿಯೂ ಇತ್ತು. ಈ ಕುರಿತ ದಾಖಲೆಗಳು ಕೆಲ ಮಾಧ್ಯಮಗಳಿಗೂ ಲಭ್ಯವಾಗಿದ್ದವು. ಆದರೆ, ಎನ್‌ಐಎ ನೀಡಿದ ವರದಿಯಲ್ಲಿ ಇಶ್ರತ್‌ಗೆ ಸಂಬಂಧಿಸಿದ ಎರಡು ಪ್ಯಾರಾಗಳು ನಾಪತ್ತೆಯಾಗಿದ್ದವು' ಎಂದು ದಿಗ್ವಿಜಯ್ ತಿಳಿಸಿದ್ದಾರೆ.`26/11 ಮುಂಬೈ ದಾಳಿ ಹೊರತುಪಡಿಸಿದರೆ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಡ್ಲಿ ನೀಡಿರುವ ಹೇಳಿಕೆ ಕಾನೂನು ದೃಷ್ಟಿಯಿಂದ ಒಪ್ಪುವಂತಹದ್ದಲ್ಲ.  ಎರಡನೇ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ಆಧರಿಸಿ ಸಾಕ್ಷಿಯು ನೀಡಿದ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುವುದು' ಎಂದು ಎನ್‌ಐಎ ಮೂಲಗಳು ತಿಳಿಸಿವೆ.`ಎಲ್‌ಇಟಿ ಹಾಗೂ ಇಶ್ರತ್ ನಡುವೆ ಸಂಪರ್ಕವಿತ್ತು ಎಂದು ಹೆಡ್ಲಿ ಎನ್‌ಐಎಗೆ ತಿಳಿಸಿದ್ದ ಎಂಬ ವರದಿಯನ್ನು ಪರಿಶೀಲಿಸುವಂತೆ ದಿಗ್ವಿಜಯ್ ಸಿಂಗ್ ಕೋರಿದ್ದಾರೆ. ಅದನ್ನು ಪರಿಶೀಲಿಸಲಾಗುವುದು' ಎಂದು ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಶ್ರತ್ ಜಹಾನ್ ಮತ್ತು ಇತರರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿತ್ತು ಎಂದು ಈಚೆಗೆ ಸಿಬಿಐ ಕೋರ್ಟ್‌ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.