ಮಂಗಳವಾರ, ಮೇ 11, 2021
26 °C

ಗೆಜ್ಜೇರ ಓಣಿಯಲ್ಲಿ ಓಡಿದ ಎತ್ತುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕಾರ ಹುಣ್ಣಿಮೆ ಅಂಗವಾಗಿ ನಗರದ ಗೆಜ್ಜೇರ ಓಣಿಯಲ್ಲಿ ಎತ್ತುಗಳ ಓಟ ಭಾನುವಾರ ನಡೆಯಿತು. ದಷ್ಟಪುಷ್ಟವಾದ ಎತ್ತುಗಳ ಮೈಗೆ ಗುಲಾಬಿ ಬಣ್ಣ ಬಳಿದು ನಗರದ ಮುಂಡರಗಿ ಭೀಮರಾಯ ವೃತ್ತದ ಮುಂಭಾಗದ ರಸ್ತೆಯಲ್ಲಿ ಸಾಲಾಗಿ ನಿಲ್ಲಿಸಿ ಸಂಜೆ 6ರ ವೇಳೆಗೆ ಓಡಿಸಲಾಯಿತು. ತಾಲ್ಲೂಕು ಪಂಚಾಯಿತಿ ಮುಂಭಾಗದ ರಸ್ತೆಯಲ್ಲಿ ರಭಸದಿಂದ ಎತ್ತುಗಳು ಓಡಿದವು. ಎತ್ತುಗಳ ಮಾಲೀಕರು, ಮಕ್ಕಳು, ಸಾರ್ವಜನಿಕರು ಕೇಕೆ ಹೊಡೆಯುತ್ತಾ ಎತ್ತುಗಳ ಓಟವನ್ನು ಹುರಿದುಂಬಿಸಿದರು.ಸುಮಾರು 20 ಎತ್ತುಗಳ ಮಧ್ಯೆ ಬಾಳಪ್ಪ ಕುರಿ ಅವರ ಬೆಳ್ಳನೆಯ ಎತ್ತು ಜಯ ಸಾಧಿಸಿತು. ಬಳಿಕ ಅದನ್ನು ಪ್ಯಾಟಿ ಬಸವೇಶ್ವರ ದೇವಸ್ಥಾನದ ಮುಂಭಾಗಕ್ಕೆ ಅಲಂಕರಿಸಿ ತಂದು ಪೂಜೆ ಸಲ್ಲಿಸಿ ಇನ್ನೊಂದು ಜೋಡಿ ಎತ್ತಿನ ಜತೆ ನೊಗ ಕಟ್ಟಿ ಗವಿಮಠದವರೆಗೆ ಮೆರವಣಿಗೆ ನಡೆಸಲಾಯಿತು.ಉತ್ಸವ ವಿಶೇಷ: ಇಲ್ಲಿನ ಕನ್ನಡ ಉಪನ್ಯಾಸಕ ಲಿಂಗಪ್ಪ ಮೇಟಿ ಹೇಳುವಂತೆ, ಎತ್ತುಗಳನ್ನು ಆರೋಗ್ಯಪೂರ್ಣವಾಗಿ ನೋಡಿಕೊಳ್ಳಬೇಕು. ಅವು ಸ್ಪರ್ಧೆಗೆ ಸಿದ್ಧವಾಗಿರಬೇಕು ಎಂಬ ಉದ್ದೇಶ ಈ ಓಟದ ಹಿಂದೆ ಇದೆ. ಗೆಲ್ಲುವ ಎತ್ತಿನ ಬಣ್ಣ ನೋಡಿ ಆ ವರ್ಷ ಯಾವ ಧಾನ್ಯ ಸಮೃದ್ಧವಾದೀತು ಎಂಬ ಭವಿಷ್ಯ ಊಹೆ ಮಾಡಲಾಗುತ್ತದೆ.

ಬಿಳಿ ಬಣ್ಣದ ಎತ್ತು ಗೆದ್ದರೆ ಹಿಂಗಾರು ಬೆಳೆ, ಬಿಳಿ ಧಾನ್ಯ (ಬಿಳಿ ಜೋಳ, ಶೇಂಗಾ ಇತ್ಯಾದಿ) ಹೆಚ್ಚಾಗುತ್ತದೆ. ಕಂದು ಬಣ್ಣದ ಎತ್ತು ಗೆದ್ದರೆ ಮುಂಗಾರು ಬೆಳೆ (ಕಂದು ಧಾನ್ಯ ಬತ್ತ, ಮೆಕ್ಕೆಜೋಳ) ಸಮೃದ್ಧವಾಗುತ್ತದೆ ಎಂದು ರೈತರು ಊಹೆ ಮಾಡುತ್ತಾರೆ. ಕಾರ್ಯಕ್ರಮದ ಕೊನೆಯ ಅಂಗವಾಗಿ ಹಿಂದೆ ಗಾಳಿಪಟ ಉತ್ಸವ ನಡೆಯುತ್ತಿತ್ತು. ಈಗ ಅದು ನಿಂತಿದೆ ಎಂದು ನೆನಪಿಸಿದರು. ಗೆಜ್ಜೇರ ಓಣಿಯ ಮುಖಂಡರಾದ ಸೋಮಪ್ಪ ಗೆಜ್ಜೆ, ವಿಜಯಕುಮಾರ್ ಕವಲೂರು, ಕೆ.ಕೆ.ಮಹೇಂದ್ರಪ್ಪ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.