ಮಂಗಳವಾರ, ಜೂನ್ 22, 2021
23 °C

ಗೆಳೆಯನ ಚಿಕಿತ್ಸೆಗೆ ಹಣ ಸಂಗ್ರಹ; ಮಿಡಿದ ಮಾನವೀಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ಈಗಿನ ಕಾಲೇಜು ಹುಡುಗರಿಗೆ ಸಾಮಾಜಿಕ ಕಾಳಜಿ ಇಲ್ಲ ಎಂಬ ಆರೋಪ ಸುಳ್ಳು ಮಾಡುವಂತೆ ಗೆಳೆಯನ ಚಿಕಿತ್ಸೆಗಾಗಿ ಕೆಲ ಸ್ನೇಹಿತರು ಬೀದಿ ಅಲೆದು ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.ನಗರದ ಪಲ್ಲಾಗಟ್ಟಿ ಅಡವಪ್ಪ ಪದವಿ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಪುಟ್ಟರಂಗ ಫೆ.24ರಂದು ಕಾಲೇಜು ಮುಂದೆ ರಸ್ತೆ ದಾಟುವಾಗ ಟಾಟಾ ಮ್ಯೋಜಿಕ್ ವಾಹನ ಡಿಕ್ಕಿ ಹೊಡೆದಿತ್ತು. ತಲೆ, ಕೈಕಾಲುಗಳಿಗೆ ತೀವ್ರ ಗಾಯಗೊಂಡಿದ್ದ ಪುಟ್ಟರಂಗ ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದರು. ಇಲ್ಲಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು.ಅರಸೀಕೆರೆ ತಾಲ್ಲೂಕು ಜೆ.ಸಿ.ಪುರ ಸಮೀಪದ ಚಿಕ್ಕಹಲ್ಕೂರು ಗ್ರಾಮದ ಪುಟ್ಟರಂಗ ಅವರ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ. ತಂದೆ ಕೃಷ್ಣಪ್ಪ ಬೆಂಗಳೂರಿನಲ್ಲಿ ಅಷ್ಟಿಷ್ಟು ದುಡಿಮೆ ಮಾಡಿ ಇದ್ದೊಬ್ಬ ಮಗನನ್ನು (ಮೂವರು ಪುತ್ರಿಯರು) ಓದಿಸುತ್ತಿದ್ದರು.ಅಪಘಾತದಲ್ಲಿ ಅಸ್ವಸ್ಥಗೊಂಡ ಮಗನನ್ನು ನೋಡಲು ಬಂದಿದ್ದ ತಂದೆ ಕುಸಿದು ಬಿದ್ದಿದ್ದರು. ಮಾನಸಿಕವಾಗಿ ಆಘಾತಗೊಂಡಿದ್ದ ಅವರು ಇಂದಿಗೂ ಚೇತರಿಸಿಕೊಂಡಿಲ್ಲ. ತಾಯಿ ಅಸಹಾಯಕರಾಗಿ ದುಃಖದಲ್ಲಿ ಮುಳುಗಿದ್ದಾರೆ.

 

ಪುಟ್ಟರಂಗ  ಆಸ್ಪತ್ರೆ ಖರ್ಚು ಭರಿಸಲು ಸಂಬಂಧಿಕರಿಗೆ ಸಾಧ್ಯವಾಗುತ್ತಿಲ್ಲ. ಅಪಘಾತ ಮಾಡಿದ ವಾಹನವನ್ನು ನಗರ ಠಾಣೆಗೆ ತಂದು ನಿಲ್ಲಿಸಲಾಗಿದೆ ಹೊರತು ಮಾಲೀಕರಿಂದ ಬೇರ‌್ಯಾವುದೇ ನೆರವು ಸಿಕ್ಕಿಲ್ಲ.ಸ್ನೇಹಿತನ ಪರಿಸ್ಥಿತಿ ಅರಿತ ಗೆಳೆಯರು ನಗರದಲ್ಲಿ ಬೀದಿ ಬೀದಿ ಅಲೆದು ಸ್ನೇಹಿತನ ಸ್ಥಿತಿ ವಿವರಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ರೂ.30ಸಾವಿರ ಸಂಗ್ರಹಿಸಿದ್ದಾರೆ.ಚಿಕಿತ್ಸೆಗೆ ಅಷ್ಟು ಹಣ ಸಾಕಾಗದ್ದರಿಂದ ಸಂಗ್ರಹಣೆ ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳಾದ ವಿನಯ್, ರಾಜಶ್ರೀ, ಸಿಂಧು, ಮಂಜುನಾಥ್ ಮತ್ತಿತರರು ಈ ತಂಡದಲ್ಲಿದ್ದಾರೆ. ನೆರವು ನೀಡಲು ಇಚ್ಚಿಸುವರು 9900327817 ದೂರವಾಣಿ ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.