ಬುಧವಾರ, ಮೇ 12, 2021
24 °C

ಗೋಕಾಕ ಗ್ರಾಮಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ ಗ್ರಾಮಗಳಿಗೆ ನುಗ್ಗಿದ ನೀರು

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಮಳೆ ಕಡಿಮೆಯಾಗಿದೆ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ತಗ್ಗು ಪ್ರದೇಶಗಳಿಗೆ ಮತ್ತು ತಾಲ್ಲೂಕಿನ ಮೂರು ಗ್ರಾಮಗಳಿಗೆ ಘಟಪ್ರಭಾ ನದಿ ನೀರು ನುಗ್ಗಿದೆ.ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಬಿಟ್ಟಿರುವ ನೀರಿನ ಪ್ರಮಾಣ 1.87 ಲಕ್ಷ ಕ್ಯೂಸೆಕ್‌ಗೆ ಏರಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ 16 ಸೇತುವೆಗಳು ನೀರಿನಲ್ಲಿ ಮುಳುಗಿವೆ. ಹಿಡಕಲ್ ಹಾಗೂ ಶಿರೂರು ಅಣೆಕಟ್ಟೆಗಳಿಂದ ನೀರು ಬಿಟ್ಟ ಪರಿಣಾಮವಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಗೋಕಾಕ ಪಟ್ಟಣದ ಡೋಹರಗಲ್ಲಿ, ಕುಂಬಾರ ಓಣಿ, ಉಪ್ಪಾರ ಓಣಿ, ಹಳೆ ದನಗಳ ಪೇಟೆಗೆ ನೀರು ನುಗ್ಗಿದೆ.ಹಳೆ ದನಗಳ ಪೇಟೆಯ ಅಂಗಡಿಗಳು ನೀರಿನಲ್ಲಿ ಮುಳುಗಿದ್ದರೆ ಡೋಹರಗಲ್ಲಿಯಲ್ಲಿ ಮನೆಗಳ ಬಾಗಿಲವರೆಗೆ ನೀರು ಬಂದಿದೆ. ಇಲ್ಲಿಯ 10 ಕುಟುಂಬಗಳನ್ನು ಶನಿವಾರ ರಾತ್ರಿಯೇ ಸ್ಥಳಾಂತರಿಸಲಾಗಿತ್ತು. ತಾಲ್ಲೂಕಿನ ಕುಂದರಗಿ ಉದಗಟ್ಟಿ ಹಾಗೂ ಮಸಗುಪ್ಪಿ ಗ್ರಾಮದ ಅಂಚಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ 35 ಕುಟುಂಬಗಳ 140 ಮಂದಿಯನ್ನು ಭಾನುವಾರ ಸ್ಥಳಾಂತರಿಸಲಾಗಿದೆ. 

ಶನಿವಾರ ಸಂಚಾರಕ್ಕೆ ಮುಕ್ತವಾಗಿದ್ದ ರಾಯಬಾಗ ತಾಲ್ಲೂಕಿನ ಕುಡುಚಿ ಸೇತುವೆ ಮತ್ತೆ ನೀರಿನಲ್ಲಿ ಮುಳುಗಿದೆ. ಚಿಕ್ಕೋಡಿ ತಾಲ್ಲೂಕಿನ ಎಂಟು, ಹುಕ್ಕೇರಿ ಮತ್ತು ಖಾನಾಪುರ ತಾಲ್ಲೂಕಿನ ತಲಾ ಮೂರು, ರಾಯಬಾಗ ಹಾಗೂ ಗೋಕಾಕ ತಾಲ್ಲೂಕಿನ ತಲಾ ಒಂದು ಸೇತುವೆ ನೀರಿನಲ್ಲಿ ಮುಳುಗಿವೆ.ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ಮಹಾರಾಷ್ಟ್ರದ ಕೊಯ್ನಾದಲ್ಲಿ 259 ಮಿ.ಮೀ, ಮಹಾಬಳೇಶ್ವರದ 329 ಮಿ.ಮೀ, ನವಜಾದಲ್ಲಿ 189 ಮಿ.ಮೀ ಮಳೆಯಾಗಿದೆ. ಭಾನುವಾರ ಬೆಳಿಗ್ಗೆಯಿಂದ ಮಳೆ ಕಡಿಮೆಯಾಗಿದೆ ಎನ್ನುವ ಸುದ್ದಿ ಜಿಲ್ಲೆಯ ಜನತೆಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯಲ್ಲಿಯೂ ಭಾನುವಾರ ಮಧ್ಯಾಹ್ನದಿಂದ ಮಳೆ ಸ್ವಲ್ಪ ಬಿಡುವು ನೀಡಿದೆ.ಆಲಮಟ್ಟಿಯಿಂದ ಅಪಾರ ನೀರು ಹೊರಕ್ಕೆ: ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ನೀರು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಭಾನುವಾರ ಸಂಜೆ ಹೊರ ಹರಿವನ್ನು 2.75 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.  ಒಂದು ವಾರದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಕೃಷ್ಣಾ ತೀರದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಆದರೆ ಇಲ್ಲಿ ಬಿಟ್ಟ ಪ್ರಮಾಣದಷ್ಟೇ ನೀರನ್ನು ನಾರಾಯಣಪುರ ಜಲಾಶಯದಿಂದಲೂ ಬಿಡುತ್ತ್ದ್ದಿದುರಿಂದ ಆತಂಕದ ಸ್ಥಿತಿ ಇರಲಿಲ್ಲ. ಈಗ ಕೃಷ್ಣಾ ತೀರದ ಪ್ರದೇಶದಲ್ಲಿ ನೆರೆಯ ಆತಂಕ ಮತ್ತೆ ಶುರುವಾಗಿದೆ.ಆಲಮಟ್ಟಿ ಜಲಾಶಯ ಮುಂಭಾಗ ಹಾಗೂ ನಾರಾಯಣಪುರ ಜಲಾಶಯದ ಹಿಂಭಾಗದ ಪ್ರದೇಶಗಳಾದ ಬಸವನಬಾಗೇವಾಡಿ ತಾಲ್ಲೂಕಿನ ಅರಳದಿನ್ನಿ, ಮುದ್ದೇಬಿಹಾಳ ತಾಲ್ಲೂಕಿನ ಯಲಗೂರ, ಕಾಶೀನಕುಂಟಿ, ಯಲ್ಲಮ್ಮನಬೂದಿಹಾಳ, ಹೊಳೆ ಮಸೂತಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಮುಗಳೊಳ್ಳಿ, ನಾಯನೇಗಲಿ, ಹುನಗುಂದ ತಾಲ್ಲೂಕಿನ ಕಟಗೂರ ಮೊದಲಾದ ಕೃಷ್ಣಾ ತೀರದ ಪ್ರದೇಶದಲ್ಲಿ ನೆರೆಯ ಆತಂಕದ ಸ್ಥಿತಿ ಉಂಟಾಗಿದೆ.ಭಾನುವಾರ ಬೆಳಿಗ್ಗೆ ಬಸವನಬಾಗೇವಾಡಿ, ಮುದ್ದೇಬಿಹಾಳ ತಹಶೀಲ್ದಾರರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಎಲ್ಲಿಯೂ ಅಂಥ ಭಾರಿ ಪ್ರಮಾಣದ ಹಾನಿ ಸಂಭವಿಸಿಲ್ಲವಾದರೂ, ಕೃಷ್ಣಾ ತೀರದ ಕೆಲ ಪ್ರದೇಶಗಳಲ್ಲಿ ಬೆಳೆಗಳು ಜಲಾವೃತವಾಗಿವೆ.ರಸ್ತೆ ಸಂಪರ್ಕ ಸ್ಥಗಿತ: ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕೋಟೆ ಬಳಿಯ ತುಂಗಭದ್ರಾ ಸೇತುವೆ ಮೇಲೆ ಎರಡನೇ ದಿನವೂ ಪ್ರವಾಹ ಮುಂದುವರಿದಿದ್ದು, ಕಳೆದ 38 ತಾಸುಗಳಿಂದ ಉತ್ತರ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.ಪ್ರಯಾಣಿಕರು ಹೊಸಪೇಟೆ, ಹುಲಿಗಿ, ಆನೆಗುಂದಿ ಮಾರ್ಗವಾಗಿ ಸುತ್ತು ಬಳಸಿ ಪ್ರಯಾಣಿಸುತ್ತಿದ್ದಾರೆ. ಇಟಗಿ ಬಳಿಯ ನಾರಿಹಳ್ಳ ಸೇತುವೆ ಮೇಲೆ ನೀರು ತುಂಬಿರುವುದರಿಂದ ಕಂಪ್ಲಿ-ಸಿರುಗುಪ್ಪ ಸಂಚಾರ ಸ್ಥಗಿತಗೊಂಡಿದೆ.ತುಂಗಭದ್ರಾ ಅಣೆಕಟ್ಟಿನಿಂದ ಭಾನುವಾರ ಸಂಜೆ 1.20 ಲಕ್ಷ ಕ್ಯೂಸೆಕ್ ನೀರು ಹೊರಗೆ ಬಿಡಲಾಗಿದ್ದು, ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದಿಂದ ಹಂಪಿ ಪ್ರಕಾಶನಗರಕ್ಕೆ ಸಾಗುವ ಮಾರ್ಗ ಮಾವಿನತೋಪು, ರಾಮಲಕ್ಷ್ಮಣ ದೇವಾಲಯಕ್ಕೆ ಹೋಗುವ ಮಾರ್ಗ ತಳವಾರಘಟ್ಟ ಸೇತುವೆ ಜಲಾವೃತಗೊಂಡಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ.ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೂವಿನಹೆಡ್ಗಿ ಗ್ರಾಮದ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಸೇತುವೆ ಮುಳುಗಲು ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ.ಈ ಸೇತುವೆ ಮುಳುಗಿದರೆ ಯಾದಗಿರಿ ಜಿಲ್ಲೆಯಿಂದ ಮಹಾರಾಷ್ಟ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಬಂದ್ ಆಗಲಿದೆ. ಪ್ರಯಾಣಿಕರು ಸುಮಾರು 70 ಕಿ.ಮೀ. ಸುತ್ತುವರಿದು ಪ್ರಯಾಣಿಸಬೇಕಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.