ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಂಸ ಸಂಗ್ರಹ ಶಂಕೆ: ಹತ್ಯೆ

Last Updated 30 ಸೆಪ್ಟೆಂಬರ್ 2015, 19:36 IST
ಅಕ್ಷರ ಗಾತ್ರ

ಗ್ರೇಟರ್‌ನೋಯಡಾ(ಪಿಟಿಐ): ಉದ್ರಿಕ್ತ ಗುಂಪೊಂದು ಗೋಮಾಂಸ ಸಂಗ್ರಹಿಸಿಟ್ಟ ಆರೋಪದಲ್ಲಿ 50 ವರ್ಷದ ವ್ಯಕ್ತಿಯನ್ನು ಇಲ್ಲಿನ ದಾದ್ರಿ ಗ್ರಾಮದಲ್ಲಿ ಹೊಡೆದು  ಕೊಂದಿದೆ.

ಹಸುವೊಂದನ್ನು ಕೊಂದು ಅದರ ಮಾಂಸವನ್ನು ಸಂಗ್ರಹಿಸಿ ಇಡಲಾಗಿದೆ ಎಂಬ ವದಂತಿ ಗ್ರಾಮದಲ್ಲಿ ಹಬ್ಬುತ್ತಿದ್ದಂತೆಯೇ ಸುಮಾರು ಇನ್ನೂರು ಜನರಿದ್ದ ಗುಂಪು ಸೋಮವಾರ ರಾತ್ರಿ ಇಖ್ಲಾಕ್‌ ಎಂಬ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನರ ಗುಂಪು ಇಖ್ಲಾಕ್‌ ಅವರನ್ನು ಹೊಡೆದು ಸಾಯಿಸಿತಲ್ಲದೆ ಅವರ 22 ವರ್ಷದ ಮಗನ ಮೇಲೆ ಹಲ್ಲೆ ನಡೆಸಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 10 ಜನರ ವಿರುದ್ಧ ದೂರು ದಾಖಲಿಸಲಾಗಿದ್ದು ಆರು ಜನರನ್ನು ಬಂಧಿಸಲಾಗಿದೆ.
ಪ್ರಕರಣದ ಬಗ್ಗೆ ಮ್ಯಾಜಿಸ್ಟೀರಿಯಲ್‌ ತನಿಖೆಗೆ ಆದೇಶಿಸಲಾಗಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಈ ಪ್ರದೇಶದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಯಾವುದೇ ರೀತಿಯ ಕೋಮುಗಲಭೆಗಳನ್ನು ತಪ್ಪಿಸುವುದಕ್ಕಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆಯ ಬಗ್ಗೆ ಮಾತನಾಡಿದ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು, ಮನೆಯಲ್ಲಿ ಆಡಿನ ಮಾಂಸದ ಇತ್ತು. ಗೋ ಹತ್ಯೆ ಮಾಡಿ ಮಾಂಸ ಸಂಗ್ರಹಿಸಿ ಇರಿಸಲಾಗಿದೆ ಎಂದು ಸ್ಥಳೀಯ ದೇವಾಲಯವೊಂದರಲ್ಲಿ ಪ್ರಕಟಿಸಲಾಯಿತು. ಇದರಿಂದ ಉದ್ರಿಕ್ತ ಗುಂಪು ಹಿಂಸೆಗಿಳಿಯಿತು ಎಂದು ಹೇಳಿದ್ದಾರೆ.

ರಾಜಕೀಯ ತಿರುವು: ಜನರನ್ನು ಧ್ರುವೀಕರಿಸುವುದಕ್ಕಾಗಿ ಬಿಜೆಪಿ ಸೃಷ್ಟಿಸಿರುವ ‘ದ್ವೇಷದ ವಾತಾವರಣ’ ಈ ಕೃತ್ಯಕ್ಕೆ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಕಾಂಗ್ರೆಸ್ ಘಟನೆಯನ್ನು ಖಂಡಿಸಿದ್ದು, ಬಿಹಾರದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದು ಇಂತಹ ಘಟನೆಗಳು ಇನ್ನಷ್ಟು ಹೆಚ್ಚುವ ಆತಂಕವಿದೆ ಎಂದು ಹೇಳಿದೆ. ದೆಹಲಿಯ ಹೊರ ವಲಯದಲ್ಲಿಯೇ ಇಂತಹ ಘಟನೆ ನಡೆದಿರುವುದು ಆಘಾತಕಾರಿ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌  ಮನು ಸಿಂಘ್ವಿ ಹೇಳಿದ್ದಾರೆ.

ಆಡಳಿತಾರೂಢ ಸಮಾಜವಾದಿ ಪಕ್ಷ ಕೂಡ ಘಟನೆಗೆ ಸಂಬಧಿಸಿ ಬಿಜೆಪಿಯನ್ನು ಟೀಕಿಸಿದೆ. ಗೋಮಾಂಸ ನಿಷೇಧದಂತಹ ವಿಷಯಗಳನ್ನು ದ್ವೇಷವನ್ನು ಹರಡುವುದಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಎಸ್‌ಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT