ಭಾನುವಾರ, ಜನವರಿ 19, 2020
27 °C

ಗೋವಾದಲ್ಲಿ ಜೆಡಿಎಸ್ ಶಾಸಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣಸೌಧ (ಬೆಳಗಾವಿ): ಹತ್ತು ದಿನಗಳ ಅಧಿವೇಶನ ಮುಗಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನ ಹಲವು ಶಾಸಕರು ವಿಶ್ರಾಂತಿಗಾಗಿ ಗೋವಾಗೆ ತೆರಳಿದ್ದಾರೆ.ಶಾಸಕರಾದ ಜಮೀರ್ಅಹಮದ್, ಎನ್.ಚೆಲುವರಾಯ­ಸ್ವಾಮಿ ಗೋವಾ ಯಾತ್ರೆ ಆಯೋಜಿಸಿದ್ದಾರೆ. ಪಕ್ಷ ಸಂಘಟನೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟು­ಕೊಂಡು ಪ್ರವಾಸ ಹಮ್ಮಿಕೊಳ್ಳು­ವುದು, ಕೆಲ ಶಾಸಕರಲ್ಲಿ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಶಮನ ಸೇರಿದಂತೆ ಹಲವು ವಿಷಯಗಳ ಬಗ್ಗೆ  ಚರ್ಚೆ ನಡೆಯಲಿದೆ.ಕೆಲವು ತಿಂಗಳಿಂದ ಈಚೆಗೆ ಜಮೀರ್ ಅಹಮದ್ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಇದ್ದಾರೆ. ‘ಸಕ್ರಿಯ ರಾಜಕೀಯದಿಂದ ದೂರ ಇರುತ್ತೇನೆ. ಕ್ಷೇತ್ರಕ್ಕೆ ಅಷ್ಟೇ ಸೀಮಿತ­ವಾಗಿರುತ್ತೇನೆ’ ಎಂಬ ಮಾತನ್ನು ಅವರೇ ಆಡಿದ್ದರು.ಇನ್ನೂ ಕೆಲ ಶಾಸಕರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುತ್ತಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಗೋವಾದಲ್ಲೇ ಚರ್ಚೆ ನಡೆಸಿ ಪರಿಹಾರ ಕಂಡು­ಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಜೆಡಿಎಸ್‌ನ ಅನೇಕ ಶಾಸಕರು ಕಲಾಪದಲ್ಲಿ ಭಾಗವಹಿಸಿರ­ಲಿಲ್ಲ. ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಉಪ ನಾಯಕ ವೈ.ಎಸ್.ವಿ.ದತ್ತ, ಎಚ್.ಡಿ.­ರೇವಣ್ಣ, ಬಿ.ಬಿ.ನಿಂಗಯ್ಯ, ಎಚ್.ಕೆ.­ಕುಮಾರ­ಸ್ವಾಮಿ, ಮಧು ಬಂಗಾರಪ್ಪ, ಎಚ್.ಎಸ್.ಶಿವಶಂಕರ್, ಎಂ.ಕೃಷ್ಣಾ­ರೆಡ್ಡಿ, ಎನ್.ಎಚ್. ಕೋನರೆಡ್ಡಿ ಮಾತ್ರವೇ ಸದನದಲ್ಲಿ ಹಾಜರಿದ್ದರು.‘ಇದರಲ್ಲಿ ಯಾವುದೇ ವಿಶೇಷ ಇಲ್ಲ. ಮಧ್ಯಾಹ್ನ  ಧಾರವಾಡದ ನಮ್ಮ ಮನೆಯಲ್ಲಿ ಊಟ ಮಾಡಿ ಸಂಜೆ ಗೋವಾಗೆ ತೆರಳುತ್ತೇವೆ. ಕೆಲವು ಶಾಸಕರು ಗುರುವಾರ ಸಂಜೆಯೇ ಹೋಗಿದ್ದಾರೆ. ಪಕ್ಷ ಸಂಘಟನೆ, ಮುಂಬ­ರುವ ಲೋಕಸಭಾ ಚುನಾ­ವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಇದೆಲ್ಲ ಊಹಾಪೋಹ ಅಷ್ಟೆ’ ಎಂದು ಕೋನರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.‘ಗೋವಾ ನೋಡುವ ಆಸೆ ಇದ್ದ­ವರು, ಮುಖಂಡರು ಹೋಗಿದ್ದಾರೆ. ನಾವು ಹತ್ತು ದಿನಗಳಿಂದ ಊರಿಗೆ ಹೋಗಿಲ್ಲ. ನಮಗೆ ಕ್ಷೇತ್ರಗಳಲ್ಲಿ ಕೆಲಸ ಇದೆ. ಹೀಗಾಗಿ ಗೋವಾಗೆ ತೆರಳುತ್ತಿಲ್ಲ’ ಎಂದು ಎಚ್.ಎಸ್.ಶಿವಶಂಕರ್ ಮತ್ತು ಸುಧಾಕರ ಲಾಲ್ ತಿಳಿಸಿದರು.

ಪ್ರತಿಕ್ರಿಯಿಸಿ (+)