ಮಂಗಳವಾರ, ಆಗಸ್ಟ್ 4, 2020
23 °C

ಗೌತಮಪುರದ ಪೀಲೆಗಳು...

-ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಗೌತಮಪುರದ ಪೀಲೆಗಳು...

ಫುಟ್‌ಬಾಲ್ ಆಡುವಾಗ ಕ್ರೀಡಾಂಗಣದಲ್ಲಿಯೇ ಮೃತಪಟ್ಟ ಡಿ. ವೆಂಕಟೇಶನ ಸ್ಮಾರಕ. ಅದರ ಪಕ್ಕದಲ್ಲಿಯೇ ಫುಟ್‌ಬಾಲ್ ದಂತಕತೆ ಪೀಲೆ ಮೂರ್ತಿ...!

ಬೆಂಗಳೂರಿನ ಆ ಬಡಾವಣೆಯಲ್ಲಿ ಹುದುಗಿರುವ ಫುಟ್‌ಬಾಲ್ ಪ್ರೇಮವನ್ನು ಇಣುಕಿ ನೋಡುವ ಉದ್ದೇಶದಿಂದ ಗೌತಮಪುರಕ್ಕೆ ಹೋದಾಗ ಮೊದಲು ನಮ್ಮನ್ನು ಸ್ವಾಗತಿಸುವುದೇ ಈ ಎರಡು ಚಿತ್ರಗಳು. ಇಲ್ಲಿನ ಜನ ಫುಟ್‌ಬಾಲ್ ಮೇಲೆ ಇಟ್ಟಿರುವ ಪ್ರೀತಿಗೆ, ಆಟದ ಬಗ್ಗೆ ಹೊಂದಿರುವ ಗೌರವಕ್ಕೆ ವೆಂಕಟೇಶ್ ಮತ್ತು ಪೀಲೆ ಅವರ ಚಿತ್ರಗಳೇ ಜ್ವಲಂತ ಸಾಕ್ಷ್ಯ ನುಡಿಯುತ್ತವೆ. ಒಂದು ಕ್ಷಣ `ಆಟದ ಮೇಲಿನ ಪ್ರೀತಿ ಹೀಗೂ ಇರುತ್ತದಾ' ಎಂದು ನಮ್ಮಲ್ಲೇ ಅಚ್ಚರಿ ಉಂಟು ಮಾಡುತ್ತದೆ.ಗೌತಮಪುರದ ಪ್ರತಿ ಮನೆಯಲ್ಲಿ ಕನಿಷ್ಠ ಇಬ್ಬರು ಫುಟ್‌ಬಾಲ್ ಆಟಗಾರರು ಸಿಕ್ಕೇ ಸಿಗುತ್ತಾರೆ. ಬ್ರೆಜಿಲ್‌ನ ದಂತಕತೆ ಪೀಲೆ ಮೂರ್ತಿ ನಿರ್ಮಿಸಿರುವ ಇಲ್ಲಿನ ಜನರ ಮನದಲ್ಲಿ ಹುದುಗಿರುವ ಫುಟ್‌ಬಾಲ್ ಪ್ರೇಮವನ್ನು ನೋಡಬೇಕು. ಅದಕ್ಕಾಗಿ ಗಲ್ಲಿ ಗಲ್ಲಿಗಳಲ್ಲಿ ಅಲೆದಾಡಬೇಕು. ಸ್ಥಳೀಯರನ್ನು ಮಾತನಾಡಿಸಬೇಕು. ಆಗ ಒಂದು ಕ್ರೀಡೆಯನ್ನು ಇಷ್ಟೊಂದು ಗಾಢವಾಗಿ ಪ್ರೀತಿಸಲು ಸಾಧ್ಯವಾ ಎನ್ನುವ ಅನುಮಾನ ಕಾಡದೇ ಇರದು.ಪೀಲೆ ಮೂರ್ತಿಯ ಪಕ್ಕದಲ್ಲಿಯೇ ಇರುವ ವೆಂಕಟೇಶ್ ಚಿತ್ರವೂ ಇಲ್ಲಿನ ಜನರ ಫುಟ್‌ಬಾಲ್ ಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ. ಹಲವು ಕ್ಲಬ್‌ಗಳ ಪರ ಆಡಿದ್ದ ವೆಂಕಟೇಶ್ ಅವರ ಸ್ಮಾರಕದ ಅಡಿಯಲ್ಲಿ ಬರೆದ ಅಕ್ಷರದ ಸಾಲುಗಳಲ್ಲಿ ಪ್ರತಿಭಾನ್ವಿತ ಆಟಗಾರನೊಬ್ಬನನ್ನು ಕಳೆದುಕೊಂಡ ನೋವಿನ ಸಂಗತಿಗಳು ದಾಖಲಾಗಿವೆ. ಆ ಸಾಲುಗಳಲ್ಲಿ ನೋವು, ಬೇಸರ ಅಡಗಿವೆ. ಅದರ ಜೊತೆಗೆ ಸಾಧನೆಯ ಕಿರು ಪ್ರವರ ಕೂಡ ದಾಖಲಿಸಲಾಗಿದೆ. ಆಡುತ್ತಲೇ ಜೀವ ಬಿಟ್ಟ ದುರ್ಘಟನೆ ನಡೆದರೂ, ಇಲ್ಲಿನ ಜನರ ಬದುಕು ಇಂದಿಗೂ ಫುಟ್‌ಬಾಲ್. ಹುಟ್ಟಿರುವುದೇ ಕ್ರೀಡೆಯನ್ನು ಆಡಲು. ಬದುಕಿರುವುದೇ ಸಾಧನೆ ಮಾಡಲು ಎನ್ನುವಂತಹ ದಿಟ್ಟ ಛಲ ಗೌತಮಪುರದ ಜನರದ್ದು. ಅವರು ಅಪ್ಪಿತಪ್ಪಿಯೂ ಬೇರೆ ಕ್ರೀಡೆಗಳ ಬಗ್ಗೆ ಯೋಚಿಸುವುದಿಲ್ಲ. ಗಾಢವಾಗಿ ಈ ಕ್ರೀಡೆಯನ್ನು ಪ್ರೀತಿಸುವುದು ಗೌತಮಪುರದ ಜನ ಮಾತ್ರವಲ್ಲ. ಆಸ್ಟಿನ್ ಟೌನ್, ಮರ್ಫಿ ಟೌನ್ ಹಾಗೂ ಪೆರಿಯಾರ್ ನಗರಗಳಲ್ಲಿ ಆಟದ ಕಂಪು ಹಬ್ಬಿದೆ. ಈ ಬಡಾವಣೆಗಳಲ್ಲಿ ಬಾಲ್ಯದಿಂದಲೇ ಫುಟ್‌ಬಾಲ್‌ನತ್ತ ಮುಖ ಮಾಡುವುದು ಮಾಮೂಲು.ಕ್ರೀಡೆಯಿಂದಲೇ ಕನಸು ಹುಟ್ಟಿಕೊಳ್ಳುತ್ತದೆ. ಇನ್ನಷ್ಟು, ಮತ್ತಷ್ಟು ಕನಸುಗಳನ್ನು ಕಾಣಲು ಪ್ರೇರಣೆಯಾಗುತ್ತದೆ. ಸಾಧನೆಗೂ ವೇದಿಕೆಯಾಗುತ್ತದೆ. ಬದುಕಿನ ಹುಮ್ಮಸ್ಸು ಹೆಚ್ಚಿಸುತ್ತದೆ. ಇದಕ್ಕೆಲ್ಲಾ ಕಾರಣ ಒಂದೇ; ಅದು ಫುಟ್‌ಬಾಲ್ ಮೇಲಿನ ಪ್ರೀತಿ.ಮಡುಗಟ್ಟಿದ ಆ ದಿನ...

ಫುಟ್‌ಬಾಲ್ ಆಡುವುದನ್ನೇ ಉಸಿರಾಗಿಸಿಕೊಂಡ ಗೌತಮಪುರದ ಜನ ಆ ದುರಂತದ ನೆನಪನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅದು ಮಾರ್ಚ್ 21, 2012.

ಎಲ್ಲರಿಂದಲೂ ಶಹಬ್ಬಾಸ್ ಎನಿಸಿಕೊಂಡಿದ್ದ ಯುವ ಆಟಗಾರ ವೆಂಕಟೇಶ್ ಫುಟ್‌ಬಾಲ್ ಟೂರ್ನಿ ಆಡುವ ವೇಳೆ ಚೆಂಡು ಬಡಿದು ಕ್ರೀಡಾಂಗಣದಲ್ಲಿಯೇ ಸಾವನ್ನಪ್ಪಿದ್ದ. ಆ ಸಾವು ಗೌತಮಪುರದ ಜನರನ್ನು ಇನ್ನಿಲ್ಲದಂತೆ ಕಾಡಿತ್ತು. ಆತನ ಅಂತ್ಯ ಸಂಸ್ಕಾರ ಮುಗಿಯುವ ತನಕ ಬಡಾವಣೆಯಲ್ಲಿ ಒಂದೇ ಒಂದು ಮನೆಯಲ್ಲಿ ಒಲೆಗೆ ಬೆಂಕಿ ಹಚ್ಚಿರಲಿಲ್ಲ. ಎಲ್ಲರೂ ಯುವ ಆಟಗಾರನ ಸಾವಿಗೆ ಕಣ್ಣೀರಿಟ್ಟಿದ್ದರು. ಫುಟ್‌ಬಾಲ್ ಬಗ್ಗೆ ಜನ ಹೊಂದಿರುವ ಪ್ರೀತಿಗೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು.ಈ ಘಟನೆ ನಡೆದ ಬಳಿಕ ಗೌತಮಪುರದಲ್ಲಿ ಫುಟ್‌ಬಾಲ್ ಆಡುವುದು ಕಡಿಮೆಯಾಗಿಲ್ಲ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಸಮಯದ ಮಿತಿಯಿಲ್ಲ. ನೂತನವಾಗಿ ಸಜ್ಜುಗೊಳ್ಳುತ್ತಿರುವ ಕ್ರೀಡಾಂಗಣದಲ್ಲಿ ಸದಾ ಆಡುತ್ತಿರುವುದೇ ಇಲ್ಲಿನ ಬಹುತೇಕ ಬಾಲಕರ ಕಾಯಕ. ವೆಂಕಟೇಶನ ನೆನಪನ್ನು ಅಮರವಾಗಿಸುವ ಉದ್ದೇಶದಿಂದ ಈ ಬಡಾವಣೆಗೆ ಹೊರಡುವ ಆರಂಭದಲ್ಲಿಯೇ ಸ್ಮಾರಕವನ್ನು ನಿರ್ಮಿಸಲಾಗಿದೆ. ಅದರ ಪಕ್ಕದಲ್ಲಿಯೇ ಫುಟ್‌ಬಾಲ್ ಮೇಲೆ ಕಾಲಿಟ್ಟು ಗಂಭೀರವಾಗಿ ನಿಂತ ದಂತಕತೆ ಪೀಲೆ ಚಿತ್ರ. 21 ವರ್ಷದೊಳಗಿನವರ ರಾಜ್ಯ ತಂಡದಲ್ಲಿ ಹಾಗೂ19 ವರ್ಷದೊಳಗಿನವರ ರಾಷ್ಟ್ರೀಯ ತಂಡದಲ್ಲಿ ವೆಂಕಟೇಶ್ ಆಡಿದ್ದರು.

ಪ್ರತಿಭೆಗಳ ತವರು

`ನೀನು ಫುಟ್‌ಬಾಲ್ ಆಡು' ಎಂದು ಇಲ್ಲಿ ಯಾರೂ ಯಾವ ಮಗುವಿಗೂ ಹೇಳಿಕೊಡುವುದು ಅಗತ್ಯವಿಲ್ಲ. ಏಕೆಂದರೆ ಇಲ್ಲಿ ಹುಟ್ಟುವ ಪ್ರತಿ ಮಗುವಿನಲ್ಲೂ ಫುಟ್‌ಬಾಲ್ ಪ್ರೀತಿ ರಕ್ತಗತವಾಗಿ ಬಂದಿರುತ್ತದೆ. ಆದ್ದರಿಂದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಆಟಗಾರರು ಇಲ್ಲಿಂದಲೇ ಬಂದಿದ್ದಾರೆ.ಗೌತಮಪುರದ ರವಿಕುಮಾರ್, ಅರ್ಮನ್ ಆಯಾಮ್, ಪಿ. ಕಣ್ಣನ್, ಯತಿರಾಜ್, ಉಲಗನಾಥನ್, ಮ್ಯಾಥ್ಯೂ, ಮೋಹನ್ ವೇಲು, ಯು. ಬಾಬು, ಸತೀಶ್ (ಜೂನಿಯರ್ ಹಾಗೂ ಸೀನಿಯರ್), ಕಾರ್ತಿಕ್, ರವಿಚಂದ್ರ ಸೇರಿದಂತೆ ಸಾಕಷ್ಟು ಜನ ಭಾರತ ಜೂನಿಯರ್ ಹಾಗೂ ಸೀನಿಯರ್ ತಂಡದಲ್ಲಿ ಆಡಿದವರು. ಇವರೆಲ್ಲರೂ `ಮಿನಿ ಬ್ರೆಜಿಲ್'ನಲ್ಲಿ ಅರಳಿದ ಪ್ರತಿಭೆಗಳು.ಗೌತಮಪುರ ದಾಟಿಕೊಂಡು ಕೊಂಚ ಮುಂದೆ ಹೋದರೆ ಎದುರಾಗುವುದೇ ಆಸ್ಟಿನ್ ಟೌನ್. ಒಲಿಂಪಿಯನ್ ಷಣ್ಮುಗಂ, ರಾಮನ್, ಬಿ. ಮಣಿವಣ್ಣನ್, ಕನ್ನಯ್ಯ, ಎಂ. ಬಾಬು, ಆರ್.ಸಿ. ಪ್ರಕಾಶ್ ಹೀಗೆ ಹಲವು ಹೆಸರುಗಳು ಸಿಗುತ್ತವೆ. ಇವರೆಲ್ಲರೂ ವಿವಿಧ ವಯೋಮಾನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದವರೇ. ಆದ್ದರಿಂದಲೇ ಮುರ್ನಾಲ್ಕು ಬಡಾವಣೆಗಳಲ್ಲಿ ಪ್ರತಿ ಮನೆ-ಮನದಲ್ಲಿ ಫುಟ್‌ಬಾಲ್ ಉಸಿರಾಗಿದೆ. ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ, ಐ ಲೀಗ್, ಸೂಪರ್ ಡಿವಿಷನ್, `ಎ' ಡಿವಿಷನ್, `ಸಿ' ಡಿವಿಷನ್ ಹೀಗೆ ಯಾವುದೇ ಟೂರ್ನಿಗಳು ನಡೆದರೂ, ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುವುದು ಈ ಬಡಾವಣೆಗಳ ಜನರೇ. ತಮ್ಮ ನೆಚ್ಚಿನ ತಂಡ ಗೆಲುವು ಪಡೆದರೆ ಅಥವಾ ಆಟಗಾರರು ಗೋಲು ಹೊಡೆದರೆ, ಡೊಳ್ಳು ಬಾರಿಸಿ, ಸಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ. ಪಂದ್ಯ ಮುಗಿಯುತ್ತಿದ್ದಂತೆ ಹೆಗಲ ಮೇಲೆ ಎತ್ತಿಕೊಂಡು ಮೆರವಣಿಗೆ ಮಾಡುತ್ತಾರೆ. ಸಣ್ಣ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೂ ನೆಚ್ಚಿನ ತಂಡಕ್ಕೆ ಅದ್ದೂರಿ ಸ್ವಾಗತ.

ವಿಶ್ವಕಪ್ ನೆನಪು

ಫಿಫಾ ವಿಶ್ವಕಪ್ ಶುರುವಾಯಿತೆಂದರೆ ಸಾಕು ಇಲ್ಲಿನ ಜನರಿಗೆ ಎಲ್ಲಿಲ್ಲದ ಸಂಭ್ರಮ. ತಮ್ಮ ನೆಚ್ಚಿನ ದೇಶ ಬ್ರೆಜಿಲ್ ತಂಡವನ್ನು ಬೆಂಬಲಿಸುತ್ತಾರೆ. ಆ ರಾಷ್ಟ್ರದ ಆಟಗಾರರು ಧರಿಸುವ ಟಿ-ಶರ್ಟ್ ಹಾಕಿಕೊಂಡು ಪಂದ್ಯ ನೋಡುತ್ತಾರೆ. ಅದೊಂದು ರೀತಿಯಲ್ಲಿ ಬಯಲು ರಂಗಮಂದಿರದಂತಾಗಿ ಬಿಟ್ಟಿರುತ್ತದೆ ಎಂದು ಹಿಂದಿನ ನೆನಪನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.ಪೀಲೆ ಮೂರ್ತಿ ಇರುವ ಗೌತಮಪುರದ ಸರ್ಕಲ್‌ನಲ್ಲಿ ವಿಶ್ವಕಪ್ ವೇಳೆ ದೊಡ್ಡದಾಗಿ ಪರದೆ ಹಾಕಲಾಗುತ್ತದೆ. ಎಲ್ಲರೂ ಸೇರಿ ವಿಶ್ವಕಪ್ ಪಂದ್ಯಗಳನ್ನು ನೋಡಿ ಅಭಿಮಾನ ವ್ಯಕ್ತಪಡಿಸುತ್ತಾರೆ. ತಮ್ಮ ನೆಚ್ಚಿನ ತಂಡ ಗೆದ್ದರೆ ಗೆಳೆಯರ ನಡುವೆ ಭರ್ಜರಿ ಪಾರ್ಟಿ. ಆರು-ಏಳನೇ ತರಗತಿಯಲ್ಲಿ ಓದುವ ಮಕ್ಕಳ ನಡುವೆಯೂ ಫುಟ್‌ಬಾಲ್ ಬಗ್ಗೆ ಚರ್ಚೆ ನಡೆದಿರುತ್ತದೆ.`ವಿಶ್ವಕಪ್ ಟೂರ್ನಿ ವೇಳೆ ಪರದೆಯೆ ಮೇಲೆ ಪಂದ್ಯಗಳನ್ನು ನೋಡುವುದು ಇಲ್ಲಿ ಮಾಮೂಲು. ಬ್ರೆಜಿಲ್ ತಂಡ ಸೆಮಿಫೈನಲ್ ಹಾಗೂ ಫೈನಲ್‌ವರೆಗೆ ಮುನ್ನಡೆದು ಬಂದರೆ, ಆ ಪಂದ್ಯಗಳಿಗೆ ಎಲ್ಲಿಲ್ಲದ ಮಹತ್ವ. ಈ ಟೂರ್ನಿ ಮುಗಿಯುವ ತನಕ ಒಂದು ರೀತಿಯಲ್ಲಿ ನಮಗೆಲ್ಲಾ ಹಬ್ಬವೇ' ಎನ್ನುತ್ತಾರೆ ಭಾರತ ಫುಟ್‌ಬಾಲ್ ತಂಡ ಮಾಜಿ ಆಟಗಾರ ರವಿಕುಮಾರ್.ಫುಟ್‌ಬಾಲ್ ಆಡಿದರೆ ಗೌರವ ಜಾಸ್ತಿ

ಪುಟ್ಟ ಬಾಲಕನಿರಲಿ, ವಯಸ್ಸಿನ ಹುಡುಗನೇ ಇರಲಿ, ಆತನಿಗೆ ಮನೆಯಲ್ಲಿ ಊಟ, ಪುಸ್ತಕ, ಬಟ್ಟೆ ಇತರ ಸವಲತ್ತುಗಳು ಸರಿಯಾದ ಸಮಯಕ್ಕೆ ಸಿಗಬೇಕೆಂದರೆ ಫುಟ್‌ಬಾಲ್ ಆಡಲೇಬೇಕು.!ಹೀಗೆಂದು ನಿಯಮವೇನಿಲ್ಲವಾದರೂ ಅದು ಅಲಿಖಿತ ಒಪ್ಪಂದ. ಸ್ವಾತಂತ್ರ್ಯ ಪೂರ್ವದಿಂದಲೂ ಗೌತಮಪುರದಲ್ಲಿ ಈ ಕ್ರೀಡೆ ಪ್ರತಿಯೊಬ್ಬರ ಜೀವಾಳ. ಮಧ್ಯಮವರ್ಗದ ಜನರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕೆನ್ನುವ ತುಡಿತ. ಅದರಲ್ಲೂ ಕ್ರೀಡೆಯಲ್ಲಿಯೇ ಎನ್ನುವುದು ಪ್ರತಿ ಮನೆಯ ಹಿರಿಯರ ಕನಸು.`ಶಾಲೆಗೆ ಹೋಗಿ ಬಂದ ಮೇಲೆ ಮನೆಯಲ್ಲಿ ಟೀವಿ ನೋಡುತ್ತಾ ಕುಳಿತರೆ ಅಪ್ಪ, ಅಮ್ಮ ಬೈಯುತ್ತಾರೆ. ಫುಟ್‌ಬಾಲ್ ಆಡಿ ಬಾ ಹೋಗು ಎಂದು ಹುರಿದುಂಬಿಸಿ ಕಳುಹಿಸುತ್ತಾರೆ. ಯಾಕೋ ಗೊತ್ತಿಲ್ಲ. ಬೇರೆ ಕಡೆ ಕ್ರಿಕೆಟನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ನಮ್ಮಲ್ಲಿ ಅದರ ಸುಳಿವೇ ಇಲ್ಲ. ಪಾಲಕರ ಅಣತಿಯಂತೆ ಫುಟ್‌ಬಾಲ್ ಆಡಿ ಬಂದರೆ ನಮ್ಮ ಬೇಡಿಕೆಗಳು ಬೇಗನೇ ಈಡೇರುತ್ತವೆ' ಎಂದು ತೊದಲು ನುಡಿಗಳಿಂದ ಹೇಳುತ್ತಾನೆ ಒಂಬತ್ತು ವರ್ಷದ ಸತೀಶ್.

ನನಸಾಗುತ್ತಿದೆ ಕ್ರೀಡಾಂಗಣದ ಕನಸು

ಸಾಕಷ್ಟು ಫುಟ್‌ಬಾಲ್ ಆಡುವ ಗೌತಮಪುರದ ಜನ ಕ್ರೀಡಾಂಗಣವಿಲ್ಲದೇ ಪರದಾಡುತ್ತಿದ್ದರು. ಆದರೀಗ ಕ್ರೀಡಾಂಗಣ ನಿರ್ಮಾಣ ಕಾರ್ಯ ಶುರುವಾಗಿದ್ದು, `ಪುಟ್ಟ ಬ್ರೆಜಿಲ್' ಆಟಗಾರರಿಗೆ ಸಂಭ್ರಮವೋ ಸಂಭ್ರಮ.ಕಲ್ಲು, ಹರಳು ಚುಚ್ಚುವ ಭಯವಿಲ್ಲದೆ, ಕಾಲಿಗೆ ಷೂ ಸಹ ಹಾಕದೇ ಫುಟ್‌ಬಾಲ್ ಆಡುತ್ತಾರೆ. ಕಾಲಿಗೆ ಪೆಟ್ಟಾದರೆ ಹೇಗೆ ಎನ್ನುವ ಆತಂಕವಿಲ್ಲ. ಬಿದ್ದುಬಿಟ್ಟರೆ ಹೇಗೆ ಎನ್ನುವ ಚಿಂತೆಯಂತೂ ಇಲ್ಲವೇ ಇಲ್ಲ. ಆಡುವಾಗ ಬಿದ್ದರೂ ಬದುಕಿನಲ್ಲಿ ಗೆಲ್ಲಬೇಕೆಂಬ ಛಲ ಇಲ್ಲಿನ ಫುಟ್‌ಬಾಲ್ ಆಡುವ ಬಾಲಕರದ್ದು.ಸಾಮಾನ್ಯವಾಗಿ ಏಳೆಂಟು ವರ್ಷದ ಮಕ್ಕಳಿರುವಾಗಲೇ ಫುಟ್‌ಬಾಲ್ ಆಡಲು ಶುರು ಮಾಡುತ್ತಾರೆ. ಅವರ ಆಸೆಗೆ, ಇಲ್ಲಿನ ಬಿಬಿಎಂಪಿ ಸದಸ್ಯರು ನೀರೆರೆಯಲು ಮುಂದಾಗಿದ್ದಾರೆ. ಹೊನಲು ಬೆಳಕಿನ ಅಡಿಯಲ್ಲಿ ಪಂದ್ಯವನ್ನು ಆಡಲು ಅನುಕೂಲವಾಗುವಂತೆ ಕ್ರೀಡಾಂಗಣ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಕ್ರೀಡಾಂಗಣದ ಕಾರ್ಯ ಪೂರ್ಣಗೊಂಡರೆ, ಆಡುವವರ ಸಂಭ್ರಮಕ್ಕೆ ಎಲ್ಲಿದೆ ಸಾಟಿ?`ಗೌತಮಪುರದಲ್ಲಿ ಎಲ್ಲರೂ ಫುಟ್‌ಬಾಲ್ ಆಡುತ್ತಾರೆ. ಪ್ರತಿಯೊಬ್ಬರ ಬದುಕಿನಲ್ಲೂ ಈ ಆಟ ಬೆರೆತುಹೋಗಿದೆ. ಇದು ಇಂದು ನಿನ್ನೆಯದೇನಲ್ಲ. ಕ್ರೀಡಾಂಗಣ ನಿರ್ಮಿಸಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ. ಮೂರ‌್ನಾಲ್ಕು ತಿಂಗಳಲ್ಲಿ ಕ್ರೀಡಾಂಗಣ ಕಾರ್ಯ ಮುಗಿಯಲಿದೆ' ಎಂದು ಇಲ್ಲಿಯ  ಬಿಬಿಎಂಪಿ ಸದಸ್ಯೆ ಸರಳಾ ಮೋಹನ್ ಹೇಳುತ್ತಾರೆ.

ನೌಕರದಾರರಿಗೆ ಕ್ರೀಡೆಯೇ ಆಸರೆ

`ಧಾರವಾಡದ ಯಾವುದಾದರೂ ಬೀದಿಯಲ್ಲಿ ನಿಂತು ಕಲ್ಲು ಎಸೆದರೆ ಅದು ಬೀಳುವುದು ಸಾಹಿತಿಯ ಮನೆ ಮೇಲೆಯೇ' ಎನ್ನುವ ರೂಢಿಮಾತನ್ನು ಗೌತಮಪುರದ ವಿಷಯದಲ್ಲಿ ಬೇರೆ ರೀತಿ ಹೇಳಬೇಕು. ಇಲ್ಲಿ ಕಲ್ಲು ಎಸೆದರೆ ಅದು ಫುಟ್‌ಬಾಲ್ ಆಟಗಾರನ ಮನೆ ಮೇಲೆ ಬೀಳುತ್ತದೆ. ಬಡಾವಣೆಯ ಯಾವುದೇ ಮನೆಗೆ ತೆರಳಿದರೂ, ಇಲ್ಲಿನ ಪುಟ್‌ಬಾಲ್ ಪ್ರೀತಿ ಹೇಗೆ ಬೆಳೆದು ನಿಂತಿತು ಎನ್ನುವುದನ್ನು ವಿವರಿಸುತ್ತಾರೆ.ಗೌತಮಪುರದಲ್ಲಿ ಎಂಜಿನಿಯರ್, ಡಾಕ್ಟರ್, ವಕೀಲಿ ಹಾಗೂ ಸರ್ಕಾರಿ ಹುದ್ದೆಯಲ್ಲಿ ಸಾಕಷ್ಟು ಜನರಿದ್ದಾರೆ. ಬಹುತೇಕರಿಗೆ ನೌಕರಿ ಲಭಿಸಿದ್ದು ಕ್ರೀಡಾ ಕೋಟಾದಲ್ಲಿಯೇ. ಇಲ್ಲಿ ಓದಿಗಿಂತ ಹೆಚ್ಚಾಗಿ ಕ್ರೀಡೆಗೆ ಎಲ್ಲಿಲ್ಲದ ಮಹತ್ವ. ಆದರೆ, ಬದಲಾದ ಕಾಲಮಾನದಲ್ಲಿ, ಪದವಿಯವರೆಗೆ ಓದುವವರ ಸಂಖ್ಯೆ ಹೆಚ್ಚಾಗುತ್ತಿದೆ.ಬಾಲ್ಯದಿಂದಲೇ ಫುಟ್‌ಬಾಲ್ ಬಗ್ಗೆ ಒಲವು ಬೆಳೆಸಿಕೊಂಡು ಸ್ವಯಂ ಆಸಕ್ತಿಯಿಂದ ಆಡುವುದನ್ನು ಕಲಿಯುವುದರಿಂದ ಹೊರ ರಾಜ್ಯಗಳಲ್ಲೂ ಇಲ್ಲಿನ ಪ್ರತಿಭೆಗಳು ಗೌತಮಪುರದ ಕಂಪನ್ನು ಹರಡಿದ್ದಾರೆ. ಇಲ್ಲಿನ ಪ್ರತಿಭೆಗಳನ್ನು ಗುರುತಿಸಿ ವಿದೇಶದ ಕೆಲ ಸಂಸ್ಥೆಗಳು ಉಚಿತವಾಗಿ ತರಬೇತಿ ನೀಡಿ ವೃತ್ತಿಪರ ಆಟಗಾರರನ್ನಾಗಿ ರೂಪಿಸಿವೆ. ಕೆಲ ಆಟಗಾರರು ಬೇರೆ ಬೇರೆ ರಾಜ್ಯಗಳ ಪರ ಆಡುತ್ತಾ, ಆರ್ಥಿಕವಾಗಿ ಬಲಗೊಂಡಿದ್ದಾರೆ.

ಕ್ರೀಡಾ ಕುಟುಂಬ

ಮನೆಗೆ ಇಬ್ಬರು ಫುಟ್‌ಬಾಲ್ ಆಡುವವರು ಗೌತಮಪುರದಲ್ಲಿ ಸಿಗುವುದು ಮಾಮೂಲು. ಇಲ್ಲಿನ ಮನೆಯೊಂದರಲ್ಲಿ ಮೂವರು ಅಣ್ಣತಮ್ಮಂದಿರು. ಅವರೆಲ್ಲರೂ ಈ ಕ್ರೀಡೆಯಲ್ಲಿಯೇ ಸಾಧನೆ ಮಾಡಿದವರು. ಅದರಲ್ಲಿ ರವಿಕುಮಾರ್ ಕೂಡ ಒಬ್ಬರು; ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸವಾಲನ್ನು ಎತ್ತಿ ಹಿಡಿದವರು. ಇವರ ಸಹೋದರರಾದ ಮಣಿವಣ್ಣನ್ ಹಾಗೂ ಶ್ರೀಧರ್ ಸಹ ಆಟದ ಬಗ್ಗೆ ಒಲವು ಬೆಳೆಸಿಕೊಂಡವರು. ಮಣಿವಣ್ಣನ್ ಎಚ್‌ಎಎಲ್ ತಂಡದಲ್ಲಿ ಆಡಿದ್ದರೆ, ಶ್ರೀಧರ್ ಸಿಐಎಲ್ ತಂಡದ ಪರ ಆಡಿದ್ದರು. ಇದು ಒಂದು ಉದಾಹರಣೆಯಷ್ಟೆ. ಹೀಗೆ ಪ್ರತಿ ಮನೆಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದವರ ದೊಡ್ಡ ಪಟ್ಟಿಯೇ ಇದೆ.

ಬ್ರೆಜಿಲ್ ಅನುಕರಣೆ

ಗೌತಮಪುರವನ್ನು ಸ್ಥಳೀಯ ಜನ ಪ್ರೀತಿಯಿಂದ ಹಾಗೂ ಅಷ್ಟೇ ಹೆಮ್ಮೆಯಿಂದ `ಮಿನಿ ಬ್ರೆಜಿಲ್' ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ, ಆ ದೇಶದ ಆಟಗಾರರ ಶೈಲಿಯನ್ನು ಅನುಕರಿಸುತ್ತಾರೆ. ಇದಕ್ಕೆ ಕಾರಣವೇನೆಂದು ಸ್ಥಳೀಯರೊಬ್ಬರನ್ನು ಮಾತಿಗೆಳೆದಾಗ, `ಬ್ರೆಜಿಲ್ ಆಟಗಾರರು ಭಾರತದ ಶೈಲಿಯಲ್ಲಿ ಆಡುತ್ತಾರೆ. ಅವರಾಡುವ ರೀತಿ ನಮ್ಮ ಆಟಗಾರರು ಆಡುವುದನ್ನು ನೆನಪಿಸುತ್ತದೆ. ಆದ್ದರಿಂದ ನಮಗೆ ಅವರಾಟ ಇಷ್ಟ' ಎನ್ನುವ ಉತ್ತರ ಬಂತು. ಆರೇಳು ವರ್ಷದ ಬಾಲಕರು ಬ್ರೆಜಿಲ್‌ನ ತಮ್ಮ ನೆಚ್ಚಿನ ಆಟಗಾರನಂತೆಯೇ ಕೇಶರಾಶಿಯನ್ನು ಬಿಡುವುದು, ಅವರಂತೆಯೇ ಚೆಂಡನ್ನು ಕಿಕ್ ಮಾಡಲು ಯತ್ನಿಸುವುದು, ಗೆಳೆಯರ ವಲಯದಲ್ಲಿ ಬ್ರೆಜಿಲ್‌ಆಟರಾರರ ಅಡ್ಡ ಹೆಸರಿನಿಂದ (ಪೆಟ್ ನೇಮ್) ಕರೆಯುವುದು ಸ್ಥಳೀಯ ಬಾಲಕರಲ್ಲಿ ಸಾಮಾನ್ಯ.ಈ ಬಗ್ಗೆ ಏಳೆಂಟು ವರ್ಷದ ಬಾಲಕನೊಬ್ಬನನ್ನು ಮಾತನಾಡಿಸಲು ಮುಂದಾದಾಗ, ಆಡುವ ಉತ್ಸಾಹದ ಭರಾಟೆಯಲ್ಲಿದ್ದ ಆತ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ. ಕೊನೆಗೂ ಫೋಟೊಗೆ ಪೋಸ್ ಕೊಡುವಂತೆ ಒತ್ತಾಯಿಸಿದಾಗ ವೃತ್ತಿಪರ ಆಟಗಾರನಂತೆಯೇ ಬಂದು ನಿಂತುಕೊಂಡ. ನಿನ್ನ ಕನಸೇನು ಎನ್ನುವ ಪ್ರಶ್ನೆಯನ್ನು ಆ ಬಾಲಕನ ಮುಂದೆ ಇಟ್ಟಾಗ, `ಫುಟ್‌ಬಾಲ್ ಆಟಗಾರನಾಗಬೇಕು' ಎನ್ನುವ ನಿರೀಕ್ಷಿತ ಉತ್ತರ ನೀಡಿದ. ನಿನ್ನ ಹೆಸರೇನು ಎಂದು ಮರುಪ್ರಶ್ನೆ ಎಸೆದಾಗ `ಗೌತಮಪುರದ ಪೀಲೆ' ಎನ್ನುವ ಉತ್ತರ ನೀಡಿದ!ಚಿತ್ರಗಳು- ಸತೀಶ್ ಬಡಿಗೇರ್ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.