ಶನಿವಾರ, ಮೇ 21, 2022
26 °C

ಗ್ಯಾಜೆಟ್ ಲೋಕ: ಡಿಎಸ್‌ಎಲ್‌ಆರ್ ಲೆನ್ಸ್ ಕೊಳ್ಳುವ ಮುನ್ನ

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಎಲ್‌ಎಲ್‌ಆರ್ ಕ್ಯಾಮರಾಗಳು ದೇಹ ಮತ್ತು ಲೆನ್ಸ್ ಪ್ರತ್ಯೇಕವಾಗಿ ದೊರೆಯುತ್ತವೆ. ಕ್ಯಾಮರಾ ಕೊಳ್ಳುವುದು ಹೇಗೆ ಎಂಬುದನ್ನು ನೋಡಿ ಆಯಿತು. ಈಗ ಲೆನ್ಸ್ ಕಡೆ ಗಮನ ಹರಿಸೋಣ.ಭಾರತದಲ್ಲಿ ಸಾಮಾನ್ಯವಾಗಿ ಕ್ಯಾಮರ ಜೊತೆ ಒಂದು ಲೆನ್ಸ್ ಉಚಿತವಾಗಿ ನೀಡುತ್ತಿದ್ದಾರೆ. ಇದನ್ನು ಕಿಟ್ ಲೆನ್ಸ್ ಎಂದು ಕರೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇದು 18-55ಮಿಮಿ ಝೂಮ್ ಲೆನ್ಸ್ ಆಗಿರುತ್ತದೆ. ಇತರೆ ಲೆನ್ಸ್ ಕೊಳ್ಳುವುದು ಹೇಗೆ?ಲೆನ್ಸ್‌ಗಳು ಹಲವು ನಮೂನೆಗಳಲ್ಲಿ ದೊರೆಯುತ್ತವೆ. ಬೇರೆ ಬೇರೆ ಸಂದರ್ಭಗಳಿಗೆ ಬೇರೆ ಬೇರೆ ಲೆನ್ಸ್ ಬಳಕೆಯಾಗುತ್ತದೆ. ವಿಧಾನಸೌಧದಂತಹ ಒಂದು ವಿಶಾಲವಾದ ಕಟ್ಟಡವನ್ನು ಹತ್ತಿರದಿಂದ ಇಡಿಯ ಕಟ್ಟಡ ಬರುವಂತೆ ಫೋಟೋ ತೆಗೆಯಲು ವೈಡ್ ಆಂಗಲ್ ಲೆನ್ಸ್. ದೂರದ ಮರದ ಮೇಲೆ ಕುಳಿತಿರುವ ಹಕ್ಕಿಯ ಫೋಟೋ ತೆಗೆಯಲು ಟೆಲಿಫೋಟೋ ಲೆನ್ಸ್. ಚಿಕ್ಕ ಸೊಳ್ಳೆಯ ಫೋಟೋ ತೆಗೆಯಲು ಮ್ಯೋಕ್ರೋ ಲೆನ್ಸ್. ಹೀಗೆ ಹಲವು ನಮೂನೆಯ ಲೆನ್ಸ್ ಕೊಳ್ಳಬೇಕಾಗುತ್ತದೆ. ಇವುಗಳನ್ನು ಇಟ್ಟುಕೊಳ್ಳಲು ಒಂದು ಬ್ಯಾಗ್ ಬೇಕು.ಕೆಲವು ಸಂದರ್ಭಗಳಲ್ಲಿ ಅತಿ ಕಡಿಮೆ ಷಟರ್ ವೇಗದಲ್ಲಿ ಫೋಟೋ ತೆಗೆಯಲು ಕ್ಯಾಮರಾ ಅಲುಗಾಡದಂತೆ ಇಡಲು ಕ್ಯಾಮರಾ ಸ್ಟ್ಯಾಂಡ್ ಬೇಕು. ಹೀಗೆ ಡಿಎಸ್‌ಎಲ್‌ಆರ್ ಎಂದರೆ ಖರ್ಚಿನ ದಾರಿ. ಕೇವಲ ಕಿಟ್ ಲೆನ್ಸ್ ಜೊತೆ ಒಂದು ಕ್ಯಾಮರಾ ಕೊಳ್ಳುತ್ತೇನೆ, ಉಳಿದವು ಯಾವುವೂ ಬೇಡ ಎನ್ನುವವರು ಒಂದು ಉತ್ತಮ ಏಮ್-ಆಂಡ್-ಶೂಟ್ ಅಥವಾ ಮೆಗಾಝೂಮ್ ಕ್ಯಾಮರ ಕೊಳ್ಳುವುದು ಒಳಿತು. ಲೆನ್ಸ್ ಕೊಳ್ಳುವಾಗ ಗಮನ ಹರಿಸಬೇಕಾದ ಕೆಲವು ಗುಣವೈಶಿಷ್ಟ್ಯಗಳನ್ನು ನೋಡೋಣ.ನಾಭಿದೂರ

ವೈಜ್ಞಾನಿಕವಾಗಿ ನೋಡಿದರೆ ನಾಭಿದೂರ (ಫೋಕಲ್ ಲೆಂತ್ focal length)ಎನ್ನುವುದು ಮಸೂರದ (ಲೆನ್ಸ್‌ನ) ಸಮತಲದಿಂದ ಅದರ ನಾಭಿಕೇಂದ್ರಕ್ಕೆ (ಫೋಕಲ್ ಪಾಯಿಂಟ್) ಇರುವ ದೂರ. ಇದು ಜಾಸ್ತಿ ಇದ್ದರೆ ವಸ್ತುವಿನ ಮೂಡಿಬರುವ ಚಿತ್ರ ದೊಡ್ಡದಾಗಿರುತ್ತದೆ.

 

ಚಿಕ್ಕದಿದ್ದರೆ ಸಣ್ಣ ಚಿತ್ರ ಮೂಡಿಬರುತ್ತದೆ. ಅಂದರೆ ಚಿಕ್ಕ ಫೋಕಲ್ ಲೆಂತ್ ಇರುವ ಲೆನ್ಸ್ ಅನ್ನು ಬಳಸಿ ದೊಡ್ಡ ವಸ್ತುವಿನ (ಉದಾ - ದೊಡ್ಡ ಕಟ್ಟಡ, ಪಶ್ಚಿಮ ಘಟ್ಟ ಶ್ರೇಣಿ) ಫೋಟೋ ತೆಗೆಯಬಹದು. ಇದನ್ನೇ ವೈಡ್ ಆಂಗಲ್ ಲೆನ್ಸ್ ಎನ್ನುವುದು. ಸಾಮಾನ್ಯವಾಗಿ ವೈಡ್ ಆಂಗಲ್ ಲೆನ್ಸ್‌ಗಳ ಫೋಕಲ್ ಲೆಂತ್ 18 ರಿಂದ 35 ಮಿಮಿ ಇರುತ್ತದೆ.ದೊಡ್ಡ ಫೋಕಲ್ ಲೆಂತ್‌ನ ಲೆನ್ಸ್ ಬಳಸಿ ದೂರದಲ್ಲಿರುವ ಹಕ್ಕಿಯ ಚಿತ್ರ ತೆಗೆಯಬಹುದು. ಇದನ್ನೇ ಟೆಲಿಫೋಟೋ ಲೆನ್ಸ್ ಎನ್ನುತ್ತಾರೆ. ಇವುಗಳ ಫೋಕಲ್ ಲೆಂತ್ 100ಮಿಮಿ ಮತ್ತು ಅಧಿಕ. ಫೋಕಲ್ ಲೆಂತ್ ಅನ್ನು ಹೆಚ್ಚು ಕಡಿಮೆ ಮಾಡಬಹುದಾದ ಲೆನ್ಸ್‌ಗಳಿಗೆ ಝೂಮ್ ಲೆನ್ಸ್ ಎನ್ನುತ್ತಾರೆ. ಈಗ ಮಾರುಕಟ್ಟೆಯಲ್ಲಿ ದೊರೆಯುವ ಬಹುಪಾಲು ಲೆನ್ಸ್‌ಗಳು ಝೂಮ್ ಲೆನ್ಸ್‌ಗಳೇ. ಝೂಮ್ ಲೆನ್ಸ್‌ಗಳು ಹಲವು ಶ್ರೇಣಿಗಳಲ್ಲಿ ದೊರೆಯುತ್ತವೆ. ಉದಾ - 18-55ಮಿಮಿ, 55-250 ಮಿಮಿ, 18-200ಮಿಮಿ, 70-300ಮಿಮಿ ಇತ್ಯಾದಿ.ಧ್ಯುತಿರಂಧ್ರ

ಕ್ಯಾಮರಾದ ಲೆನ್ಸ್ ಅನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ. ಬೆಳಕಿನ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಯಾ ಕಡಿಮೆ ಮಾಡಲಾಗುತ್ತದೆ. ಇದನ್ನೇ ಧ್ಯುತಿರಂದ್ರ ಅಥವಾ ಅಪೆರ್ಚರ್ (aperture) ಎನ್ನುತ್ತಾರೆ. ಈ ತೆರೆಯುವಿಕೆ ಅರ್ಥಾತ್  ವ್ಯಾಸವನ್ನು ಮಸೂರದ ನಾಭಿದೂರಕ್ಕೆ  ಅನುಪಾತ ಮೂಲಕ ಬರೆಯಲಾಗುತ್ತದೆ. ಉದಾ F/2.8, F/5.6, F/18, ಇತ್ಯಾದಿ. ಮಸೂರದ ನಾಭಿದೂರ 50ಮಿ.ಮೀ. ಇದೆ ಮತ್ತು ಅಪೆರ್ಚರ್ ಸಂಖ್ಯೆ ಊ/5.6 ಎಂದಾದಲ್ಲಿ ಮಸೂರದ ತೆರೆಯುವಿಕೆಯ ವ್ಯಾಸ ಸುಮಾರು 9ಮಿಮೀ ಎಂದು ಲೆಕ್ಕ ಹಾಕಬಹುದು. ಜಾಸ್ತಿ ಬೆಳಕಿದ್ದಲ್ಲಿ ಕಡಿಮೆ ಅಪೆರ್ಚರ್ ಬಳಸಬೇಕಾಗುತ್ತದೆ. ಲೆನ್ಸ್‌ನ ಈ ಸಂಖ್ಯೆ ಚಿಕ್ಕದಿದ್ದಷ್ಟು ಹೆಚ್ಚು ಬೆಳಕನ್ನು ಗ್ರಹಿಸುವ ಶಕ್ತಿ ಇದೆ ಎಂದು ತಿಳಿಯಬೇಕು. ಉದಾಹರಣೆಗೆ F/1.8 Lj®…Õ F/5.6 ಲೆನ್ಸ್‌ಗಿಂತ ಒಳ್ಳೆಯದು. ಝೂಮ್ ಲೆನ್ಸ್‌ಗಳಲ್ಲಿ ಇದನ್ನು ಒಂದು ಶ್ರೇಣಿಯಾಗಿ ಸೂಚಿಸಲಾಗುತ್ತದೆ.ಅಂತೆಯೇ 1:4 - 1:5.6 ಎಂದು ಬರೆದಿರುವ ಲೆನ್ಸ್ 1:5.6 - 1:8 ಎಂದು ಬರೆದಿರುವ ಲೆನ್ಸ್‌ಗಿಂತ ಒಳ್ಳೆಯದು. ಲೆನ್ಸ್‌ನ ಅತಿ ಹೆಚ್ಚಿನ ಮತ್ತು ಅತಿ ಕಡಿಮೆಯ ಅಪೆರ್ಚರ್ ಎಷ್ಟಿದೆ ಎಂಬುದನ್ನು ಗಮನಿಸಬೇಕು. ಈ ವ್ಯಾಪ್ತಿ ದೊಡ್ಡದಿದ್ದಷ್ಟೂ ಒಳ್ಳೆಯದೆ. ಉದಾಹರಣೆಗೆ 50ಮಿಮಿ ಪ್ರೈಮ್ ಲೆನ್ಸ್‌ನ ಅತಿ ಹೆಚ್ಚಿನ ಅಪೆರ್ಚ್‌ರ್ ಊ/1.8 ಮತ್ತು ಅತಿ ಕಡಿಮೆಯ ಅಪೆರ್ಚರ್ ಊ/32 ಇರುತ್ತದೆ. ಇದು ಉತ್ತಮ ಲೆನ್ಸ್. ಆದರೆ ಇಷ್ಟು ದೊಡ್ಡ ವ್ಯಾಪ್ತಿ ಝೂಮ್ ಲೆನ್ಸ್‌ಗಳಲ್ಲಿ ಇರುವ ಸಾಧ್ಯತೆಯಿಲ್ಲ.ಚಿತ್ರ ಸ್ಥಿರೀಕರಣ

ಇಮೇಜ್ ಸ್ಟೆಬಿಲೈಸೇಶನ್ ಎಂಬ ಸವಲತ್ತೂ ಕೆಲವು ಲೆನ್ಸ್‌ಗಳಲ್ಲಿ  ಅಳವಡಿಸಲ್ಪಟ್ಟಿರುತ್ತದೆ. ಇದು ಇದ್ದಲ್ಲಿ ಫೋಟೋ ತೆಗೆಯುವಾಗ ಕೈ ಅಲ್ಪಸ್ವಲ್ಪ ಅಳ್ಳಾಡಿದರೂ ಚಿತ್ರ ಸ್ಪಷ್ಟವಾಗಿಯೇ ಮೂಡಿಬರುತ್ತದೆ. ಆದುದರಿಂದ ಈ ಸವಲತ್ತು ಇದ್ದರೆ ಒಳ್ಳೆಯದು. ಕ್ಯಾನನ್ ಕಂಪೆನಿ ಇದಕ್ಕೆ IS (Image Stabilisation)  ಎಂದೂ ನಿಕಾನ್ ಇದಕ್ಕೆ  VR (Vibration Resistent)  ಎಂದೂ ಹೆಸರಿಟ್ಟಿದೆ. ಅಂತೆಯೇ ಕ್ಯಾನನ್ 55&250mm  IS ಝೂಮ್ ಲೆನ್ಸ್ ಮಾಮೂಲಿ 55&250mm ಝೂಮ್ ಲೆನ್ಸ್‌ಗಿಂತ ದುಬಾರಿ.ಗ್ಯಾಜೆಟ್ ಸಲಹೆ

ಅನಿಲ್ ಅವರ ಪ್ರಶ್ನೆ: ಮೋಡೆಮ್ ಎಂದರೆ ಏನು ಎಂದು ಸ್ವಲ್ಪ ಚಿಕ್ಕದಾಗಿ ಕನ್ನಡದಲ್ಲಿ ವಿವರಿಸುತ್ತೀರಾ?

ಉ: ಮೋಡೆಮ್ (modem)  ಎಂಬುದು modulation ʇáñ‡á¤ demodulation ಎಂಬುದನ್ನು ಸೂಚಿಸುತ್ತದೆ. ಇದು ದೂರವಾಣಿ ತಂತಿಗಳ ಮೂಲಕ ಅಂತರಜಾಲ ಸಂಪರ್ಕ ನೀಡುತ್ತಿದ್ದ ಕಾಲದಲ್ಲಿ ಬಳಕೆಗೆ ಬಂತು. ದೂರವಾಣಿ ತಂತಿಗಳಲ್ಲಿ ಅಂತರಜಾಲದ ಸಂಪರ್ಕವನ್ನು ಬದಲಾವಣೆ ಮಾಡಿ ಕಳುಹಿಸಲಾಗುತ್ತಿತ್ತು. ಮೋಡೆಮ್ ಅದನ್ನು ಪುನಃ ಬದಲಾಯಿಸಿ ಗಣಕಕ್ಕೆ ಕಳುಹಿಸುತ್ತಿತ್ತು. ಈಗ ಗಣಕವನ್ನು ಅಂತರಜಾಲಕ್ಕೆ ಸಂಪರ್ಕಿಸುವ 3ಜಿ ಸಿಮ್ ಕಾರ್ಡ್ ಬಳಸುವ ಸಾಧನಗಳಿಗೂ ಈ ಹೆಸರು ಬಳಕೆಯಾಗುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.