ಬುಧವಾರ, ಮೇ 12, 2021
17 °C

ಗ್ರಹದ ಉಂಗುರ ಹೇಗೆ ಈ ಸಿಂಗಾರ?

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

1. “ಗ್ರಹದ ಉಂಗುರ”-ಅದೇನು?

ಯಾವುದೇ ಗ್ರಹದ ಸುತ್ತ ಉಂಗುರದಂತೆ, ಬೃಹತ್ ಬಳೆಗಳಂತೆ, ಏಕಕೇಂದ್ರೀಯ ವೃತ್ತಾಕಾರದ ಪಟ್ಟೆಪಟ್ಟೆಗಳಂತೆ ಹರಡಿರುವ ದ್ರವ್ಯ ಸಾಮ್ರಾಜ್ಯವೇ ಗ್ರಹದ ಉಂಗುರ.ವಿಶೇಷ ಏನೆಂದರೆ ಗ್ರಹದ ಉಂಗುರ ಎಲ್ಲ ಗ್ರಹಗಳ ಕಡ್ಡಾಯ ಲಕ್ಷಣವೇನಲ್ಲ. ಅಷ್ಟೇ ಅಲ್ಲ. ಗ್ರಹದ ಉಂಗುರಗಳ ಸ್ವರೂಪ ಸ್ಥಿರವಲ್ಲ, ಅಸ್ತಿತ್ವ ಶಾಶ್ವತವೂ ಅಲ್ಲ. ವಾಸ್ತವವಾಗಿ ಗ್ರಹದ ಉಂಗುರ ಕೇವಲ ಒಂದು ಆಕಸ್ಮಿಕ, ಅಶಾಶ್ವತ ಅಲಂಕಾರ.

2. ನಮ್ಮ ಸೌರವ್ಯೆಹದ ಉಂಗುರಧಾರಿ ಗ್ರಹಗಳು ಯಾವುವು?

ನಮ್ಮ ಸೌರವ್ಯೆಹದ ಎಂಟು ಗ್ರಹಗಳಲ್ಲಿ ಬರೀ ಅನಿಲ ತನುವಿನ ಆದರೆ ಬಹು ಬೃಹದ್ಗಾತ್ರದ ನಾಲ್ಕು ಗ್ರಹಗಳಾದ ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಉಂಗುರಧಾರಿಗಳಾಗಿವೆ. `ಅನಿಲ ದೈತ್ಯರು~ ಎಂದೇ ವರ್ಗೀಕರಣಗೊಂಡಿರುವ ಈ ಗ್ರಹಗಳ ಗಾತ್ರಗಳನ್ನು ಸೂರ್ಯನಿಗೆ ಹೋಲಿಸಿದಂತೆ ಚಿತ್ರ-1 ರಲ್ಲೂ, ಭೂಮಿಗೆ ಹೋಲಿಸಿದಂತೆ ಚಿತ್ರ-2 ರಲ್ಲೂ ಗಮನಿಸಿ. ಸ್ಪಷ್ಟವಾಗಿಯೇ ಗಟ್ಟಿ ನೆಲದ, ಚಿಕ್ಕ ಗಾತ್ರದ ಗ್ರಹಗಳಾದ ಬುಧ, ಶುಕ್ರ, ಭೂಮಿ ಮತ್ತು ಮಂಗಳ ಉಂಗುರಾಲಂಕಾರವನ್ನು ಪಡೆದಿಲ್ಲ.

3. ಎಲ್ಲ ಗ್ರಹಗಳ ಉಂಗುರಗಳದೂ ಒಂದೇ ಸ್ವರೂಪವೇ?

ಖಂಡಿತ ಇಲ್ಲ. ಉಂಗುರಗಳ ವ್ಯಾಸ, ಅಗಲ, ಎತ್ತರ, ಕಾಂತಿ, ದ್ರವ್ಯ ಸಂಯೋಜನೆ.... ಇತ್ಯಾದಿ ಎಲ್ಲ ಲಕ್ಷಣಗಳಲ್ಲೂ ಉಂಗುರ ಸ್ವರೂಪ ಗ್ರಹದಿಂದ ಗ್ರಹಕ್ಕೆ ಭಿನ್ನ ಭಿನ್ನ. ನಮ್ಮ ಸೌರವ್ಯೆಹದ ನಾಲ್ಕೂ ಅನಿಲ ದೈತ್ಯರ ಉಂಗುರ ವ್ಯೆಹಗಳ ವಿಶಿಷ್ಟತೆ, ವಿಭಿನ್ನತೆಗಳನ್ನು ನೀವೇ ಗಮನಿಸಿ: ಈ ನಾಲ್ಕೂ ಗ್ರಹಗಳಲ್ಲಿ ಶನಿಗ್ರಹದ ಉಂಗುರಗಳದೇ ಗರಿಷ್ಠ ಸಂಕೀರ್ಣತೆ, ಮೋಹಕತೆ. (ಚಿತ್ರ 4, 5, 6, 8, 9). ಗೆಲಿಲಿಯೋನ ದೂರದರ್ಶಕದಿಂದ ಆರಂಭವಾಗಿ ಇತ್ತೀಚಿನ `ಕ್ಯಾಸಿನೀ~ ವ್ಯೋಮನೌಕೆಯವರೆಗೆ (ಚಿತ್ರ 7 ಒದಗಿರುವ ಚಿತ್ರ-ಮಾಹಿತಿಗಳು ಶನಿಯ ಉಂಗುರ ವ್ಯೆಹದ ಅನನ್ಯ, ಅಸೀಮ ಅಚ್ಚರಿಗಳನ್ನು ನಿಚ್ಚಳಗೊಳಿಸಿವೆ.

 

ಶನಿಯ ಉಂಗುರ ಸಾಮ್ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಸ್ವತಂತ್ರ ಬಳೆಗಳಿವೆ. ಶನಿಯ ಮೇಲ್ಮೈನಿಂದ ಸುಮಾರು ಎರಡು ಲಕ್ಷ ಎಂಬತ್ತೆಂಟು ಸಾವಿರ ಕಿ.ಮೀ. ದೂರದವರೆಗೆ ಈ ಉಂಗುರ-ವ್ಯೆಹದ ದಪ್ಪ ಮಾತ್ರ ಇಪ್ಪತ್ತು ಮೀಟರ್ ಅನ್ನೂ ಮೀರಿಲ್ಲ.

 

ಶನಿಗ್ರಹದ ಹೇರಳ ಚಂದ್ರದ ಗುರುತ್ವಬಲದ ಎಳೆತ-ಸೆಳೆತಗಳ ಪರಿಣಾಮವಾಗಿ ಈ ಉಂಗುರಗಳು ತೆಳ್ಳನೆಯ ತೇಲುವ ಹೆದ್ದಾರಿಗಳಂತೆ ಶನಿಯನ್ನು ಸುತ್ತುತ್ತ ಚಿತ್ರ ವಿಚಿತ್ರವಾಗಿ ನೇಯ್ದುಕೊಳ್ಳುತ್ತ, ಹೆಣೆದುಕೊಳ್ಳುತ್ತ, ಗಂಟು ಬೀಳುತ್ತ, ಗುಚ್ಛವಾಗುತ್ತ, ಮತ್ತೆ ಬಿಡಿಸಿಕೊಳ್ಳುತ್ತ, ಹಾಗೆಲ್ಲ ಸೋಜಿಗದ ದೃಶ್ಯಗಳನ್ನು ನಿರಂತರ ಸೃಜಿಸುತ್ತಿವೆ.ಶನಿಗ್ರಹಕ್ಕೆ ತದ್ವಿರುದ್ಧವಾಗಿ ಅತ್ಯಂತ ದೊಡ್ಡ ಗ್ರಹವಾದ ಗುರುವಿನದು ಅತ್ಯಂತ ತೆಳ್ಳನೆಯ, ಅತ್ಯಂತ ಸರಳ ಉಂಗುರ ಅಲಂಕಾರ (ಚಿತ್ರ-3) ಬಹು ತೆಳ್ಳಗಿನ ಪರದೆಯಂತೆ, ಚದರಿ ಹರಡಿದ ಮೋಡದಂತೆ, ಧೂಳಿನ ಹಾಳೆಯಂತೆ ಸುತ್ತುವರೆದು ನಿಂತಿರುವ ಗುರುವಿನ ಉಂಗುರ ಸುಲಭ ಗೋಚರವೇ ಅಲ್ಲ. ಹಾಗಿದ್ದೇ ಈ ಉಂಗುರ ವ್ಯೆಹ ಗುರುವಿನಿಂದ ಐವತ್ತು ಸಾವಿರ ಕಿ.ಮೀ. ದೂರದಲ್ಲಿ, ಆರೂವರೆ ಸಾವಿರ ಕಿ.ಮೀ. ಅಗಲಕ್ಕೆ ಒಂದು ಕಿ.ಮೀ. ದಪ್ಪಕ್ಕೆ ಹರಡಿ ನಿಂತಿದೆ.ಯುರೇನಸ್ ಗ್ರಹದ್ದು ಬೇರೊಂದು ಸ್ವರೂಪದ ಉಂಗುರ ವ್ಯವಸ್ಥೆ. `ವಾಯೋಜರ್~ ವ್ಯೋಮನೌಕೆ (ಚಿತ್ರ-10) ವಿವರವಾಗಿ ಗುರುತಿಸಿದ ಈ ಉಂಗುರಗಳು 1.6 ರಿಂದ 90 ಕಿ.ಮೀ.ವರೆಗೆ ಬೇರೆ ಬೇರೆ ಅಗಲಗಳಲ್ಲಿವೆ. ಕೇವಲ ಕೆಲವೇ ಮೀಟರ್ ದಪ್ಪ ಇರುವ ಈ ಉಂಗುರಗಳು ಯುರೇನಸ್‌ನ ಮೇಲ್ಮೈಯಿಂದ 41850 ಕಿ.ಮೀ. ನಿಂದ 51,160 ಕಿ.ಮೀ. ದೂರಗಳ ನಡುವೆ ಹರಡಿವೆ (ಚಿತ್ರ-11). ಮತ್ತೊಂದು ವಿಶೇಷ ಏನೆಂದರೆ ಯುರೇನಸ್‌ನ ಉಂಗುರಗಳಲ್ಲಿ ಇಂಗಾಲದ ಕಣಗಳು ವಿಪರೀತ. ಹಾಗಾಗಿ ಈ ಉಂಗುರಗಳದು ಕಪ್ಪು ಬಣ್ಣ.ನೆಪ್ಚೂನ್‌ನ ಉಂಗುರಗಳದ್ದು ಮತ್ತೊಂದು ವಿಧದ ಸ್ವರೂಪ (ಚಿತ್ರ-12). ಈ ಉಂಗುರಗಳು ಚೂರು ಚೂರಾದಂತೆ, ಗುಚ್ಛ ಗುಚ್ಛವಾಗಿ ನೆಪ್ಚೂನ್ ಅನ್ನು ಸುತ್ತುವರಿದಿವೆ; ಅಲಂಕರಿಸಿವೆ.

4. ಗ್ರಹಗಳ ಉಂಗುರಗಳಲ್ಲಿನ ದ್ರವ್ಯ ಏನೇನು?

ಗ್ರಹಗಳ ಉಂಗುರಗಳಲ್ಲಿನ ದ್ರವ್ಯದ್ದು ನಾನಾ ವಿಧ. ಧೂಳಿನ ಕಣಗಳು, ನಾನಾ ಅನಿಲಗಳ ಘನೀಕೃತ ತುಣುಕುಗಳು, ಬಂಡೆ ಚೂರುಗಳು, ನೀರ್ಗಲ್ಲಿನ ತುಂಡುಗಳು ಇತ್ಯಾದಿ. ಅದೆಲ್ಲ ಏನೇ ಇದ್ದರೂ ಯಾವುದೇ ಗ್ರಹದ ಇಡೀ ಉಂಗುರವ್ಯೆಹದ ಒಟ್ಟೂ ದ್ರವ್ಯರಾಶಿ ಭಾರೀ ಪ್ರಮಾಣದ್ದೇನಲ್ಲ.ಅತ್ಯಂತ ಬೃಹತ್ ಉಂಗುರ ಸಾಮ್ರಾಜ್ಯವಾಗಿರುವ ಶನಿಗ್ರಹದ ಉಂಗುರಗಳ ಸರ್ವದ್ರವ್ಯವನ್ನೂ ಒಟ್ಟು ಮಾಡಿದರೆ ಒಂದೇ ಒಂದು ಕುಬ್ಜ ಚಂದ್ರನನ್ನಾಗಿಸಲು ಸಾಧ್ಯವಾದೀತು ಅಷ್ಟೆ! ಯಾವುದೇ ಗ್ರಹದ ಉಂಗುರಗಳು ಹರಡಿರುವ ಪ್ರದೇಶದೊಳಗೇ ಮತ್ತು ಸನಿಹಗಳಲ್ಲೇ ಆಯಾ ಗ್ರಹದ ಹಲವಾರು ಚಿಕ್ಕ ಚಂದ್ರರೂ ನೆಲೆಗೊಂಡಿರುತ್ತವೆಂಬುದು ಇಲ್ಲಿ ಗಮನಿಸಬೇಕಾದ ಒಂದು ಅಂಶ (ಚಿತ್ರ 8, 9 ನೋಡಿ).

5. ಉಂಗುರ ಅಲಂಕಾರ ದೈತ್ಯ ಗ್ರಹಗಳ ಸುತ್ತ ಮಾತ್ರ-ಏಕೆ?

ಗ್ರಹಗಳ ಉಂಗುರಗಳು ರೂಪುಗೊಳ್ಳುವುದು ಎರಡು ಕಾರಣಗಳಿಂದ ಗ್ರಹದ ಸುತ್ತಲಿನ ಕುಬ್ಜ ಚಂದ್ರರು ಒಂದಕ್ಕೊಂದು ಡಿಕ್ಕಿ ಹೊಡೆದು ಛಿದ್ರಗೊಂಡಾಗ ಅಥವಾ ಧೂಮಕೇತುವೊಂದು ಗ್ರಹದತ್ತ ಸೆಳೆಯಲ್ಪಟ್ಟು ಗ್ರಹಕ್ಕೋ, ಅದರ ಯಾವುದಾದರೂ ಉಪಗ್ರಹಕ್ಕೋ ಬಡಿದು (ಚಿತ್ರ-13) ಭಗ್ನಗೊಂಡಾಗ. ಇಂಥ ಆಕಸ್ಮಿಕಗಳು ಸಂಭವಿಸಿದಾಗ ಎರಚಿಹೋಗುವ ದ್ರವ್ಯ ಗ್ರಹದ ಸುತ್ತ ಉಂಗುರವಾಗಿ ಹರಡುತ್ತದೆ.ಸ್ಪಷ್ಟವಾಗಿಯೇ ಗ್ರಹವೊಂದು ಉಂಗುರಾಲಂಕಾರ ಗಳಿಸಲು ಅದಕ್ಕೆ ಬಹುಚಂದ್ರರ ಪರಿವಾರ ಇರಬೇಕು. ಮತ್ತು ಧೂಮಕೇತುಗಳಂಥ ಕಾಯಗಳನ್ನು ಸೆಳೆಯಬಲ್ಲ ತೀವ್ರ ಗುರುತ್ವ ಶಕ್ತಿ ಇರಬೇಕು. ಈ ಎರಡೂ ಗುಣಗಳು ದೈತ್ಯಗ್ರಹಗಳಿಗಷ್ಟೇ ಸಾಧ್ಯ. ಆದ್ದರಿಂದಲೇ ಚಿಕ್ಕ ಗ್ರಹಗಳಿಗೆ ಉಂಗುರ ಅಸಾಧ್ಯ.

6. ದೈತ್ಯ ಗ್ರಹಗಳ ಉಂಗುರಾಲಂಕಾರ ಶಾಶ್ವತ ಲಕ್ಷಣವೇ?

ಇಲ್ಲ, ಇಲ್ಲ. ದೈತ್ಯ ಗ್ರಹಗಳ ಮತ್ತು ಅವುಗಳ ಬಹುಚಂದ್ರರ ಗುರುತ್ವ ಬಲದ ಪ್ರಭಾವ ಉಂಗುರಗಳ ಸ್ವರೂಪವನ್ನು, ಚಲನವಲನಗಳನ್ನು ನಿರಂತರ ಬದಲಿಸುತ್ತಲೇ ಇರುತ್ತದೆ.ಅದೇ ಗುರುತ್ವಬಲದ ಏಳು ಬೀಳು ಪರಿಣಾಮಗಳೇ ಉಂಗುರಗಳ ದ್ರವ್ಯವನ್ನು ಅಲ್ಲಲ್ಲಿ ಗುಡಿಸಿ ಗುಡ್ಡೆ-ಮಾಡಬಹುದು. ಇಲ್ಲವೇ ಎಲ್ಲವನ್ನೂ ಸೆಳೆದು ಒಂದೆರಡು ಹೊಸ ಚಂದ್ರರನ್ನಾಗಿಸಿಬಿಡಬಹುದು. ಹಾಗೆ ಇಡೀ ಉಂಗುರ ವ್ಯೆಹವೇ ಮಾಯವಾಗಿಬಿಡಬಹುದು ಕೂಡ.

ಎಷ್ಟೆಲ್ಲ ಸೋಜಿಗ! ಅಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.