ಗುರುವಾರ , ಏಪ್ರಿಲ್ 15, 2021
20 °C

ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವೆ: ಜಿಗಜಿಣಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿ: ವಿಜಾಪುರ ಜಿಲ್ಲೆಯಲ್ಲಿ ಗ್ರಾಮಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳ ಅಭಿವೃದ್ಧಿಗಾಗಿ ಹೆಚ್ಚಿನ ಆದ್ಯತೆ ನೀಡುವುದಾಗಿ ಸಂಸದ ರಮೇಶ ಜಿಗಜಿಣಗಿ ಭರವಸೆ ನೀಡಿದರು.



ಅವರು ಭಾನುವಾರ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ಏರ್ಪಡಿಸಿದ್ದ ಕುಲಾಂಕಾರೇಶ್ವರ ಮಹಾದ್ವಾರ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಜನಪ್ರತಿನಿಧಿಗಳು ಎಷ್ಟೇ ದೊಡ್ಡ ಅಧಿಕಾರಿಗಳಾದರೂ, ಪದವಿ ಅಲಂಕರಿಸಿದರೂ ಕೂಡಾ ತಮ್ಮ ಗ್ರಾಮವನ್ನು ಮರೆ ಯಬಾರದು. ಗ್ರಾಮಗಳ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಸಲಹೆ ನೀಡಿದ ಅವರು ಅಥರ್ಗಾ ಗ್ರಾಮದ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳನ್ನು ಹಾಕಿಕೊಂಡಿದ್ದು, ಕೆಲಸ ಪ್ರಾರಂಭಿಸಲಾಗಿದೆ. ಅಥರ್ಗಾ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದರು.



ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ, ಕೆಲವು ರಾಜಕೀಯ ಮುಖಂಡರು ಸಾಮೂಹಿಕ ವಿವಾಹ, ಶಾಲಾ ಮಕ್ಕಳಿಗೆ ನೋಟ್‌ಪುಸ್ತಕ ಹಂಚುವ ಮೂಲಕ ಪ್ರಚಾರ ಪಡೆದುಕೊಳ್ಳುತ್ತಾರೆ. ಡಾಂಭಿಕ ನಟನೆ ಮಾಡಿ ಕೈತೊಳೆದುಕೊಳ್ಳುತ್ತಾರೆ. ನಿಜವಾಗಿ ಸಾಮಾಜಿಕ ಕೆಲಸ ಮಾಡುವವರನ್ನು ಇಂದು ಹುಡುಕಿ ತೆಗೆಯಬೇಕಾಗಿದೆ ಎಂದರು.



ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ. ರಾಜ್ಯದಲ್ಲಿಯ ಬಿಜೆಪಿ ಸರ್ಕಾರ ಒಳ ಕಚ್ಚಾಟ ಬಿಟ್ಟು ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.



ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪ್ರಭಾಕರ ಬಗಲಿ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಡಿ. ಪಾಟೀಲ, ಚಲನಚಿತ್ರ ನಿರ್ಮಾಪಕ ಎಸ್.ಡಿ. ಅಂಕಲಗಿ ಮಾತನಾಡಿದರು.



ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ,  ಅಭಯಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.  ಶಾಸಕ ರಮೇಶ ಭೂಸನೂರ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಾಬುಸಾಹುಕಾರ ಮೇತ್ರಿ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಶ್ರೀಪತಿಗೌಡ ಬಿರಾದಾರ, ಶಿವಾನಂದ ನಿಂಬಾಳ, ಆರ್.ಕೆ. ಪಾಟೀಲ, ತಹಶೀಲ್ದಾರ ಜಿ.ಎಲ್. ಮೇತ್ರಿ, ಅಶೋಕಗೌಡ ಪಾಟೀಲ ಉಪಸ್ಥಿತರಿದ್ದರು. ಬಸವರಾಜ ಗೋಟ್ಯಾಳ ಸ್ವಾಗತಿಸಿದರು. ಮೇತ್ರಿ ವಂದಿಸಿದರು.



ನೀರು ಪೂರೈಕೆಯಲ್ಲಿ ವ್ಯತ್ಯಯ: ಮನವಿಇಂಡಿ: ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಬರಗುಡಿ ಹತ್ತಿರವಿರುವ ಜಾಕ್‌ವೆಲ್‌ನಲ್ಲಿ ನೀರು ಬರುತ್ತಿಲ್ಲ. ಕಾರಣ ಬರುವ ಒಂದು ವಾರಕಾಲ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಪಟ್ಟಣದ ನಾಗರಿಕರು ಸಹಕರಿಸಬೇಕೆಂದು ಪುರಸಭೆಯ ಅಧ್ಯಕ್ಷ ದೇವೇಂದ್ರ ಕುಂಬಾರ ಮತ್ತು ಉಪಾಧ್ಯಕ್ಷೆ ರೇಣುಕಾ ಐರೋಡಗಿ ಜಂಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.



ಈ ಬಗ್ಗೆ ಈಗಾಗಲೇ ಮಹಾರಾಷ್ಟ್ರ ಸರ್ಕಾರಕ್ಕೆ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುವಂತೆ ಆಗ್ರಹಿಸಲಾಗಿದೆ. ಕೆಲವೇ ದಿವಸಗಳಲ್ಲಿ ಭೀಮಾ ನದಿಗೆ ನೀರು ಹರಿಸುವದಾಗಿ ಅವರು ಭರವಸೆ ನೀಡಿದ್ದಾರೆ. ನೀರು ಬರುವವರೆಗೆ ಜನಸಾಮಾನ್ಯರು ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.