ಶನಿವಾರ, ಮೇ 15, 2021
22 °C

ಗ್ರಾಮೀಣ ದಸರಾಕ್ಕೆ ಅದ್ದೂರಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಮೈನವಿರೇಳಿಸಿದ ವೀರಗಾಸೆ ಕುಣಿತ.. ನೋಡುಗರ ಕೇಂದ್ರಬಿಂದುವಾದ ಮರಗಾಲು ಕಲಾವಿದರು.. ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳ ಬ್ಯಾಂಡ್ ಸೆಟ್.. ಗಮನ ಸೆಳೆದ ಸ್ತಬ್ಧ ಚಿತ್ರಗಳು.. ಕುಣಿದು ಕುಪ್ಪಳಿಸಿದ ಯುವ ಜನತೆ..ಈ ಸಾಲಿನ ದಸರಾ ಪ್ರಯುಕ್ತ ನಂಜನಗೂಡಿನಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಮೀಣ ದಸರಾ ಅಕ್ಷರಶಃ ಮಿನಿ ದಸರಾದಂತೆ ಭಾಸವಾಯಿತು.ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆನೆಯ ಮೇಲೆ ಕೂರಿಸಿದ್ದ ಚಾಮುಂಡಿದೇವಿ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಪುಷ್ಪಾರ್ಚನೆ ಮಾಡುವ ಮೂಲಕ ಗ್ರಾಮೀಣ ದಸರೆಗೆ ವಿಧ್ಯುಕ್ತ ಚಾಲನೆ ನೀಡಿದರು.ಗೊರವರ ಕುಣಿತ, ವೀರಗಾಸೆ ಕಲಾವಿದರು, ಹೆಮ್ಮರಗಾಲು ಗ್ರಾಮದ ನಂದಿ ಧ್ವಜ ಯುವಕ ಸಂಘದ ನಂದಿ ಧ್ವಜ ಕುಣಿತ, ಮರಗಾಲು, ಬೊಂಬೆ ಕಲಾವಿದರು, ಶಾಲಾ ಮಕ್ಕಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಹಳದಿ, ಕೆಂಪು ಬಣ್ಣ ಧರಿಸಿದ ಜಾನಪದ ಕಲಾವಿದರು ~ದಸರಾ ಮೆರವಣಿಗೆ~ಗೆ ರಂಗು ತಂದರು. ಮರಗಾಲು ಕಲಾವಿದರ ~ಬೀಸು ಕಂಸಾಳೆ~ ನೋಡುಗರನ್ನು ಮೋಡಿಮಾಡಿತು.ಪದವಿಪೂರ್ವ ಕಾಲೇಜಿನಿಂದ ಹೊರಟ ಮೆರವಣಿಗೆಯು ಗುಂಡ್ಲುಪೇಟೆ ವೃತ್ತ, ಆರ್‌ಪಿ ರಸ್ತೆ ಮೂಲಕ ಸಾಗಿ ನಂಜುಂಡೇಶ್ವರ ದೇವಸ್ಥಾನವನ್ನು ತಲುಪಿತು. ದಾರಿಯುದ್ದಕ್ಕೂ ಯುವಕರು ಕಲಾವಿದರೊಂದಿಗೆ ಕುಣಿದು  ಸಂಭ್ರಮಿಸಿದರು.ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ~ಬಾಲ್ಯ ವಿಹಾವ~ ತಡೆಗಟ್ಟುವ ಸ್ತಬ್ಧಚಿತ್ರ, ಕರ್ನಾಟಕ ರಕ್ಷಣಾ ವೇದಿಕೆಯ ~ಗರಡಿ ಮನೆ~, ಕೃಷಿ ಇಲಾಖೆಯ ~ಬನ್ನೂರು ತಳಿ ಕುರಿ~, ಸಾರ್ವಜನಿಕ ಶಿಕ್ಷಣ ಇಲಾಖೆಯ ~ನಲಿ-ಕಲಿ~ ಸ್ತಬ್ಧಚಿತ್ರ ಹಾಗೂ ಶ್ರೀಕಂಠೇಶ್ವರ ದೇವಸ್ಥಾನ ಮಂಡಳಿಯ ~ನಂಜುಂಡೇಶ್ವರ~ ಸ್ತಬ್ಧ  ಚಿತ್ರಗಳು ನೋಡುಗರ ಗಮನ ಸೆಳೆದವು.`ಆಗಲಿ ಬಿಡಿ ಹೆಣ್ಣಿಗೆ ಹದಿನೆಂಟು.. ಈಗಲೇ ಏಕೆ ತಾಳಿಯ ನಂಟು~..ಶೀರ್ಷಿಕೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.