ಗ್ರಾಹಕ ಹಕ್ಕುಗಳ ಅರಿವು ಅಗತ್ಯ:ನ್ಯಾ.ಸೋಮಶೇಖರ್
ಹಾಸನ: ‘ಇಂದಿನ ಯುಗದಲ್ಲಿ ಗ್ರಾಹಕನೇ ನಿಜವಾದ ದೊರೆ. ಆತನಿಗೆ ತನ್ನ ಅಧಿಕಾರ ಏನೆಂಬುದು ತಿಳಿದಿರಬೇಕು. ಒಂದುವೇಳೆ ತನಗೆ ಅನ್ಯಾಯವಾದರೆ ಅದನ್ನು ಪರಿಹರಿಸಿಕೊಳ್ಳುವ ವಿಧಾನ ಯಾವುದು ಎಂದೂ ಆತ ತಿಳಿದುಕೊಳ್ಳುವುದು ಅಗತ್ಯ’ ಎಂದು ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕೆ. ಸೋಮಶೇಖರ್ ನುಡಿದರು.
ಸಿಆರ್ಇಎಟಿ ಬೆಂಗಳೂರು, ಟ್ರೈಾ, ಸರ್ಕಾರಿ ಕಾನೂನು ಕಾಲೇಜು ಹಾಗೂ ಇಲ್ಲಿನ ಎಂ.ಕೃಷ್ಣ ಕಾನೂನು ಕಾಲೇಜುಗಳ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ಟೆಲಿಕಾಂ ಕ್ಷೇತ್ರದಲ್ಲಿ ಗ್ರಾಹಕ ರಕ್ಷಣೆ ಸಂಬಂಧಿಸಿದ ವಿಚಾರಗಳು’ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ತಂತ್ರಜ್ಞಾನ ಅತ್ಯಂತ ತೀವ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ನಾವು ಎರಡನೇ ತಲೆಮಾರಿನ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಇಂಥ ಸ್ಥಿತಿಯಲ್ಲಿ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರುವುದು ಅಗತ್ಯ’ ಎಂದರು.
ಬಿಎಸ್ಎನ್ಎಲ್ ಹಾಸನ ವಿಭಾಗದ ಮಹಾಪ್ರಬಂಧಕ ಆರ್.ಸಿ. ರಸ್ತೋಗಿ ಮಾತನಾಡಿ, ‘ಟೆಲಿಕಾಂ ಕ್ಷೇತ್ರದಲ್ಲಿ ಸೇವೆ ಒದಗಿಸುತ್ತಿರುವ ಪ್ರತಿಯೊಂದು ಸಂಸ್ಥೆಯೂ ತನ್ನ ಸಾಮಾಜಿಕ ಜವಾಬ್ದಾರಿಗಳನ್ನು ನೆನಪಿನಲ್ಲಿಟ್ಟಿರಬೇಕು. ಬಿಎಸ್ಎನ್ಎಲ್ ಸೇವಾ ಮನೋಭಾವವನ್ನೇ ಹೊಂದಿರುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆ. ಪ್ರತಿ ಹಳ್ಳಿಯಲ್ಲೂ ಸೇವೆ ನೀಡುವುದರ ಜತೆಗೆ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲೂ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ’ ಎಂದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಬಿ.ಕೆ. ಮಂಜುನಾಥ್, ಎಂ. ಕೃಷ್ಣ ಕಾನೂನು ಕಾಲೇಜಿನ ಉಪಾಧ್ಯಕ್ಷ ಎಚ್.ವಿ. ತಿಮ್ಮೇಗೌಡ ಮುಂತಾದವರು ಪಾಲ್ಗೊಂಡು ಮಾತನಾಡಿದರು. ಉದ್ಘಾಟನಾ ಸಮಾರಂಭದ ಬಳಿಕ ಬೆಂಗಳೂರಿನ ಸಿಆರ್ಇಎಟಿ ಸಂಸ್ಥೆಯ ವೈ.ಜಿ. ಮುರಳೀಧರನ್ ಹಾಗೂ ಸರ್ಕಾರಿ ಕಾನೂನು ಕಲೇಜಿನ ಉಪನ್ಯಾಸಕ ರಾಜೇಂದ್ರ ಎಚ್. ಅವರು ಗ್ರಾಹಕ ಸಂಬಂಧೀ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಿಎಸ್ಎನ್ಎಲ್ನ ದೇವರಾಜ ಶಾನುಭಾಗ್, ಭಾರ್ತಿ ಏರ್ಟೆಲ್ ಸಂಸ್ಥೆಯ ಜಯಶಂಕರ್ ಹಾಗೂ ವೊಡಫೋನ್ ಸಂಸ್ಥೆಯ ರವಿಕುಮಾರ್ ಗ್ರಾಹಕರ ಜತೆ ಸಂವಾದ ನಡೆಸಿದರು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಂ. ಕೃಷ್ಣಕಾನೂನು ಕಾಲೇಜಿನ ಪ್ರಾಚಾರ್ಯ ವೈ.ಪಿ. ಉದಯ ಕುಮಾರ್ ಸ್ವಾಗತಿಸಿದರು. ಕೆ.ಜಿ. ಕೃಷ್ಣಮೂರ್ತಿ ವಂದಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.