ಭಾನುವಾರ, ಜೂನ್ 20, 2021
20 °C

ಘರ್ಷಣೆ: ಆಯೋಗ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಳೆದ ಶುಕ್ರವಾರ ನಡೆದ ಘರ್ಷಣೆ ಮತ್ತು ನಂತರದ ಬೆಳವಣಿಗೆಗಳ ಕುರಿತು ವಿಚಾರಣೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಜಿ.ವೈದ್ಯನಾಥನ್ ನೇತೃತ್ವದ ಆಯೋಗವನ್ನು ರಚಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ವಿಚಾರಣೆಯ ಸ್ವರೂಪ ಮತ್ತು ವ್ಯಾಪ್ತಿ ಕುರಿತ ಅಧಿಸೂಚನೆ ಶುಕ್ರವಾರ ಪ್ರಕಟವಾಗಲಿದೆ.ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದ ವೇಳೆ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕೆಲವು ವಕೀಲರು ಮಾಧ್ಯಮ ಪ್ರತಿನಿಧಿಗಳು, ಪೊಲೀಸರು ಮತ್ತು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಪೊಲೀಸರ ಜೊತೆಗೆ ತೀವ್ರ ಘರ್ಷಣೆಗೆ ಇಳಿದಿದ್ದರು. ಈ ಘಟನೆಯಲ್ಲಿ ವಕೀಲರೂ ಗಾಯಗೊಂಡಿದ್ದರು. ಈ ಎಲ್ಲ ಘಟನೆಗಳ ಬಗ್ಗೆಯೂ ಆಯೋಗ ವಿಚಾರಣೆ ನಡೆಸಲಿದೆ.ಪರಿಹಾರ ಬಿಡುಗಡೆ: ಗಲಭೆ ನಡೆದ ಸಂದರ್ಭದಲ್ಲಿ ಹಾನಿಗೆ ಒಳಗಾಗಿರುವ ವಾಹನಗಳ ಮಾಲೀಕರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಗುರುವಾರವೇ ಬೆಂಗಳೂರು ನಗರ ಜಿಲ್ಲಾಧಿಕಾರಿಯವರಿಗೆ ಅಗತ್ಯ ಹಣ ಬಿಡುಗಡೆ ಮಾಡಿದೆ. ವಾಹನಗಳಿಗೆ ಹಾನಿ ಆಗಿರುವ ಸಂಬಂಧ ದೂರು ಸಲ್ಲಿಸಿರುವವರು ಮತ್ತು ಹಾನಿಗೆ ಪರಿಹಾರ ಪಡೆಯಲು ಇಚ್ಛಿಸುವವರು ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಆಂತರಿಕ ತನಿಖೆ ಆರಂಭ
ಘಟನೆಯ ವೇಳೆ ಪೊಲೀಸರು ಕಾನೂನುಬಾಹಿರವಾಗಿ ಲಾಠಿ ಪ್ರಹಾರ ಮಾಡಿದ್ದಾರೆ, ವಕೀಲರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು `ವೈರ್‌ಲೆಸ್~ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂಬ ಆರೋಪಗಳ ಬಗ್ಗೆ ಸಿಐಡಿ ಡಿಜಿಪಿ ರೂಪಕ್‌ಕುಮಾರ್ ದತ್ತ ಅವರು ಸರ್ಕಾರದ ಆದೇಶದಂತೆ ಆಂತರಿಕ ತನಿಖೆ ಆರಂಭಿಸಿದ್ದಾರೆ.ಗುರುವಾರವೇ ಪೊಲೀಸರು ಮತ್ತು ವಕೀಲರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದ ಛಾಯಾಚಿತ್ರಗಳು ಮತ್ತು ವಿಡಿಯೊ ತುಣುಕುಗಳನ್ನು ಸಂಗ್ರಹಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.ಶುಕ್ರವಾರ ಬೆಳಿಗ್ಗೆ  ದತ್ತ ನಗರ ಸಿವಿಲ್ ನ್ಯಾಯಾಲಯ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ವಕೀಲರು ಮತ್ತು ಸಾರ್ವಜನಿಕರಿಂದ ಮುಕ್ತವಾಗಿ ಅಭಿಪ್ರಾಯ ಸಂಗ್ರಹಿಸಲು ಅವರು ನಿರ್ಧರಿಸಿದ್ದಾರೆ. ಈ ಸಂಬಂಧ ದೂರುಗಳು ಬಂದಲ್ಲಿ ಅವುಗಳ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

ವಕೀಲರಿಂದ ಇಂದು ಪ್ರತಿಭಟನೆ: ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದವರು ಶುಕ್ರವಾರ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ವಕೀಲರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಪ್ರಮಾಣದ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.ಇನ್ನೊಂದೆಡೆ, ನ್ಯಾಯಾಲಯ ಕಲಾಪಗಳಿಗೆ ಹಾಜರಾಗುವಂತೆ ಹೈಕೊರ್ಟ್ ಮುಖ್ಯ ನ್ಯಾಯಮೂರ್ತಿಯವರು ಮಾಡಿರುವ ಮನವಿಯನ್ನೂ ಧಿಕ್ಕರಿಸಿರುವ ವಕೀಲರು, ಕಲಾಪ ಬಹಿಷ್ಕಾರವನ್ನು ಮುಂದುವರಿಸಿದ್ದಾರೆ.ಹೈಕೋರ್ಟ್ ಆವರಣದಲ್ಲಿ ಗುರುವಾರವೂ ಕೆಲವು ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರ ಗುಂಪು ಹರಿಹಾಯ್ದು ಜೀವ ಬೆದರಿಕೆ ಒಡ್ಡಿದೆ. ಮಾಧ್ಯಮಗಳ ವಿರುದ್ಧ ಪಿಐಎಲ್ ಸಹಿತ ರಾಜ್ಯದ ಅನೇಕ ಕಡೆಗಳಲ್ಲಿ ಮೊಕದ್ದಮೆಗಳನ್ನು ಹಾಕುವ ಒತ್ತಡ ತಂತ್ರವೂ ಮುಂದುವರಿದಿದೆ.ಬಿಗಿ ಬಂದೋಬಸ್ತ್: ವಕೀಲರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಹತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಆದೇಶ ಹೊರಡಿಸಿದ್ದಾರೆ.ಪ್ರತಿಭಟನೆಯ ವೇಳೆ ದಾಂದಲೆ, ಹಿಂಸಾಚಾರ ನಡೆಯುವ ಸೂಚನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹಲಸೂರುಗೇಟ್, ಅಶೋಕನಗರ, ಸಿಲ್ವರ್ ಜ್ಯೂಬಿಲಿ ಪಾರ್ಕ್, ಸಂಪಂಗಿರಾಮನಗರ, ಕಬ್ಬನ್‌ಪಾರ್ಕ್, ವಿಧಾನಸೌಧ, ಹೈಗ್ರೌಂಡ್ಸ್, ಚಿಕ್ಕಪೇಟೆ, ಉಪ್ಪಾರಪೇಟೆ ಮತ್ತು ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾ.18ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ದಾಂದಲೆ ನಡೆದ ನಂತರ ನ್ಯಾಯಾಲಯ ಕಲಾಪಗಳನ್ನು ವಕೀಲರು ಬಹಿಷ್ಕರಿಸಿದ್ದಾರೆ. ಇದರಿಂದ ತೊಂದರೆಗೆ ಒಳಗಾಗಿರುವ ಸಾರ್ವಜನಿಕರೂ ಪ್ರತಿಭಟನೆ ನಡೆಸುವ ಸಂಭವ ಇದೆ.ಅಲ್ಲದೆ ಕಿಡಿಗೇಡಿಗಳು ಈ ಸಂದರ್ಭ ಬಳಸಿಕೊಂಡು ಸಮಾಜಘಾತುಕ ಕೃತ್ಯ ಎಸಗುವ ಬಗ್ಗೆ ಮಾಹಿತಿ ಇರುವುದರಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಮಿರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಆರು ಗಂಟೆಯಿಂದ ಇದೇ 18ರ ಮಧ್ಯರಾತ್ರಿ 12 ಗಂಟೆಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.ಈ ನಡುವೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ವಕೀಲರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ರಾಜ್ಯ ಪೊಲೀಸ್ ಕುಟುಂಬ ಸದಸ್ಯರ ಸಂಘದ ಸದಸ್ಯರು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಗುರುವಾರ ಧರಣಿ ನಡೆಸಿದರು.`ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲು- ರಾತ್ರಿ ದುಡಿಯುವ ಪೊಲೀಸರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ವಕೀಲರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಚಿವರ ರಕ್ಷಣೆಗೆ ಪೊಲೀಸರು ಬೇಕು. ಆದರೆ ಪೊಲೀಸರ ರಕ್ಷಣೆಗೆ ಯಾರೊಬ್ಬರೂ ಇಲ್ಲ~ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.`ಕುಟುಂಬದ ಹಿತವನ್ನು ಕಡೆಗಣಿಸಿ ಗಣ್ಯರ ಹಾಗೂ ಸಾರ್ವಜನಿಕರ ಹಿತಕ್ಕೆ ಶ್ರಮಿಸುವ ಪೊಲೀಸರ ಪ್ರಾಣಕ್ಕೆ ಬೆಲೆಯೇ ಇಲ್ಲವೇ. ವಕೀಲರು ಹಲ್ಲೆ ನಡೆಸಿ ವಾರ ಕಳೆದರೂ ಇನ್ನೂ ಕೆಲ ಗಾಯಾಳು ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ಸರ್ಕಾರ ವಕೀಲರನ್ನೇ ಸಮರ್ಥಿಸಿಕೊಂಡು ಮಾತನಾಡುತ್ತಿದೆ. ಕೃತ್ಯದ ಹಿಂದಿರುವ ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿಸಬೇಕು~ ಎಂದು ಒತ್ತಾಯಿಸಿದರು.ಸಿವಿಲ್ ಕೋರ್ಟ್ ಬಹಿಷ್ಕಾರ: ಗುರುವಾರವೂ ಸಿವಿಲ್ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿದ 500ಕ್ಕೂ ಅಧಿಕ ವಕೀಲರ ಗುಂಪು ಮಧ್ಯಾಹ್ನ 1 ಗಂಟೆಯ ವೇಳೆ ಹೈಕೋರ್ಟ್‌ಗೆ ಧಾವಿಸಿತು. ಪೊಲೀಸರು ಹಾಗೂ ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲು ತಾವು ಬಂದಿರುವುದಾಗಿ ವಕೀಲರು ದ್ವಾರದಲ್ಲಿ ಇದ್ದ ಪೊಲೀಸರಿಗೆ ತಿಳಿಸಿದರು. ಆದರೆ ಅಷ್ಟೊಂದು ವಕೀಲರನ್ನು ಒಳಕ್ಕೆ ಬಿಡಲು ಪೊಲೀಸರು ನಿರಾಕರಿಸಿದರು.ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ವಕೀಲರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಕೆಲವು ವಕೀಲರನ್ನು ಮಾತ್ರ ಪೊಲೀಸರು ಒಳಕ್ಕೆ ಬಿಟ್ಟರು. ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸುವ ನೆಪದಲ್ಲಿ ಬಂದ ಈ ವಕೀಲರ ಪೈಕಿ ಕೆಲವರು ಮಾಧ್ಯಮಗಳಿಗೆ ಬೆದರಿಕೆ ಹಾಕುವ ಕೆಲಸದಲ್ಲಿ ತೊಡಗಿದ್ದರು.ಪಿಐಎಲ್‌ಗಳ ಮಹಾಪೂರ: ಇನ್ನೊಂದೆಡೆ, ಪೊಲೀಸರು ಹಾಗೂ ಮಾಧ್ಯಮದವರ ವಿರುದ್ಧ ವಕೀಲರಿಂದ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮಹಾಪೂರವೇ ಹರಿದುಬರುತ್ತಿದೆ.  ಬುಧವಾರವಷ್ಟೇ ಆರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿ ಇಬ್ಬರ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ವಕೀಲರು ಕೋರಿದ್ದರೆ, ಇದೇ ಕೋರಿಕೆ ಇಟ್ಟು ಗುರುವಾರ ಮತ್ತೆರಡು ಅರ್ಜಿ ಸಲ್ಲಿಸಲಾಗಿದೆ. ಬೆಂಗಳೂರು ವಕೀಲರ ಸಂಘವೂ ಅರ್ಜಿ ಸಲ್ಲಿಸಿದೆ. ಸಿವಿಲ್ ಕೋರ್ಟ್‌ನಲ್ಲಿ ನಡೆದಿರುವ ಘಟನೆಯಲ್ಲಿ ವಕೀಲರದ್ದು ಯಾವುದೇ ತಪ್ಪು ಇಲ್ಲ. ಪೊಲೀಸ್ ಹಾಗೂ ಮಾಧ್ಯಮದವರದ್ದೇ ತಪ್ಪು ಎಂದಿದೆ.ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಸೇರಿದಂತೆ ಇತರ ಪ್ರತಿವಾದಿಗಳಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.`ಏಕೆ ಆಲಿಸಬೇಕು..~: ವಕೀಲರು ನ್ಯಾಯಾಂಗ ಕಲಾಪವನ್ನು ಬಹಿಷ್ಕರಿಸಿರುವಾಗ, ಮಾಧ್ಯಮ ಹಾಗೂ ಪೊಲೀಸರ ವಿರುದ್ಧ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಏತಕ್ಕೆ ನಡೆಸಬೇಕು. ವಕೀಲರ ವಾದವನ್ನು ಏತಕ್ಕೆ ಆಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ವಕೀಲರನ್ನು ಗುರುವಾರ ತರಾಟೆಗೆ ತೆಗೆದುಕೊಂಡಿತು.ಹುಬ್ಬಳ್ಳಿ ವರದಿ: ಮಾಧ್ಯಮ ಸಂಸ್ಥೆಗಳು ಮತ್ತು ಅವುಗಳ ಪ್ರತಿನಿಧಿಗಳ ಮೇಲೆ ಮೊಕದ್ದಮೆ ದಾಖಲಿಸುವ ಚಳವಳಿಯನ್ನು ವಕೀಲರು ಆರಂಭಿಸಿದ್ದು, ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಇದುವರೆಗೆ 38 ಪ್ರಕರಣಗಳನ್ನು  ದಾಖಲಿಸಲಾಗಿದೆ.ವಕೀಲರ ಸಮುದಾಯಕ್ಕೆ ಅವಹೇಳನಕಾರಿ ಪದ ಬಳಕೆ ಮಾಡಿದ ವಿರುದ್ಧ ದೃಶ್ಯ ಹಾಗೂ ಮುದ್ರಣ ಮಾಧ್ಯಮ ಸಂಸ್ಥೆ ಎರಡರ ಮೇಲೂ ಮೊಕದ್ದಮೆ ಹೂಡಲಾಗಿದ್ದು, ಐಪಿಸಿ ಸೆಕ್ಷನ್ 120 (ಬಿ), 153, 295 ಅಡಿಯಲ್ಲಿ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಹುಬ್ಬಳ್ಳಿಯಲ್ಲಿ ನೂರು ಪ್ರಕರಣಗಳನ್ನು ದಾಖಲಿಸಲು ಉದ್ದೇಶಿಸಿದ್ದು, ಶುಕ್ರವಾರ ವಕೀಲರ ಸಂಘದಿಂದ ಇನ್ನಷ್ಟು ಮೊಕದ್ದಮೆಗಳನ್ನು ಹೂಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಗಂಗಾವತಿ ವರದಿ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾಧ್ಯಮದವರ ವಿರುದ್ಧ ವಕೀಲರು ಒಟ್ಟು ನಾಲ್ಕು ಖಾಸಗಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಪತ್ರಿಕೆಗಳ ವಿರುದ್ಧ ಎರಡು ಮತ್ತು ಮಾಧ್ಯಮ ವರದಿಗಾರರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದಾಗಿ ಮಾಹಿತಿ ಲಭಿಸಿದೆ.ಪುತ್ತೂರು: 13 ದಾವೆ: ಪುತ್ತೂರು ವಕೀಲರ ಸಂಘದ ವತಿಯಿಂದ ಪುತ್ತೂರು ನ್ಯಾಯಾಲಯದಲ್ಲಿ `ಪ್ರಜಾವಾಣಿ~ ಸೇರಿದಂತೆ 13 ಮಾಧ್ಯಮಗಳ ವಿರುದ್ಧ ಗುರುವಾರ ದಾವೆ ಹೂಡಲಾಗಿದೆ. ನಷ್ಟ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ತಿಳಿಸಲಾಗಿದೆ. ಪತ್ರಿಕಾ ಹಾಗೂ ಟಿ.ವಿ ಮಾಧ್ಯಮಗಳು, ಸ್ಥಳೀಯ ಪತ್ರಿಕೆಗಳ ಮೇಲೆ ದಾವೆ ಹೂಡಲಾಗಿದೆ ಎಂದು ವಕೀಲರ ಸಂಘದ ಮೂಲಗಳು ತಿಳಿಸಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.